'ಸ್ಯಾಟ್ಲುಜ್' ಚಿತ್ರವನ್ನು OTTಯಿಂದ ತೆಗೆದುಹಾಕಲೇಬೇಕಿತ್ತು ಎಂದ ನಟ Diljit Dosanjh, ಏನಿದು ವಿವಾದ? ತೆಗೆದು ಹಾಕಿದ್ದೇಕೆ? ಇಲ್ಲಿದೆ ವಿವರ

ದಿಲ್ಜಿತ್ ದೋಸಾಂಜ್ ನಟನೆಯ ‘ಸತ್ಲುಜ್’ ಸಿನಿಮಾ (Satluj Movie) ಇತ್ತೀಚೆಗಷ್ಟೇ ಜೀ5 ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಶಾಕಿಂಗ್ ವಿಷಯ ಎಂದರೆ ಈ ಸಿನಿಮಾ ಈಗ ಜೀ5 ಪ್ಲಾಟ್‌ಫಾರ್ಮ್‌ನಿಂದ ದಿಢೀರ್ ನಾಪತ್ತೆಯಾಗಿತ್ತು.
Diljit Dosanjh after Satluj removed from ZEE5
ಸ್ಯಾಟ್ಲುಜ್ ಚಿತ್ರ
Updated on

ನವದೆಹಲಿ: ಸ್ಯಾಟ್ಲುಜ್ ಚಿತ್ರವನ್ನು ಝೀ5 ಒಟಿಟಿ ವೇದಿಕೆಯಿಂದ ತೆಗೆದುಹಾಕಲಬೇಕಿತ್ತು.. ಈ ಕ್ರಮದಿಂದ ನನಗೇನೂ ಅಚ್ಚರಿಯಾಗಿಲ್ಲ ಎಂದು ನಟ ಹಾಗೂ ಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh) ಹೇಳಿದ್ದಾರೆ.

ಹೌದು.. ದಿಲ್ಜಿತ್ ದೋಸಾಂಜ್ ನಟನೆಯ ‘ಸತ್ಲುಜ್’ ಸಿನಿಮಾ (Satluj Movie) ಇತ್ತೀಚೆಗಷ್ಟೇ ಜೀ5 ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಶಾಕಿಂಗ್ ವಿಷಯ ಎಂದರೆ ಈ ಸಿನಿಮಾ ಈಗ ಜೀ5 ಪ್ಲಾಟ್‌ಫಾರ್ಮ್‌ನಿಂದ ದಿಢೀರ್ ನಾಪತ್ತೆಯಾಗಿತ್ತು. ಈ ಚಿತ್ರ ಬಿಡುಗಡೆಯಾದ ಒಂದೇ ದಿನದಲ್ಲಿ ಒಟಿಟಿಯಿಂದ ಡಿಲೀಟ್ ಮಾಡಲಾಗಿದೆ.

ಇದು ಅಭಿಮಾನಿಗಳಲ್ಲಿ ವ್ಯಾಪಕ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿತ್ತು. ಈ ಚಿತ್ರದಲ್ಲಿರುವ ಕೆಲವು ದೃಶ್ಯಗಳು ಭಾರತ ವಿರೋಧಿ ಶಕ್ತಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಚಿತ್ರದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಇದೇ ವಿಚಾರವಾಗಿ ಮೊದಲ ಬಾರಿಗೆ ಗಾಯಕ ದಿಲ್ಜಿತ್ ದೋಸಾಂಜ್ ಪ್ರತಿಕ್ರಿಯೆ ನೀಡಿದ್ದು, "ಇದು ಆಗಲೇಬೇಕಿತ್ತು. ಇದರಿಂದ ನನಗೆ ಯಾವುದೇ ಅಚ್ಚರಿಯಾಗಿಲ್ಲ. ಆದರೆ ಇದು ಸೋಮವಾರ ಕಚೇರಿಗಳು ತೆರೆದ ಬಳಿಕ ಆಗಬಹುದು ಎಂದು ನಾನು ಭಾವಿಸಿದ್ದೆ," ಎಂದು ಹೇಳಿದ್ದಾರೆ.

Diljit Dosanjh after Satluj removed from ZEE5
'ಸಟ್ಲುಜ್' OTTಯಿಂದಲೂ ಹೊರಕ್ಕೆ: ಇದೇ ಕಾರಣ? ನಟ ದಿಲ್ಜಿತ್ ದೋಸಾಂಜ್ ಮೊದಲ ಪ್ರತಿಕ್ರಿಯೆ...

ದಿಲ್ಜಿತ್ ಹೇಳಿದ್ದೇನು?

ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ದಿಲ್ಜಿತ್ ಭಾನುವಾರ ZEE5 ಭಾರತದಲ್ಲಿ ಚಿತ್ರವನ್ನು ಮುಂದಿನ ಸೂಚನೆವರೆಗೆ ಲಭ್ಯವಿರುವುದಿಲ್ಲ ಎಂದು ಪ್ರಕಟಿಸಿದ ಒಂದು ದಿನದ ಬಳಿಕ ಸೋಮವಾರ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡಿ, "ಇಂದು ಭಾರತದಲ್ಲಿ ಸೋಮವಾರ, ಆದರೆ ನಾನು ಇರುವ ಸ್ಥಳದಲ್ಲಿ ಇನ್ನೂ ಭಾನುವಾರ ಸಂಜೆ. ಶುಕ್ರವಾರವೇ ನನಗೆ ಈ ರೀತಿಯ ಬೆಳವಣಿಗೆ ಆಗಬಹುದು ಎಂಬ ಭಾವನೆ ಇತ್ತು. ಇದರಿಂದ ಅಚ್ಚರಿಯಾಗುವಂತಹದ್ದು ಏನೂ ಇಲ್ಲ. ಕಚೇರಿಗಳು ಸೋಮವಾರ ತೆರೆದ ಬಳಿಕ ಚಿತ್ರವನ್ನು ತೆಗೆದುಹಾಕಬಹುದು ಎಂದು ನಾನು ಭಾವಿಸಿದ್ದೆ" ಎಂದರು.

"ಆದರೆ ಭಾನುವಾರ ಸಂಜೆಗೇ ಹೀಗೆ ಆಗುತ್ತದೆ ಎಂದು ಊಹಿಸಿರಲಿಲ್ಲ. ನಾವು ಚಿತ್ರದ ಪ್ರಚಾರವನ್ನೂ ಮಾಡಿರಲಿಲ್ಲ. ಸುಮ್ಮನೆ ಬಿಡುಗಡೆ ಮಾಡಿದ್ದೆವು. ಪ್ರಚಾರ ಮಾಡಿದ್ದರೆ ಎರಡು ದಿನವೂ ಉಳಿಯುತ್ತಿರಲಿಲ್ಲ. ಆದರೆ ಜನರು ಚಿತ್ರವನ್ನು ನೋಡಿದ್ದಾರೆ, ಅದು ಅವರವರೆಗೆ ತಲುಪಿದೆ ಎಂಬುದೇ ನನಗೆ ಸಂತೋಷ. ಬಹಳಷ್ಟು ಜನರು ಚಿತ್ರವನ್ನು ನೋಡಿದ್ದಾರೆ ಅಥವಾ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂಬುದು ನನಗೆ ಸಂತೋಷ ತಂದಿದೆ. ಇಂದಿನ ಯುವಜನತೆ ಈ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಸ್ಥಾನದ ಯಾವುದೋ ಗುರುದ್ವಾರದಲ್ಲಿ ಈ ಚಿತ್ರವನ್ನು ಪ್ರದರ್ಶಿಸುತ್ತಿರುವ ವಿಡಿಯೊವೊಂದನ್ನು ನಾನು ನೋಡಿದೆ. ಈ ಚಿತ್ರ ನಿಮ್ಮವರೆಗೆ ತಲುಪಿರುವುದೇ ನನಗೆ ತೃಪ್ತಿ" ಎಂದು ಅವರು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಹೇಳಿದರು.

ಅಂತೆಯೇ ಸಾಧ್ಯವಾದ ಎಲ್ಲ ರೀತಿಯಲ್ಲಿ 'ಸ್ಯಾಟ್ಲುಜ್' ಚಿತ್ರವನ್ನು ಹಂಚಿಕೊಳ್ಳಿ ಮತ್ತು ವೀಕ್ಷಿಸಿ ಎಂದು ಜನರಿಗೆ ಮನವಿ ಮಾಡಿದರು. ಈ ಚಿತ್ರ ನಿಮ್ಮವರೆಗೆ ತಲುಪುವುದು ಬಹಳ ಮುಖ್ಯವಾಗಿತ್ತು. ಅದು ಈಗ ಸಾಧ್ಯವಾಗಿದೆ. ನಾವು ಹೇಳಬೇಕೆಂದಿದ್ದ ಸಂದೇಶವನ್ನು, ನಾವು ಬಯಸಿದ ರೀತಿಯಲ್ಲೇ ಜನರಿಗೆ ತಲುಪಿಸಿದ್ದೇವೆ ಎಂಬುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಇದು ನಿಮ್ಮ ಚಿತ್ರ. ನೀವು ಬಯಸಿದ ರೀತಿಯಲ್ಲಿ ನೋಡಿ" ಎಂದು ಅವರು ಹೇಳಿದರು.

