

ಬೆಂಗಳೂರು: ವಿವಿಧ ರಾಜ್ಯದ ನಟರು 'ಚಕ್ರವ್ಯೂಹ' ಸಿನೆಮಾದಲ್ಲಿ ಹಾಡುತ್ತಿರುವುದು ವಿಶೇಷ. ತೆಲುಗು ನಟ ಜೂನಿಯರ್ ಎನ್ ಟಿ ಆರ್, ಈ ಸಿನೆಮಾದಲ್ಲಿ ಹಾಡೊಂದನ್ನು ಹಾಡಿದ ಬೆನ್ನಲ್ಲೇ ಈಗ ನಟಿ ಕಾಜಲ್ ಅಗರವಾಲ್ ಕೂಡ ಪುನೀತ್ ರಾಜಕುಮಾರ್ ಅಭಿನಯದ ಈ ಚಿತ್ರಕ್ಕೆ ಹಾಡಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನಟಿಯನ್ನು ನಿರ್ಮಾಪಕ ಸಂಪರ್ಕಿಸಿದಾಗ, ಹಾಡಲು ಉತ್ಸುಕತೆಯಿಂದ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. "ಅವರು ನಿರ್ಮಾಪಕ ಎನ್ ಕೆ ಲೋಹಿತ್ ಅವರ ಒಳ್ಳೆಯ ಗೆಳತಿ. ಅವರನ್ನು ಸಂಪರ್ಕಿಸಿದಾಗ ಬಹಳ ಖುಷಿಯಿಂದ ಹಾಡಲು ಒಪ್ಪಿದರು. ಅವರ ಕಂಠ ಸುಮಧುರವಾಗಿದೆ ಆದುದರಿಂದ ಚಕ್ರವ್ಯೂಹದಿಂದಲೇ ಅವರ ಈ ಹೊಸ ಕೌಶಲ್ಯ ಬೆಳಕಿಗೆ ಬರಲಿದೆ" ಎನ್ನುತ್ತವೆ.
ಇದೇ ಹಾಡಿನ ಪುರುಷ ಅವತರಿಣೆಕೆಯನ್ನು ಪುನೀತ್ ರಾಜಕುಮಾರ್ ಅವರೇ ಹಾಡಿದ್ದು ಈಗಾಗಲೇ ರೆಕಾರ್ಡಿಂಗ್ ಮುಗಿದಿದೆಯಂತೆ.
ತಮಿಳು, ತೆಲುಗು ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಕಾಜಲ್ ಇಲ್ಲಿಯವರೆಗೂ ಯಾವುದೇ ಕನ್ನಡ ಸಿನೆಮಾದಲ್ಲಿ ನಟಿಸಿಲ್ಲ. ಈಗ ಕನ್ನಡ ಚಿತ್ರೋದ್ಯಮಕ್ಕೆ ಗಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಜನವರಿ ೭ ರಿಂದ ಹಾಡುಗಳ ಚಿತ್ರೀಕರಣಕ್ಕೆ ಪುನೀತ್, ರಚಿತಾ ರಾಮ್, ನಿರ್ದೇಶಕ ಸರವಣನ್ ಚಿತ್ರತಂಡದೊಂದಿಗೆ ಪೋರ್ಚುಗಲ್ ಗೆ ತೆರಳಲಿದೆಯಂತೆ.