ಹೆಸರಿನಲ್ಲಷ್ಟೇ ಹುಚ್ಚು

ಕೌಟುಂಬಿಕ ಸಿನಿಮಾ, ಪ್ರೇಮಿಗಳ ಚಿತ್ರ, ಯುವಕರ ಚಿತ್ರ ಎನ್ನುವವರೆ ಹೆಚ್ಚು. ಇದರ ಜೊತೆಗೆ ಆರ್ಟು, ಕಮರ್ಷಿಯಲ್ ಹಾಗೂ ಮಾಸ್ ಸಿನಿಮಾ ಎನ್ನುವವರೂ ಉಂಟು. ಆದರೆ, 'ನಮ್ಮ ಈ ಚಿತ್ರ ಪಕ್ಕಾ ಪ್ರೇಕ್ಷಕರ ಸಿನಿಮಾ' ಎನ್ನುತ್ತಾರೆ 'ಹುಚ್ಚುಡುಗ್ರು' ಚಿತ್ರದ ರಘು. ಆರಂಭದಲ್ಲಿ ಪೋಸ್ಟರ್ಗಳ ಮೂಲಕವೇ ಗಮನ ಸೆಳೆದ ಈ ಚಿತ್ರ, ನಂತರ ಹಾಡುಗಳಿಂದ ಸಿನಿಮಾ ಪ್ರೇಕ್ಷಕರ ಮನಸಿನ ಕದ ತಟ್ಟಿತು. ಈಗ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಒಂದು ದೊಡ್ಡ ಬಜೆಟ್ಟಿನ ಸಿನಿಮಾ ಮಾಡಬೇಕು ಎಂದು ಹೊರಟವರಿಗೆ ತಕ್ಷಣಕ್ಕೆ ಹೊಳೆದ ಪುಟ್ಟ ಕಥೆಯನ್ನಿಟ್ಟುಕೊಂಡು ಕಡಿಮೆ ಬಜೆಟ್ಟಿನಲ್ಲಿ ಚಿತ್ರ ಮಾಡಬೇಕೆಂಬ ಆಸೆ ಹುಟ್ಟಿಕೊಂಡ ಫಲವೇ ಈ 'ಹುಚ್ಚುಡುಗ್ರು'.
'ನಾನು ಕರಿಯ ಚಿತ್ರದಿಂದ ನಿರ್ದೇಶಕ ಪ್ರೇಮ್ ಜೊತೆ ಅಸೋಸಿಯೇಟ್ ಆಗಿದ್ದೇನೆ. ಆಗಿನಿಂದಲೂ ನಿರ್ದೇಶನದ ಕನಸು ಕಟ್ಟಿಕೊಂಡು ಗಾಂಧಿನಗರ ಅಲೆದೆ. ಆದರೆ, ಯಾರೂ ನನ್ನ ಕಥೆ ಕೇಳುವುದಕ್ಕೆ ತಯಾರಿರಲಿಲ್ಲ. ಅಲ್ಲದೆ ಬಜೆಟ್ ಬೇರೆ ದೊಡ್ಡದಾಗಿತ್ತು. ಹೀಗಾಗಿ ಮೊದಲು ಗಾಂಧಿನಗರದಲ್ಲಿ ನಾವು ಏನೂ ಅಂತ ತೋರಿಸಿಕೊಳ್ಳಬೇಕು ಅಂದ್ರೆ ನಾವೇ ಒಂದು ಚಿತ್ರ ಮಾಡಬೇಕು ಅಂದುಕೊಂಡಾಗ 'ಹುಚ್ಚುಡುಗ್ರು' ಕಥೆ ಮಾಡಿಕೊಂಡು ನನ್ನ ಗೆಳೆಯ ಆರ್ಜೆ ಪ್ರದೀಪ್ನಿಂದ ನಿರ್ದೇಶನ ಮಾಡಿಸಿದೆ. 70ರಿಂದ 80 ಲಕ್ಷ ಆಗಬಹುದು ಎಂದುಕೊಂಡಿದ್ದ ಚಿತ್ರಕ್ಕೆ ಈಗ 2.5 ಕೋಟಿ ವೆಚ್ಚವಾಯಿತು. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೊಸ ಹುಡುಗರಿಗೆ ಅವಕಾಶ ಕೊಟ್ಟರೆ ಎಂಥ ಚಿತ್ರ ಬೇಕಾದರೂ ಮಾಡುತ್ತಾರೆ ಎನ್ನುವುದು ಈ 'ಹುಚ್ಚುಡುಗ್ರು' ಚಿತ್ರ ಉದಾಹರಣೆ' ಎನ್ನುವ ನಂಬಿಕೆ ರಘು ಅವರದ್ದು.
