ಆ್ಯಸಿಡ್ ದಾಳಿಯಂಥ ಹೀನ ಕೃತ್ಯಗಳಿಗೆ ಕಡಿವಾಣ ಹಾಕೋಣ
ನಾನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸಮಯವದು. ಮಹಿಳಾ ಜಾಗೃತಿ ಮುಂತಾದ ಸ್ವಯಂ ಸೇವಾ ಸಂಸ್ಥೆಗಳು ಸೇರಿಕೊಂಡು ಸ್ಥಾಪಿಸಿರುವ 'ಕ್ಯಾಂಪೇನ್ ಅಂಡ್ ಸ್ಟ್ರಗಲ್ ಅಗೇನ್ಸ್ಟ್ ಅ್ಯಸಿಡ್ ಅಟ್ಯಾಕ್ ಆನ್ ವುಮನ್' (ಈಖಆಆಆಗಿ) ಎಂಬ ಸಂಸ್ಥೆಯ ವತಿಯಿಂದ ಆ್ಯಸಿಡ್ ದಾಳಿಯಿಂದ ಶೋಷಿತ ಮಹಿಳೆಯರಿಗಾಗಿ ನಡೆಸಿದ ಒಂದು ಕಾರ್ಯಾಗಾರಕ್ಕೆ ನನ್ನನ್ನು ಕರೆದಿದ್ದರು. ಅಲ್ಲಿ ಹಲವಾರು ಹೆಣ್ಣು ಮಕ್ಕಳು ಅ್ಯಸಿಡ್ ದಾಳಿಯ ಬಲಿಪಶುಗಳಾಗಿ ದೈಹಿಕ ಮತ್ತು ಮಾನಸಿಕ ಆಘಾತವನ್ನು ಅನುಭವಿಸಿದ್ದುದನ್ನು ಕಂಡಿದ್ದೇನೆ. ಲಕ್ಷ್ಮಿಯ ಮಗಳಿಗೆ ಎಲ್ಲಿ ತನ್ನ ತಾಯಿಗೆ ಹಾಕಿದಂತೆ ತಮ್ಮ ಮೇಲೂ ಅ್ಯಸಿಡ್ ಹಾಕುತ್ತಾರೋ ಎನ್ನುವ ಭಯ. ಹಾಗಾಗೇ ಆಕೆ ಶಾಲೆಗೆ ಹೋಗಲು ನಿರಾಕರಿಸುತ್ತಾಳೆ. ಶರ್ಮಿಳಾಳ ಪತಿ ಅವಳ ಮುಖದ ಮೇಲೆ ಅ್ಯಸಿಡ್ ಎರಚಿ ಅವಳನ್ನು ಮಾನಸಿಕವಾಗಿ ಕೊಂದಿದ್ದಾನೆ. ಆರು ವರ್ಷಗಳ ಶಿಕ್ಷೆ ಅನುಭವಿಸಿ ಬಂಧಮುಕ್ತನಾಗಿ ಈಗ ಆರಾಮಾಗಿ ಬದುಕುತ್ತಿದ್ದಾನೆ. ಆದರೆ ಅಂದಿನಿಂದ ಇಂದಿನವರೆಗೂ ದೈಹಿಕವಾಗಿ, ಭಾವನಾತ್ಮಕವಾಗಿ, ಆರ್ಥಿಕವಾಗಿ ನೋವು ಅನುಭವಿಸುತ್ತಾ, ಎರಡು ಮಕ್ಕಳನ್ನು ಕಟ್ಟಿಕೊಂಡು, ಇರಲು ಮನೆಯೂ ಸಿಗದೆ, ಮಾಡಲು ಕೆಲಸವೂ ಸಿಗದೆ, ಸಮಾಜದಿಂದ ತಿರಸ್ಕೃತಳಾಗಿ ತನ್ನದಲ್ಲದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಿದ್ದಾಳೆ ಶರ್ಮಿಳ.
