* ಎಲ್ಲಾ ಪಕ್ಷಗಳಿಗೂ ಪ್ರಚಾರ ಮಾಡ್ತೀರ ಅಂತ ಕಾಂಗ್ರೆಸ್‌ನೋರು ನಿಮ್ಮ ಕಡೆ ಕೈ ತೋರಿಸ್ತಿದಾರಲ್ಲ್ಲ, ಈಗೇನ್ ಮಾಡ್ತೀರಾ?
ಅವರು ಹಂಗಂದ್ರು ಅಂತ 'ಆಗದು ಎಂದು ಕೈಲಾಗದು ಎಂದು' ಕೈ ಕಟ್ಟಿ ಕುಳಿತುಕೊಳ್ಳೋಕಾಗುತ್ತಾ? ನಮ್ಮತ್ರಾನೂ ಕಾಂಗ್ರೆಸ್ ಕಡ್ಲೆಬೀಜ ಇದೆ ಅಂತ ತೋರಿಸ್ತೀನಿ.
* ನೀವೂ ಎಲೆಕ್ಷನ್‌ಗೆ ನಿಂತ್ಕೊಬಹುದಿತ್ತಪ್ಪ, ಮನೆಗೊಬ್ಬ ಸಂಗೊಳ್ಳಿರಾಯಣ್ಣ ಹುಟ್ಟಿ ಬರಲಿ ಎಂದಿದ್ದ ನಿಮಗೆ ಬರೀ ಗಂಡ್‌ಮಕ್ಳೇ ಓಟ್ ಹಾಕಿದ್ರೂ 'ವಿಜಯಲಕ್ಷ್ಮಿ' ಒಲಿಯೋದು ಕಷ್ಟ ಆಗ್ತ್ತಿರಲಿಲ್ಲ ಅಲ್ವಾ?
ಎಲೆಕ್ಷನ್‌ಗೆ 'ನಿಂತ್ಕೊಂಡ್ ಮಾಡೋ ಕೆಲಸ ಅಲ್ಲದಿದ್ರೂ, ಓಡಾಡ್‌ಕೊಂಡ್ ಮಾಡೋ ಪ್ರಚಾರದ ಕೆಲಸ ಅಂತೂ ಮಾಡ್ತೀನಿ'. ಅಷ್ಟೇ ಸಾಕು ನನಗೆ.
* ನೀವು ಹೇಳಿದ್ ಕೇಳಿ ಸುದೀಪ್ ನೆನಪಾಯ್ತು, ಈ ಬಿಗ್‌ಬಾಸ್‌ನಲ್ಲಿ ಸುದೀಪ್ ಅವ್ರು ಕಾಳಿಸ್ವಾಮಿ ಜೊತೆ ಮಾತಾಡ್ತಾ 'ಹೆಣ್ಣುಮಕ್ಕಳ ಮೇಲೆ ಕೈ ಮಾಡೋರನ್ನ ಕಂಡ್ರೆ ನನಗಾಗಲ್ಲ' ಅಂದ್ರಲ್ಲ, ನಿಮ್ಮ, ಸುದೀಪ್ ಸಂಬಂಧ ಈಗ ಹೇಗಿದೆ?
ಅದಕ್ಕೂ ನಮ್ಮ ಸಂಬಂಧಕ್ಕೂ ಸಂಬಂಧ ಇಲ್ಲ, ರಿಯಾಲಿಟಿ ಬೇರೆ, ರಿಯಾಲಿಟಿ ಶೋ ಬೇರೆ.
* ಹೋಗ್ಲಿ, ಇತ್ತೀಚೆಗೆ 'ಬಾಸ್' ಅಂತ ಸಿನಿಮಾ ಮಾಡಿದ್ರಿ, ಅದರ ಅರ್ಹತೆ ಮೇಲಾದ್ರೂ ನೀವು ಬಿಗ್‌ಬಾಸ್‌ಗೆ ಹೋಗಬಹುದಿತ್ತಲ್ಲ?
ನನ್ನ ಕೈಲಿ 'ದಾಸ'ನ ಥರಾ ಎಲ್ಲಾ ಇರೋಕಾಗಲ್ಲ, 'ಬಾಸ್' ಥರಾ ಮನೆಯಿಂದ ಹೊರಗೆ ಹಾಕೋ ಕೆಲಸ ಕೊಟ್ಟಿದ್ರಿದ್ದೆ ಹೋಗಬಹುದಿತ್ತೇನೋ.
* ಹೌದು ಬಿಡಿ, ಸದ್ಯಕ್ಕೆ 'ಬೃಂದಾವನ'ದಂಥ ಮನೆಯಲ್ಲಿರುವಾಗ ಬಿಗ್‌ಬಾಸ್ ಮನೆ ಯಾಕೆ ಅಲ್ವಾ? ಅದ್ಸರಿ ನಿಮ್ಮ 'ಬೃಂದಾವನ'ದಲ್ಲಿ ಮನೆಯಿಂದ ಹೊರಗೆ ಹಾಕೋ ಸೀನ್ ಏನಾದ್ರೂ ಇದೆಯಾ?
'ಬೃಂದಾವನ'ದಲ್ಲಿ ಅಂಬರೀಷ್‌ರಂಥ ಬಿಗ್‌ಬಾಸ್ ಇರುವಾಗ ಆ ಥರಾ ಸೀನೇ ಇಲ್ಲ ಬಿಡಿ. ಅವರೇನಿದ್ರೂ ಮನೇಲಿರುವವರು ಜಗಳ ಆಡಿದ್ರೆ ಅವರನ್ನ ಒಂದು ಮಾಡ್ತಾರೇ ವಿನಃ, ಬೇರೆ ಬೇರೆ ಮಾಡೊಲ್ಲ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಗಾಜಿನ ಮನೆಯಲ್ಲಿರುವವರು ಬೇರೆಯವರ ಮನೆಗೆ ಕಲ್ಲು ಹೊಡೆಯಬಾರದಂತೆ. ಗಾಜಿನ ಮೂಲಕ ಮನೆಯನ್ನು ಅಲಂಕರಿಸಲು ಯಾರ ಅಪ್ಪಣೆಯೂ ಬೇಕಿಲ್ಲ ಬಿಡಿ. ಗ್ಲಾಸ್‌ನಿಂದಲೇ ಗ್ರೌಂಡ್ ಬ್ರೇಕಿಂಗ್ ಎನಿಸುವಂಥ ವಿನ್ಯಾಸ ಮಾಡುವುದು ಹೇಗೆ ಎಂಬ ಕೆಲವು ವಿವರಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯವಿವೆ.
* bit.ly/11KWcmH l bit.ly/12yHjUP
* bit.ly/123O7aj l bit.ly/161QUHD
* yhoo.it/Zruvjm
ಹರಿ-ಕಥೆ
ಸುಮಾರು 80 ವರ್ಷದ ಮುದುಕನೊಬ್ಬ ಟ್ರಾಫಿಕ್ ಸಿಗ್ನಲ್‌ನಲ್ಲಿ ತನ್ನ ಟಿವಿಎಸ್ ಮೊಪೆಡ್‌ನ ಮೇಲೆ ಕುಳಿತು ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದ್ದ. ಅವನ ಪಕ್ಕದಲ್ಲೇ ಒಬ್ಬ ಹುಡುಗ ತನ್ನ ಫೆರಾರಿ ಕಾರನ್ನು ರೊಯ್ಯನೆ ತಂದು ನಿಲ್ಲಿಸಿದ. ಕಾರನ್ನು ನೋಡಿ ಥ್ರಿಲ್ ಆದ ಮುದುಕ 'ಎಷ್ಟು ರುಪಾಯಿ ಕೊಟ್ಟೆ ಈ ಕಾರಿಗೆ?' ಎಂದು ಕೇಳಿದ ಅದಕ್ಕೆ ಗತ್ತಿನಿಂದ ಹುಡುಗ ಹೇಳಿದ. '2 ಕೋಟಿ'. 'ಅಂಥದ್ದೇನಿದೆ ಈ ಕಾರಲ್ಲಿ ?' ಎಂದು ಕೇಳಿದ ಮುದುಕನಿಗೆ '220ಕಿಮೀ ಸ್ಪೀಡ್‌ನಲ್ಲಿ ಹೋಗೋ ಥ್ರಿಲ್ ಎಂದಾದರೂ ಅನುಭವಿಸಿದ್ದೀಯಾ ಲೈಫಲ್ಲಿ?' ಅಂತ ಉಡಾಫೆಯಿಂದ ಹೇಳಿದ ಹುಡುಗ. ಮುದುಕ ತನ್ನ ಮೊಪೆಡ್ ಅನ್ನು ಕಾರಿನ ಹತ್ತಿರಕ್ಕೆ ತಂದು ಕುಳಿತಲ್ಲಿಂದಲೇ ಕಾರಿನೊಳಕ್ಕೆ ತಲೆತೂರಿಸಿ ನೋಡಿ 'ಕಾರೇನೋ ಚೆನ್ನಾಗಿದೆ. ಆದ್ರೆ ನಂಗೇನೋ ನನ್ನ ಮೊಪೆಡ್ಡೇ ಬೆಸ್ಟ್ ಅನಿಸುತ್ತೆ' ಎನ್ನುವಷ್ಟರಲ್ಲಿ ಸಿಗ್ನಲ್ ಬಿಡ್ತು. ಈ ಮುದುಕನಿಗೆ ತನ್ನ ಕಾರಿನ ಖದರ್ ತೋರಿಸಬೇಕು ಎಂದುಕೊಂಡ ಹುಡುಗ ಆ್ಯಕ್ಸಿಲರೇಟರ್ ಒತ್ತಿದ. ಕಾರು 100 ಕಿಮೀ ವೇಗದಲ್ಲಿ ಹೊರಟಿತು. ಸ್ವಲ್ಪ ದೂರ ಹೋದಮೇಲೆ ಎಡಕ್ಕೆ ತಿರುಗಿ ನೋಡಿದರೆ ಆ ಮುದುಕನ ಮೊಪೆಡ್ ಕೂಡಾ ಅದೇ ವೇಗದಲ್ಲಿ ಅವನ ಕಾರಿಗೆ ಅತಿ ಹತ್ತಿರದಲ್ಲೇ ಹೋಗುತ್ತಿತ್ತು. ಆಶ್ಚರ್ಯದಿಂದ ನೋಡಿದ ಹುಡುಗ ಕಾರಿನ ಸ್ಪೀಡ್ ಹೆಚ್ಚಿಸಿದ. ಸ್ಪೀಡೋಮೀಟರ್ 150 ತಲುಪಿ 180ಕ್ಕೇರಿತು. ಪಕ್ಕದಲ್ಲಿ ನೋಡಿದರೆ ಮತ್ತದೇ ಮುದುಕನ ಮೊಪೆಡ್. ಎಕ್ಸೈಟ್ ಆಗಿದ್ದ ಮುದುಕನ ಮುಖದ ಮೇಲೂ ಪುಲ್ ಥ್ರಿಲ್. ಹುಡುಗನ ಕಾರು 220 ಕಿಮೀ ವೇಗ ತಲುಪಿತು. ಮುದುಕನ ಮೊಪೆಡ್ ಅದನ್ನೂ ಸರಿಗಟ್ಟಿತು. ಕಂಗಾಲಾದ ಹುಡುಗ ಇನ್ನು ಮುದುಕನ ಮೊಪೆಡ್‌ನೊಂದಿಗೆ ಕಾಂಪೀಟ್ ಮಾಡಲು ಸಾಧ್ಯವಿಲ್ಲ ಎನಿಸಿ ಸಡನ್ನಾಗಿ ಬ್ರೇಕ್ ಹಾಕಿದ. ಆ ರಭಸಕ್ಕೆ ಮೊಪೆಡ್ ಕೂಡಾ ನಿಂತಿತು. ಆದರೆ ಮುದುಕ ಸಡನ್ನಾಗಿ ಕೆಳಗೆ ಬಿದ್ದ. ಹುಡುಗ ಕಾರಿಳಿದು ಓಡಿಬಂದವನೇ, 'ಏನಾಯ್ತು?' ಎನ್ನುತ್ತಾ ಅವನನ್ನು ಎಬ್ಬಿಸಿದ. ಅದಕ್ಕೆ ಮುದುಕ ಕಷ್ಟಪಟ್ಟು ಮೇಲೇಳುತ್ತಾ ಹೇಳಿದ 'ಪ್ಲೀಸ್, ನನ್ನ ಮೊಪೆಡ್‌ನ ಫುಟ್‌ರೆಸ್ಟ್ ನಿನ್ನ ಕಾರಿನ ಸೈಡ್ ಬಂಪರ್‌ಗೆ ಸಿಕ್ಕಿ ಹಾಕಿಕೊಂಡಿದೆ ಅದನ್ನು ಬಿಡಿಸುತ್ತೀಯಾ?'
ಸ್ಕ್ಯಾಂಡಲ್‌ವುಡ್
ಒಂದು ಸಿನಿಮಾ ಗೆದ್ದಿದೆ ಎಂದು ಎಲ್ಲರಿಗೂ ಗೊತ್ತಾಗುವುದು ಹೇಗೆ ಎಂಬ ಪ್ರಶ್ನೆಗೆ ಸರಳ ಉತ್ತರ ಇದು. ಅತಿ ಶೀಘ್ರದಲ್ಲೇ ಅದರ ಎರಡನೇ ಪಾರ್ಟ್ ಬರುತ್ತಿದೆ ಎಂದು ಹೇಳಿಬಿಟ್ಟರೆ ಸಾಕು. ಇದು ಗಾಂಧಿನಗರದ ಕೆಲವು ಸಿನಿಮಾಗಳ ಸಕ್ಸಸ್ ಸೂತ್ರ. ಸಿನಿಮಾ ಗೆದ್ದು, 50, 100 ದಿನಗಳ ನಂತರ ಅದು ಜನಗಳಲ್ಲಿ ಕ್ರೇಜ್ ಸೃಷ್ಠಿಸಿ, ಒಂದು ಸಾಕಾಗಲ್ಲ, ಎರಡು ಬೇಕು ಎಂದು ಪ್ರೇಕ್ಷಕನಿಗೆ ಅನಿಸಿದ ನಂತರ ಸಿನಿಮಾದವರು ಪಾರ್ಟ್ 2 ಬಗೆಗಿನ ಮಾತುಗಳನ್ನು ಹೇಳಿಕೊಳ್ಳುವುದು ಸಹಜ. ಅಥವಾ ಕಥೆಯಲ್ಲೇ ನಿರ್ದೇಶಕನಿಗೆ 'ಒಂದೇ ಟೇಕ್‌ನಲ್ಲಿ ಓಕೆ' ಹೇಳಲಾಗದು ಎನಿಸಿದರೆ ಅದನ್ನು ಮುಂದುವರಿಸುವ ಪ್ರಯತ್ನ ಮಾಡುವುದೂ ಸಹಜ. ಆದರೆ, ಇತ್ತೀಚೆಗೆ ಮೊದಲನೆ ವಾರದಲ್ಲಿ ಚಿತ್ರ ಇನ್ನೂ ಅಂಬೆಗಾಲಿಡುವಾಗಲೇ 