ಸೆಲೆಬ್ರಿಟಿಗಳು, ಉದ್ಯಮಿಗಳ 'ನಶೆ ನಂಟು': ಮತ್ತೊಬ್ಬ ಸ್ಯಾಂಡಲ್ ವುಡ್ ನಟಿ ಮನೆ ಮೇಲೆ ಪೊಲೀಸರ ದಾಳಿ

ಬೆಂಗಳೂರು: ಕೋವಿಡ್-19 ಮಧ್ಯೆ ಕಳೆದ ವರ್ಷ ತಲ್ಲಣ ಮೂಡಿಸಿದ್ದ ಚಿತ್ರರಂಗದಲ್ಲಿನ ಮಾದಕ ವಸ್ತು ಮಾರಾಟ, ಪೂರೈಕೆ ಮತ್ತು ಬಳಕೆ ದಂಧೆ ಮತ್ತಷ್ಟು ವ್ಯಾಪಕವಾಗಿ ಹಬ್ಬಿದೆ ಎಂದು ತಿಳಿದುಬರುತ್ತಿದೆ.
ತನಿಖೆ ವೇಳೆ ಮತ್ತಷ್ಟು ಸೆಲೆಬ್ರಿಟಿಗಳು, ಉದ್ಯಮಿಗಳು ಭಾಗಿಯಾಗಿರುವುದು ಹೊರಗೆ ಬರುತ್ತಿದೆ. ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಮತ್ತೊಬ್ಬ ಸ್ಯಾಂಡಲ್ ವುಡ್ ನಟಿ ಸೇರಿದಂತೆ ಹಲವರು ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಕೆಲ ಸಮಯಗಳ ಹಿಂದೆ ಕೇಳಿಬಂದಿದ್ದ ಗೋವಿಂದಪುರ ಡ್ರಗ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ನಟಿ ಸೋನಿಯಾ ಅಗರ್ವಾಲ್ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದು ಪೊಲೀಸರು ಅವರ ಮನೆ ಮೇಲೆ ದಾಳಿ ಮಾಡಿದಾಗ ಗಾಂಜಾ ಪತ್ತೆಯಾಗಿದೆ. ಇನ್ನು ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್ ಮುಂತಾದವರ ಮನೆಯ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ಮಾಡಿದ್ದಾರೆ.
ಡ್ರಗ್ ಪೆಡ್ಲರ್ ಥಾಮಸ್ ಈ ಹಿಂದೆ ನೀಡಿದ್ದ ಮಾಹಿತಿಯನ್ನು ಆಧರಿಸಿ ಪೊಲೀಸರು ಇಂದಿನ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬೆಂಗಳೂರಿನ ಬೆನ್ಸನ್ ಟೌನ್, ರಾಜಾಜಿನಗರ, ಪದ್ಮನಾಭನಗರ, ಮೊದಲಾದ ಕಡೆ ಸೆಲೆಬ್ರಿಟಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಅಪಾರ್ಟ್ ಮೆಂಟ್ ಗಳಲ್ಲಿ ಉದ್ಯಮಿ ಭರತ್ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದು ಅದರಲ್ಲಿ ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದರು ಎಂದು ತಿಳಿದುಬಂದಿದೆ.
ಗೋವಿಂದಪುರ ಡ್ರಗ್ಸ್ ಪ್ರಕರಣದಲ್ಲಿ ಉದ್ಯಮಿ ಭರತ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಥಾಮಸ್ ನೀಡಿದ ಹೇಳಿಕೆ ಹಿನ್ನಲೆ ಆಧರಿಸಿ ದಾಳಿ ಮಾಡಿದ್ದು ಸದ್ಯ ಮತ್ತಷ್ಟು ವಿಚಾರಣೆ ಸಂಬಂಧ ಉದ್ಯಮಿ ಭರತ್ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ನಟಿ ಸೋನಿಯಾ ನಿವಾಸದಲ್ಲಿ ಪೊಲೀಸರಿಗೆ 40 ಗ್ರಾಂ ಗಾಂಜಾ ಪತ್ತೆ ಆಗಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸೋನಿಯಾ ಇರಲಿಲ್ಲ. ಸದ್ಯ ಅವರು ನಾಪತ್ತೆ ಆಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


