

ಬೆಂಗಳೂರು: ಭರ್ಜರಿ ಚಿತ್ರದ ನಂತರ ರಚಿತಾ ರಾಮ್ ರವಿಚಂದ್ರನ್ ಪುತ್ರ ಮನೋರಂಜನ್ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ.
ರಾಕ್ ಲೇನ್ ವೆಂಕಟೇಶ್ ನಿರ್ಮಾಣದಲ್ಲಿ ಬರುತ್ತಿರುವ ಈ ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ತಮಿಳಿನಲ್ಲಿ ಧನುಷ್ ಅಭಿನಯದ ವೆಲಾಯ್ ಇಲ್ಲ ಪತ್ತಾಧರಿ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದು, ನಂದ ಕಿಶೋರ್ ಚಿತ್ರ ನಿರ್ದೇಶಿಸಲಿದ್ದಾರೆ,
ತಮಿಳು ರಿಮೇಕ್ ಚಿತ್ರದಲ್ಲಿ ಮನರಂಜನ್ ಜೊತೆ ಅಮಲಾ ಪೌಲ್ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು, ಆದರೆ ಈಗ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದು, ಉಳಿದ ತಾರಗಣ ಇನ್ನೂ ಅಂತಿಮವಾಗಿಲ್ಲ.
ದರ್ಶನ್. ಸುದೀಪ್, ಗಣೇಶ್, ಶ್ರೀ ಮುರುಳಿ, ದ್ರುವ ಸರ್ಜಾ ಸೇರಿದಂತೆ ಹಲವು ಜನಪ್ರಿಯ ನಟರುಗಳ ಜೊತೆ ನಟಿಸಿರುವ ರಚಿತಾ ಮೊಟ್ಟ ಮೊದಲ ಬಾರಿಗೆ ಮನೋರಂಜನ್ ಜೊತೆ ಅಭಿನಯಿಸುತ್ತಿದ್ದಾರೆ.
ನಿರ್ದೇಶಕ ನಂದ ಕಿಶೋರ್ ಸದ್ಯ ಮುಕುಂದ ಮುರಾರಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ದೀಪಾವಳಿಗೆ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ.ಎಲ್ಲವು ಅಂದುಕೊಂಡಂತೆ ನಡೆದರೆ ನವೆಂಬರ್ ಮೊದಲ ವಾರದಲ್ಲಿ ಮನೋರಂಜನ್ ಮತ್ತು ರಚಿತಾ ಅಭಿನಯದ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗಿದೆ.