ಸ್ಟಾರ್‌ಗಿರಿಗಿಂತ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ದಿನಗಳೇ ಬೆಸ್ಟ್! ಆ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ರಜನಿಕಾಂತ್

ಜೈಲರ್ 2 ಸಿನಿಮಾದ ಕಾರ್ಯಕ್ರಮದಲ್ಲಿ, ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದು, ಸ್ಟಾರ್‌ಗಿರಿಗಿಂತ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ದಿನಗಳೇ ಬೆಸ್ಟ್ ಎಂದು ತಮ್ಮ ಹಳೆಯ ನೆನಪುಗಳು ಹಂಚಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Rajinikanth
ನಟ ರಜನಿಕಾಂತ್Online Desk
Updated on: 

ಚೆನ್ನೈ (ತಮಿಳುನಾಡು): ಸೂಪರ್ ಸ್ಟಾರ್ ರಜನಿಕಾಂತ್ ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್; ಕೈಯಲ್ಲಿ ಸಿಗರೇಟ್ ಹಿಡಿಯುವ ರೀತಿ, ನಡೆಯುವ ಸ್ಟೈಲ್ ಮತ್ತು ವಿಶಿಷ್ಟವಾದ ನಗುವಿಗೆ, ಮಲೇಷ್ಯಾ ಪ್ರಧಾನಿಯಿಂದ ಹಿಡಿದು ವಿಶ್ವಾದ್ಯಂತ ಕೋಟ್ಯಂತರ ಜನರು ಮರುಳಾಗಿದ್ದಾರೆ. ಆದರೆ, ಕೋಟ್ಯಂತರ ಅಭಿಮಾನಿಗಳ ಪಾಲಿನ ಈ ಆರಾಧ್ಯಧೈವನಿಗೆ ಸ್ಟಾರ್‌ಗಿರಿಗಿಂತ ಬಸ್ ಕಂಡಕ್ಟರ್ ಆಗಿದ್ದ ದಿನಗಳೇ ಬೆಸ್ಟ್ ಅಂತೆ. ಹೌದು, ಬೆಂಗಳೂರಿನ ಆ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಾರ್ಯಕ್ರಮವೊಂದರಲ್ಲಿ ರಜನಿಕಾಂತ್ ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ‘ಜೈಲರ್ 2’ ಚಿತ್ರದ ಪ್ರಚಾರದ ಅಂಗವಾಗಿ ಸನ್ ನೆಕ್ಸ್ಟ್ ಒಟಿಪಿಯಲ್ಲಿ ಪ್ರಸಾರವಾದ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರು, "ನಿಮ್ಮ ಈ ಸರಳತೆ ಹುಟ್ಟಿನಿಂದ ಬಂದಿದ್ದಾ ಅಥವಾ ನೀವು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಂಡಿದ್ದಾ?" ಎಂದು ಕೇಳಿದಾಗ, ರಜನಿಕಾಂತ್ ತಮ್ಮ ಹಳೆಯ ಬೆಂಗಳೂರಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕಂಡಕ್ಟರ್ ಕೆಲಸದ ಮೇಲೇ ಪ್ರೀತಿ

ನಿರ್ದೇಶಕ ನೆಲ್ಸನ್ ಅವರು ರಜನಿಕಾಂತ್ ಅವರ ವಿನಮ್ರತೆಯ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ರಜನಿಕಾಂತ್, "ನನಗೆ ನಟನೆ ಇಷ್ಟ, ಆದರೆ ಅದಕ್ಕಿಂತ ಹೆಚ್ಚಾಗಿ ನಾನು ಬೆಂಗಳೂರಿನಲ್ಲಿ ನಡೆಸಿದ 5 ವರ್ಷಗಳ ಬಸ್ ಕಂಡಕ್ಟರ್ ಕೆಲಸವನ್ನು ಹೆಚ್ಚು ಇಷ್ಟಪಡುತ್ತಿದ್ದೆ ಮತ್ತು ಇಂದಿಗೂ ಆ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆಳದಲ್ಲಿ ನಾನು ಇಂದಿಗೂ ಒಬ್ಬ ಕಂಡಕ್ಟರ್ ಎಂದೇ ಗುರುತಿಸಿಕೊಳ್ಳುತ್ತೇನೆ, ಎಂದಿಗೂ ಒಬ್ಬ ದೊಡ್ಡ ಸೂಪರ್‌ಸ್ಟಾರ್ ಎಂದು ಭಾವಿಸಿಲ್ಲ" ಎಂದಿದ್ದಾರೆ. ಜೊತೆಗೆ, ತಾವು ಇಂದಿಗೂ ಬೆಂಗಳೂರಿಗೆ ಹೆಚ್ಚಾಗಿ ಭೇಟಿ ನೀಡಲು ಇದೇ ಕಾರಣ ಎಂದಿರುವ ಅವರು, ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳನ್ನು ನೋಡಿದಾಗ ತಮಗೆ ಹಳೆಯ ದಿನಗಳು ನೆನಪಾಗಿ ಮನಸ್ಸಿಗೆ ಅಪಾರ ಸಂತೋಷವಾಗುತ್ತದೆ ಎಂದು ಭಾವುಕರಾಗಿದ್ದಾರೆ.

