ಸ್ವಚ್ಛ ಚುನಾವಣೆಗಾಗಿ ಮುಚ್ಚಳಿಕೆ ಎಂಬ ಮೂಗುದಾರ
ಸದ್ಯದ ವಿಧಾನ ಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಧನಾತ್ಮಕ ಪ್ರಯೋಗ ನಡೆದಿದೆ. ಜಿಲ್ಲೆಯ ಸಂಭಾವ್ಯ ಚುನಾವಣಾ ಅಭ್ಯರ್ಥಿಗಳು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಿಗೆ ಒಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಸ್ವಚ್ಛ, ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರರಹಿತ ಚುನಾವಣೆಗೆ ತಮ್ಮ ಬದ್ಧತೆಯನ್ನು ಸಾರಿ ಹೇಳಿ ಪ್ರಮುಖರ ಉಪಸ್ಥಿತಿಯಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ಕೈಗೊಂಡ ಪ್ರತಿಜ್ಞೆ ಇದು. ಈ ಮುಚ್ಚಳಿಕೆ ಚುನಾವಣಾ ಪ್ರಕ್ರಿಯೆಗಷ್ಟೇ ಸೀಮಿತ. ಇದು ಮಹತ್ವಾಕಾಂಕ್ಷಿಯೇನೂ ಅಲ್ಲ. ಒಂದೇ ಏಟಿನಲ್ಲಿ ಇಡಿ ರಾಜಕೀಯ ಕ್ಷೇತ್ರದ ರಾಡಿ ತೊಳೆದು ಫಳಫಳ ಹೊಳೆಯುವಂತೆ ಮಾಡುವ ಉದ್ದೇಶ ಇದಕ್ಕಿಲ್ಲ.
ಕನ್ನಡ ಪ್ರಭ ಕೂಡ ಇದೊಂದು ಸಾರ್ವಜನಿಕ ಹಿತಾಸಕ್ತಿಯ, ಲೋಕಮುಖಿ ಹೆಜ್ಜೆ ಎಂದು ಗುರುತಿಸಿದೆ. ಅಂತೆಯೇ ಇದಕ್ಕೆ ಸಂಪಾದಕೀಯ ಚರ್ಚೆಯ ಸ್ಥಾನಮಾನ (30.3.2013) ನೀಡಿದೆ. ಈ ಹಿಂದೆ ಕೂಡ ಇಂಥದೇ ಪ್ರಯತ್ನಗಳು ನಡೆದಿವೆ. ಆದರೆ ಮೌಲ್ಯಗಳು ಸಂಪೂರ್ಣ ಹ್ರಾಸವಾದಾಗ, ಅವುಗಳ ಪುನರುತ್ಥಾನಕ್ಕೆ ನಡೆಯುವ ಪುಟ್ಟ ಪುಟ್ಟ ಪ್ರಯತ್ನಗಳನ್ನು ಹೆಕ್ಕಿ ಹೆಕ್ಕಿ ಮುನ್ನೆಲೆಗೆ ತರುವುದು ಜವಾಬ್ದಾರಿಯುತ ಪತ್ರಿಕೆಯ ಕರ್ತವ್ಯವಾಗಿದೆ. ಕಾರ್ಗತ್ತಲು ಕವಿದಾಗ ದೂರದ ದಿಗಂತದಲ್ಲಿ ಕಾಣುವ ಒಂದು ಮಿಣಿಮಿಣಿ ದೀಪವೂ ದಿವ್ಯಜ್ಯೋತಿಯಾಗಿಯೇ ಕಾಣುತ್ತದೆ. ಶ್ರೀಗಳ ಜನಪರ ಕಾಳಜಿ ಮತ್ತು ಪತ್ರಿಕೆಯ ಮೌಲ್ಯಪರ ಕಳಕಳಿಯನ್ನು ಅಭಿನಂದಿಸುತ್ತಲೇ ಈ ಮುಚ್ಚಳಿಕೆಯ ಧನ-ಋಣ ಅಂಶಗಳನ್ನು ಪರಾಮರ್ಶಿಸಬೇಕೆಂದೆನಿಸುತ್ತದೆ.
