ನಾನೂ ನನ್ನ ಸಿನಿಮಾ

ನಾನೂ ನನ್ನ ಸಿನಿಮಾ
Updated on: 

ನಾನು ಗಾಂಧಿನಗರದ ಯುವ ನಿರ್ದೇಶಕ. ನನ್ನ ಹೆಸರು...ಏನೋ ಒಂದು ಹೋಗಲಿ ಬಿಡಿ. ನಾನೊಂದು ಸಿನಿಮಾ ಮಾಡಿದ್ದೆ. ಹೆಸರು... ಅದೂ ಹೋಗಲಿ ಬಿಡಿ.
ಸಣ್ಣ ವಯಸ್ಸಿಗೇ ಊರು ಬಿಟ್ಟು ಬಂದು, ಎಷ್ಟೋ ವರ್ಷ, ಹಲವು ಜನ ಟಿಪಿಕಲ್ ಗಾಂಧಿನಗರದ ನಿರ್ದೇಶಕರ ಅಡಿ ಕೆಲಸ ಮಾಡಿ, ಕೆಲವು ಪ್ರತಿಭಾವಂತರ ಜೊತೆಗಿನ ಅನುಭವವೂ ಸೇರಿ ನಾನೂ ನಿರ್ದೇಶಕನಾಗಲು ಹಾತೊರೆಯುತ್ತಿದ್ದೆ. ಕೊನೆಗೂ ನನಗೆ ಅಂಥ ಅವಕಾಶ ಸಿಕ್ಕಿದಾಗ, ಬಾಲಚಂದರ್, ಮಣಿರತ್ನಂ, ಗುರುದತ್, ರಾಜ್‌ಕಪೂರ್, ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ, ರವಿಚಂದ್ರನ್, ಯೋಗರಾಜ್‌ಭಟ್, ಸೂರಿ ಅವರಂಥ  ಅನೇಕ ನಿರ್ದೇಶಕರ ಸಾಲಿನಲ್ಲಿ ನಾನೂ ನಿಂತು, ಒಬ್ಬ ಸಿನಿಮಾ ನಿರ್ದೇಶಕ ಎನಿಸಿಕೊಳ್ಳುತ್ತೇನೆ ಎಂಬ ಖುಷಿಯೇ ನನ್ನಲ್ಲಿ ಅತೀವ ಉತ್ತೇಜನ ಉಂಟು ಮಾಡಿತ್ತು.
ಅಂದಹಾಗೆ, ನನ್ನಂಥ ಅನೇಕ 'ಒಂದು ಸಿನಿಮಾ ನಿರ್ದೇಶಕ'ರು ಗಾಂಧಿನಗರದಲ್ಲಿದ್ದಾರೆ. ನಾನು ನಿರ್ದೇಶನ ಮಾಡಿದ್ದು ಯಾವ ಸ್ಟಾರ್‌ಗಿರಿಯೂ ಇಲ್ಲದ ನಟನೊಬ್ಬನ ಚಿತ್ರ. ಮೊದಮೊದಲು ನನ್ನಲ್ಲಿ ತುಂಬಾ ಉತ್ಸಾಹ ಇತ್ತು. ಏನನ್ನೋ ಸಾಧಿಸಿಬಿಟ್ಟಿದ್ದೇನೆ ಎಂಬ ಸಮಾಧಾನ, ಥ್ರಿಲ್ ಇತ್ತು. ಇನ್ನೇನು ಶೀಘ್ರದಲ್ಲೇ ಗಾಂಧಿನಗರದ ಮುಖ್ಯ ಚಿತ್ರಮಂದಿರದಲ್ಲಿ ನನ್ನ ಸಿನಿಮಾ ಬಿಡುಗಡೆಯಾಗುತ್ತದೆ. ಉದ್ದುದ್ದನೆಯ ಕಟೌಟು, ಮೊದಲ ದಿನ ಸಿನಿಮಾ ಅಭಿಮಾನಿಗಳ ಅಬ್ಬರ. ಪತ್ರಿಕೆಗಳಲ್ಲಿ, ನನ್ನ ಸಂದರ್ಶನ, ಟಿವಿಯಲ್ಲಿ ನನ್ನ ಬಗೆಗಿನ ಪ್ರೋಗ್ರಾಮುಗಳು, ಇದೆಲ್ಲ ನಾನು ಮಾಡಿರುವ ಸಿನಿಮಾದಿಂದ ಆಗುತ್ತದೆ ಎಂಬ ಕಲ್ಪನೆಯೇ ನನ್ನನ್ನು ಎಕ್ಸೈಟ್ ಆಗುವಂತೆ ಮಾಡುತ್ತಿತ್ತು. ಮುಹೂರ್ತ ಆದ ದಿನ ಅದೇನು ಸಂಭ್ರಮ. ನಮ್ಮ ನಿರ್ಮಾಪಕರಿಗೆ ಪರಿಚಯವಿದ್ದ ಯಾರೋ ದೊಡ್ಡ ನಟರೊಬ್ಬರು ಬಂದು ಕ್ಲಾಪ್ ಮಾಡಿದರು. ಇಂದಿನಿಂದ ಶೂಟಿಂಗ್ ಶುರು. ಈ ಒಂದು ಸಿನಿಮಾ ಹಿಟ್ ಆದರೆ ಸಾಕು, ನನಗೆ ಮುಂದೆ ಸ್ಟಾರ್ ನಟರ ಸಿನಿಮಾ ನಿರ್ದೇಶಿಸುವ ಅವಕಾಶ ಸಿಗುತ್ತದೆ. ಅದೆಷ್ಟೇ ದೊಡ್ಡ ಸ್ಟಾರ್ ನಟ ನಾಯಕನಾಗಿರಲಿ, ನಾನು 'ಆ್ಯಕ್ಷನ್‌' ಹೇಳಿದರೇನೇ, ಅವನು ಅಭಿನಯಿಸೋದು, ನಾನು 'ಕಟ್‌' ಹೇಳಿದಾಕ್ಷಣ ಅವನು ಸುಮ್ಮನಾಗಬೇಕು. ಆಹಾ ಯಾರಿಗುಂಟು ಯಾರಿಗಿಲ್ಲ ಇಂಥ ಅವಕಾಶ, ಅಧಿಕಾರ. ಮನಸ್ಸಿನಲ್ಲಿ ನೂರು ಸಿನಿಮಾಕ್ಕಾಗುವಷ್ಟು ಪ್ಲ್ಯಾನುಗಳು. ನೂರು ಜನ್ಮಕ್ಕಾಗುವಷ್ಟು ಕನಸುಗಳು.
ಇದು ನನ್ನ ಮೊದಲ ಸಿನಿಮಾ. ಇದುವರೆಗಿನ ಗಾಂಧಿನಗರದ ಸೂತ್ರಗಳನ್ನು ಇಟ್ಟುಕೊಂಡು, ಅದರ ಜೊತೆ ಹೊಸದೇನನ್ನೋ ಪ್ರಯತ್ನಿಸುತ್ತಿದ್ದೇನೆ ಎಂಬ ಆತ್ಮವಿಶ್ವಾಸ. ಅದಕ್ಕೆ ತಕ್ಕಂತೆ ಎಲ್ಲರ ಪ್ರೋತ್ಸಾಹ. ಈಗಲೇ ನನಗೆ ಇಷ್ಟೊಂದು ಖುಷಿ ಇದೆ, ಇನ್ನು ನನ್ನ ಸಿನಿಮಾ ಬಿಡುಗಡೆಗೆ ಸಿದ್ಧವಾಗುವ ವೇಳೆಗೆ ನಾನು ಅದಾಗಲೇ ಸ್ಟಾರ್ ಡೈರೆಕ್ಟರ್ ಆಗಿಬಿಟ್ಟಿರುತ್ತೇನೆ ಎಂಬ ನಂಬಿಕೆ. ನನ್ನ ಸಿನಿಮಾ ಇಂಥದೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕು, ನನ್ನ ಚಿತ್ರದ ಪೋಸ್ಟರ್‌ಗಳು ಊರಿನ ಪ್ರಮುಖ ಸರ್ಕಲ್‌ಗಳಲ್ಲಿ ರಾರಾಜಿಸಬೇಕು, ನಾನು