ಬಾಕ್ಸ್ ಆಫೀಸ್‌ನಲ್ಲಿ 'Ramayana' ಹೊಸ ಅಧ್ಯಾಯ: 23 ದಿನಕ್ಕೆ ಭಾರತದಲ್ಲಿ ₹1,000 ಕೋಟಿ ಗಳಿಕೆ, 'Baahubali 2' ದಾಖಲೆ ಧೂಳೀಪಟ..!

ಮುಂಬೈ/ಬೆಂಗಳೂರು: ನಿತೇಶ್ ತಿವಾರಿ ನಿರ್ದೇಶನದ ಪೌರಾಣಿಕ ಮಹಾಕಾವ್ಯ 'ರಾಮಾಯಣ: ಭಾಗ 1' (ರಾಮಾಯಣ: ರೈಸ್ ಆಫ್ ಎ ಲೆಜೆಂಡ್) ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮೂರು ವಾರಗಳು ಕಳೆದರೂ ಚಿತ್ರದ ಗಳಿಕೆಯ ಓಟ ಮುಂದುವರಿದಿದೆ.
ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ಬಿಡುಗಡೆಯಾದ 23ನೇ ದಿನಕ್ಕೆ ಭಾರತದಲ್ಲಿ ₹1,000 ಕೋಟಿ ನಿವ್ವಳ (Net) ಗಳಿಕೆಯ ಐತಿಹಾಸಿಕ ಮೈಲಿಗಲ್ಲನ್ನು ದಾಟಿದೆ.
ಅಷ್ಟೇ ಅಲ್ಲದೆ, ವಿಶ್ವಾದ್ಯಂತ ಒಟ್ಟು ₹1,790.10 ಕೋಟಿ ಗಳಿಸುವ ಮೂಲಕ ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಚಿತ್ರದ ಜೀವಮಾನದ ಜಾಗತಿಕ ಗಳಿಕೆಯ ದಾಖಲೆಯನ್ನು 'ರಾಮಾಯಣ' ಧೂಳೀಪಟ ಮಾಡಿದೆ.
ಸಿನಿಮಾ ವಹಿವಾಟು ವಿಶ್ಲೇಷಕ ಸಂಸ್ಥೆ 'ಸ್ಯಾಕ್ನಿಲ್ಕ್' (Sacnilk) ವರದಿಗಳ ಪ್ರಕಾರ, 23ನೇ ದಿನವಾದ ಶುಕ್ರವಾರ ಚಿತ್ರವು ₹8.45 ಕೋಟಿ ನಿವ್ವಳ ಗಳಿಕೆ ಕಂಡಿದೆ.
ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ ₹1,000.55 ಕೋಟಿಗೆ ಏರಿದೆ (ಭಾರತದ ಒಟ್ಟು ಗ್ರಾಸ್ ಗಳಿಕೆ ₹1,195.10 ಕೋಟಿ). ವಿದೇಶಿ ಮಾರುಕಟ್ಟೆಯಲ್ಲಿ ಚಿತ್ರವು ₹595 ಕೋಟಿ ಬಾಚಿಕೊಂಡಿದ್ದು, ವಿಶ್ವಾದ್ಯಂತ ಒಟ್ಟು ಗಳಿಕೆ ₹1,790.10 ಕೋಟಿಯಾಗಿದೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿದೆ. ವಾಲ್ಮೀಕಿ ರಚಿಸಿದ ಮಹಾಕಾವ್ಯವನ್ನು ಆಧರಿಸಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ರವಿದುಬೆ ಲಕ್ಷ್ಮಣನಾಗಿ ಅಭಿನಯಿಸಿದ್ದು, ಸನ್ನಿ ಡಿಯೋಲ್ ಹನುಮಂತನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಸೀತೆಯನ್ನು ರಾವಣ ಅಪಹರಿಸಿದ ಬಳಿಕ ಶ್ರೀರಾಮ ಕೈಗೊಳ್ಳುವ ಪ್ರಯಾಣ ಮತ್ತು ರಾವಣನ ವಿರುದ್ಧದ ಯುದ್ಧ ಚಿತ್ರದ ಪ್ರಮುಖ ಕಥಾವಸ್ತುವಾಗಿದೆ.
ನಮಿತ್ ಮಲ್ಹೋತ್ರಾ ಮತ್ತು ಯಶ್ ನಿರ್ಮಿಸಿರುವ ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಮೊದಲ ಭಾಗವು 2026ರ ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಎರಡನೇ ಭಾಗವು 2028ರ ದೀಪಾವಳಿ ಸಂದರ್ಭದಲ್ಲಿ ತೆರೆಕಾಣಲು ಸಿದ್ಧವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