ಆದರೆ, ಚಿತ್ರದ ಶೀರ್ಷಿಕೆ ನೋಡಿ ಇದು ಹುಚ್ಚು ಯುವಕರ ಚಿತ್ರ ಎಂದುಕೊಳ್ಳುವ ಹಾಗಿಲ್ಲ. 'ಶೀರ್ಷಿಕೆಯಲ್ಲಿ ಮಾತ್ರ 'ಹುಚ್ಚು' ಇದೆ ಅಷ್ಟೆ. ಚಿತ್ರದಲ್ಲಿ ಅಂಥ ಹುಚ್ಚುತನಗಳು ಇಲ್ಲ. ಸಿನಿಮಾ ಹಸಿವು ಇರುವ ಯುವಕರು ಸೇರಿಕೊಂಡು ಮಾಡಿರುವ ಕಥೆ ಇಲ್ಲಿದೆ. ಈ ಚಿತ್ರಕ್ಕೆ ದುಡಿದ ನಾವೆಲ್ಲ ಹಳ್ಳಿ ಹಿನ್ನೆಲೆಯಿಂದ ಬಂದವರು. ಬಹಳಷ್ಟು ಚಿತ್ರಗಳಲ್ಲಿ ಹಳ್ಳಿಯಿಂದ ನಗರಕ್ಕೆ ಬಂದು ರೌಡಿಯಾಗುವ ಕಥೆಗಳೇ ಹೆಚ್ಚು. ಆದರೆ, ನಮ್ಮ ಚಿತ್ರ ಅದಕ್ಕೆ ತದ್ವಿರುದ್ಧ. 4 ಮಂದಿ ಹಳ್ಳಿ ಹುಡುಗರು ಅವರ ಊರಿನಲ್ಲೇ ಇದ್ದುಕೊಂಡು ಯಾವ ರೀತಿ ಸಾಧನೆ ಮಾಡುತ್ತಾರೆಂಬುದು ಚಿತ್ರದ ಒಂದು ಸಾಲಿನ ಕಥೆ. ಇಲ್ಲಿ ಸಾಕಷ್ಟು ತಿರುವುಗಳಿವೆ, ರೋಚಕ ಸಂಗತಿಗಳಿವೆ. ಇದುವರೆಗೂ ಭಾರತೀಯ ಚಿತ್ರರಂಗದಲ್ಲಿ ನೋಡಿರದ ಅದ್ಭುತ ಕ್ಲೈಮ್ಯಾಕ್ಸ್ ಇದೆ. ಈ ಚಿತ್ರ ಬಿಡುಗಡೆಯಾದ ನಂತರ ತಮಿಳಿನಲ್ಲಿ 'ನಾಡೋಡಿಗಳ್', 'ನಾನ್ ಕಡವುಳ್', 'ರೇಣಿಗುಂಟ', 'ಗೋಲಿ ಸೋಡ' ಚಿತ್ರಗಳು ಹುಟ್ಟು ಹಾಕಿದ ನೇಟಿವಿಟಿಯ ಹೊಸ ಅಲೆಯನ್ನು ಇಲ್ಲೂ ನೋಡಬಹುದು. ಕನ್ನಡದಲ್ಲಿ ಈ ಅಲೆಗೆ 'ಹುಚ್ಚುಡುಗ್ರು' ಚಿತ್ರ ಮುನ್ನುಡಿಯಾಗುತ್ತದೆ' ಎನ್ನುವ ಭರವಸೆ ರಘು ಅವರದ್ದು.