ತನ್ನ ಲೈಂಗಿಕ ಅಪೇಕ್ಷೆಗಳಿಗೆ ಒಪ್ಪಲಿಲ್ಲವೆಂದೋ, ತನ್ನನ್ನು ಮದುವೆಯಾಗಲು ಒಪ್ಪಲಿಲ್ಲವೆಂದೋ, ವಿಚ್ಛೇದನ ಕೊಡಲು ಒಪ್ಪಲಿಲ್ಲವೆಂದೋ, ಯಾವುದೋ ಅನುಮಾನದಿಂದಲೋ, ಆಸ್ತಿ ಹಗರಣಗಳಿಂದಲೋ, ಸೇಡು ತೀರಿಸಿಕೊಳ್ಳಲೆಂದೋ, ಜಾತಿ, ಮತ ಬೇಧವಿಲ್ಲದೆ ಪ್ರಪಂಚದಾದ್ಯಂತ ನಡೆಯುವ ಅತ್ಯಂತ ಅಮಾನವೀಯ ಹೇಯ ಕೃತ್ಯ ಅ್ಯಸಿಡ್ ದಾಳಿ. ಭಾರತ, ಕಾಂಬೋಡಿಯಾ, ಪಾಕಿಸ್ತಾನ್ ಮತ್ತು ಬಾಂಗ್ಲಾದೇಶಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಹೆಚ್ಚಾಗಿ ಮಹಿಳೆಯರೇ ಈ ದಾಳಿಗೆ ಗುರಿಯಾಗುತ್ತಾರೆ. ಗಂಡನೋ, ಪ್ರಿಯತಮನೋ, ಬಂಧು ಬಳಗದವರೋ, ಅಥವಾ ಹೊಸ ಪರಿಚಯದವರೋ, ತಮ್ಮ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಅಥವಾ ಕ್ಷಣಿಕ ಕೋಪ, ಅಸೂಯೆಯಿಂದ ಕ್ಷಮೆಯೇ ಇಲ್ಲದ ಇಂಥಹ ಪೈಶಾಚಿಕ ಕೃತ್ಯವನ್ನು ಮಾಡುತ್ತಾರೆ.
ಏಪ್ರಿಲ್ 20, 1999 ರಂದು ಹತ್ತೊಂಬತ್ತು ವರ್ಷದ ಹಸೀನಾಳ ಜೀವನ ಊಹಿಸಲಾರದಷ್ಟು ಬದಲಾಗಿ ಹೋಯಿತು. ಅದಕ್ಕೆ ಕಾರಣ ಜೋಸೆಫ್ ರಾಡ್ರಿಗ್ಸ್ ಎಂಬಾತ. ಅವಳ ಮುಖದ ಮೇಲೆ ಎರಡು ಲೀಟರ್ನಷ್ಟು ಅ್ಯಸಿಡ್ ಎರಚಿದ. ಅವನು ಕೊಡಬಯಸಿದ ಉದ್ಯೋಗವನ್ನು ತಿರಸ್ಕರಿಸುದುದೇ ಹಸೀನಾ ಮಾಡಿದ ತಪ್ಪು! ಆಗಸ್ಟ್ 2006 ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಜೋಸೆಫ್ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ, ಹಸೀನಾಳಿಗೆ ಎರಡು ಲಕ್ಷ ಪರಿಹಾರವನ್ನು ಆತ ಕೊಡಬೇಕೆಂದು ಹೇಳಿತು. ಜೊತೆಗೆ ಸರ್ಕಾರದ ವತಿಯಿಂದ ಇಂಥ ಶೋಷಿತ ಮಹಿಳೆಯರಿಗೆ ಒಂದು ಸಮಗ್ರ ಪುರ್ನರ್ವಸತಿ ಯೋಜನೆಯನ್ನು ಸಮಯಬದ್ಧವಾಗಿ ತಯಾರಿಸಬೇಕೆಂದು ಆದೇಶ ನೀಡಿತು. ಅದರಂತೆ ಅವರ ಆರೋಗ್ಯ, ಉಪಚಾರ, ಸ್ವಾವಲಂಬನೆಗೆ ಅನುಕೂಲವಾಗಲು ಉದ್ಯೋಗ ಅವಕಾಶ ಹಾಗೂ ಘನತೆಯಿಂದ ಜೀವನ ನಡೆಸಲು ಬೇಕಾದ ಸಹಾಯ ಮುಂತಾದ ವ್ಯವಸ್ಥೆಯನ್ನು ಮಾಡಬೇಕಿತ್ತು. ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರಕರಣಗಳಲ್ಲಿ ಸೇರಿದ ಎಲ್ಲಾ ಅ್ಯಸಿಡ್ ದಾಳಿಗೊಳಗಾದ ಮಹಿಳೆಯರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಸ್ಥೆಯ ಸಹಾಯದಿಂದ ಸಂಗ್ರಹಿಸುವ ಕೆಲಸ ಪ್ರಾರಂಭವಾಗಿದೆ.
