
ಬೆಂಗಳೂರು: ಸಾಲುಮರದ ತಿಮ್ಮಕ್ಕ ಅವರ ಜೀವನ ಕಥೆ ಆಧರಿಸಿ ನಿರ್ಮಾಣವಾಗುತ್ತಿದ್ದ ‘ವೃಕ್ಷಮಾತೆ’ ಎಂಬ ಸಿನಿಮಾ ಆರಂಭದಲ್ಲೇ ವಿಘ್ನ ಎದುರಾಗಿದ್ದು ಸ್ವತಃ ಸಾಲುಮರದ ತಿಮ್ಮಕ್ಕ ಈ ಸಂಬಂಧ ದೂರು ದಾಖಲಿಸಿದ್ದಾರೆ.
ತಮ್ಮ ಜೀವನದ ಉದ್ದಕ್ಕೂ ಪರಿಸರ ಪೋಷಣೆಯಲ್ಲಿ ತೊಡಗಿಸಿಕೊಂಡು, ಲಕ್ಷಾಂತರ ಮರಗಳನ್ನು ನೆಟ್ಟಿದ್ದ 'ವೃಕ್ಷ ಮಾತೆ' ಸಾಲುಮರದ ತಿಮ್ಮಕ್ಕ ಇದೀಗ ಫಿಲಂ ಚೇಂಬರ್ ಮೆಟ್ಟಿಲೇರಿದ್ದು, ಈ ಸಿನಿಮಾ ಮಾಡಬಾರದು ಎಂದು ಸ್ವತಃ ತಿಮ್ಮಕ್ಕ ಅವರೇ ಫಿಲ್ಮ್ ಚೇಂಬರ್ಗೆ ಬಂದು ದೂರು ಕೊಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಮೂಲಗಳ ಪ್ರಕಾರ 'ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ 'ವೃಕ್ಷಮಾತೆ' ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ದಿಲೀಪ್ ಕುಮಾರ್ ಎಚ್.ಆರ್., ಸೌಜನ್ಯ ಡಿ.ವಿ, ಎ. ಸಂತೋಷ್ ಮುರಳಿ, ಒರಟ ಶ್ರೀ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಒರಟ ಖ್ಯಾತಿಯ ಶ್ರೀ ನಿರ್ದೇಶನ ಮಾಡುತ್ತಿದ್ದಾರೆ. ಸಿದ್ದೇಶ್ ಅವರು ಬರೆದಿರುವ ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಕೃತಿಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ. ಆದರೆ, ಇದಕ್ಕೆ ಸಾಲು ಮರದ ತಿಮ್ಮಕ್ಕ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಹಿಂದೆ ಚಿತ್ರತಂಡ ಸಿನಿಮಾದ ಶೂಟಿಂಗ್ ಮಾಡುತ್ತಿತ್ತು. ಈ ವೇಳೆ ತಂಡವನ್ನು ಸ್ಟೇಷನ್ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ‘ವೃಕ್ಷಮಾತೆ’ ಸಿನಿಮಾಗೆ ಸಾಲು ಮರದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಅವರಿಂದ ಅನುಮತಿ ಪಡೆದಿಲ್ಲ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದರು. ಈಗ ಫಿಲ್ಮ್ ಚೇಂಬರ್ಗೆ ಆಗಮಿಸಿ ಸಾಲು ಮರದ ತಿಮ್ಮಕ್ಕ ದೂರು ಕೊಟ್ಟಿದ್ದಾರೆ.
ಮಗ ಉಮೇಶ್ ಸ್ಪಷ್ಟನೆ
ಸಾಲುಮರದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಈ ಬಗ್ಗೆ ಮಾತನಾಡಿದ್ದಾರೆ. 'ಸಾಲುಮರದ ತಿಮ್ಮಕ್ಕ ಅವರ ಬಯೋಪಿಕ್ ಮಾಡೋದಾಗಿ ಸಾಕಷ್ಟು ನಿರ್ದೇಶಕರು ಬಂದಿದ್ದರು. ಆದರೆ, ನಾವು ಮಾಡೋದು ಬೇಡ ಎಂದು ಹೇಳಿದ್ದೇವೆ. ದಿಲೀಪ್ ಕೂಡ ಸಿನಿಮಾ ಮಾಡುತ್ತೇನೆ ಎಂದಿದ್ದರು. ಅವರಿಗೂ ಬೇಡ ಎಂದು ಹೇಳಿದ್ದೆವು. ಈ ತಂಡಕ್ಕೆ ನಾವು ಸಿನಿಮಾ ಮಾಡೋಕೆ ಬಿಡುವುದಿಲ್ಲ' ಎಂದು ಹೇಳಿದ್ದಾರೆ.
ಫಿಲ್ಮ್ ಚೇಂಬರ್ ನಿಂದ ಸ್ಪಷ್ಟನೆ
ಸಿನಿಮಾ ಸಂಬಂಧ ಸಾಲುಮರದ ತಿಮ್ಮಕ್ಕ ದೂರು ಕೊಟ್ಟಿದ್ದಾರೆ. ನಮ್ಮ ಅನುಮತಿ ಇಲ್ಲದೇ ಸಿನಿಮಾ ಮಾಡ್ತಿದಾರೆ ಎಂದು ಹೇಳಿದ್ದಾರೆ. ಇಲ್ಲಿ ವೃಕ್ಷಮಾತೆ ಸಿನಿಮಾ ರಿಜಿಸ್ಟರ್ ಆಗಿಲ್ಲ. ಸಿನಿಮಾ ತಂಡವನ್ನು ಕರೆದು ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
Advertisement