'ಅಪ್ಪು' ಇನ್ನಿಲ್ಲ: ನಾಳೆ ಬೆಳಗ್ಗೆ 6ಕ್ಕೆ ಪುನೀತ್ ಪಾರ್ಥೀವ ಶರೀರದ ಮೆರವಣಿಗೆ ಆರಂಭ, 10.30ರೊಳಗೆ ಅಂತ್ಯಕ್ರಿಯೆ

ನಿನ್ನೆ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10.30ರೊಳಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ
ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ

ಬೆಂಗಳೂರು: ನಿನ್ನೆ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10.30ರೊಳಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ದರ್ಶನ ಇಂದು ಇಡೀ ದಿನ ನಡೆಯಲಿದ್ದು, ನಾಳೆ ಬೆಳಗ್ಗೆ 6 ಗಂಟೆಯಿಂದ ಪಾರ್ಥೀವ ಶರೀರವನ್ನು ಕಂಠೀರವ ಸ್ಟುಡಿಯೋಗೆ ಮೆರವಣಿಗೆ ಮೂಲಕ ತರಲಾಗುತ್ತದೆ.  ನಾಳೆ ಬೆಳಗ್ಗೆ 10.30 ರ ಒಳಗೆ ನಟ ಪುನೀತ್ ಅಂತ್ಯಕ್ರಿಯೆ ನಡೆಯಲಿರುವುದರಿಂದ ಬೆಳಗ್ಗೆ 6 ರಿಂದ ಕಂಠೀರವ ಸ್ಟೇಡಿಯಂನಿಂದ ಅಂತಿಮಯಾತ್ರೆ ಸಾಗಲಿದೆ. 

ಪುನೀತ್ ರಾಜಕುಮಾರ್ ಅವರಿಗೆ ಸಕಲ ಸರ್ಕಾರಿ​ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಡಾ.ರಾಜ್​​ ಹಾಗೂ ಪಾರ್ವತಮ್ಮ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಪುನೀತ್ ನಿಧನಕ್ಕೆ ದೇಶದ ವಿವಿಧ ಭಾಷೆಗಳ ಚಿತ್ರರಂಗಗಳು, ಕಲಾವಿದರು ಸಂತಾಪ ಸೂಚಿಸಿದ್ದಾರೆ. ಇಂದು ಅಂತಿಮ ದರ್ಶನ ಪಡೆಯಲು ಟಾಲಿವುಡ್ ನಟರು ಆಗಮಿಸುವ ನಿರೀಕ್ಷೆ ಇದೆ. ರಾಜ್ಯದ ವಿವಿದೆಡೆಯಿಂದ ಅಭಿಮಾನಿಗಳು ಆಗಮಿಸುತ್ತಿದ್ದು, ಕಂಠೀರವ ಸ್ಟೇಡಿಯಂ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರೈಲ್ವೆ ನಿಲ್ದಾಣ, ಮೆಜೆಸ್ಟಿಕ್​ಗಳಲ್ಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ನಾಳೆ ನಟ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅಂತ್ಯಕ್ರಿಯೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇವೆ. ಈ ಬಗ್ಗೆ ರಾಜ್‌ಕುಮಾರ್ ಕುಟುಂಬಸ್ಥರ ಜತೆ ಚರ್ಚಿಸಿದ್ದೇವೆ. ಇಂದು ಇಡೀ ದಿನ ದರ್ಶನ ಪಡೆಯುವುದಕ್ಕೆ ಅವಕಾಶವಿದೆ. ಅಭಿಮಾನಿಗಳು ಶಾಂತಿಯುತವಾಗಿ ಬಂದು ದರ್ಶನ ಪಡೆಯಿರಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com