ಸ್ಯಾಂಡಲ್ ವುಡ್ ಐಟಿ ದಾಳಿ ಹಿಂದಿನ ನಿಜವಾದ ಕಾರಣ ಬಿಚ್ಚಿಟ್ಟ ವಿತರಕ ಪ್ರಶಾಂತ್ ಸಂಬರ್ಗಿ!

ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಕನ್ನಡ ಚಿತ್ರರಂಗದ ಓರ್ವ ಪ್ರಮುಖ ಚಿತ್ರ ವಿತರಕ ಕಾರಣ ಎಂದು ಖ್ಯಾತ ವಕೀಲ, ಉದ್ಯಮಿ ಹಾಗೂ ವಿತರಕ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟರ ಮೇಲಿನ ಆದಾಯ ತೆರಿಗೆ ಅಧಿಕಾರಿಗಳ ವಿಚಾರ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವಂತೆಯೇ ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಕನ್ನಡ ಚಿತ್ರರಂಗದ ಓರ್ವ ಪ್ರಮುಖ ಚಿತ್ರ ವಿತರಕ ಕಾರಣ ಎಂದು ಖ್ಯಾತ ವಕೀಲ, ಉದ್ಯಮಿ ಹಾಗೂ ವಿತರಕ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು.. ಕನ್ನಡ ಚಿತ್ರರಂಗದ ಸ್ಟಾರ್ ನಟರು, ನಿರ್ಮಾಪಕರು, ವಿತರಕರ ಮೇಲಿನ ದಾಳಿ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರಶಾಂತ್ ಅವರು, ಐಟಿ ದಾಳಿಗೆ ಚಿತ್ರರಂಗದ ವಿತರಕರೊಬ್ಬರು ತಮ್ಮ ಸ್ವಾರ್ಥ ಸಾಧನೆಗಾಗಿ ಮಾಡಿದ ಕೆಲಸವೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ.
'ದಕ್ಷಿಣ ಭಾರತದ ಸಿನಿಮಾ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಕನ್ನಡ ಚಿತ್ರರಂಗದಿಂದ ಕಡಿಮೆ ಜಿಎಸ್ ಟಿ ಬರುತ್ತಿದ್ದು, ಇದೇ ಐಟಿ ದಾಳಿಗೆ ಮೂಲ ಕಾರಣವಾಗಿದೆ. ಅಲ್ಲದೇ ಮನರಂಜನಾ ತೆರಿಗೆಯಲ್ಲಿ ಉಂಟಾಗಿರುವ ಆದಾಯದ ಲೋಪವೂ ಕಾರಣ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇತರೇ ರಾಜ್ಯದ ಸಿನಿಮಾಗಳನ್ನು ವಿತರಕರು ಯಾವುದೇ ಒಪ್ಪಂದ ದಾಖಲೆ ಇಲ್ಲದೇ ಬಿಡುಗಡೆ ಮಾಡುತ್ತಾರೆ. ಆದರೆ ಇದಕ್ಕೆ ದಾಖಲೆ ಇಲ್ಲದ ಕಾರಣ ಹಣ ನೇರವಾಗಿ ವಿತರಕರ ಹಾಗೂ ನಿರ್ಮಾಪಕರ ಕೈ ಸೇರುತ್ತದೆ. ಒಬ್ಬ ಕನ್ನಡ ವಿತರಕ ಮಾಡಿದ ದೊಡ್ಡ ತಪ್ಪು ದಾಳಿಗೆ ಕಾರಣವಾಗಿದ್ದು, ಈ ಜಾಲ ಎಲ್ಲಿಯವರೆಗೆ ಹಬ್ಬಿದೆ ಎನ್ನುವ ಮೂಲ ಹುಡುಕಲು ಐಟಿ ದಾಳಿ ನಡೆದಿದೆ ಎಂದು ಪ್ರಶಾಂತ್ ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ನೇರವಾಗಿ ಚಿತ್ರ ವಿತರಣೆ ಮಾಡುವುದರಿಂದ ಚಿತ್ರಮಂದಿರದ ಪ್ರದರ್ಶಕರು ಯಾವುದೇ ದಾಖಲೆ ಇಲ್ಲದೆ ಸಿನಿಮಾ ಪ್ರದರ್ಶನ ಮಾಡುತ್ತಾರೆ. ಇದರಿಂದ ಸರ್ಕಾರಕ್ಕೆ ಸೇರಬೇಕಾದ ಹಣ ಜನರಿಂದ ಬಂದರೂ ಅದು ಸರ್ಕಾರಕ್ಕೆ ತಲುಪುವುದಿಲ್ಲ. ಆ ಒಬ್ಬ ವಿತರಕ ಈಗ ಸಿನಿಮಾ ಮಾಡಲು ಹೋಗಿ ಹಣದ ರೂಪದಲ್ಲಿ ವ್ಯವಹಾರ ಮಾಡಿದ್ದು, ಇದು ಕೂಡ ದಾಳಿಗೆ ಕಾರಣ. ಏಕೆಂದರೆ ಸಂಭಾವನೆ ಪಡೆಯುವ ನಟರು ಚೆಕ್ ಮೂಲಕವೇ ಹಣ ಪಡೆಯಬೇಕು. ಆಗ ಅದು ತೆರಿಗೆ ವ್ಯಾಪ್ತಿಗೆ ಬರುತ್ತದೆ. ಆದರೆ ಕೆಲ ನಟರು ಕಾಣಿಕೆ, ವಿಲ್ಲಾ, ಆಸ್ತಿ ಪಡೆದಿದ್ದಾರೆ. ಆದರೆ ಇದು ತಪ್ಪಲ್ಲ, ನಟರು ತಾವು ಪಡೆದ ಕಾಣಿಕೆಯನ್ನು ಘೋಷಣೆ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಪ್ರಶಾಂತ್ ತಿಳಿಸಿದರು.
ವಿತರಕನ ಪ್ರಮಾದದಿಂದಾಗಿ ಐಟಿದಾಳಿ
ಚಿತ್ರರಂಗದ ಮೇಲೆ ಐಟಿ ದಾಳಿ ನಡೆಯಲು ದಕ್ಷಿಣ ಭಾರತದ ಪ್ರಮುಖ ವಿತರಕ ಮಾಡಿದ ಒಂದು ದೊಡ್ಡ ತಪ್ಪೇ ಕಾರಣ, ನಟರು ಕೂಡ ನೇರ ಹಣದ ಮೂಲಕ ಸಂಭಾವನೆ ಪಡೆಯುತ್ತಿದ್ದು ಅದು ಕೂಡ ತಪ್ಪು. ಒಬ್ಬ ವಿತರಕ ಮಾಡಿದ ತಪ್ಪು ಇಂದು ಉಂಟಾಗಿರುವ ಐಟಿ ರೇಡ್‍ಗೆ ಕಾರಣ. ಏಕೆಂದರೆ ವಿತರಕ ಹಾಗೂ ನಿರ್ಮಾಪಕರ ನಡುವೆ ಉಂಟಾಗಿರುವ ಹಣದ ವ್ಯತ್ಯಾಸದಿಂದಾಗಿ ಈ ದಾಳಿ ನಡೆದಿದೆ ಎಂದು ಸಂಬರ್ಗಿ ವಿವರಿಸಿದ್ದಾರೆ. 
ಕಳೆದ 2016 ಡಿಸೆಂಬರ್ 30 ರಂದು ಬಿಡುಗಡೆ ಆಗಿರುವ ಸಿನಿಮಾ ಒಟ್ಟು 35 ಕೋಟಿ ರೂ. ಆದಾಯ ಪಡೆದಿರುತ್ತದೆ. ಆದರೆ ಆ ವಿತರಕ ಕೇವಲ 19 ಕೋಟಿ ರೂ.ಗಳನ್ನು ನಿರ್ಮಾಪಕರಿಗೆ ನೀಡುತ್ತಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಾಗಿ ಪ್ರಕರಣದ ವಿಚಾರಣೆ ಜಿಎಸ್ ಟಿ ಅಧಿಕಾರಿಗಳವರೆಗೂ ತಲುಪುತ್ತದೆ. ಸದ್ಯ ಈ ಕಿಡಿ ಇಂದು ಕನ್ನಡ ಚಿತ್ರರಂಗವನ್ನು ಆವರಿಸಿದೆ. ಈ ಪ್ರಕರಣದಿಂದಲೇ ನಿರ್ಮಾಪಕರು, ನಟರು ಹಾಗೂ ಚಿತ್ರರಂಗದ ಮೇಲೆ ಕೆಟ್ಟ ಹೆಸರು ಬರಲು ಕಾರಣ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com