ಯಾವುದಕ್ಕೂ ಕಾಂಪ್ರೊಮೈಸ್ ಆಗುವುದಿಲ್ಲ ಎಂದು ಮನಸ್ಸಿನಲ್ಲೇ ದೃಢ ನಿರ್ಧಾರ. ನಂತರ ನನ್ನ ಸಿನಿಮಾ 50 ದಿನ, 100 ದಿನ ಪೂರೈಸಿದಾಗ ನಾನು ಯಶಸ್ಸನ್ನು ತಲೆಗೇರಿಸಿಕೊಳ್ಳಬಾರದು, ಯಾರು ಎಷ್ಟೇ ಹೊಗಳಿದರೂ ನನ್ನ ಭಾವನೆಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು ಎಂಬ ಎಚ್ಚರ.
ನಾನು ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ ಎಂದಾದಾಗ ಕರ್ನಾಟಕದ ಯಾವುದೋ ಒಂದು ಮೂಲೆಯಲ್ಲಿರುವ ನನ್ನ ಹಳ್ಳಿಯಲ್ಲಿರುವ ನನ್ನ ಅಪ್ಪ ಅಮ್ಮನಿಗೆ ಅದೆಷ್ಟು ಖುಷಿಯಾಗಿತ್ತು. 'ನನ್ನ ಮಗ ಸಿನಿಮಾ ನಿರ್ದೇಶಕ ಆಗಿದ್ದಾನೆ. ಬೆಂಗಳೂರಿನಲ್ಲಿ ಅವನಿಗೆ ಎಷ್ಟೊಂದು ದೊಡ್ಡ ಸಿನಿಮಾ ಮಂದಿ ಪರಿಚಯ ಇದೆ' ಅಂತ ಸಂಭ್ರಮದಿಂದ ಪರಿಚಿತರ ಬಳಿ ಹೇಳಿಕೊಳ್ಳುತ್ತಿದ್ದರು. ನನ್ನ ಊರಿನ ಗೆಳೆಯರಂತೂ 'ಅರೇ ನಮ್ಮ ಚಡ್ಡಿ ದೋಸ್ತ್ ಸಿನಿಮಾ ಮಾಡಿದ್ದಾನೆ, ನೋಡೇ ನೋಡ್ತೀವಿ ಕಣ್ಲಾ' ಅಂತ ಥ್ರಿಲ್ ಆಗಿ ನನಗೆ ಹೇಳಿದ್ದರು. ಕಾಲೇಜು ದಿನಗಳಲ್ಲಿ ಹರ್ಕ್ಯುಲೆಸ್ ಎಂಟಿಬಿ ಸೈಕಲ್‌ನಲ್ಲಿ ಓಡಾಡುತ್ತಿದ್ದ ನನಗೆ ನನ್ನ ಶ್ರೀಮಂತ ಸಹಪಾಠಿಗಳು ಐಷಾರಾಮಿ ಕಾರುಗಳಲ್ಲಿ ಬರುತ್ತಿದ್ದುದು ಕೀಳರಿಮೆ ಉಂಟುಮಾಡುತ್ತಿತ್ತು. ಈಗ ನಿರ್ದೇಶಕನಾದ ಖುಷಿಯಲ್ಲಿ ಮುಂದೆ ಕಾರು ತೆಗೆದುಕೊಂಡ ದಿನ ಆ 'ಬಾರ್ನ್ ರಿಚ್‌' ಗೆಳೆಯರ ಮುಂದೆ ಹೋಗಿ ನನ್ನ 'ನ್ಯೂ ಬಾರ್ನ್ ರಿಚ್ ನೆಸ್‌' ತೋರಿಸುವ ತವಕ ಇತ್ತು. ನನ್ನ ಮೊದಲ ಚಿತ್ರದ ಕಥೆಯಲ್ಲಿ ನನ್ನ ವೈಯಕ್ತಿಕ ಜೀವನದ ಒಂದಷ್ಟು ಘಟನೆಗಳನ್ನು ಸೇರಿಸಿದ್ದೆ.