ರಾಜಕೀಯ ಕ್ಷೇತ್ರದ ಶುದ್ಧಿ ಎಂದರೆ ಬಹುಪಾಲು ಚುನಾವಣಾ ಪ್ರಕ್ರಿಯೆಯ ಶುದ್ಧಿ ಎಂಬುದು ಈ ಮುಚ್ಚಳಿಕೆಯ ಹಿಂದಿರುವ ನಂಬಿಕೆ. ಇದು ಯಥಾರ್ಥ ಕೂಡ. ಆದ್ದರಿಂದಲೇ ಭ್ರಷ್ಟಾಚಾರರಹಿತ, ಪಾರದರ್ಶಕ ಚುನಾವಣೆ ಅತ್ಯಂತ ಮಹತ್ವದ್ದೆನಿಸುತ್ತದೆ. ಸಾರ್ವಜನಿಕ ಬದುಕಿನಲ್ಲಿ ಅಟ್ಟಹಾಸಗೈಯುತ್ತಿರುವ ಭ್ರಷ್ಟತೆ ಚುನಾವಣಾ ಮೂಲವಾದದ್ದು ಎಂಬ ಪ್ರತಿಪಾದನೆಯಲ್ಲಿ ಹುರುಳಿದೆ. ಚುನಾವಣೆಯಲ್ಲಿ ಆಯ್ಕೆಯಾಗಲು ಅಭ್ಯರ್ಥಿ ಬಂಡವಾಳ ತೊಡಗಿಸುತ್ತಾನೆ. ನಂತರ ಅದನ್ನು ಹಿಂಪಡೆಯಲು ಭ್ರಷ್ಟತೆ ಅನಿವಾರ್ಯ ಎಂಬಂಥ ಭಂಡ ಸಮರ್ಥನೆಗೆ ಕೂಡ ಇದು ದಾರಿ ಮಾಡಿಕೊಟ್ಟಿದೆ. ಜನಪ್ರತಿನಿಧಿಗಳೆಂದರೆ ನಿಸ್ವಾರ್ಥ ಜನಸೇವೆಗೆ ಕಂಕಣಬದ್ಧರಾಗುವವರು. ಅವರ ಆಯ್ಕೆ ಪ್ರಕ್ರಿಯೆ ಕೂಡ ಅಷ್ಟೇ ಪ್ರಾಮಾಣಿಕವಾಗಿರಬೇಕು. ಗುರಿಯಷ್ಟೇ ದಾರಿ ಕೂಡ ಮಹತ್ವದ್ದು.
ಈ ಮುಚ್ಚಳಿಕೆಗೆ ಒಬ್ಬ ಮಠಾಧಿಪತಿಗಳ ಸಾನ್ನಿಧ್ಯದ ಆಸರೆ ದೊರಕಿದ್ದೂ ಕೂಡ ಭಾವನಾತ್ಮಕ ಬದ್ಧತೆಯ ದೃಷ್ಟಿಯಿಂದ ಮಹತ್ವದ್ದೆಂದು ಬೇರೆ ಹೇಳಬೇಕಿಲ್ಲ. ಇದನ್ನು ಉಲ್ಲಂಘಿಸಿದರೆ ಶ್ರೀಗಳಿಗೆ - ಒಬ್ಬ ಶ್ರೀಸಾಮಾನ್ಯನಿಗಲ್ಲ- ನೀಡಿದ ಭರವಸೆಯನ್ನು ಉಲ್ಲಂಘಿಸಿದಂತೆ. ಇದು ಅಂತಃಸಾಕ್ಷಿಗೆ ಬಲವಾದ ಆಘಾತ ನೀಡುತ್ತದೆ, ನೀಡಬೇಕು ಎಂಬುದು ಇಲ್ಲಿ ಗ್ರಹೀತವಾಗಿದೆ. ಇಂಥ ಸಾಹಸವನ್ನು ಅಭ್ಯರ್ಥಿಗಳಾರೂ ಮಾಡಲಾರರೆಂಬ ನಂಬಿಕೆ ಇಲ್ಲಿದೆ.