ಅ್ಯಸಿಡ್ ದಾಳಿಗೆ ತುತ್ತಾದವರ ಮುಖವನ್ನು ಕಂಡರೆ ಕರುಳು ಕಿವುಚಿ ಬರುತ್ತದೆ. ಮುಖದ ಮೇಲೆ ಆದ ಗಾಯವನ್ನು ಹಲವಾರು ಆಪರೇಷನ್ನುಗಳ ಮೂಲಕ ವಿಪರೀತ ದುಡ್ಡು ಖರ್ಚು ಮಾಡಿ ಸುಮಾರಾಗಿ ಸರಿ ಮಾಡಿಕೊಳ್ಳಬಹುದು. ಆದರೆ ಮಾನಸಿಕ ಆಘಾತದಿಂದ ಹೊರ ಬರಲು ಬಹಳ ಕಷ್ಟವಾಗುತ್ತದೆ. ಅವರ ಆತ್ಮವಿಶ್ವಾಸ ಕುಸಿದು ಮನೆಯಿಂದ ಹೊರಗೆ ಬರಲೇ ಇಚ್ಛಿಸದೆ ಬಂಧಿಗಳಾಗಿ ನರಳುವ ಪರಿಯನ್ನು ಕಂಡರೆ ಆ ಕೃತ್ಯವನ್ನು ಮಾಡಿದವರು ಎಂಥ ವಿಕೃತ ಮನಸ್ಸಿನವರಾಗಿರಬಹುದು ಎನಿಸುತ್ತದೆ.
ಅ್ಯಸಿಡ್ ದಾಳಿಯ ಘಟನೆಯಿಂದ ನೊಂದ ಮಹಿಳೆಯರ ನೆರವಿಗಾಗಿ ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದೆ. ಅದರಂತೆ ಇಂಥ ಮಹಿಳೆಗೆ ಆರೋಗ್ಯ, ಚಿಕಿತ್ಸೆ, ಇನ್ನಿತರ ಖರ್ಚು ವೆಚ್ಚಗಳಿಗೆ ಈ ಯೋಜನೆಯಡಿ ಎರಡು ಲಕ್ಷ ರು.ಗಳನ್ನು ಕೊಡಲಾಗುತ್ತದೆ. ಇದಕ್ಕೆ ಯಾವುದೇ ಆದಾಯ ಮಿತಿ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲಿ ಅಗತ್ಯ ಸೌಲಭ್ಯಗಳು ಇಲ್ಲದಿದ್ದರೆ ಜಿಲ್ಲಾ ಸರ್ಕಾರಿ ವೈದ್ಯರ ಸಲಹೆಯ ಮೇರೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
ಶೇಕಡಾ ನಲವತ್ತಕ್ಕಿಂತ ಹೆಚ್ಚು ಅಂಗವಿಕಲತೆಗೆ ಒಳಗಾದ ಮಹಿಳೆಗೆ ಮಾಸಾಶನ, ನ್ಯೂನ್ಯತೆಯನ್ನು ಸರಿಪಡಿಸಲು ಮಾಡಬೇಕಾದ ಶಸ್ತ್ರಚಿಕಿತ್ಸೆಯ ವೆಚ್ಚ, ಪರಿಕರಗಳ ಸಹಾಯ, ಉಚಿತ ಹಾಸ್ಟೆಲ್ ವ್ಯವಸ್ಥೆ, ಸರ್ಕಾರದ ಗ್ರೂಪ್ ಎ ಮತ್ತು ಬಿ ಹುದ್ದೆಗಳಲ್ಲಿ ಶೇಕಡಾ ಮೂರು ಮತ್ತು ಗ್ರೂಪ್ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇಕಡಾ ಐದು ಮೀಸಲಾತಿ ಒದಗಿಸಲಾಗಿದೆ. ನಾನಾ ತರಬೇತಿ ಪಡೆಯಲು ಮತ್ತು ಸ್ವ-ಉದ್ಯೋಗಿಗಳಾಗಲು ಅಂಗವಿಕಲ ಮತ್ತು ಹಿರಿಯ ನಾಗರಿಕರ ನಿರ್ದೇಶನಾಲಯದಿಂದ ಸಹಾಯ ದೊರೆಯುತ್ತದೆ. ಸ್ವಾವಲಂಬಿಯಾಗಲು ಬಯಸುವವರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ತರಬೇತಿ ಹಾಗೂ ಆರ್ಥಿಕ ಸಹಾಯ ದೊರೆಯುತ್ತದೆ. ನ್ಯಾಯಾಲಯದಲ್ಲಿ ಹೋರಾಡಲು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ಸಿಗುತ್ತದೆ ಅ್ಯಸಿಡ್ ದಾಳಿಯಿಂದ ಮೃತಪಟ್ಟ ಮಹಿಳೆಯ ಚಿಕ್ಕ ಪುಟ್ಟ ಮಕ್ಕಳು ಅನಾಥರಾದರೆ ಅವರಿಗೆ ವಸತಿ, ಶಿಕ್ಷಣ, ಆರೋಗ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೆರವು ಸಿಗುತ್ತದೆ. ಉಚಿತ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ವಿವರಗಳನ್ನು ಪಡೆಯಬಹುದಾಗಿದೆ. ಯೋಜನೆಯ ಆದೇಶ ಹೊರಡಿಸಿದ ಕೂಡಲೇ ಈಖಆಆಆಗಿ ಸಂಸ್ಥೆಯ ಸಹಾಯದೊಂದಿಗೆ ಒಂದು ಶಿಬಿರವನ್ನು ಏರ್ಪಡಿಸಿ, ಪ್ಲಾಸ್ಟಿಕ್ ಸರ್ಜನ್ ವೈದ್ಯರಿಂದ ವೈದ್ಯಕೀಯ ಪರೀಕ್ಷೆ ಮತ್ತು ಅನೇಕ ಯೋಜನೆಗಳ ಆಯ್ಕೆ ಒಂದೇ ಸ್ಥಳದಲ್ಲಿ ಸಿಗುವಂತೆ ಮಾಡಿ, ಎಲ್ಲಾ ನೊಂದ ಮಹಿಳೆಯರಿಗೆ 'ಸರ್ಕಾರ ನಿಮ್ಮ ಜೊತೆಗೆ ಇದೆ' ಎನ್ನುವ ವಿಶ್ವಾಸವನ್ನು ಮೂಡಿಸಲು ಸಾಧ್ಯವಾಯಿತು.
ನಡೆದು ಹೋಗುತ್ತಿದ್ದ ನಾಲ್ಕು ಜನ ಅಕ್ಕ ತಂಗಿಯರ ಮುಖದ ಮೇಲೆ ಮೋಟರ್ ಸೈಕಲ್ಲಿನ ಮೇಲೆ ಹೋಗುತ್ತಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಯುವಕರು 'ತೇಜಾಬ್' ಎನ್ನುವ ತುಕ್ಕು ಹಿಡಿದಿರುವ ಉಪಕರಣಗಳನ್ನು ತೊಳೆಯಲು ಉಪಯೋಗಿಸುವ ರಸಾಯನಿಕ ದ್ರಾವಣವನ್ನು ಎರಚಿ ಹೋಗಿದ್ದರು. ಈ ದ್ರವ ಎಲ್ಲಿ ಬೇಕಾದರೂ, ಎಷ್ಟು ಬೇಕಾದರೂ ಸುಲಭವಾಗಿ ಸಿಗಬಹುದಾದ ವಸ್ತುವಾಗಿದೆ. ಇಂಥ ಘೋರ ಕೃತ್ಯಕ್ಕೆ ಬಳಕೆಯಾದುದು ಲಕ್ಷ್ಮಿ ಅ್ಯಸಿಡ್ ದಾಳಿಗೆ ತುತ್ತಾದ ಅಪ್ರಾಪ್ತ ವಯಸ್ಸಿನ ಹುಡುಗಿ ಸವೋಚ್ಛ ನ್ಯಾಯಾಲಯದ ಮೆಟ್ಟಲೇರಲು ಕಾರಣವಾಯಿತು.
ಜುಲೈ 16, 2013 ರಂದು ಭಾರತದ ಸರ್ವೋಚ್ಚ ನ್ಯಾಯಾಲಯ ಅ್ಯಸಿಡ್ ದಾಳಿಗೆ ತುತ್ತಾದವರಿಗೆ ಪರಿಹಾರವಾಗಿ ಮೂರು ಲಕ್ಷ ರುಪಾಯಿಗಳು ನೀಡಬೇಕು, ಮಾಹಿತಿ ಸಿಕ್ಕ ಹದಿನೈದು ದಿನಗಳೊಳಗಾಗಿ ರು. ಒಂದು ಲಕ್ಷ ನೀಡಬೇಕು, ಇನ್ನೆರಡು ತಿಂಗಳ ಒಳಗಾಗಿ ಇನ್ನೆರಡು ಲಕ್ಷ ನೀಡಬೇಕು ಎಂಬ ತೀರ್ಪು ನೀಡಿದೆ. ಜೊತೆಗೆ ಮಹಿಳೆಯರ ಮೇಲೆ ನಡೆಯುವ ದಾಳಿಯನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಬೇಕೆಂದು ಹೇಳಿದೆ. ಹದಿನೆಂಟು ವರ್ಷಕ್ಕಿಂತ ಕೆಳಗಿನವರಿಗೆ ಯಾವುದೇ ಕಾರಣಕ್ಕೂ ಅ್ಯಸಿಡ್ ಮಾರಾಟ ಮಾಡಬಾರದು. ಮನೆಯ ವಿಳಾಸ ಇರುವ ಫೋಟೋ ಗುರುತು ಪತ್ರ ಹೊಂದಿರುವವರಿಗಷ್ಟೇ ಮಾರಾಟ ಮಾಡಬಹುದು. ಅಲ್ಲದೆ ಚಿಲ್ಲರೆ ಮಾರಾಟಗಾರರು ರಿಜಿಸ್ಟರ್ ಪುಸ್ತಕ ಇಟ್ಟುಕೊಳ್ಳಬೇಕು. ಅದರಲ್ಲಿ ಗ್ರಾಹಕರ ವಿವರ ಅ್ಯಸಿಡ್ ಖರೀದಿಸುತ್ತಿರುವ ಉದ್ದೇಶ ಮತ್ತಿತರ ಮಾಹಿತಿಗಳನ್ನು ಬರೆದು ಇಟ್ಟುಕೊಳ್ಳಬೇಕು. ಒಂದು ವೇಳೆ ಈ ನಿಯಮಾವಳಿಯನ್ನು ಉಲ್ಲಂಘಿಸಿದರೆ ಮಾರಾಟಗಾರನಿಗೆ ರು. ಐವತ್ತು ಸಾವಿರದಷ್ಟು ದಂಡವನ್ನು ವಿಧಿಸಬಹುದು ಎಂದು ಹೇಳಿದೆ. ಅ್ಯಸಿಡ್ ಅನ್ನು ವಿಷವೆಂದು ತೀರ್ಪಿನಲ್ಲಿ ಪರಿಗಣಿಸಲಾಗಿದೆ.
ನನ್ನ ಪ್ರಕಾರ ಇಂಥಹ ಹೀನ ಕೃತ್ಯಗಳನ್ನು ಖಂಡಿಸುವಲ್ಲಿ ಮತ್ತು ತಡೆಗಟ್ಟುವಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತನ ಪಾಲೂ ದೊಡ್ಡದಾಗಿದೆ. ನಮ್ಮ ಸುತ್ತ ಮುತ್ತ ಇರುವವರು ಇಷ್ಟೊಂದು ಅಮಾನುಷವಾಗಿ ಯೋಚಿಸಬಲ್ಲರು ಎಂಬ ಅರಿವು ನಮಗೆ ಮೂಡಿದೊಡನೆ, ಅವರ ಮನಸ್ಸನ್ನು ಪರಿವರ್ತಿಸುವತ್ತ ನಾವು ಗಮನ ಕೊಡಬೇಕು. ಯಾರು ಹೇಗಾದರೂ ಇರಲಿ, ನನಗೇನಾಗಬೇಕಾಗಿದೆ, ನನ್ನ ಜೀವನ ನೆಮ್ಮದಿಯಾಗಿ ಇದ್ದರೆ ಸಾಕು ಎಂದು ನಾವು ನಿಷ್ಕ್ರಿಯರಾಗಿ ಕೂರುವಂತಿಲ್ಲ. ನಮ್ಮಿಂದ ಸಮಾಜ, ಸಮಾಜದಿಂದ ನಾವು ಎಂಬ ಭಾವನೆ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು. ಹಾಗಾಗಿ ನಮ್ಮ ಸುತ್ತಮುತ್ತಲಿನ ಪರಿಸರ, ಅಲ್ಲಿರುವ ವ್ಯಕ್ತಿಗಳ ಭಾವನೆಗಳು, ನಡುವಳಿಕೆಗಳ ಬಗ್ಗೆ ನಮಗೆ ಸಹಾನುಭೂತಿ ಇರಬೇಕು. ಆಗ ಮಾತ್ರ ಇಂಥ ಹೀನಾಯ ಕೃತ್ಯಗಳಿಗೆ ಕಡಿವಾಣ ಹಾಕಬಹುದು ಅಲ್ಲವೇ?
(ಮುಂದುವರೆಯುವುದು)
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

