ಬೆಂಗಳೂರು: ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ನನ್ನ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೇ.26 ರಂದು ರಾತ್ರಿ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆದಿತ್ತು. ಹರ್ಷ ಮತ್ತು ಸುಭಾಷ್ ಎಂಬುವವರು ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿಸಿದ್ದು ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ. ಧ್ರುವ ಸರ್ಜಾಗೆ ನಾಗೇಂದ್ರ ಚಾಲಕನಾಗಿಯೂ ಕೆಲಸ ಮಾಡಿದ್ದ. ನಾಗೇಂದ್ರಗೆ ಸಾಥ್ ಕೊಟ್ಟಿದ್ದೆ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಎಂದು ತಿಳಿದು ಬಂದಿದೆ.
ಪ್ರಶಾಂತ್ ಪೂಜಾರಿ ಅವರು ಧ್ರುವ ಸರ್ಜಾಗೆ ಆಪ್ತರಾಗಿದ್ದರು. ಧ್ರುವಗೆ ಜಿಮ್ನಲ್ಲಿ ತರಬೇತಿ ನೀಡುತ್ತಿದ್ದುದ್ದು ಇದೇ ಪ್ರಶಾಂತ್. ಇಬ್ಬರ ನಡುವಿನ ಆಪ್ತತೆಯನ್ನು ನಾಗೇಂದ್ರ ಹಾಗೂ ಅಶ್ವಿನ್ ಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಹಲ್ಲೆಗೆ ಪ್ಲ್ಯಾನ್ ರೂಪಿಸಿದರು. ತಾವೇ ಹಲ್ಲೆ ಮಾಡಿದರೆ ಗೊತ್ತಾಗುತ್ತದೆ ಎಂದು ಸ್ನೇಹಿತರ ಕೈಯಲ್ಲಿ ಹಲ್ಲೆ ಮಾಡಿಸಿದ್ದರಂತೆ. ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಅವರನ್ನು ಮುಂದಕ್ಕೆ ಬಿಟ್ಟು ಅಶ್ವಿನ್ ಹಲ್ಲೆ ಮಾಡಿಸಿದ್ದರು. ತನಿಖೆ ವೇಳೆ ಅಶ್ವಿನ್ ಪಾತ್ರ ಇರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಅಶ್ವಿನ್ ಬಂಧಿಸಲಾಗಿದೆ.
Advertisement