ಅದರಲ್ಲಿ 'ಅವಳೊಂದಿಗೆ' ಕಳೆದ ದಿನಗಳ ನೆನಪುಗಳೂ ಇದ್ದವು. ಅಂದು 'ನಿನ್ನನ್ನು ಏನಂತ ಇಷ್ಟಪಡಲಿ, ನಿನ್ನ ಬಳಿ ಏನಿದೆ' ಎಂದು ಅವಳು ಕೇಳಿದಾಗ ಅವಳಿಗೆ ಅವತ್ತು ಹೇಳಲಾಗದ ಮಾತುಗಳನ್ನು ನನ್ನ ಸಿನಿಮಾದಲ್ಲಿ ಹೇಳಿದ್ದೇನೆ. ಈಗವಳು ಎಲ್ಲಿದ್ದಾಳೋ, ಯಾವ ಊರಿನಲ್ಲಿದ್ದಾಳೋ ಗೊತ್ತಿಲ್ಲ. ಮದುವೆಯಾಗಿ ಮಕ್ಕಳಾಗಿರಬಹುದು. ನನ್ನ ಸಿನಿಮಾ ಪೋಸ್ಟರ್ ನೋಡಿ 'ಇವನೇ ಅಲ್ವಾ ನನಗೆ ಪ್ರಪೋಸ್ ಮಾಡಿದ್ದು?' ಎಂಬ ಕುತೂಹಲಕ್ಕಾದರೂ ಗಂಡ, ಮಗುವಿನ ಜೊತೆಗಲ್ಲದಿದ್ದರೂ, ಒಬ್ಬಳೇ ಕೂತಾದರೂ ನನ್ನ ಸಿನಿಮಾ ನೋಡುತ್ತಾಳೆ, ಅವಳಿಗೆ ನನ್ನ ಉತ್ತರ ತಲುಪುತ್ತದೆ, ಸಿನಿಮಾ ನೋಡಿದ ಮೇಲೆ ನನ್ನ ಬಳಿ ಬಂದು ಮಾತನಾಡದಿದ್ದರೂ 'ಇಂಥ ಹುಡುಗನನ್ನು ಮಿಸ್ ಮಾಡಿಕೊಂಡೆನಲ್ಲಾ' ಎಂದು ಮನಸ್ಸಿನಲ್ಲಾದರೂ ಅಂದುಕೊಳ್ಳುತ್ತಾಳೆ ಎಂಬ ಅಗಾಧ ನಂಬಿಕೆ ಇತ್ತು.
ಆದರೆ ಆಗಿದ್ದೇನು? ಮೊದ ಮೊದಲು ಇಂಥದೇ ಪ್ರಮುಖ ಚಿತ್ರಮಂದಿರದಲ್ಲಿ ನನ್ನ ಸಿನಿಮಾ ಬಿಡುಗಡೆಯಾಗಬೇಕು ಎಂದುಕೊಂಡಿದ್ದವನಿಗೆ, ಕೊನೆ ಕೊನೆಗೆ ಎಂಥದೋ ಒಂದು, ಕೈಲಾಷ್ ಚಿತ್ರಮಂದಿರದಲ್ಲಾದರೂ ಸರಿ ನನ್ನ ಸಿನಿಮಾ ಬಿಡುಗಡೆಯಾದರೆ ಸಾಕು ಎಂಬ ಪರಿಸ್ಥಿತಿ. ಸಿನಿಮಾದಲ್ಲಿ ಯಾವ ಸ್ಟಾರೂ ಇಲ್ಲ, ಇದನ್ನು ಹೇಗೆ ತೆಗೆದುಕೊಳ್ಳೋದು ಎಂಬ ಸ್ಯಾಟಲೈಟ್ ಹಕ್ಕುಗಳ ಖರೀದಿ ಸಮಯದ ಪ್ರಶ್ನೆಗಳು ಶುರುವಾದವು. ಬಿಡುಗಡೆಯಾದ ಮೊದಲ ವಾರದಲ್ಲಿ ಸಾಕಷ್ಟು ಜನ ಬಂದಿದ್ದರೂ, ಒಳ್ಳೆಯ ಓಪನಿಂಗ್ ಸಿಕ್ಕಿದ್ದರೂ, ಪತ್ರಿಕೆ, ಟಿವಿ ಚಾನೆಲ್‌ಗಳಲ್ಲಿ ತಕ್ಕ ಮಟ್ಟಿಗಿನ ವಿಮರ್ಶೆಗಳು ಬಂದಿದ್ದರೂ ನನ್ನ ಸಿನಿಮಾ ಎರಡನೇ ಶುಕ್ರವಾರದ ಹೊತ್ತಿಗೆ ಚಿತ್ರಮಂದಿರದಿಂದ ಎತ್ತಂಗಡಿ ಆಗುವ ಆತಂಕದಲ್ಲಿತ್ತು. ಹಾಗಂತ ನನ್ನ ಸಿನಿಮಾ ಕೆಟ್ಟದ್ದಾಗಿರಲಿಲ್ಲ. 'ನಿಮ್ಮ ಸಿನಿಮಾ ಚೆನ್ನಾಗಿದೆಯಂತೆ ನೋಡಬೇಕು' ಎನ್ನುವವರು ಇರುವಾಗಲೇ ನನ್ನ ಮೊದಲ ಕೂಸಿಗೆ ಕೊನೆಯ ಕ್ಷಣಗಳು ಎದುರಾಗಿದ್ದವು. ಆಗಲೇ ನನಗೆ ಅರಿವಾಗಿದ್ದು ಸಿನಿಮಾ ಜನಕ್ಕೆ, ಪತ್ರಿಕೆಯವರಿಗೆ ಇಷ್ಟವಾಗುವುದಕ್ಕಿಂತ ವಿತರಕರಿಗೆ ಇಷ್ಟವಾಗುವುದು ಮುಖ್ಯ ಎಂಬುದು. ಮುಂದಿನ ವಾರ ಯಾವುದೋ ಸ್ಟಾರ್ ನಟನ ರಿಮೇಕ್ ಚಿತ್ರ ತೆರೆಕಾಣುತ್ತದೆ ಎಂಬ ಕಾರಣಕ್ಕೆ ವಿತರಕರು ನನ್ನ ಸಿನಿಮಾಕ್ಕೆ ಒಂದಿಷ್ಟು ಮಾರ್ಜಿನ್ ಕೊಡಲು ಸುತರಾಂ ಒಪ್ಪಲಿಲ್ಲ. ಜನ ಇನ್ನೂ ನೋಡುತ್ತಿರುವಾಗಲೇ ಈ ಚಿತ್ರದ ಹಣೆಬರಹ ಇಷ್ಟೇ ಎಂದು ನಿರ್ಧರಿಸಿಬಿಟ್ಟರು. 'ಸಿನಿಮಾ ರಿಚ್ ಆಗಿಲ್ಲ, ಡಲ್ ಆಗಿದೆ' ಎಂದು ಸಿನಿಮಾ ಪಂಡಿತರು ಹೇಳುವಾಗ 'ಹೊಸಬರ ಸಿನಿಮಾಕ್ಕೆ ಇನ್ನೆಷ್ಟು ಖರ್ಚು ಮಾಡೋಕಾಗುತ್ತೆ, ಇಷ್ಟೇ ಬಜೆಟ್ ಸಾಕು' ಎಂದು ತಾಕೀತು ಮಾಡಿದ ನಿರ್ಮಾಪಕರು ಕಾಣಿಸಲೇ ಇಲ್ಲ. ನಾನು ಎಡವಿದ್ದೆಲ್ಲಿ?