ರಘು ಮೂಲತಃ ಹಾಸನ ಜಿಲ್ಲೆಯವರು. ಪಿಯುಸಿ ಓದಿದ ಇವರಿಗೆ ಹೇಗೆ ಸಿನಿಮಾ ಹುಚ್ಚು ಹತ್ತಿಕೊಂಡಿತೋ ಗೊತ್ತಿಲ್ಲ. ಸೀದಾ ಬಂದು ನಿರ್ದೇಶಕ ಪ್ರೇಮ್ ಬಳಿ ಸೇರಿಕೊಂಡರು. ಹೊಸ ತಂಡ ಕಟ್ಟಿ 'ಹುಚ್ಚುಡುಗ್ರು' ಚಿತ್ರ ಮಾಡಿದ್ದಾರೆ. ಈ ಚಿತ್ರ ಮುಂದೆ ತಾನು ನಿರ್ದೇಶನ ಮಾಡಲಿರುವ ಏಳೆಂಟು ಕೋಟಿ ಬಜೆಟ್ಟಿನ ಚಿತ್ರಕ್ಕೆ ಆರಂಭದ ತಾಲೀಮು ಎನ್ನುವಂತಿರುವ 'ಹುಚ್ಚುಡುಗ್ರು' ಚಿತ್ರದಲ್ಲಿ ಚೇತನ್ ಚಂದ್ರ, ಅಮಿತ್, ದೇವ, ಪ್ರತಾಪ್ ಹಾಗೂ ಅದಿತಿರಾವ್ ನಟಿಸಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿವೆ. ಈಗಾಗಲೇ ಹಾಡುಗಳು ಕೇಳುಗರ ಮನಕ್ಕೆ ಮುಟ್ಟಿವೆ. 'ನಾನು ಮಾಡಿರುವ ಕತೆ ಮತ್ತು ಚಿತ್ರಕಥೆಯನ್ನು ಗೆಳೆಯ ಆರ್ಜೆ ಪ್ರದೀಪ್ ತುಂಬಾ ನೀಟಾಗಿ ತೆರೆ ಮೇಲಿಟ್ಟಿದ್ದಾರೆ. ಭಗವತಿ ಪಿಕ್ಚರ್ಸ್ನ ವೇದಮೂರ್ತಿ ಜೊತೆ ಸೇರಿ ನಾನು ನಿರ್ಮಾಣಕ್ಕೆ ಸಾಥ್ ನೀಡಿದ್ದೇನೆ. ಚಿತ್ರದ ಪ್ರತಿ ಸಂಭಾಷಣೆಯೂ ಹಳ್ಳಿ ಶೈಲಿಯಲ್ಲೇ ಇರುತ್ತದೆ. ಇದೇ ನಮ್ಮ ಚಿತ್ರದ ಹೈಲೈಟ್. ಇದೇ ತಿಂಗಳು 28 ಅಥವಾ ಮುಂದಿನ ತಿಂಗಳು ಮೊದಲ ವಾರದಲ್ಲಿ 'ಹುಚ್ಚುಡುಗ್ರು' ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಚಿತ್ರದಲ್ಲಿ ಸ್ಟಾರ್ ನಟರಿಲ್ಲದಿರಬಹುದು. ಆದರೆ, ಪ್ರೇಕ್ಷಕರು ಮೆಚ್ಚುವ ಕಥೆ ಇದೆ' ಎಂಬುದು ರಘು ಅವರ ಮಾತು.
-ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