'ಪಾರ್ಟ್ 2' ಮಾಡುವ ಪ್ಲ್ಯಾನ್ ಇದೆ ಎಂಬ ಆಡಂಬರದ ಮಾತುಗಳು ಕೇಳಿಬರುತ್ತವೆ. ಹಾಗೆ ನೋಡಿದರೆ ಇದು ಬಾಲಿವುಡ್ ಟ್ರೆಂಡ್. ಅಲ್ಲಿ ಮೊದಲ ಸಿನಿಮಾ ತೆರೆಕಾಣುವ ಮುನ್ನವೇ ಪಾರ್ಟ್ 2 ಸುದ್ದಿ ಮಾಡುತ್ತದೆ. ಆದರೆ ಅಲ್ಲಿ ನಿಜವಾಗುತ್ತದೆ. ಇಲ್ಲಿ ಅಂಥ ಸುದ್ದಿಗಳು, ಬರಿ ಪ್ಲ್ಯಾನ್‌ಗೆ ಮಾತ್ರ ಸೀಮಿತವಾಗುತ್ತವೆ, ಚಿತ್ರಮಂದಿರದಿಂದ ಸಿನಿಮಾ ಪರಾರಿಯಾದೊಡನೆ ಈ ಪಾರ್ಟ್ 2 ಪ್ಲ್ಯಾನ್ ಕೂಡಾ ಪರಾರಿ. ಪ್ಲ್ಯಾನ್ ಛೇಂಜ್ ಆಗಿದ್ದು ಯಾವಾಗ ಎಂಬುದು ಗೊತ್ತೇ ಆಗುವುದಿಲ್ಲ.
ಡಬ್ಕುಡಬಲ್ ತುದಾಂಡಲ್...
ಅಭಿಮಾನಿಗಳಿಗೆ ಆಟೋಗ್ರಾಫ್ ಕೊಡುವುದನ್ನೇ ಗೀಳಾಗಿಸಿಕೊಂಡ ನಟ
'ಸೈನಿಂಗ್' ಸ್ಟಾರ್
ಸ್ಟೇಡಿಯಂನಿಂದ ಎಲ್ರೂ ಹೋದಮೇಲೂ ಅಲ್ಲೇ ಕೂತಿದ್ದ ಖೇಮುವನ್ನು ಸೆಕ್ಯುರಿಟಿ ಕೇಳಿದ ಮ್ಯಾಚ್ ಮುಗೀತಲ್ಲ, ಇನ್ನೂ ಯಾಕೆ ಕುಂತಿದೀಯ?
ಹೈಲೈಟ್ಸ್‌ಗೆ ಕಾಯ್ತಿದೀನಿ!
ಅರಳಿ ಮರದ ಕೆಳಗೆ ಜನ ಕೂತ್ರೆ ನಾವು ಅದನ್ನ ಸೋಮಾರಿ ಕಟ್ಟೆ ಅಂತೀವಿ. ಅದಕ್ಕೇ ಏನೋ ಅರಳಿ ಮರವನ್ನ ಇಂಗ್ಲಿಷ್‌ನಲ್ಲಿ 'ಪೀಪಲ್' ಟ್ರೀ ಅಂತಾರೆ.
ಬಿಗ್‌ಬಾಸ್ ಬಗ್ಗೆ ಕೌಟುಂಬಿಕ ಸೀರಿಯಲ್ ಪ್ರೇಕ್ಷಕರ ಪ್ರತಿಕ್ರಿಯೆ
ಇಷ್ಟ್ ದಿನ ನೋಡಿದ್ರೂ, ಸ್ಟೋರಿನೇ ಅರ್ಥ ಆಗ್ತಿಲ್ಲ.
ಬಿಗ್‌ಬಾಸ್ ಮನೆಗೆ ಯೋಗರಾಜ್ ಭಟ್ ಹೋಗಿದ್ದಿದ್ರೆ
ದೇವ್ರವ್ನೆ ಮನೆ ಮಾರಿಬಿಡಿ ಅಂತ ಒಂದೇ ದಿನಕ್ಕೆ ಶೋ ಮುಗಿಸಿಬಿಡ್ತಿದ್ರು.
-ಹರಿ
harikannadaprabha@gmail.com