ದೇಶ-ಕಾಲ ಎರಡೂ ದೃಷ್ಟಿಗಳಿಂದಲೂ ಇದು ಸಮುಚಿತವಾದ ಮುಚ್ಚಳಿಕೆ. ಇದು ಅಪೇಕ್ಷಿತ ಫಲ ನೀಡೀತು. ಚಿಕ್ಕಮಗಳೂರಿನ ಚುನಾವಣಾ ಅಭ್ಯರ್ಥಿಗಳು ಇದನ್ನು ಯಶಸ್ವಿಗೊಳಿಸಿಯಾರು. ಆದರೆ ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಇಂಥ ಪ್ರಯತ್ನ ಆಂಶಿಕವಾಗಿಯಾದರೂ ಯಶಸ್ವಿಯಾದೀತೆಂದು ನಂಬುವ ಸ್ಥಿತಿಯಲ್ಲಿ ನಾವಿದ್ದೇವೆಯೇ?
ಇಂಥ ಒಂದು ಮುಚ್ಚಳಿಕೆಯ ಯಶಸ್ಸು ಕೊನೆಗೂ ನಿಲ್ಲುವುದು ಇದು ಎಷ್ಟರಮಟ್ಟಿಗೆ ಅಭ್ಯರ್ಥಿಗಳ ಅಂತಃಸಾಕ್ಷಿಗೆ ಸವಾಲಾಗುತ್ತದೆ ಎಂಬುದರ ಮೇಲೆ. ಮುಚ್ಚಳಿಕೆಗೆ ಬಗೆಯುವ ದ್ರೋಹ ಅವರ ಹೃದಯದಲ್ಲಿ ತಲ್ಲಣ ಸೃಷ್ಟಿಸಬೇಕು, ಭಯ ಹುಟ್ಟಿಸಬೇಕು. ಆದರೆ ರಾಜಕೀಯದಲ್ಲಿ ಆತ್ಮಸಾಕ್ಷಿ, ದೈವಭೀತಿ, ಪಾಪಪ್ರಜ್ಞೆ, ಪಶ್ಚಾತ್ತಾಪ, ಅನುಕಂಪ, ಆಶ್ವಾಸನೆ-ಇತ್ಯಾದಿ ಮೌಲ್ಯಗಳು ಅಸಂಗತವೆನಿಸಿ ದಶಕಗಳೇ ಕಳೆದಿವೆ.
ನಿಜವಾಗಿ ನೋಡಿದರೆ, ಅಂತಃಸಾಕ್ಷಿ ಇರುವವನಿಗೆ ಇಂಥ ಮುಚ್ಚಳಿಕೆಯ ಅಗತ್ಯವಿಲ್ಲ. ಅಂತಃಸಾಕ್ಷಿ ಇಲ್ಲದವನಿಗೆ ಮುಚ್ಚಳಿಕೆ ಏನೂ ಅಲ್ಲ. ಅದು ತನ್ನಷ್ಟಕ್ಕೆ ತಾನೇ ಪವಾಡ ಮಾಡುವ ಮಂತ್ರದಂಡವಲ್ಲ. ಅದನ್ನು ಮಾನ್ಯ ಮಾಡುವ ಮನಸ್ಥಿತಿ ಇಂದು ಎಷ್ಟು ಜನರಿಗಿದೆ? ಆಯ್ಕೆಯಾದ ನಂತರ ಸದನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುವುದಿಲ್ಲವೇ? ದೇವರ ಹೆಸರಿನಲ್ಲಿ, ರೈತರ ಹೆಸರಿನಲ್ಲಿ. ತಮ್ಮ ಗಾಡ್ಫಾದರ್ ಹೆಸರಿನಲ್ಲಿ ಕೂಡ. ಉಳಿದವರನ್ನು ಬಿಡಿ, ದೇವರನ್ನು ಕೂಡ ಲೀಲಾಜಾಲವಾಗಿ, ನಿರ್ಭೀತಿಯಿಂದ ಯಾಮಾರಿಸುವ ಇವರಲ್ಲಿ ಎಷ್ಟು ಜನರಿಗೆ ಆತ್ಮಸಾಕ್ಷಿ ಇರಬಹುದು ಹೇಳಿ?
ಇಂಥ ಮುಚ್ಚಳಿಕೆಗೆ ಚುನಾವಣೆಯ ಕೊನೆಯವರೆಗೂ ಬದ್ಧರಾಗಿರುವುದೇ ಒಂದು ಅದ್ಭುತವೆನ್ನಿಸುವ ಕಾಲ ಇದು. ಹಾಗೆ ಬದ್ಧರಾಗಿ ಸೋತವರೂ ಚುನಾವಣೆಯಲ್ಲಿ ಗೆದ್ದವನಷ್ಟೇ ಸನ್ಮಾನಕ್ಕೆ ಯೋಗ್ಯರೆನ್ನಬೇಕು. ಯಾಕೆಂದರೆ ಅವರು ನಿಜವಾಗಿಯೂ ಆದರ್ಶದ ಪಟ್ಟಕ್ಕೇರಿಬಿಡುತ್ತಾರೆ. ಎಷ್ಟೇ ಶ್ರದ್ಧೆ, ಭಯ-ಭಕ್ತಿ, ದೃಢತೆ, ಬದ್ಧತೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟರೂ ಚುನಾವಣೆಯ ಅಖಾಡ ಅಸಾಮಾನ್ಯವಾದದ್ದೆಂಬುದನ್ನು ಮರೆಯುವಂತಿಲ್ಲ. ಯಾರೋ ಒಬ್ಬರು ಇದನ್ನು ಕಿಂಚಿತ್ ಮೀರಿದರೆ ಸಾಕು. ಉಳಿದವರೆಲ್ಲ ಇದನ್ನೇ ಕಾಯುತ್ತಿರುವಂತೆ ಮುಚ್ಚಳಿಕೆಯನ್ನು ಸಂಪೂರ್ಣ ಉಲ್ಲಂಘಿಸಬಹುದು. ಇಂದಿನ ಚುನಾವಣೆಯ ಪಟ್ಟುಗಳನ್ನು ಬಲ್ಲ ಅಪ್ಪಟ ರಾಜಕಾರಣಿಯೊಬ್ಬ ಉಳಿದ ಅನನುಭವಿಗಳನ್ನು ವಂಚಿಸಿ ಮುಚ್ಚಳಿಕೆಯ ಪೂರ್ಣ ಲಾಭ ಪಡೆಯಬಹುದು. ಹೀಗಾದಲ್ಲಿ ವೋಟಿನ ರಿಟೇಲ್- ಹೋಲ್ಸೇಲ್ ವ್ಯಾಪಾರದಿಂದ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸಿರದ ಹಣವಂತ ಆಯ್ಕೆಯಾಗಿಬಿಡಬಹುದು. ಆಗ ಮುಚ್ಚಳಿಕೆಗೆ ಕಟ್ಟುಬಿದ್ದವರು ಪೆದ್ದರೆನ್ನಿಸುತ್ತಾರೆ.
ಅಲ್ಲದೇ ಆಯ್ಕೆಯಾದ ನಂತರವೂ ಭ್ರಷ್ಟತೆ ಕುರಿತಂತೆ ಆಖೈರಾಗಿ ನಾವೊಂದು ಸೂತ್ರವನ್ನು ಒಪ್ಪಿಬಿಟ್ಟಿದ್ದೇವೆ. ಭ್ರಷ್ಟನೂ ಅಲ್ಲ, ಕೆಲಸ ಕೂಡ ಮಾಡುವುದಿಲ್ಲ- ಅವ ನಿರುಪಯೋಗಿ. ಭ್ರಷ್ಟ, ಆದರೂ ಕೆಲಸ ಮಾಡುವುದಿಲ್ಲ- ಅವ ದುಷ್ಟ. ಭ್ರಷ್ಟನಲ್ಲ ಆದರೆ ಕರ್ತವ್ಯ ಚೆನ್ನಾಗಿ ಮಾಡ್ತಾನೆ- ಅವ ಪೆದ್ದ. ಭ್ರಷ್ಟ ಅಷ್ಟೇ ಅಲ್ಲ, ನಿಯಮ-ನಿಯಮಬಾಹಿರ ಕೆಲಸಗಳನ್ನು ಧಾಡಸಿತನದಿಂದ ಮಾಡ್ತಾನೆ- ಅವ ಜನಪ್ರಿಯ. ಈ ಜನಪ್ರಿಯರನ್ನೇ ನಮ್ಮಲ್ಲಿ ಬಹುತೇಕ ಜನರು ಒಪ್ಪುವುದು. ಮುಚ್ಚಳಿಕೆಗೆ ಈ ಹೊಸ ರಾಜನೀತಿ ಅರ್ಥವಾಗದು.
ಪ್ರಸ್ತುತ ರಾಜಕೀಯ ಸ್ವೇಚ್ಛಾಚಾರ ನೋಡಿದರೆ, ರಾಜಕಾರಣಿಗಳಲ್ಲಿ ಅನೇಕರು ಪೀಠಾಧಿಪತಿಗಳ ಸಮ್ಮುಖದಲ್ಲಿರಲಿ, ದೇವರ ಸಾನ್ನಿಧ್ಯದಲ್ಲಿರಲಿ ಯಾವುದೇ ಪ್ರತಿಜ್ಞೆ ಮಾಡಿ ದಕ್ಕಿಸಿಕೊಳ್ಳುವ ಧೈರ್ಯ ಹಾಗೂ ತಾಕತ್ತನ್ನು ಬೆಳೆಸಿಕೊಂಡಿದ್ದಾರೆನ್ನಿಸುತ್ತದೆ. ಅವರ ಈ ದಾರ್ಷ್ಟ್ಯಕ್ಕೆ ದೇವ-ದೇವತಾಪುರುಷರಲ್ಲಿ ಶಾಪಾನುಗ್ರಹ ಶಕ್ತಿ ಪರ್ಯಾಪ್ತವಾಗಿ ಇರದಿರುವುದು ಕೂಡ ಕಾರಣವೇನೋ? ಕಲಿಯುಗದಲ್ಲಿ ಪಾಪ-ಪುಣ್ಯಗಳಿಗೆ ತಕ್ಷಣ ಫಲ ಎನ್ನುತ್ತಾರೆ. ಆದರೆ ಒಳಿತು-ಕೆಡಕುಗಳಿಗೆ ತಕ್ಷಣ ಫಲ ದೊರೆತ ಗೋಚರ ದೃಷ್ಟಾಂತಗಳು ನಮಗೆ ಲಭ್ಯವಿಲ್ಲ. (ಈ ದೃಷ್ಟಿಯಲ್ಲಿ ತಿರುಪತಿ ತಿಮ್ಮಪ್ಪನೇ ಪರವಾಗಿಲ್ಲ ಅನ್ನಿಸುತ್ತದೆ. 40 ಕೋಟಿ ರು. ಕಿರೀಟದ ಆಮಿಷಕ್ಕೂ ಜಗ್ಗದೆ ದಾನಿಯನ್ನು ಜೈಲಿನಲ್ಲಿಟ್ಟಿದ್ದಾನೆ.) ಹೀಗಿರುವಾಗ, ಮುಚ್ಚಳಿಕೆ ನೀಡುವುದು ಇಂದಿನ ಬಹುತೇಕ ರಾಜಕಾರಣಿಗಳಿಗೆ ದೊಡ್ಡ ವಿಷಯವಲ್ಲ. ಸಕಲ ಶಸ್ತ್ರಾಸ್ತ್ರ ಸಜ್ಜಿತ ಚುನಾವಣಾ ಆಯೋಗವೇ ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಶಸ್ತ್ರತ್ಯಾಗ ಮಾಡಿದೆ. ಶಸ್ತ್ರಕ್ರಿಯೆಯೂ ಗುಣಪಡಿಸಲಾಗದ ಮಹಾರೋಗಕ್ಕೆ ಬೇರು-ನಾರಿನ ಅನುಪಾನ ಮಾಡಿದಂತೆ ಈ ಮುಚ್ಚಳಿಕೆ ಕಾಣುವುದಿಲ್ಲವೇ? ಆದರೂ ನಾವೇಕೆ ಸಿನಿಕರಾಗಬೇಕು?
ಈ ಅನುಪಾನಕ್ಕೆ ಅಡ್ಡ ಪರಿಣಾಮವೇನೂ ಇಲ್ಲ. ಪ್ರಯತ್ನಿಸಿ ನೋಡೋಣ, ಅಲ್ಲವೇ?
ಡಾ. ವಿ. ಎನ್. ಹೆಗಡೆ
ಹವ್ಯಾಸಿ ಲೇಖಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

