ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕದ ಗಾಯಕ ನಿಕ್ ಜೋನಸ್ ಅವರು ಡಿಸೆಂಬರ್ 3ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ.
ವರದಿಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ ಮೊದಲು ಹಿಂದೂ ಸಂಪ್ರದಾಯದಂತೆ ನಿಕ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ನಂತರ ಕ್ರಿಶ್ಚಿಯನ್ ಶೈಲಿಯಲ್ಲಿ ಮದುವೆಯಾಗಲಿದ್ದಾರೆ.
ಇತ್ತೀಚಿಗೆ ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಇಟಲಿಯಲ್ಲಿ ಕೊಂಕಣಿ ಮತ್ತು ಸಿಂಧಿ ಶೈಲಿಯಲ್ಲಿ ಮದುವೆಯಾಗಿದ್ದರು. ಈಗ ಪಿಗ್ಗಿ ಹಾಗೂ ನಿಕ್ ಹಿಂದೂ ಮತ್ತು ಕ್ರಿಶ್ಚಿಯನ್ ಶೈಲಿಯಲ್ಲಿ ಮದುವೆಯಾಗುತ್ತಿದ್ದಾರೆ.
ಡಿಸೆಂಬರ್ 2 ರಂದು ಜೋಧಪುರದ ಉಮೈದ್ ಭವನದಲ್ಲಿ ಹಿಂದೂ ಶೈಲಿಯಲ್ಲಿ ಪ್ರಿಯಾಂಕಾ ಹಾಗೂ ನಿಕ್ ವಿವಾಹ ನೆರವೇರಲಿದೆ. ಮರುದಿನ ಡಿಸೆಂಬರ್ 3 ರಂದು ಈ ಜೋಡಿ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ.
ಪ್ರಿಯಾಂಕಾ ವಿವಾಹಕ್ಕಾಗಿ ಅದ್ಧೂರಿ ವಸ್ತ್ರ ಧರಿಸಲಿದ್ದು, ಹಿಂದೂ ಶೈಲಿಯ ವಿವಾಹಕ್ಕಾಗಿ ಅಬುಜಾನಿ-ಸಂದೀಪ್ ಕೋಸ್ಲಾ ವಿಶೇಷವಾಗಿ ವಿನ್ಯಾಸಗೊಳಿಸಿರುವ ವಸ್ತ್ರ ಧರಿಸಲಿದ್ದಾರೆ.
ಇನ್ನು ಕ್ರಿಶ್ಚಿಯನ್ ಶೈಲಿಯ ಮದುವೆಗಾಗಿ ರಾಲ್ಫ್ ಲವ್ ಮ್ಯಾನ್ ಡಿಸೈನ್ ಮಾಡಿರುವ ದುಬಾರಿ ಗೌನ್ ಧರಿಸಲಿದ್ದಾರೆ. ಇದಕ್ಕೂ ಮುನ್ನ ನ.29 ಮತ್ತು 30 ರಂದು ಜೋಧಪುರದಲ್ಲಿ ಸಂಗೀತ್ ಮತ್ತು ಮೆಹಂದಿ ಕಾರ್ಯಕ್ರಮ ನಡೆಯಲಿದೆ.
ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಹೆಗಡೆ ಈ ಎರಡೂ ಕಾರ್ಯಕ್ರಮಗಳಿಗಾಗಿ ವಿಶೇಷ ರೀತಿಯ ನೃತ್ಯ ಸಂಯೋಜನೆ ಮಾಡಲಿದ್ದಾರೆ.