
ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಇದೇ ಏಪ್ರಿಲ್ 17ರಂದು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ತಮ್ಮ ಬಹುಕಾಲದ ಗೆಳತಿ ಸಾಗರ ಮೂಲದ ರಚನಾ ಹೆಗಡೆ ಅವರನ್ನು ಚೇತನ್ ಚಂದ್ರ ವಿವಾಹವಾಗುತ್ತಿದ್ದು, ಯುವ ಜೋಡಿಯ ಸುದೀರ್ಘ ಪ್ರೀತಿಗೆ ಎರಡೂ ಕುಟುಂಬಸ್ಥರು ಒಪ್ಪಿಗೆ ನೀಡಿದ್ದಾರೆ. ಇದೇ ಏಪ್ರಿಲ್ 17ರಂದು ನಟ ಚೇತನ್ ಚಂದ್ರ ಅವರ ವಿವಾಹ ಕಾರ್ಯಕ್ರಮ ಗುರು-ಹಿರಿಯ ಸಮ್ಮುಖದಲ್ಲಿ ನೆರವೇರಲಿದ್ದು, ಸಾಗರದ ಭದ್ರಕಾಳಿ ಕಲ್ಯಾಣ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಲಿದೆ.
ಕಳೆದ ಎರಡು ವರ್ಷಗಳಿಂದಲೂ ನಟ ಚೇತನ್ ಹಾಗೂ ರಚನಾ ಅವರು ಪ್ರೀತಿಸುತ್ತಿದ್ದರು. ಇದೀಗ ಅವರ ಪ್ರೀತಿಗೆ ಕುಟುಂಬಸ್ಥರ ಗ್ರೀನ್ ಸಿಗ್ನಲ್ ದೊರೆತಿದೆ. ಪಿಯುಸಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಚೇತನ್ ಚಂದ್ರ ಬಳಿಕ ನಟ ಯಶ್ ರೊಂದಿಗೆ ರಾಜಧಾನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಹುಚ್ಚುಡುಗ್ರು, ಕುಂಭರಾಶಿ, ಪ್ಲಸ್, ಜಾತ್ರೆ, ಪ್ರೇಮಿಸಂ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದರು.
Advertisement