Rajinikanth
ರಜನಿಕಾಂತ್ v/s ದಳಪತಿ ವಿಜಯ್: ಜೈಲರ್ 2 ಆಡಿಯೋ ಲಾಂಚ್ ದಿಢೀರ್ ರದ್ದಾಗಲು ವಿಜಯ್ ಸರ್ಕಾರ ಕಾರಣ?

ತಮನ್ನಾ ಸಾಂಗ್ ಮಿಸ್ಸಿಂಗ್

ಇದೇ ಕಾರ್ಯಕ್ರಮದಲ್ಲಿ ಜೈಲರ್ 2 ಚಿತ್ರದ ಬಗ್ಗೆ ಮಾತನಾಡಿದ ರಜನಿಕಾಂತ್, "ಈ ಸಿನಿಮಾದಲ್ಲಿ ನಟಿ ತಮನ್ನಾ ಭಾಟಿಯಾ ಅವರ ಒಂದು ಹಾಡು ಇಲ್ಲದಿರುವುದೇ ದೊಡ್ಡ ಮಿಸ್ಸಿಂಗ್ ಎಲಿಮೆಂಟ್" ಎಂದು ನೆಲ್ಸನ್ ಜೊತೆ ತಮಾಷೆ ಮಾಡಿದ್ದಾರೆ. ಅದಕ್ಕೆ, "ನಿಮಗೆ ಇಷ್ಟ ಎಂದ ಮಾತ್ರಕ್ಕೆ ನಾನು ಸಾಂಗ್ ಇಡಲು ಸಾಧ್ಯವಿಲ್ಲ ಸರ್" ಎಂದು ನೆಲ್ಸನ್ ಕಾಲೆಳೆದಿದ್ದಾರೆ. ಅದಕ್ಕೆ ರಜನಿಕಾಂತ್ ಚುರುಕಾಗಿ ಉತ್ತರಿಸಿ, "ನನಗೆ ಇಷ್ಟ ಬಂದಿದ್ದನ್ನೆಲ್ಲಾ ನಾನು ಮಾಡಿದ್ದರೆ ಇಷ್ಟೊತ್ತಿಗೆ ನನ್ನ ಮಾರ್ಕೆಟ್ ಕಳೆದುಕೊಂಡು ನಾನು ಬೆಂಗಳೂರಿಗೆ ವಾಪಸ್ ಹೋಗಬೇಕಾಗುತ್ತಿತ್ತು. ಪ್ರೇಕ್ಷಕರಿಗೆ ಏನು ಇಷ್ಟವೋ ಅದನ್ನು ಮಾಡುತ್ತಿರುವುದರಿಂದಲೇ ನಾನು ಇಂದಿಗೂ ಚಿತ್ರರಂಗದಲ್ಲಿ ಉಳಿದಿದ್ದೇನೆ" ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಜೈಲರ್ ಮೊದಲ ಭಾಗದಲ್ಲಿ ಕನ್ನಡದ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ (ಶಿವಣ್ಣ) ಅವರು 'ನರಸಿಂಹ' ಎಂಬ ಅತಿಥಿ ಪಾತ್ರದಲ್ಲಿ ಬಂದು ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದ್ದರು. ಇದೀಗ 'ಜೈಲರ್ 2' ನಲ್ಲೂ ಶಿವಣ್ಣ ಅವರ ಪಾತ್ರ ಮುಂದುವರಿಯಲಿದ್ದು, ಈ ಬಾರಿ ಅವರ ಸ್ಕ್ರೀನ್ ಟೈಮ್ ಮತ್ತು ಆಕ್ಷನ್ ದೃಶ್ಯಗಳು ಮೊದಲ ಭಾಗಕ್ಕಿಂತಲೂ ಹೆಚ್ಚಿರಲಿವೆ ಎಂದು ಚಿತ್ರತಂಡ ಸುಳಿವು ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com