  ನನ್ನ ಚಿತ್ರ ಸೋತ ಮೇಲೆ ಆ ಸೋಲನ್ನು ಎಲ್ಲರೂ ನನ್ನ ತಲೆಗೇ ಕಟ್ಟುತ್ತಿದ್ದಾರೆ. ಸಿನಿಮಾ ಶುರು ಮಾಡಿ, ಹಾಡುಗಳು ಹಿಟ್ ಆದಾಗ, ಫಸ್ಟ್ ಕಾಪಿ ನೋಡಿದವರು ಚೆನ್ನಾಗಿದೆ ಎಂದಾಗ, ಒಳ್ಳೆಯ ವಿಮರ್ಶೆಗಳು ಬಂದಾಗ ಅದರ ಕ್ರೆಡಿಟ್ ಅನ್ನು ನನ್ನ ತಲೆಗೆ ಯಾರೂ ಕಟ್ಟಲಿಲ್ಲ. ಆದರೆ ಸೋತಾಗ ಮಾತ್ರ ಅದರ ಸಂಪೂರ್ಣ ಹೊಣೆ ನನ್ನದಾಯ್ತು. ಹಾಗಾಗಿ, ನಾನೀಗ ಸೋತ ಸಿನಿಮಾದ ನಿರ್ದೇಶಕ. ನಾನು ಯಾರ ಬಳಿಯೋ ಸಹಾಯಕ ನಿರ್ದೇಶಕನಾಗಿದ್ದಾಗ ಇಂಥಹ ಯಾವ ಜವಾಬ್ದಾರಿಗಳೂ ಇರಲಿಲ್ಲ. ಯಾರದ್ದೋ ಸಿನಿಮಾಕ್ಕೆ ಬರೀ ಕೆಲಸವನ್ನಷ್ಟೇ ಮಾಡಿಕೊಂಡಿದ್ದೆ. ಆ ಸಿನಿಮಾದ ಸೋಲು ಗೆಲುವು ನನ್ನನ್ನು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಯಾಕೆಂದರೆ ಅದನ್ನು ನನ್ನ ತಲೆಗೆ ಯಾರೂ ಕಟ್ಟುತ್ತಿರಲಿಲ್ಲ.
ನನ್ನ ಸಿನಿಮಾ ಬಿಡುಗಡೆಯಾಗಿ ಒಂದೇ ವಾರಕ್ಕೆ ಎತ್ತಂಗಡಿಯಾಗಿ ಎರಡು ವಾರ ಕಳೆದ ಮೇಲೂ 'ಏನ್ರೀ ನಿಮ್ ಮಗನ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ?' ಅಂತ ಊರಿನ ಮಂದಿ ನನ್ನಅಪ್ಪ ಅಮ್ಮಂದಿರನ್ನು ಕೇಳುತ್ತಿದ್ದಾರಂತೆ, ಅವರ ಬಳಿ ಉತ್ತರ ಇಲ್ಲ. ನನ್ನ ಗೆಳೆಯರು 'ಮಗಾ ನೋಡ್‌ಬೇಕು ಅಂತಿದೀವಿ, ಯಾವ ಥಿಯೇಟ್ರಲ್ಲಿದೆ ನಿನ್ ಸಿನಿಮಾ?' ಅಂತ ಕೇಳುತ್ತಿರುವಾಗ ನನ್ನ ಬಳಿ ಉತ್ತರವಿಲ್ಲ. ಬಾರ್ನ್ ರಿಚ್ ಗೆಳೆಯರಿಗೆ ನನ್ನ ಮನಸ್ಸಿನಲ್ಲಿದ್ದು ಹೇಗೋ ಗೊತ್ತಾಗಿ, ಅವರು