'ಆ ಸಾಲು ತೆಗೆದು ಹಾಕಿ, ಇಲ್ಲ, ಚಿತ್ರ ಬಿಡುಗಡೆಗೆ ಅವಕಾಶವಿಲ್ಲ': 'ದಿ ವಿಲನ್' ಗೆ ಹೊಸ ತಲೆನೋವು

ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ದಿ ವಿಲನ್ ಚಿತ್ರಕ್ಕೆ ಹೊಸದೊಂದು ತಲೆನೋವು ಶುರುವಾಗಿದ್ದು, ಚಿತ್ರದ ಹಾಡೊಂದರ ಸಾಲನ್ನು ಕೂಡಲೇ ತೆಗೆದುಹಾಕುವಂತೆ ದೃಷ್ಟಿ ವಿಶೇಷಚೇತನರು ಅಗ್ರಹಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ದಿ ವಿಲನ್ ಚಿತ್ರಕ್ಕೆ ಹೊಸದೊಂದು ತಲೆನೋವು ಶುರುವಾಗಿದ್ದು, ಚಿತ್ರದ ಹಾಡೊಂದರ ಸಾಲನ್ನು ಕೂಡಲೇ ತೆಗೆದುಹಾಕುವಂತೆ ದೃಷ್ಟಿ ವಿಶೇಷಚೇತನರು ಅಗ್ರಹಿಸಿದ್ದಾರೆ.
ದಿ ವಿಲನ್‌ ಸಿನಿಮಾದಲ್ಲಿರುವ ಬೋಲೋ ಬೋಲೋ ಹಾಡಿನಲ್ಲಿ  'ಗರುಡ್ನಂಗೆ ಇದ್ದೋನ್‌ ನೋಡ್ಲಾ ಕುರುಡ್ನಂಗ್‌ ಆಗೋದ್ನೋ' ಪದ ಬಳಕೆ ಕುರಿತು ದೃಷ್ಟಿ ವಿಶೇಷಚೇತನರ ಸಮುದಾಯ ತೀವ್ರ ವಿರೋದ ವ್ಯಕ್ತಪಡಿಸಿದ್ದು, ಈ ಸಾಲಿನ ಮೂಲಕ ದೃಷ್ಟಿ ವಿಶೇಷಚೇತನರನ್ನು ಅಪಹಾಸ್ಯ ಮಾಡಲಾಗಿದೆ. ಈ ಕೂಡಲೇ ಚಿತ್ರತಂಡ ಆ ಸಾಲನ್ನು ತೆಗೆದು ಹಾಕದಿದ್ದಲ್ಲಿ ಅ.18ರಂದು ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸುವುದಾಗಿ ದೃಷ್ಟಿ ವಿಶೇಷಚೇತನ ಸಮುದಾಯ ಎಚ್ಚರಿಕೆ ನೀಡಿದೆ. 
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೃಷ್ಟಿ ವಿಶೇಷಚೇತನ ಸಮುದಾಯದ ಪ್ರತಿನಿಧಿ ಎಂ. ವೀರೇಶ್‌, ಬೋಲೋ ಬೋಲೋ ಹಾಡಿನಲ್ಲಿ 'ಗರುಡ್ನಂಗೆ ಇದ್ದೋನ್‌ ನೋಡ್ಲಾ ಕುರುಡ್ನಂಗ್‌ ಆಗೋದ್ನೋ' ಎಂಬ ಸಾಲನ್ನು ತೆಗೆದು ಹಾಕಬೇಕು ಹಾಗೂ ಚಲನಚಿತ್ರಗಳಲ್ಲಿ ಅಂಧತ್ವವನ್ನು ಹೀನಾಯವಾಗಿ ಬಿಂಬಿಸುವುದನ್ನು ನಿಲ್ಲಿಸಬೇಕು. ನಮ್ಮ ಕೋರಿಕೆಗೆ ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ. ವಿಕಲಚೇತನರ ಕಾಯಿದೆ ಯಾವುದೇ ವಿಕಲಚೇತನರ ನ್ಯೂನ್ಯತೆಯನ್ನು ಎತ್ತಿ ಹಿಡಿಯಬಾರದು ಎಂದು ತಿಳಿಸುತ್ತದೆ. ಅಲ್ಲದೆ, ದೃಷ್ಟಿವಿಶೇಷ ಚೇತನರ ಭಾವನೆಗಳಿಗೆ ಧಕ್ಕೆ ಉಂಟಾದಲ್ಲಿ ಅದಕ್ಕೆ ಕಾರಣರಾದವರ ಬಗ್ಗೆ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಲು ಸಾಧ್ಯತೆ ಇದೆಯೆಂದು ಎಚ್ಚರಿಸಿದರು.
ಇನ್ನು ದೃಷ್ಟಿ ವಿಶೇಷಚೇತನ ಸಮುದಾಯದ ಆಗ್ರಹಕ್ಕೆ ಸಂಬಂಧಿಸಿದಂತೆ ಚಿತ್ರತಂಡದಿಂದ ಈ ವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ಲಭಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com