ಶ್ಯಾಮ್ ರಂಗೀಲಾಗೆ ಮೋದಿ, ರಾಹುಲ್ ಮಿಮಿಕ್ರಿ ಮಾಡದಂತೆ ಸೂಚನೆ

Published On :
ನವದೆಹಲಿ: ಹಾಸ್ಯ ಕಲಾವಿದ ಹಾಗೂ ಸ್ಟಾರ್ ಪ್ಲಸ್ ವಾಹಿನಿಯ ‘ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ನ ಸ್ಪರ್ಧಿ ಶ್ಯಾಮ್ ರಂಗೀಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮಿಮಿಕ್ರಿ ಮಾಡದಂತೆ ವಾಹಿನಿ ಸೂಚಿಸಿದೆ.
ಮೋದಿ ಹಾಗೂ ರಾಹುಲ್ ಗಾಂಧಿ ಅವರ ದನಿಯಲ್ಲಿ ಶ್ಯಾಮ್ ಮಿಮಿಕ್ರಿ ಮಾಡಿದ್ದರು. ಆದರೆ, ವಾಹಿನಿ ಈ ಸಂಚಿಕೆಗಳ ಪ್ರಸಾರವನ್ನು ಕೈಬಿಟ್ಟಿದೆ ಎಂದು ಶ್ಯಾಮ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲು ಮೋದಿ ಅವರ ದನಿಯನ್ನು ಅನುಕರಿಸಿ ಕಾರ್ಯಕ್ರಮ ನೀಡಿದ್ದೆ. ಈ ಕಾರ್ಯಕ್ರಮ ರೆಕಾರ್ಡ್ ಆಗಿತ್ತು. ಇದಾದ ಕೆಲ ದಿನಗಳ ಬಳಿಕ ಕಾರ್ಯಕ್ರಮದ ನಿರ್ಮಾಣ ತಂಡದಿಂದ ನನಗೆ ಕರೆ ಬಂತು. ಈ ಹಿಂದೆ ರೆಕಾರ್ಡ್ ಆದ ಮಿಮಿಕ್ರಿ ಪ್ರಸಾರವಾಗುವುದಿಲ್ಲ. ಹೊಸದಾಗಿ ಕಾರ್ಯಕ್ರಮ ರೆಕಾರ್ಡ್ ಮಾಡಬೇಕು ಎಂದರು. ಮೋದಿ ಮಿಮಿಕ್ರಿಗೆ ಪ್ರತಿಭಟನೆ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಈ ಹಿಂದೆ ರೆಕಾರ್ಡ್ ಆದ ಕಾರ್ಯಕ್ರಮ ಪ್ರಸಾರ ಮಾಡುವುದಿಲ್ಲ ಎಂದು ನಿರ್ಮಾಣ ತಂಡ ತಿಳಿಸಿತ್ತು ಎಂದು ಶ್ಯಾಮ್ ಹೇಳಿದ್ದಾರೆ.
ಪ್ರಧಾನಿ ಮೋದಿ ದನಿಯ ಬದಲಿಗೆ ರಾಹುಲ್ ಗಾಂಧಿ ದನಿಯನ್ನು ಅನುಕರಿಸಿ ಕಾರ್ಯಕ್ರಮ ನಡೆಸಿಕೊಡಬಹುದು ಎಂದು ನಿರ್ಮಾಣ ತಂಡದವರು ಹೇಳಿದ್ದರು. ಹೊಸದಾಗಿ ರಾಹುಲ್ ಗಾಂಧಿ ದನಿ ಅನುಕರಿಸಿ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ. ಆದರೆ ಕೆಲ ದಿನಗಳ ಬಳಿಕ ಆ ಕಾರ್ಯಕ್ರಮವೂ ಪ್ರಸಾರವಾಗುವುದಿಲ್ಲ ಎಂದು ನಿರ್ಮಾಣ ತಂಡ ತಿಳಿಸಿತು. ಇದರಿಂದ ನಾನು ಕಾರ್ಯಕ್ರಮದಿಂದ ಹೊರ ಬೀಳುವಂತಾಯಿತು ಎಂದು ಶ್ಯಾಮ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೋದಿ ದನಿ ಅನುಕರಿಸಿದ್ದ ಕಾರ್ಯಕ್ರಮದ ದೃಶ್ಯ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಶ್ಯಾಮ್ ಅವರೇ ಹರಿಬಿಟ್ಟಿದ್ದಾರೆ ಎಂದು ವಾಹಿನಿ ಆರೋಪಿಸಿದೆ. ಆದರೆ, ‘ವಿಡಿಯೊ ವೈರಲ್ ಆಗಿರುವುದರ ಹಿಂದೆ ನನ್ನ ಪಾತ್ರವಿಲ್ಲ’ ಎಂದು ಶ್ಯಾಮ್ ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮದ ತೀರ್ಪುಗಾರರಾಗಿದ್ದ ಅಕ್ಷಯ್ ಕುಮಾರ್ ಅವರಿಗೆ ನನ್ನ ಹಾಸ್ಯ ನಿರೂಪಣೆ ಇಷ್ಟವಾಗಿತ್ತು. ನಾನು ಕಾರ್ಯಕ್ರಮದಿಂದ ಹೊರಬಿದ್ದರೂ ನನಗೆ ಹೆಚ್ಚು ಬೇಸರವಾಗಲಿಲ್ಲ. ಆದರೆ, ವೈರಲ್ ಆದ ನನ್ನ ಮಿಮಿಕ್ರಿಯ ವಿಡಿಯೊ ಬಗ್ಗೆ ನಿರ್ಮಾಣ ತಂಡದವರು ಪದೇ ಪದೇ ಕರೆ ಮಾಡಿ ನನಗೆ ತೊಂದರೆ ಕೊಡುತ್ತಿದ್ದಾರೆ. ನನ್ನನ್ನು ನನ್ನ ಪಾಡಿಗೆ ಇರಲು ಬಿಡಿ ಎಂದು ಶ್ಯಾಮ್ ರಂಗೀಲಾ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


