ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹಾಗೂ ನವಶಕ್ತಿ ಎಂಟರ್‍ಪ್ರೈಸ್ ಮಾಲೀಕ ಸಿ.ನಾಗರಾಜ್ ನಡುಹಣಕಾಸಿನ ವಿವಾದ ಪರಸ್ಪರ ಮಾತುಕತೆಯ ಮೂಲಕ ತಾತ್ಕಾಲಿಕವಾಗಿ ಇತ್ಯರ್ಥಗೊಂಡಿದೆ. ನವಶಕ್ತಿ ಎಂಟರ್ ಪ್ರೈಸಸ್ ಮಾಲೀಕ ನಾಗರಾಜ್ ಅವರಿಗೆ ರಾಜೇಂದ್ರ ಸಿಂಗ್ ಬಾಬು ಪಡೆದಿದ್ದ ರು. 7 ಲಕ್ಷ ನಗದನ್ನು ಶೀಘ್ರವೇ ಹಿಂತಿರುಗಿಸುವುದಾಗಿ ಬಾಬು ಪುತ್ರ ಹಾಗೂ ನಟ ಆದಿತ್ಯ, ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಅವರ ನಿವಾಸ ಜಪ್ತಿಗೆ ತೆರಳಿದ್ದ ಅಧಿಕಾರಿಗಳು ವಾಪಸ್ ಬಂದಿದ್ದಾರೆಂದು ಹೇಳಲಾಗಿದೆ. ಆದಿತ್ಯ, ಸದಾ, ಆದಿ ಲೋಕೇಶ್, ಸುಹಾಸಿನಿ ಹಾಗೂ ಅನುಪ್ರಭಾಕರ್ ಅಭಿನಯದ `ಮೋಹಿನಿ' ಚಿತ್ರ ನಿರ್ಮಾಣಕ್ಕಾಗಿ ನಿರ್ದೇಶಕ ಸಿಂಗ್ ಬಾಬು ಅವರು, ನವಶಕ್ತಿ ಎಂಟರ್ ಪ್ರೈಸಸ್ ಮಾಲೀಕ ಸಿ. ನಾಗರಾಜ್ ಅವರಿಂದ ಮುಂಗಡವಾಗಿ ಪಡೆದಿದ್ದ ರು. 7 ಲಕ್ಷ ನಗದನ್ನು ಪಡೆದಿದ್ದರು. ಆದರೆ ಚಿತ್ರ ತೆರೆಕಂಡು ವರ್ಷಗಳು ಕಳೆದರೂ ಅವರು ಹಣ ಹಿಂತಿರುಗಿಸದ ಕಾರಣ, ನಾಗರಾಜ್, ಕೋರ್ಟ್ ಮೆಟ್ಟಿಲು ಹತ್ತಿದ್ದರು. ಅವರ ದಾವೆಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ರಾಜೇಂದ್ರ ಸಿಂಗ್ ಬಾಬು ಅವರ ನಿವಾಸ ಜಪ್ತಿಗೆ ಆದೇಶಿಸಿತ್ತು. ಈ ಆದೇಶದಂತೆ ಮಂಗಳವಾರ ಅಧಿಕಾರಿಗಳು ರಾಜೇಂದ್ರ ಸಿಂಗ್ ಬಾಬು ಅವರ ಮನೆ ಜಪ್ತಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ರಾಜೇಂದ್ರ ಸಿಂಗ್ ಬಾಬು ಮೈಸೂರಿನಲ್ಲಿದ್ದರೆನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ನಟ ಆದಿತ್ಯ, ಅಧಿಕಾರಿಗಳ ಬಳಿ ಮಾತುಕತೆ ನಡೆಸಿ, ಇನ್ನೊಂದು ವಾರದಲ್ಲಿ ನಾಗರಾಜ್ ಅವರಿಗೆ ರು.7 ಲಕ್ಷ ನಗದನ್ನು ಹಿಂತಿರುಗಿಸಲಾಗುವುದು. ಇದಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಅಲ್ಲದೇ, ನಾಗರಾಜ್ ಬಳಿಯೂ ಮಾತನಾಡಿ, ಭರವಸೆ ನೀಡಿದ ಹಿನ್ನೆಲೆಯಲ್ಲಿ ಮನೆ ಜಪ್ತಿಗೆ ಹೋಗಿದ್ದ ಅಧಿಕಾರಿಗಳು ವಾಪಸ್ ಬಂದಿದ್ದಾರೆಂದು ಹೇಳಲಾಗಿದೆ.