

Gold Rules: ವಿದೇಶದಿಂದ ಭಾರತಕ್ಕೆ ವಾಪಸ್ ಬರುವಾಗ ಎಷ್ಟು ಚಿನ್ನ ತರಬಹುದು? ಡ್ಯೂಟಿ ಕಟ್ಟಬೇಕಾ? ಈ ಪ್ರಶ್ನೆ ಅನೇಕರ ಮನದಲ್ಲಿ ಇರುತ್ತದೆ. ಒಳ್ಳೆಯ ಸುದ್ದಿ ಏನಂದರೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಕೆಲವೊಂದಿಷ್ಟು ಗ್ರಾಂವರೆಗೆ ಸರ್ಕಾರಕ್ಕೆ ಒಂದು ರೂಪಾಯಿ ಹಣ ಕಟ್ಟದೆ ಉಚಿತವಾಗಿ ತರಬಹುದು! ಹಾಗಾದ್ರೆ, ಭಾರತೀಯ ಕಸ್ಟಮ್ಸ್ ನಿಯಮದ ಪ್ರಕಾರ ಎಷ್ಟು ಚಿನ್ನವನ್ನು ಡ್ಯೂಟಿ ಇಲ್ಲದೆ ತರಬಹುದು ಮತ್ತು ಎಷ್ಟು ತೂಕಕ್ಕೆ ಡ್ಯೂಟಿ ಕಟ್ಟಬೇಕು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲಿದೆ:
ಉಚಿತ ಮಿತಿ:
ಈ ಮಿತಿಯು ಕೇವಲ ಚಿನ್ನದ ಆಭರಣಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಪ್ರಯಾಣಿಕರು ಕನಿಷ್ಠ 1 ವರ್ಷಕ್ಕಿಂತ (365 ದಿನಗಳು) ಹೆಚ್ಚು ಕಾಲ ವಿದೇಶದಲ್ಲಿ ನೆಲೆಸಿರಬೇಕು:
ಮಹಿಳಾ ಪ್ರಯಾಣಿಕರಿಗೆ: ಗರಿಷ್ಠ 40 ಗ್ರಾಂ ತೂಕದ ಚಿನ್ನದ ಆಭರಣಗಳು.
ಪುರುಷ ಪ್ರಯಾಣಿಕರಿಗೆ: ಗರಿಷ್ಠ 20 ಗ್ರಾಂ ತೂಕದ ಚಿನ್ನದ ಆಭರಣಗಳು.
ಮಕ್ಕಳಿಗೆ: ವಿದೇಶದಲ್ಲಿ 1 ವರ್ಷಕ್ಕಿಂತ ಹೆಚ್ಚು ಕಾಲ ನೆಲೆಸಿದ್ದರೆ ಯಾವುದೇ ಡ್ಯೂಟಿ ಕಟ್ಟದೆ ತರಬಹುದು.
ಮಿತಿ ಮೀರಿ ತಂದರೆ ಎಷ್ಟು ಡ್ಯೂಟಿ ಕಟ್ಟಬೇಕು?
ಉಚಿತ ಮಿತಿಗಿಂತ ಹೆಚ್ಚು ಚಿನ್ನ ತಂದರೆ ಅದಕ್ಕೆ ಕಸ್ಟಮ್ಸ್ ಡ್ಯೂಟಿ ಪಾವತಿಸಬೇಕಾಗುತ್ತದೆ. 2026ರಲ್ಲಿ ಚಿನ್ನದ ಮೇಲೆ ಒಟ್ಟು 36.94 ರಷ್ಟು ಸುಂಕವಿದೆ. ಇದರಲ್ಲಿ ಮೂಲ ಸುಂಕ, ಸೆಸ್ ಮತ್ತು ಜಿಎಸ್ಟಿ ಸೇರಿದೆ. ಉದಾಹರಣೆಗೆ 2 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಉಚಿತ ಮಿತಿ ಮೀರಿ ತಂದರೆ ಸುಮಾರು 73 ಸಾವಿರ ರೂಪಾಯಿ ಡ್ಯೂಟಿ ಕಟ್ಟಬೇಕಾಗುತ್ತದೆ.
ನಾಣ್ಯಗಳು ಮತ್ತು ಬಾರ್‌ಗಳಿಗೆ ಉಚಿತ ಮಿತಿ ಇಲ್ಲ!
ಹಲವರು ಆಭರಣಗಳ ಬದಲಿಗೆ ಚಿನ್ನದ ನಾಣ್ಯಗಳು ಅಥವಾ ಬಿಸ್ಕತ್ ಅಂದರೆ ಬಾರ್ ರೂಪದಲ್ಲಿ ಬಂಗಾರವನ್ನು ತರಲು ಬಯಸುತ್ತಾರೆ. ಆದರೆ ಚಿನ್ನದ ನಾಣ್ಯಗಳು ಮತ್ತು ಬಾರ್‌ಗಳಿಗೆ ಯಾವುದೇ ಉಚಿತ ಮಿತಿ ಇರುವುದಿಲ್ಲ. ಅದರಂತೆ, ಚಿನ್ನದ ನಾಣ್ಯಕ್ಕೂ ಕಸ್ಟಮ್ಸ್ ಸುಂಕವನ್ನು ಪಾವತಿಸುವುದು ಕಡ್ಡಾಯ. ಆದ್ರೆ, ಕೆಲವೇ ದಿನಗಳಕಾಲ್ ಸಣ್ಣ ಪ್ರವಾಸಕ್ಕಾಗಿ ವಿದೇಶಕ್ಕೆ ಹೋಗಿ ಬರುವ ಪ್ರಯಾಣಿಕರಿಗೂ ಯಾವುದೇ ಉಚಿತ ಚಿನ್ನದ ಮಿತಿ ಸಿಗುವುದಿಲ್ಲ.!
ಗರಿಷ್ಠ ಎಷ್ಟು ಚಿನ್ನ ತರಬಹುದು?
ವಿದೇಶದಲ್ಲಿ ಕನಿಷ್ಠ ಆರು ತಿಂಗಳು ನೆಲೆಸಿದ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ನಿಯಮಿತ ಕಸ್ಟಮ್ಸ್ ಸುಂಕವನ್ನು ಪಾವತಿಸಿ ಗರಿಷ್ಠ 1 ಕೆಜಿ ಅಂದರೆ 1000 ಗ್ರಾಂ ಚಿನ್ನವನ್ನು ಭಾರತಕ್ಕೆ ತರಬಹುದು. ಉಚಿತ ಮಿತಿಗಿಂತ ಹೆಚ್ಚು ಚಿನ್ನ ಅಥವಾ ಚಿನ್ನದ ನಾಣ್ಯಗಳನ್ನು ತರುತ್ತಿದ್ದರೆ ವಿಮಾನ ನಿಲ್ದಾಣದ ರೆಡ್ ಚಾನೆಲ್‌ನಲ್ಲಿ ಸ್ವಯಂಪ್ರೇರಿತವಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಸ್ಟಮ್ಸ್ ಸುಂಕ ಪಾವತಿಸಬೇಕು. ಘೋಷಣೆ ಮಾಡದೆ ಅಕ್ರಮವಾಗಿ ತರುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ವಿದೇಶದಲ್ಲಿ ಚಿನ್ನ ಖರೀದಿಸಿದ ಬಿಲ್ ಮತ್ತು ರಶೀದಿಗಳನ್ನು ಭದ್ರವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ.