ಅಂಕಣಗಳು

ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ ಎಂಬ ಅನಿಷ್ಟ!

Published On :

ಭ್ರಷ್ಟಾಚಾರ ಮತ್ತು ಕಳ್ಳತನ ಭಾರತದ ಡಿಎನ್‌ಎದ ಭಾಗವಾಗಿ ಹೋಗಿದೆ. ಅದನ್ನು ಕಿತ್ತೆಸೆಯುವುದೇ ಸಾಧ್ಯವಿಲ್ಲವೇನೋ? ಒಂದು ವೇಳೆ ಪ್ರಯತ್ನಪಟ್ಟರೂ ಫಜೀತಿಗೆ ಸಿಲುಕುವುದು ಮಾತ್ರ ನಿಶ್ಚಿತ. ಈ ರೀತಿ ಹಳವಂಡದ ಹುತ್ತಕ್ಕೆ ಪದೇ ಪದೇ ಕೈ ಹಾಕಿ ಕಚ್ಚಿಸಿಕೊಳ್ಳುವವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಅಶೋಕ್ ಖೇಮ್ಕಾ!
ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾನ ಭೂಹಗರಣವನ್ನು ಬಯಲಿಗೆಳೆದು ರಾಜಕೀಯ ಬಿರುಗಾಳಿಯೆಬ್ಬಿಸಿದ್ದ ಹರ್ಯಾಣಾದ ಈ ಹಿರಿಯ ಅಧಿಕಾರಿ ಮತ್ತೊಮ್ಮೆ ವರ್ಗಾವಣೆಯಾಗಿದ್ದಾರೆ. ಕಳೆದ 22 ವರ್ಷಗಳಲ್ಲಿ ಇದು ಅವರ 44ನೇ ವರ್ಗಾವಣೆ!
ಹರ್ಯಾಣಾ ಬೀಜ ಅಭಿವೃದ್ಧಿ ನಿಗಮ(ಹೆಚ್‌ಎಸ್‌ಡಿಸಿ)ದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಖೇಮ್ಕಾ, ಇತ್ತೀಚೆಗೆ ತಮ್ಮದೇ ಸಂಸ್ಥೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಬಯಲು ಮಾಡಿದ್ದರು. ಹರ್ಯಾಣಾ ಸರ್ಕಾರ ಕೆಲವು ತಿಂಗಳ ಹಿಂದೆ 'ರ್ಯಾಕ್ಸಿಲ್‌' ಎನ್ನುವ ಫಂಗಿಸೈಡ್ ಅನ್ನು ಗೋಧಿ ಬೀಜದ ಚಿಕಿತ್ಸೆಗೆ ಕಡ್ಡಾಯವಾಗಿ ಬಳಸಬೇಕು ಎಂಬ ಆಜ್ಞೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ಎನ್‌ಜಿಒವೊಂದು ಪಂಜಾಬ್ ಮತ್ತು ಹರ್ಯಾಣಾ ಹೈಕೋರ್ಟ್‌ನ ಪಾವಟಿಗೆಯೇರಿತ್ತು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ, ಏಪ್ರಿಲ್ 12ರೊಳಗೆ ಪ್ರತಿಕ್ರಿಯೆ ನೀಡಬೇಕೆಂದು ಹೆಚ್‌ಎಸ್‌ಡಿಸಿಎದ ಮುಖ್ಯಸ್ಥರಾಗಿದ್ದ ಖೇಮ್ಕಾ ಮತ್ತು ಸರ್ಕಾರಕ್ಕೆ ನೋಟಿಸ್ ಕಳುಹಿಸಿತ್ತು.
ಕೂಡಲೇ ತನಿಖೆಗಿಳಿದ ಖೇಮ್ಕಾ ಈ ವ್ಯವಹಾರದಲ್ಲಿ ನಡೆದ ಹಗರಣವನ್ನೆಲ್ಲ ಬಯಲಿಗೆಳೆದು ರ್ಯಾಕ್ಸಿಲ್‌ನ ಖರೀದಿಯನ್ನು ನಿಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಅವರ ಮಾತಿಗೆ ಮಣೆ ಹಾಕದ ಸರ್ಕಾರ, ರ್ಯಾಕ್ಸಿಲ್ ಖರೀದಿಗೆ ಆದೇಶ ನೀಡಬೇಕೆಂದು ಒತ್ತಡ ಹೇರಿತು. ಇದಾದ ಕೆಲವೇ ದಿನಗಳಲ್ಲಿ ಅವರನ್ನು ವರ್ಗಾವಣೆ ಮಾಡಲಾಯಿತು!
'ಇದೇನು ನನಗೆ ಹೊಸತಲ್ಲ. ಆದರೆ ಈ ಬಾರಿ ತುಂಬಾ ಮುಜುಗರ ಅನುಭವಿಸಿದೆ. ಮಧ್ಹಾಹ್ನ 3.30ರ ಸುಮಾರಿಗೆ ನನ್ನ ಕಚೇರಿಗೆ ಬಂದ ಬಿ.ಎಸ್. ದುಗ್ಗಲ್ ತಮ್ಮ ನೇಮಕಾತಿ ಪತ್ರವನ್ನು ಹಿಡಿದು ನನ್ನ ಮುಂದೆ ನಿಂತರು. ಆ ಸ್ಥಾನದಿಂದ ನನ್ನನ್ನು ಹೊರದಬ್ಬಲಾಗಿದೆ ಎಂಬ ವಿಷಯವೇ ನನಗೆ ಗೊತ್ತಿರಲಿಲ್ಲ! ಕಡೇ ಪಕ್ಷ ಆ ವಿಷಯವನ್ನು ಮುಖ್ಯ ಕಾರ್ಯದರ್ಶಿಗಳಾದರೂ ನನಗೆ ತಿಳಿಸಬೇಕಿತ್ತು. ನನಗಿಂತ ಕನಿಷ್ಠ 5 ಸ್ಥಾನಗಳಷ್ಟು ಕಿರಿಯನಾದ ಜೂನಿಯರ್ ಆಫೀಸರನೊಬ್ಬ, ಅದೂ ಹಲವಾರು ಹಗರಣಗಳಲ್ಲಿ 'ಹೆಸರು' ಮಾಡಿರುವ ದುಗ್ಗಲ್‌ನನ್ನು ಹೆಚ್‌ಎಸ್‌ಡಿಸಿಯ ಮುಖ್ಯಸ್ಥನನ್ನಾಗಿ ನೇಮಿಸಲಾಗಿದೆ ಎಂಬುದೇ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ' ಎನ್ನುತ್ತಾರೆ ಖೇಮ್ಕಾ.
ಹೇಗೆ ಸರ್ಕಾರ ತನ್ನ ಅಧಿಕಾರವನ್ನು ವ್ಯವಸ್ಥಿತವಾಗಿ ಮತ್ತು ಸಮಗ್ರವಾಗಿ ದುರುಪಯೋಗಪಡಿಸಿಕೊಳ್ಳುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಒಬ್ಬ ನಿಷ್ಠಾವಂತ ಅಧಿಕಾರಿಗೆ ಒಂದೆಡೆ ನೆಲೆನಿಲ್ಲಲಾಗುತ್ತಿಲ್ಲವೆಂದರೆ ಬಹುಶಃ  ಅವರ ನಿಷ್ಠೆಯೇ ಅವರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುವಂತೆ ಸರ್ಕಾರಕ್ಕೆ ಪ್ರೇರೇಪಿಸುತ್ತಿದೆಯೇನೋ?
ಅವರನ್ನು ಏಕೆ ವರ್ಗಾವಣೆ ಮಾಡಲಾಯಿತು ಎಂಬುದನ್ನು ಮಾತ್ರ ಹರ್ಯಾಣಾ ಸರ್ಕಾರ ವಿವರಿಸುತ್ತಿಲ್ಲ! ಪ್ರಾಮಾಣಿಕ ಮತ್ತು ಕೆಚ್ಚೆದೆಯ ಅಧಿಕಾರಿಗಳನ್ನು ಈ ರೀತಿ ಗೋಳಾಡಿಸಿದರೆ, ಯುವ ಅಧಿಕಾರಿಗಳಿಗೆ ಕಾನೂನಿನ ನಿಯಮಗಳಲ್ಲಿ ಕೊಂಚವಾದರೂ ಭರವಸೆ ಉಳಿಯುವುದೇ? ಹಾಗಾಗೇ ಐಎಎಸ್ ಅಧಿಕಾರಿಗಳು ಒಂದೇ ಸ್ಥಾನದಲ್ಲಿ ಕನಿಷ್ಠ ಎರಡು ವರ್ಷಗಳವರೆಗಾದರೂ ವರ್ಗಾವಣೆಯಾಗದೇ ಇರುವಂತಹ ನಿಯಮ ಜಾರಿಯಾಗಬೇಕು. ಅವರ ವರ್ಗಾವಣೆ ನೀತಿಯಲ್ಲಿ ಸಮಗ್ರ ಬದಲಾವಣೆಯಾದಾಗ ಮಾತ್ರ ಇದು ಸಾಧ್ಯ. ಝ್ಝಿಡಡಿಟಜ-ಛಿಟ್ಟಢಿಜ್ಠ ಠ್ಠ್ಟಡಿಜ್ಛಡ್ಝ್ಟಿಟಿ ಛ್ಝಿಟಟ ಆದಷ್ಟು ಬೇಗ ಜಾರಿಯಾಗದಿದ್ದರೆ ಖೇಮ್ಕಾರಂತಹ ಕೆಚ್ಚೆದೆಯ ಅಧಿಕಾರಿಗಳು ಭ್ರಷ್ಟ ವ್ಯವಸ್ಥೆಯ ಬಿಸಿಯಲ್ಲಿ ಬಸವಳಿಯುತ್ತಲೇ ಇರುತ್ತಾರೆ, ಭ್ರಷ್ಟರ ಬಯಲಾಟ ಎಗ್ಗಿಲ್ಲದೇ ಸಾಗುತ್ತಲೇ ಇರುತ್ತದೆ!

- ರಾಘವೇಂದ್ರ ಆಚಾರ್ಯ
raghu.bioastra@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.