ಬಂದು 'ನಿನ್ನ ಕಾರು ತೆಗೆದುಕೊಳ್ಳುವ ಏನಾಯ್ತೋ?' ಎಂದು ಕೇಳಿದರೆ ಏನು ಹೇಳುವುದು ಎಂಬ ಭಯ ಕನಸಿನಲ್ಲೂ ಕಾಡುತ್ತದೆ. ನನ್ನ ಸಿನಿಮಾ ವಾಲ್‌ಪೋಸ್ಟರ್ ಮೇಲೆ ಒಂದೇ ವಾರಕ್ಕೆ ಇನ್ಯಾರದ್ದೋ ಸಿನಿಮಾದ ಪೋಸ್ಟರ್ ಬಿದ್ದಿದೆ. ನನ್ನ ಸಿನಿಮಾ ಪೋಸ್ಟರ್ ಅವಳಿಗೆ ಕಂಡಿರಲಿಕ್ಕೇ ಇಲ್ಲ. 'ನಿನ್ನನ್ನು ಮಿಸ್ ಮಾಡಿಕೊಂಡೆ' ಎಂದು ಅವಳು ಹೇಳುವುದಿರಲಿ, ನನ್ನ ಸಿನಿಮಾ ನೋಡುವ ಅವಕಾಶವನ್ನೇ ಅವಳು ಮಿಸ್ ಮಾಡಿಕೊಂಡಿದ್ದಾಳೆ.
ನನ್ನಲ್ಲಿ ಎಷ್ಟೊಂದು ಕನಸುಗಳಿದ್ದವು. ಉತ್ಸಾಹ ಇತ್ತು. ಈಗ....? ಆದರೂ ಒಂದು ಸಿನಿಮಾ ನಿರ್ದೇಶಕ ಎನಿಸಿಕೊಂಡು ಮರೆಯಾಗಬಾರದು ಎಂಬ ಹಠ ನನ್ನದು. ಎಷ್ಟೋ ಜನ ನನ್ನಂಥ ಫಸ್ಟ್ ಟೈಮ್ ನಿರ್ದೇಶಕರ ಸಿನಿಮಾಗಳು ಪೂರ್ತಿ ಆಗುವುದೇ ಇಲ್ಲ, ಆದರೂ ಬಿಡುಗಡೆ ಆಗುವುದಿಲ್ಲ. ನನ್ನ ಚಿತ್ರ ಅಟ್‌ಲೀಸ್ಟ್ ಬಿಡುಗಡೆ ಆಯ್ತಲ್ಲ ಅದೊಂದೇ ಸಮಾಧಾನ. ಮತ್ತೆ ನಾನು ಸಿನಿಮಾ ಮಾಡಬೇಕಿದೆ. ನಾನೀಗ ಬದಲಾಗಬೇಕಿದೆ. ಸೋ ಕಾಲ್ಡ್ ಸಿನಿಪಂಡಿತರ ಅಭಿಪ್ರಾಯ ಪಡೆದು ಸಿನಿಮಾ ಮಾಡಬೇಕೇ ಗೊತ್ತಿಲ್ಲ. ಮುಂದೆ ನಾನು ರಿಮೇಕ್ ಸಿನಿಮಾ ಮಾಡಿದರೂ ಮಾಡಬಹುದು. ಒಟ್ಟಿನಲ್ಲಿ ಗಾಂಧಿನಗರದ ನೀರು ಕುಡಿದಿದ್ದೇನೆ. ಇನ್ನು ಬಾಯಾರಿಕೆ ನೀಗಿಸಿಕೊಳ್ಳುವುದಷ್ಟೇ ನನ್ನ ಗುರಿ. ನನ್ನ ಮುಂದಿನ ಚಿತ್ರದ ಹೆಸರು....ಏನೋ ಒಂದು, ಹೋಗಲಿ ಬಿಡಿ.

  ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com