ಲೇಖನಿಗೆ ಕ್ರಾಂತಿಕಾರಿ ಶಕ್ತಿ ಇದೆ, ಅದರ ದುರ್ಬಳಕೆ ಬೇಡ: ರಕ್ಷಿತ್ ಶೆಟ್ಟಿ

ಲೇಖನಿಗೆ ಕ್ರಾಂತಿಕಾರಿ ಶಕ್ತಿ ಇದ್ದು, ಅದರ ದುರ್ಬಳಕೆ ಬೇಡ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ಸುದ್ದಿಗೋಷ್ಠಿ
ರಕ್ಷಿತ್ ಶೆಟ್ಟಿ ಸುದ್ದಿಗೋಷ್ಠಿ

ಬೆಂಗಳೂರು: ಲೇಖನಿಗೆ ಕ್ರಾಂತಿಕಾರಿ ಶಕ್ತಿ ಇದ್ದು, ಅದರ ದುರ್ಬಳಕೆ ಬೇಡ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಈ ಹಿಂದೆ ಮಾಧ್ಯಮವೊಂದರ ವರದಿ ಕುರಿತಂತೆ ಇಂದು ಸ್ಪಷ್ಟನೆ ನೀಡಿದ ನಟ ರಕ್ಷಿತ್ ಶೆಟ್ಟಿ, ಖಾಸಗಿ ಮಾಧ್ಯಮದ ವರದಿ ಹಿಂದಿರುವವರ ಕುರಿತು ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಅವರ ಕುರಿತಂತೆ ಸಾಕಷ್ಟು ಅಂಶಗಳನ್ನು ಸ್ಪಷ್ಟನೆ ನೀಡಿದರು.

ಮಾಧ್ಯಮದ ವರದಿ ಕುರಿತು ಮಾತನಾಡಿದ ರಕ್ಷಿತ್, ಈ ಹಿಂದೆ ಸಿನಿಮಾಗಳ ವಿಮರ್ಶೆ ಕುರಿತು ಹಣ ಪಡೆದು ವಿಮರ್ಶೆ ಬರೆಯುವ ಕೆಲವರ ಕುರಿತು ಚರ್ಚೆ ನಡೆದಿತ್ತು. ನಮ್ಮ  ಬಳಿಗೂ ಇಂತಹ ವ್ಯಕ್ತಿಗಳು ಬಂದಿದ್ದರು. ಈ ಪೈಕಿ ಮಾಧ್ಯಮದ ವರದಿ ಮಾಡಿರುವ ವ್ಯಕ್ತಿ ಕೂಡ ಇದ್ದರು. ಲೇಖನಿಗೆ ಕ್ರಾಂತಿಕಾರಿ ಶಕ್ತಿ ಇದೆ, ಅದರ ದುರ್ಬಳಕೆ ಬೇಡ. ನೀವು ಟೀಕೆ ಮಾಡಿ ಆದರೆ ಮಾಡದೇ ಇರುವುದನ್ನೂ ಸೇರಿಸಿ ಬರೆಯುವುದು ತಪ್ಪು. ಅಲ್ಲದೆ ಮಾಧ್ಯಮದಲ್ಲಿ ಬರುವ ಪ್ರತೀಯೊಂದು ವರದಿಗಳ ಹೊಣೆಗಾರಿಕೆ ಆ ಸಂಸ್ಥೆಗಳ ಮುಖ್ಯಸ್ಥರಾಗಿರುತ್ತದೆ. ಹೀಗಾಗಿ ಅವರೂ ಕೂಡ ಇದಕ್ಕೆ ಜವಾಬ್ದಾರರಾಗುತ್ತಾರೆ ಎಂದು ರಕ್ಷಿತ್ ಹೇಳಿದರು. 

