ಅಂಕಣಗಳು

ಒತ್ತುವರಿ ತೆರವು ಕಲ್ಪನೆಯೊಳಗಿನ ಕೊನೆಯಿಲ್ಲದ ಗೋಜಲುಗಳು

Published On :

ಜುಲೈ 22 ರಂದು ಕನ್ನಡಪ್ರಭದಲ್ಲಿ ಬಾಲಸುಬ್ರಹ್ಮಣ್ಯನ್ ಅವರ ಸಂದರ್ಶನ ಪ್ರಕಟಗೊಳ್ಳುತ್ತಲೇ 'ಭೂ ಒತ್ತುವರಿ ತೆರವಿನ' ಚರ್ಚೆ ಇನ್ನೊಮ್ಮೆ ತೆರೆದುಕೊಂಡಿದೆ. ಅದರಲ್ಲಿನ ಕೆಲವು ಅಂಶದ ಬಗ್ಗೆ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ತೀವ್ರ ಚರ್ಚೆ ನಡೆದು ಬಾಲಸುಬ್ರಹ್ಮಣ್ಯನ್ ವಿರುದ್ಧ ಹಕ್ಕುಚ್ಯುತಿ ಮಂಡನೆಯ ತೀರ್ಮಾನಕ್ಕೆ ಬಂದಿದ್ದು ಈ ವಿಷಯದಲ್ಲಿ ಸಂಘರ್ಷದ ಒಂದು ಮಗ್ಗುಲಿನ ಪರಿಚಯವಾಗುತ್ತದಷ್ಟೆ. ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸಬೇಕೆಂಬ ಉದಾತ್ತ ಧ್ಯೇಯಕ್ಕೆ ಅಡ್ಡಲಾಗಿ ಹಲವು ಗೋಜಲುಗಳಿವೆ. ಹೀಗಾಗಿಯೇ ಇದೊಂದು ಸಮಸ್ಯೆಯಾಗಿ ಮೊದಲಿನಿಂದಲೂ ಉಳಿದುಕೊಂಡು ಬಂದಿದೆ.
ಬಾಲಸುಬ್ರಹ್ಮಣ್ಯನ್ ಅವರು ಕಾರ್ಯಪಡೆ ಅಸ್ತಿತ್ವದಲ್ಲಿದ್ದ 19 ತಿಂಗಳಲ್ಲಿ ನೀಡಿರುವ ಒತ್ತುವರಿಗೆ ಸಂಬಂಧಿಸಿದ ವರದಿಯಲ್ಲಿ ಸುಮಾರು 11 ಲಕ್ಷ ಎಕರೆಗೂ ಅಧಿಕ  ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಹೇಳಲಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, 'ನಿಖರವಾದ ವಿಸ್ತೀರ್ಣ ಗುರುತಿಸಲು ಸರ್ವೆಯರ್‌ಗಳ ಕೊರತೆ ಇದೆ' ಎಂದು ಬಾಲಸುಬ್ರಹ್ಮಣ್ಯನ್ ಹೇಳಿರುವುದು. ಅಂದರೆ, ನಿಖರವಾಗಿ ಸರ್ವೆ ಮಾಡಿದ್ದರೆ ಒತ್ತುವರಿಯ ಅಂಕಿ ಅಂಶ ಇನ್ನಷ್ಟು ಹೆಚ್ಚಳವಾಗಲಿದೆ.
ವಾಸ್ತವದಲ್ಲಿ ಇದು ವರದಿಯ ಮಿತಿ. ಇದೇ ವರದಿಯ ಮೇಲೆ ಒತ್ತುವರಿ ತೆರವು ಸಾಧ್ಯವಿಲ್ಲ. ಇದಕ್ಕೆ ಸರ್ಕಾರದ ಮುಂದೆ ಹಲವು ಸವಾಲುಗಳಿವೆ. ಕಾರ್ಯಪಡೆ ನೀಡಿರುವ ವರದಿಯನ್ನು ಒಪ್ಪಿಕೊಂಡು ತೆರವಿಗೆ ಮುಂದಾದರೆ ಅದರಿಂದ ಮುಂದೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕರ್ನಾಟಕ ರಾಜ್ಯದಲ್ಲಿ ಸ್ವತಂತ್ರ ಪೂರ್ವದಲ್ಲಿ ಅಂದರೆ 1922ರಲ್ಲಿ ಭೂಮಿಯ ಪುನರ್ ಸರ್ವೆ ಮತ್ತು ಪುನರ್ ಭೂ ಕಂದಾಯ ನಿಗದಿ ಆಗಿತ್ತು. ಬಳಿಕ 1965ರಲ್ಲಿ ಭೂ ಕಂದಾಯ ಮರು ನಿಗದಿಯಾಯಿತು. ಆದರೆ, ಆ ಸಂದರ್ಭದಲ್ಲಿ ಭೂಮಿಯ ಪುನರ್ ಸರ್ವೆ ಕಾರ್ಯ ಆಗಲಿಲ್ಲ. ಜಿಲ್ಲಾಧಿಕಾರಿಗಳು ಕಾರ್ಯಪಡೆಗೆ ನೀಡಿರುವ ವರದಿಯಲ್ಲಿ ಸರ್ವೆಯರ್‌ಗಳ ಕೊರತೆ ಇರುವುದನ್ನು ಗಮನ ಸೆಳೆದಿದ್ದಾರೆ. 1998-99ರಲ್ಲಿ ಕಂದಾಯ ಇಲಾಖೆ ಸರ್ವೇಯರ್‌ಗಳನ್ನು ನೇಮಕ ಮಾಡಿತು. ಆದರೆ, ