ದಕ್ಷಿಣ ಭಾರತದ ಖ್ಯಾತ ಹಿರಿಯ ನಟ ಸುದರ್ಶನ್ ವಿಧಿವಿಶ

ದಕ್ಷಿಣ ಭಾರತದ ಖ್ಯಾತ ಹಿರಿಯ ನಟ ಆರ್ ಎನ್ ಸುದರ್ಶನ್ ಅವರು ಶುಕ್ರವಾರ ವಿಧಿವಶರಾಗಿದ್ದು, ಅವರಿಗೆ 78 ವರ್ಷ ವಯಸ್ಸಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಹಿರಿಯ ನಟ ಆರ್ ಎನ್ ಸುದರ್ಶನ್ ಅವರು ಶುಕ್ರವಾರ ವಿಧಿವಶರಾಗಿದ್ದು, ಅವರಿಗೆ 78 ವರ್ಷ ವಯಸ್ಸಾಗಿತ್ತು.
ವಯೋ ಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸುದರ್ಶನ್ ಅವರನ್ನು ಇತ್ತೀಚೆಗೆ ಸಾಗರ್ ಅಪೋಲೋ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ  ಎಂದು ತಿಳಿದುಬಂದಿದೆ.
ಸುದರ್ಶನ್ ಅವರ ಕುಟುಂಬ ಮೂಲಗಳ ಪ್ರಕಾರ ಕಳೆದ ಹಲವು ದಿನಗಳಿಂದ ಸುದರ್ಶನ್ ಅವರು ಅನಾರೋಗ್ಯಕ್ಕೀಡಾಗಿದ್ದರು. ಇತ್ತೀಚೆಗೆ ಅವರು ಮನೆಯ ಬಾತ್ ರೂಮಿನಿಂದ ಹೊರಗೆ ಬರುವಾಗ ಕಾಲು ಜಾರಿ ಬಿದಿದ್ದರು.  ಇದರಿಂದ ಅವರ ಕಾಲು ಮೂಳೆ ಮುರಿದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರಿಗೆ ಸಕ್ಕರೆ ಖಾಯಿಲೆ ಹಾಗೂ ಕಿಡ್ನಿ ಸಮಸ್ಯೆ ಇದ್ದುದರಿಂದ ವೈದ್ಯರು ಡಯಾಲಿಸಿಸ್ ಮಾಡಿಸುವಂತೆ ಹೇಳಿದ್ದರು.  ಆದರೆ ಅಷ್ಟರೊಳಗಾಗಲೇ ಸುದರ್ಶನ್ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಖ್ಯಾತ ನಟ ಸುದರ್ಶನ್ ಅವರು ಕನ್ನಡ, ತೆಲುಗು, ತಮಿಳು, ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸುಮಾರು 250ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಸಿದ್ದರು. ಇತ್ತೀಚೆಗೆ ಕನ್ನಡದ ಕಿರುತೆರೆಗೂ ಪದಾರ್ಪಣೆ  ಮಾಡಿದ್ದ ನಟ ಸುದರ್ಶನ್ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.
1961ರಲ್ಲಿ ನಟ ಸುದರ್ಶನ್ ಅವರು ವಿಜಯನಗರದ ವೀರಪುತ್ರ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಸಾಲುಸಾಲು ಚಿತ್ರಗಳಲ್ಲಿ ನಟಿಸಿದ್ದ ಸುದರ್ಶನ್ ಕಾಲಾಂತರದಲ್ಲಿ  ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. 2006ರಲ್ಲಿ ತೆರೆಕಂಡ ಮಠ ಚಿತ್ರದಲ್ಲಿ ಸುದರ್ಶನ್ ಅವರ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಇದಾದ ಬಳಿಕ ಉಪೇಂದ್ರ ಅಭಿನಯದ ಸೂಪರ್ ಚಿತ್ರದಲ್ಲಿ ಉಪ್ಪಿ ತಂದೆಯ ಪಾತ್ರದಲ್ಲಿ  ಸುದರ್ಶನ್ ಅಭಿನಯಿಸಿದ್ದರು. ಬಳಿಕ 2012ರಲ್ಲಿ ತೆರೆಕಂಡ ಚಾರುಲತಾ ಚಿತ್ರದಲ್ಲಿ ಸುದರ್ಶನ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com