

ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಜೈಲರ್ 2' ಅಕ್ಟೋಬರ್ 15 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಆದರೆ ಇದರ ಹಿಂದಿ ಡಬ್ ಮಾಡಿದ ಆವೃತ್ತಿಯು ಉತ್ತರ ಭಾರತದಲ್ಲಿ ಹೆಚ್ಚಾಗಿ ಬಿಡುಗಡೆಯಾಗುತ್ತಿಲ್ಲ. ಇದು ಅವರ ಉತ್ತರ ಭಾರತದ ಅಭಿಮಾನಿಗಳಿಗೆ ದೊಡ್ಡ ನಿರಾಶೆ ಮೂಡಿಸಿದೆ.
'ಇಂಡಿಯನ್ ಎಕ್ಸ್‌ಪ್ರೆಸ್' ವರದಿಯ ಪ್ರಕಾರ, 'ಜೈಲರ್ 2'ನ ಹಿಂದಿ ಆವೃತ್ತಿಯು PVR INOX ಮತ್ತು Cinepolis ನಂತಹ ಪ್ರಮುಖ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ ಎನ್ನಲಾಗುತ್ತಿದೆ. ವಾಸ್ತವವಾಗಿ, ಉತ್ತರ ಭಾರತದಲ್ಲಿನ ಈ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಚಿತ್ರದ ತಮಿಳು ಆವೃತ್ತಿಯನ್ನು ಸಹ ಪ್ರದರ್ಶಿಸಲಾಗುತ್ತಿಲ್ಲ.
ಇದಕ್ಕೆ ಪ್ರಮುಖ ಕಾರಣವೇನೆಂದರೆ, 'ಜೈಲರ್ 2' ಅನ್ನು ನಿರ್ಮಿಸುತ್ತಿರುವ 'ಸನ್ ಪಿಕ್ಚರ್ಸ್' (Sun Pictures) ಸಂಸ್ಥೆಯು OTT ಒಪ್ಪಂದವೊಂದನ್ನು ಮಾಡಿಕೊಂಡಿದೆ.
ಈ ಒಪ್ಪಂದದ ಪ್ರಕಾರ, ಅಕ್ಟೋಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ ನಾಲ್ಕು ವಾರಗಳ ನಂತರವೇ ಈ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗಲಿದೆ. ಇದು ಪ್ರಮುಖ ಮಲ್ಟಿಪ್ಲೆಕ್ಸ್ ಜಾಲಗಳ ನಿಯಮಗಳಿಗೆ ವಿರುದ್ಧವಾಗಿದೆ. ಏಕೆಂದರೆ ಚಿತ್ರಮಂದಿರದಲ್ಲಿ ಬಿಡುಗಡೆ ಮತ್ತು OTT ಬಿಡುಗಡೆಯ ನಡುವೆ ಕನಿಷ್ಠ ಎಂಟು ವಾರಗಳ ಅಂತರವಿರಬೇಕು ಎಂಬುದು ಅವುಗಳ ಷರತ್ತಾಗಿದೆ.
'ಜೈಲರ್ 2'ನ ಹಿಂದಿ ಆವೃತ್ತಿಯು PVR INOX ಮತ್ತು Cinepolis ನೊಂದಿಗೆ ಸಂಯೋಜಿತವಾಗಿರುವ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಿದ್ದರೂ, ಸಣ್ಣ ಮತ್ತು ಸ್ವತಂತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಚಿತ್ರ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್, ಅಕ್ಟೋಬರ್ 15 ಎಲ್ಲಾ ಕಡೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದೆ.