ಜನರನ್ನು ಭಯಪಡಿಸಲು ಕೆಜಿಎಫ್ ಮಾಡಿಲ್ಲ, ಸ್ಫೂರ್ತಿ ತುಂಬಲು ಮಾಡಿದ್ದೇವೆ: ನಟ ಯಶ್

ಜನರು ದಕ್ಷಿಣ ಚಿತ್ರರಂಗದ ಸಿನಿಮಾಗಳನ್ನು ಗಮನಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ "ಕೆಜಿಎಫ್" ನಟ ಯಶ್, ನಮ್ಮ ಚಲನಚಿತ್ರ ಫ್ರಾಂಚೈಸ್‌ನ ಯಶಸ್ಸಿನ ಪ್ರಯಾಣವು ದೇಶದ ಎಲ್ಲರಿಗೂ ಭಾರಿ ಆಶ್ಚರ್ಯವನ್ನುಂಟು ಮಾಡಿದೆ ಎನ್ನುತ್ತಾರೆ.
ಕೆಜಿಎಫ್ ಸಿನಿಮಾದಲ್ಲಿ ನಟ ಯಶ್
ಕೆಜಿಎಫ್ ಸಿನಿಮಾದಲ್ಲಿ ನಟ ಯಶ್

ಮುಂಬೈ: ಜನರು ದಕ್ಷಿಣ ಚಿತ್ರರಂಗದ ಸಿನಿಮಾಗಳನ್ನು ಗಮನಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ "ಕೆಜಿಎಫ್" ನಟ ಯಶ್, ನಮ್ಮ ಚಲನಚಿತ್ರ ಫ್ರಾಂಚೈಸ್‌ನ ಯಶಸ್ಸಿನ ಪ್ರಯಾಣವು ದೇಶದ ಎಲ್ಲರಿಗೂ ಭಾರಿ ಆಶ್ಚರ್ಯವನ್ನುಂಟು ಮಾಡಿದೆ ಎನ್ನುತ್ತಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಕನ್ನಡದ ಆ್ಯಕ್ಷನ್ ಚಿತ್ರ KGF: Chapter One (2018) ಬಿಡುಗಡೆಯೊಂದಿಗೆ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದರು.

ಏಪ್ರಿಲ್‌ನಲ್ಲಿ, 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಬಿಡುಗಡೆಯೊಂದಿಗೆ ಹೊರಬಂದರು. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ದೇಶದಾದ್ಯಂತ ಬಿಡುಗಡೆಯಾದಾಗ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದು ಬಾಕ್ಸ್‌ ಆಫೀಸ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ವರ್ಷದ ಚಿತ್ರಗಳಲ್ಲಿ ಒಂದಾಯಿತು.

ಶನಿವಾರ ರಾತ್ರಿ ಇಂಡಿಯಾ ಟುಡೆ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಯಶ್, 'ಈ ಮೊದಲು ಜನರು ದಕ್ಷಿಣದ ಚಿತ್ರಗಳನ್ನು ವಿಶೇಷವಾಗಿ ಕೆಟ್ಟ ಡಬ್ಬಿಂಗ್‌ನಿಂದಾಗಿ ಗೇಲಿ ಮಾಡುತ್ತಿದ್ದರು. 10 ವರ್ಷಗಳ ಹಿಂದೆ ಡಬ್ಬಿಂಗ್ ಚಿತ್ರಗಳು ಇಲ್ಲಿ (ಉತ್ತರ) ಬಹಳ ಜನಪ್ರಿಯವಾಗಿದ್ದವು. ದಕ್ಷಿಣದ ಚಿತ್ರಗಳನ್ನು ಜನ ಗೇಲಿ ಮಾಡುತ್ತಿದ್ದರು. ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಅಪಹಾಸ್ಯ ಮಾಡುತ್ತಿದ್ದರು. ಆದರೆ, ಅಂತಿಮವಾಗಿ ಅವರು ಡಬ್ಬಿಂಗ್ ಚಿತ್ರಗಳಿಗೆ ಹೊಂದಿಕೊಂಡರು ಎಂದು ತಿಳಿಸಿದರು.

'ಆರಂಭದಲ್ಲಿ, ನಮ್ಮ ಚಲನಚಿತ್ರಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಯಿತು. ಬಳಿಕ ಜನರು ನಮ್ಮ ಡಬ್ಬಿಂಗ್ ಚಿತ್ರಗಳೊಂದಿಗೆ ಪರಿಚಿತರಾಗಲು ಪ್ರಾರಂಭಿಸಿದರು. ಆದರೆ, ಪರಿಸ್ಥಿತಿಗಳು ಈಗ ಉತ್ತಮವಾಗಿ ಬದಲಾಗಿವೆ ಮತ್ತು ಅದರ ಕ್ರೆಡಿಟ್ ಅನ್ನು ಎಸ್ ಎಸ್ ರಾಜಮೌಳಿ ಮತ್ತು ಅವರ ಬ್ಲಾಕ್‌ಬಸ್ಟರ್ ಬಾಹುಬಲಿ ಸಿನಿಮಾಗೆ ಸಲ್ಲುತ್ತದೆ' ಎಂದು ಹೇಳಿದರು.

'ಬಂಡೆ ಒಡೆಯಬೇಕಾದರೆ ಸತತ ಪ್ರಯತ್ನ ಬೇಕು. ’ಬಾಹುಬಲಿ’ ಆ ಪುಶ್ ಕೊಟ್ಟಿತು. ‘ಕೆಜಿಎಫ್’ ಸಿನಿಮಾವನ್ನು ಬೇರೆಯ ಉದ್ದೇಶದಿಂದ ಮಾಡಿದ್ದೇವೆ. ನಾವು ‘ಕೆಜಿಎಫ್’ ಮಾಡಿದ್ದು ಜನರನ್ನು ಬೆದರಿಸಲು ಅಲ್ಲ, ಸ್ಫೂರ್ತಿಯನ್ನು ತುಂಬಲು. ಜನ ಈಗ ದಕ್ಷಿಣದ ಚಿತ್ರಗಳನ್ನು ಗಮನಿಸತೊಡಗಿದ್ದಾರೆ. ಮೊದಲು ಇಲ್ಲಿಗೆ ಮತ್ತು ಮಾರುಕಟ್ಟೆಗೆ ಬರಲು ಬೇರೆಯದ್ದೇ ಬಜೆಟ್ ಇತ್ತು. ಇದೀಗ, ಡಿಜಿಟಲ್ ಕ್ರಾಂತಿಯೊಂದಿಗೆ, ಅದನ್ನು ಜಗತ್ತಿಗೆ ಪ್ರದರ್ಶಿಸಲು ನಮಗೆ ಅವಕಾಶವಿದೆ' ಎನ್ನುತ್ತಾರೆ ಯಶ್.

36 ವರ್ಷದ ನಟ, ದೇಶದಾದ್ಯಂತ ದಕ್ಷಿಣದ ಚಲನಚಿತ್ರಗಳ ಯಶಸ್ಸಿಗಾಗಿ ದೀರ್ಘಕಾಲ ಕಾಯುತ್ತಿದ್ದೆ. ನಮಗೆ ಸಿಕ್ಕಿದ ಯಶಸ್ಸು ಈಗ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ನಾನೀಗ ಮುಂದಿನದನ್ನು ಯೋಚಿಸುತ್ತಿದ್ದೇನೆ. ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿ ಅವರ ಕನ್ನಡ ಚಲನಚಿತ್ರ "ಕಾಂತಾರ" ಯಶಸ್ಸಿನ ಬಗ್ಗೆ ಸಂತೋಷಪಟ್ಟ ಅವರು. ಗುಣಮಟ್ಟದ ಕಂಟೆಂಟ್‌ಗಾಗಿ ಜನರು ಕನ್ನಡ ಸಿನಿಮಾಗಳನ್ನು ನೋಡಲು ಆರಂಭಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

'ನನ್ನ ಚಿತ್ರರಂಗದ ದೃಷ್ಟಿಕೋನದಿಂದ, ನಮಗೆ ಆ ಮನೋಭಾವದ ಬದಲಾವಣೆಯ ಅಗತ್ಯವಿತ್ತು. ಜನರು ನಿಮ್ಮ ಉದ್ಯಮದ ಬಗ್ಗೆ ಒಂದು ನಿರ್ದಿಷ್ಟ ರೀತಿಯಲ್ಲಿ ಮಾತನಾಡುವಾಗ, ಆ ಕಲ್ಪನೆಯನ್ನು ಮುರಿಯಲು ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ನಮ್ಮದು ಸಣ್ಣ ಉದ್ಯಮ ಮತ್ತು ನಮ್ಮಲ್ಲಿ ಅಂತಹ ಚಿತ್ರಗಳನ್ನು ರೂಪಿಸಲು ಬಜೆಟ್ ಇಲ್ಲ ಎಂದು ಹಲವರು ಹೇಳುತ್ತಾರೆ. ಅದರಲ್ಲಿ ನನಗೆ ಸಮಸ್ಯೆ ಇತ್ತು. ಆದ್ದರಿಂದ, ನಾನು ಅದನ್ನು ಬದಲಾಯಿಸಲು ಬಯಸುತ್ತೇನೆ. ಇದೀಗ ಕನ್ನಡ ಇಂಡಸ್ಟ್ರಿಯತ್ತ ಜನ ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಆರಂಭಿಕ ಹಂತಗಳು ಮುಖ್ಯವಾದವು. ಗುಣಮಟ್ಟದ ಚಲನಚಿತ್ರಗಳನ್ನು ನೀಡುವ ಮತ್ತೊಂದು ದೊಡ್ಡ ಉದ್ಯಮವಾಗಿ ಕನ್ನಡ ಚಿತ್ರರಂಗವನ್ನು ಬಿಂಬಿಸುವುದು ನನ್ನ ಮುಖ್ಯ ಅಜೆಂಡಾವಾಗಿತ್ತು. ಪ್ರೇಕ್ಷಕರು ಪಕ್ಷಪಾತ ಮಾಡುವುದಿಲ್ಲ ಎಂದು ನಾನು ನಂಬುತ್ತೇನೆ. ಸಿನಿಮಾ ಇಷ್ಟವಾದರೆ ಸಂಭ್ರಮಿಸುತ್ತಾರೆ ಎನ್ನುತ್ತಾರೆ ಯಶ್.

'ಕೆಜಿಎಫ್' ಫ್ರ್ಯಾಂಚೈಸ್‌ನ ಮುಂದಿನ ಯೋಜನೆಗಳ ಕುರಿತು ಕೇಳಿದಾಗ, ಮೂರನೇ ಅಧ್ಯಾಯವನ್ನು ಮಾಡುವ ಯೋಜನೆ ಇದೆ. ಆದರೆ, ಶೀಘ್ರದಲ್ಲೇ ಅದು ಸಾಧ್ಯವಾಗುವುದಿಲ್ಲ. ನಾನು ಬೇರೆ ಏನಾದರೂ ಮಾಡಬೇಕೆಂದು ಬಯಸುತ್ತೇನೆ. ಆರು-ಏಳು ವರ್ಷಗಳಿಂದ ನಾನು 'ಕೆಜಿಎಫ್' ಮಾಡುತ್ತಿದ್ದೇನೆ. ಹಾಗಾಗಿ, ನೋಡೋಣ. ಎಲ್ಲವೂ ಸರಿಯಾಗಿ ಕೂಡಿಬಂದರೆ, ನಾವು 'ಕೆಜಿಎಫ್ 3' ಮಾಡುತ್ತೇವೆ ಎಂದು ಯಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com