"ಯಾವುದೇ ಪ್ರಚಾರವಿಲ್ಲದೆ ಚಿತ್ರವನ್ನು ಬಿಡುಗಡೆ ಮಾಡಿದ್ದೇ ಏಕೈಕ ಮಾರ್ಗ. ಏಕೆಂದರೆ ಇದು ನಡೆಯುವುದು ಮೊದಲೇ ಗೊತ್ತಿತ್ತು. ಚಿತ್ರವನ್ನು ತಡೆಯಲು ಎಷ್ಟು ಪ್ರಯತ್ನಿಸಿದರೂ ಅದು ಅಷ್ಟೇ ಹೆಚ್ಚು ಜನಪ್ರಿಯವಾಗುತ್ತದೆ. ಇಂಟರ್ನೆಟ್‌ನಲ್ಲಿ ಯಾವುದೂ ಸಂಪೂರ್ಣವಾಗಿ ಅಳಿದುಹೋಗುವುದಿಲ್ಲ. ವಾಟ್ಸಾಪ್‌ನ ವಾಯ್ಸ್ ನೋಟ್ ಕೂಡ ಅಳಿಯುವುದಿಲ್ಲ" ಎಂದು ಹೇಳಿದರು.

ವಿವಾದವೇನು?

ನಿರ್ದೇಶಕ ಹನಿ ತ್ರೇಹನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ದಿಲ್ಜಿತ್, ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ.

'ಸ್ಯಾಟ್ಲುಜ್' ಚಿತ್ರವು 1984ರಿಂದ 1994ರ ನಡುವೆ ಪಂಜಾಬ್‌ನಲ್ಲಿ ಗುರುತಿಸಲಾಗದ ಸಾವಿರಾರು ಶವಗಳ ಅಂತ್ಯಸಂಸ್ಕಾರದ ಕುರಿತು ತನಿಖೆ ನಡೆಸಿದ್ದ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ಬದುಕನ್ನು ಆಧರಿಸಿದೆ. 1995ರಲ್ಲಿ ಅವರು ನಾಪತ್ತೆಯಾಗಿದ್ದರು.

2005ರಲ್ಲಿ ಪಂಜಾಬ್ ಪೊಲೀಸ್ ಇಲಾಖೆಯ ನಾಲ್ವರು ಸಿಬ್ಬಂದಿಗೆ ಖಲ್ರಾ ಅವರ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ನೀಡಲಾಗಿತ್ತು. ಬಳಿಕ 2007ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಹೆಚ್ಚಿಸಿತು.

2023ರಲ್ಲಿ ಈ ಚಿತ್ರವು ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (TIFF) ನಲ್ಲಿ ವಿಶ್ವ ಪ್ರೀಮಿಯರ್ ಆಗಬೇಕಾಗಿತ್ತು. ಆದರೆ ಯಾವುದೇ ಅಧಿಕೃತ ಕಾರಣ ನೀಡದೆ ಚಿತ್ರವನ್ನು ಉತ್ಸವದ ಪಟ್ಟಿಯಿಂದ ಕೈಬಿಡಲಾಗಿತ್ತು.

'ಪಂಜಾಬ್ '95' ಚಿತ್ರವು ಭಾರತವನ್ನು ಹೊರತುಪಡಿಸಿ ಉಳಿದ ದೇಶಗಳಲ್ಲಿ ಯಾವುದೇ ಕತ್ತರಣೆಗಳಿಲ್ಲದೆ 2025ರ ಫೆಬ್ರವರಿ 7ರಂದು ಬಿಡುಗಡೆಯಾಗಬೇಕಿತ್ತು. ಆದರೆ ಆ ಬಿಡುಗಡೆಯೂ ನಡೆಯಲಿಲ್ಲ.

ಈ ಚಿತ್ರವನ್ನು ಹನಿ ತ್ರೇಹನ್, ಅಭಿಷೇಕ್ ಚೌಬೆ ಹಾಗೂ ರೋನಿ ಸ್ಕ್ರೂವಾಲಾ ಅವರು ಮ್ಯಾಕ್‌ಗಫಿನ್ ಪಿಕ್ಚರ್ಸ್ ಮತ್ತು RSVP ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಅರ್ಜುನ್ ರಾಂಪಾಲ್, ಕನ್ವಲ್‌ಜಿತ್ ಸಿಂಗ್, ಸುವಿಂದರ್ ವಿಕ್ಕಿ ಹಾಗೂ ಗೀತಿಕಾ ವಿದ್ಯಾ ಓಹ್ಲ್ಯಾನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com