ರಾಮನಗರದಲ್ಲಿ ಸಿನಿಮಾ ಯೂನಿವರ್ಸಿಟಿ, ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ: ಸಿಎಂ ಕುಮಾರಸ್ವಾಮಿ

ರಾಮನಗರದಲ್ಲಿ ಸಿನಿಮಾ ಯೂನಿವರ್ಸಿಟಿ, ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡವಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಶುಕ್ರವಾರ ಘೋಷಣೆ ಮಾಡಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ನಡೆದ ಅಂಬರೀಷ್ ಶ್ರದ್ಧಾಂಜಲಿ ಕಾರ್ಯಕ್ರಮ
ಅಂಬೇಡ್ಕರ್ ಭವನದಲ್ಲಿ ನಡೆದ ಅಂಬರೀಷ್ ಶ್ರದ್ಧಾಂಜಲಿ ಕಾರ್ಯಕ್ರಮ
ಬೆಂಗಳೂರು: ರಾಮನಗರದಲ್ಲಿ ಸಿನಿಮಾ ಯೂನಿವರ್ಸಿಟಿ, ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡವಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಶುಕ್ರವಾರ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬರೀಷ್ ಗೆ ಪುಷ್ಮ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಅಂಬರೀಷ್ ಮತ್ತು ತಮ್ಮ ನಡುವಿನ ಸ್ನೇಹ ಸಂಬಂಧಗಳ ಕುರಿತು ಮಾತನಾಡಿದರು. ಈ ವೇಳೆ ಅಂಬರೀಷ್ ಮತ್ತು ಸಾಹಸ ಸಿಂಹ ವಿಷ್ಣು ವರ್ಧನ್ ಅವರ ನೆನಪಿನಾರ್ಥವಾಗಿ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಬೇಕು ಎಂಬ ಮನವಿಗೆ ಸ್ಪಂದಿಸಿದ ಅವರು, ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಂತೆಯೇ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲಾಗುತ್ತದೆ. ಅಂತೆಯೇ ರಾಮನಗರದಲ್ಲಿ ಸಿನಿಮಾ ಯೂನಿವರ್ಸಿಟಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
'ಕನ್ನಡ ಚಿತ್ರರಂಗ ಕೂಡ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ. ನಾನು ಕೂಡ ಚಿತ್ರ ವಿತರಕನಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಕನ್ನಡ ಚಿತ್ರರಂಗಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಚಿತ್ರ ವಿತರಕನಾಗಿ ನಾನು ಮಾಡಿದ ಮೊದಲ ಮೂರು ಚಿತ್ರಗಳೂ ಯಶಸ್ವಿಯಾಗಿದ್ದವು. ಇನ್ನು ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಅಂಬರೀಷ್ ಅವರು ಕ್ಷಣ ಮಾತ್ರದಲ್ಲಿ ಬಗೆ ಹರಿಸುತ್ತಿದ್ದರು. ರಾಜ್ ಕುಮಾರ್, ವಿಷ್ಣು ವರ್ಧನ್ ನಿಧನದ ನಂತರ ಚಿತ್ರರಂಗಕ್ಕೆ ಅಂಬರೀಷ್ ಬೆನ್ನೆಲುಬಾಗಿ ನಿಂತಿದ್ದರು. ಅವರೊಂದಿಗೆ ನನ್ನ ಮಗನನ್ನು ಹಾಕಿಕೊಂಡು ಒಂದು ಚಿತ್ರ ಮಾಡಬೇಕು ಎಂದು ನಾನಂದುಕೊಂಡಿದ್ದೆ. ಇದಕ್ಕಾಗಿ ತೆಲುಗಿನ ರೆಬೆಲ್ ಚಿತ್ರದ ಹಕ್ಕನ್ನು ಕೂಡ ಖರೀದಿ ಮಾಡಿದ್ದೆ. ಆದರೆ ರಾಜಕೀಯ ಮತ್ತು ವೈಯುಕ್ತಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಿಲ್ಲ. ಈಗ ಅಂಬರೀಷ್ ಕೂಡ ನಮ್ಮೊಂದಿಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರು, ಅಂಬಿ ಅಂತ್ಯ ಸಂಸ್ಕಾರದ ವೇಳೆ ನೆರವು ನೀಡಿದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕರ್ನಾಟಕ ಪೊಲೀಸ್ ಇಲಾಖೆ ಮತ್ತು ಅಂಬರೀಷ್ ಅವರ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ಹೇಳಿದರು. ಅಂತೆಯೇ ಅಂಬರೀಷ್ ಅವರು ತಮಗೆ ಪತಿಯಾಗಿ ಮಾತ್ರವಲ್ಲ, ತಂದೆ, ಉತ್ತಮ ಸ್ನೇಹಿತ, ಅಣ್ಣನಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಅಂಬಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಗೌಡ, ಶಿವಣ್ಣ, ಅಪ್ಪು, ಯಶ್, ದರ್ಶನ್, ಸುದೀಪ್, ಜೈಜಗದೀಶ್, ದೊಡ್ಡಣ್ಣ ಸೇರಿದಂತೆ ಇಡೀ ಚಿತ್ರರಂಗವೇ ಪಾಲ್ಗೊಂಡಿದೆ. ಜೊತೆಗೆ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿ. ಸೋಮಣ್ಣ ಸೇರಿದಂತೆ ಹಲವು ಶಾಸಕರು ಭಾಗಿ ಆಗಿದ್ದಾರೆ. ಚಿತ್ರರಂಗ ಮತ್ತು ರಾಜಕೀಯ ರಂಗದ ಗಣ್ಯರು ಅಂಬಿ ಜೊತೆಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ಅಗಲಿದ ರೆಬೆಲ್‍ಸ್ಟಾರ್‍ಗೆ ನುಡಿ ನಮನ ಸಲ್ಲಿಸಿದ್ದಾರೆ.
ನವೆಂಬರ್ 24ರ ಶನಿವಾರ ರಾತ್ರಿ ನಟ ಅಂಬರೀಶ್ ಅವರು ಹೃದಯಾಘಾತದಿಂದ ನಗರದ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅವರ ಅಂತಿಮ ಸಂಸ್ಕಾರವು ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com