'ಪುಷ್ಕರ್​ ಅವರು ಮೊದಲ ಬಾರಿ 'ಉಳಿದವರು ಕಂಡಂತೆ' ಸಿನಿಮಾ ಶೂಟಿಂಗ್ ವೇಳೆ ಪರಿಚಿತರಾಗಿದ್ದರು. ಬಳಿಕ ‘ಸಿಂಪಲ್​ ಆಗ್​ ಒಂದ್​ ಲವ್​ ಸ್ಟೋರಿ’ ನೋಡಿ ಅವರು ಖುಷಿ ಪಟ್ಟಿದ್ದರು. ಹೀಗಾಗಿ, ಡೇಟ್ಸ್​ ಕೇಳಿಕೊಂಡು ಬಂದಿದ್ರು. ಆದರೆ, ಕೆಲ ಸಿನಿಮಾಗಳ ಕಮಿಟ್​ಮೆಂಟ್ಸ್​ ಇರುವುದರಿಂದ ಆಗುವುದಿಲ್ಲ ಎಂದಿದ್ದೆ.  ‘ಉಳಿದವರು ಕಂಡಂತೆ’ ಸಿನಿಮಾ ನೋಡಿ ಡಿಸಪಾಯಿಂಟ್​ ಆಯ್ತು ಎಂದಿದ್ರು. ನಮ್ಮ ಫ್ರೆಂಡ್​ಶಿಪ್​ ಆದ ಮೇಲೆ ಸಿನಿಮಾ ಚೆನ್ನಾಗಿದೆ ಎಂದು ಹೇಳಿದ್ದರು. ಅವರು ಯಾಕೆ ಹಾಗೆ ಹೇಳಿದರು ಅನ್ನೋದು ಗೊತ್ತಿಲ್ಲ. ಬಳಿಕ 'ಗೋಧಿ ಬಣ್ಣ ಸಾಧಾರಾಣ ಮೈಕಟ್ಟು’ ಚಿತ್ರಕ್ಕೆ ಪುಷ್ಕರ್​, ನಾನು ಹಾಗೂ ಹೇಮಂತ್​ ರಾವ್​  ನಿರ್ಮಾಪಕರಾಗಿದ್ದೆವು. ಚಿತ್ರದ ನನ್ನ ಸಂಭಾವನೆಯನ್ನು ಚಿತ್ರದ ಮೇಲೆ ಹೂಡಿಕೆಯಾಗಿಸಿಕೊಳ್ಳಲಾಗಿತ್ತು. ‘ಗೋಧಿ ಬಣ್ಣ’ ರಿಮೇಕ್​ ರೈಟ್ಸ್​ ಮಾರಾಟವಾಗುವ ವಿಚಾರ ಬಂದಾಗ ಪುಷ್ಕರ್​ ಪಾಲು ಕೇಳಿದರು.

ಆಗ ಕೊಟ್ಟಿದ್ದೇವೆ. ‘ಕಿರಿಕ್​ ಪಾರ್ಟಿ’ ಮಾಡಬೇಕು ಎಂದಾಗ ಎಲ್ಲಾ ಪ್ರೊಡ್ಯೂಸರ್​ ರಿಜೆಕ್ಟ್​ ಮಾಡಿದರು. ದುಬೈ  ಮೂಲದ ಜೆಎಸ್​ ಗುಪ್ತಾ ಅಂತ ಸಿನಿಮಾಗೆ ಇನ್ವೆಸ್ಟ್​ ಮಾಡಿದ್ರು. ಆಗ 25 ಲಕ್ಷ ಕೊಡಿ ನಾನು ಕ್ಯಾಮೆರಾ ಕೊಡ್ತೀನಿ ಅಂತ ಪುಷ್ಕರ್​ ಮುಂದೆ ಬಂದರು. ಸಿನಿಮಾ ನೋಡಿದಮೇಲೆ ಗೆಲ್ಲುತ್ತೆ ಎನ್ನುವ ಕಾನ್ಫಿಡೆನ್ಸ್​ ಪುಷ್ಕರ್​ಗೆ ಬಂತು. ಅದೇ ಸಮಯದಲ್ಲಿ ಹೂಡಿಕೆದಾರರಿಗೆ ನಾನು 3 ಕೋಟಿ ಕೊಡಬೇಕಿತ್ತು. ಆಗ ಪುಷ್ಕರ್​  3 ಕೋಟಿ ನೀಡಿದರು. ಸಿನಿಮಾದಿಂದ ಬಂದ ಲಾಭದಲ್ಲಿ ಶೇ.70 ರಷ್ಟು​ ನನಗೆ, ಶೇ.30 ಅದಾಯ ಅವರಿಗೆ ಎಂದು ನಿರ್ಧರಿಸಲಾಗಿತ್ತು. ಸಿನಿಮಾ ಹಿಟ್​ ಆಗಿದ್ದಕ್ಕೆ ಎಲ್ಲರೂ ಸೆಲೆಬ್ರೇಟ್​ ಕೂಡ ಮಾಡಿದ್ದೆವು. 

