ಸಂಗ್ರಹ ಚಿತ್ರ
ಸಿನಿಮಾ ಸುದ್ದಿ
ದರ್ಶನ್ ವರ್ಸಸ್ ಸುದೀಪ್; ಆಗಸ್ಟ್ 9ಕ್ಕೆ ಕುರುಕ್ಷೇತ್ರ ಬಿಡುಗಡೆ, ಸ್ಟಾರ್ ನಟರ ಬಾಕ್ಸ್ ಆಫೀಸ್ ವಾರ್ ಗೆ ವೇದಿಕೆ ಸಜ್ಜು!
ಕೊನೆಗೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಮಹೂರ್ತ ನಿಗದಿಯಾಗಿದ್ದು, ಮುಂಬರುವ ಆಗಸ್ಟ್ 9ರಂದು ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಅವರು ಹೇಳಿದ್ದಾರೆ.
ಬೆಂಗಳೂರು: ಕೊನೆಗೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಮಹೂರ್ತ ನಿಗದಿಯಾಗಿದ್ದು, ಮುಂಬರುವ ಆಗಸ್ಟ್ 9ರಂದು ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಅವರು ಹೇಳಿದ್ದಾರೆ.
ಹೌದು.. ನಟ ದರ್ಶನ್ ತೂಗುದೀಪ ಅಭಿನಯದ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಮಹೂರ್ತ ಫಿಕ್ಸ್ ಆಗಿದ್ದು, ಮುಂಬರುವ ಆಗಸ್ಟ್ 9ರಂದು ಚಿತ್ರ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಅಂದೇ ಅಂದರೆ ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದಂದು ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ ಕೂಡ ಬಿಡುಗಡೆಯಾಗುತ್ತಿದೆ. ಹೀಗಾಗಿ ಚಂದನವನದಲ್ಲಿ ಮತ್ತೊಮ್ಮೆ ಸ್ಟಾರ್ ನಟರ ಬಾಕ್ಸ್ ಆಫೀಸ್ ವಾರ್ ಗೆ ವೇದಿಕೆ ಸಜ್ಜಾದಂತಾಗಿದೆ.
ಈ ಕುರಿತು ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಮುನಿರತ್ನ ಅವರು, ಆಗಸ್ಟ್ 9ಕ್ಕೆ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಆಗಲಿದ್ದು, ಜುಲೈ ಮೊದಲ ವಾರ ಆಡಿಯೋ ರಿಲೀಸ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಅಂತೆಯೇ ಚಿತ್ರದವನ್ನು 2ಡಿ ಮತ್ತು 3ಡಿ ಆವೃತ್ತಿಯಲ್ಲಿ ತೆರೆ ಮೇಲೆ ತರಲು ನಿರ್ಧರಿಸಲಾಗಿದ್ದು, ಈ ಸಂಬಂಧ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಚಿತ್ರ ತಂಡದ ಇಂದಿನ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್ ಹಾಗೂ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ನಿಖಿಲ್ ಕುಮಾರಸ್ವಾಮಿ ಗೈರಾಗಿದ್ದರು. ಈ ಕುರಿತು ಮಾತನಾಡಿದ ಮುನಿರತ್ನ ಅವರು, ಚಿತ್ರ ಬಿಡುಗಡೆ ದಿನಾಂಕ ಮಾತ್ರ ಇಂದು ಘೋಷಣೆ ಮಾಡಲಾಗುತ್ತದೆ. ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂದರು. ಇದೇ ವೇಳೆ ನಟ ಅಂಬರೀಶ್ ರನ್ನು ನೆನೆದ ಮುನಿರತ್ನ ಅವರು, ಅಂಬರೀಷ್ ಅವರು ಅನಾರೋಗ್ಯದ ನಡುವೆಯೂ ಸುಮಾರು 20 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸಿ ಭೀಷ್ಮನ ಪಾತ್ರ ಮಾಡಿದ್ದಾರೆ. ಅಂಬರೀಶ್ ಪಾತ್ರಕ್ಕೆ ಅವರೇ ಡಬ್ ಮಾಡಿದ್ದಾರೆ. ಆದರೆ ಅವರಿಗೆ ಯಾವುದೇ ಸಂಭಾವನೆ ಕೊಟ್ಟಿಲ್ಲ ಎಂದು ತಿಳಿಸಿದರು.
ಬಹು ತಾರಾಗಣದ ಕುರುಕ್ಷೇತ್ರ ಸಿನಿಮಾ ನಾಲ್ಕು ಭಾಷೆಗಳಲ್ಲಿ ಪ್ರಪಂಚದಾದ್ಯಂತ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.
ಸ್ಟಾರ್ ನಟರ ಆನ್ ಸ್ಕ್ರೀನ್ ವಾರ್ ಗೆ ವೇದಿಕೆ ಸಜ್ಜು!
ಇನ್ನು ಅತ್ತ ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ಕೂಡ ಆಗಸ್ಟ್ 9ರಂದೇ ಬಿಡುಗಡೆಯಾಗುತ್ತಿದ್ದು, ಈ ಚಿತ್ರ ಕೂಡ ಸುಮಾರು 7 ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಕಾರಣಕ್ಕೆ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಬಾಕ್ಸ್ ಆಫೀಸ್ ಕದನಕ್ಕೆ ವೇದಿಕೆ ಸಿದ್ಧವಾದಂತಾಗಿದೆ.