'ನಂತರ ‘ಅವನೇ ಶ್ರೀಮನ್ನಾರಾಯಣ’ ಮಾಡೋಣ ಎಂದು ನಿರ್ಧರಿಸಿದೆವು. ಆರಂಭದಲ್ಲಿ ಒಟ್ಟು ಬಜೆಟ್​ನಲ್ಲಿ ನಾನು ಶೇ.25 ರಷ್ಟು​, ಪುಷ್ಕರ್ ಶೇ.25ರಷ್ಟು ಹಾಗೂ ನಿರ್ಮಾಪಕ ಪ್ರಕಾಶ್​ ಗೌಡರಿಗೆ ಶೇ.50 ಹಾಕೋದು ಎಂದಾಗಿತ್ತು. ನಂತರ ನಾನು ನಿರ್ಮಾಣ ಮಾಡಲ್ಲ ಎಂದೆ. ಆ ಸಂದರ್ಭದಲ್ಲಿ ಬೇರೆ  ನಿರ್ಮಾಪಕರನ್ನು ಹುಡಕ್ತೀನಿ ಎಂದಿದ್ದೆ. ಆದರೆ, ಪುಷ್ಕರ್​ ಅವರು ನಾನೇ ಇನ್ವೆಸ್ಟ್ ಮಾಡ್ತೀನಿ ಎಂದು ಹೇಳಿದ್ದರು. ಶ್ರೀಮನ್ನಾರಾಯಣ ಬಜೆಟ್​ ಜಾಸ್ತಿ ಆಗ್ತಾ ಹೋಯ್ತು. ಸಿನಿಮಾದ ಬಜೆಟ್​ನ ಅರ್ಧದಷ್ಟು ಬಡ್ಡಿ ಆಯ್ತು. ಇದು ನಮ್ಮ ತಪ್ಪಲ್ಲ, ಸಿನಿಮಾದ ತಪ್ಪಲ್ಲ. ವೈಯಕ್ತಿಕವಾಗಿ ತೆಗೆದುಕೊಂಡ ನಿರ್ಧಾರದ ತಪ್ಪು  ಎಂದು ರಕ್ಷಿತ್ ಶೆಟ್ಟಿ ಹೇಳಿದರು.

ಅಲ್ಲದೆ ಎಎಸ್ಎನ್ ಸಿನಿಮಾ ಲಾಸ್ ಆಯ್ತಾ? ನಾನು ಸಹಾಯ ಮಾಡ್ತೀನಿ ಎಂದು ಪುಷ್ಕರ್​ಗೆ ಹೇಳಿದೆ. ನನಗೆ ಹಿಂದೆ ನೋಡೋಕೆ ಇಷ್ಟವಿಲ್ಲ, ನಾನು ಗೋರಿ ಕಟ್ಕೊಂಡೇ ಮುಂದೆ ಹೋಗೋದು. ಹೀಗಾಗಿ, ‘777 ಚಾರ್ಲಿ’ ಸಿನಿಮಾ ಇಟ್ಟುಕೊಂಡು 20 ಕೋಟಿ ತೆಗೆದುಕೊಂಡೆ. ಶ್ರೀಮನ್ನಾರಾಯಣದಲ್ಲಿ ಎಲ್ಲರಿಗೂ  ಕೋಡೋಕೆ ಬಾಕಿ ಇದ್ದ ಹಣವನ್ನು ಚಾರ್ಲಿಯಿಂದ ಬಂದ ಅಮೌಂಟ್​ನಿಂದ ಕ್ಲಿಯರ್ ಮಾಡಿದ್ದೇನೆ. ಉಳಿದ ಹಣವನ್ನು ಪುಷ್ಕರ್​​ಗೆ ನೀಡಿದ್ದೆ ಎಂದು ರಕ್ಷಿತ್ ಹೇಳಿದರು.

ರಿಚರ್ಡ್ ಆಂಟನಿಯಾದ ರಕ್ಷಿತ್
ಇದೇ ವೇಳೆ ತಮ್ಮ ಮುಂದಿನ ಚಿತ್ರದ ಕುರಿತು ಮಾಹಿತಿ ನೀಡಿದ ರಕ್ಷಿತ್, ಹೊಂಬಾಳೆ ಫಿಲಂಸ್ ನಿರ್ಮಾಣದ ರಿಚರ್ಡ್ ಆಂಟನಿ ಚಿತ್ರದ ಮಾಹಿತಿ ಹಂಚಿಕೊಂಡರು. ರಿಚರ್ಡ್ ಆಂಟನಿ, ಉಳಿದವರು ಕಂಡಂತೆ ಚಿತ್ರದ ಮುಂದುವರಿದ ಭಾಗವಾಗಿದ್ದು, ಹೊಂಬಾಳೆ ಫಿಲಂಸ್​ನ ನಿರ್ಮಾಣದಲ್ಲಿ ನಿರ್ದೆಶನದೊಂದಿಗೆ  ನಾಯಕನ ಜವಾಬ್ದಾರಿಯನ್ನೂ ಕೂಡ ರಕ್ಷಿತ್ ಶೆಟ್ಟಿ ಹೊತ್ತಿದ್ದಾರೆ. ಚಿತ್ರಕ್ಕೆ 'ರಿಚರ್ಡ್ ಆಂಟನಿ - ಲಾರ್ಡ್ ಆಫ್ ದಿ ಸೀ' ಎಂದು ಹೆಸರಿಡಲಾಗಿದೆ. ಹೊಂಬಾಳೆ ಫಿಲಂಸ್​ ಇಂದು ಈ ಚಿತ್ರದ ಟೈಟಲ್ ರಿವೀಲ್ ಮಾಡಿದೆ. ಅಲ್ಲದೆ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಸುದ್ದು ಮಾಡುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com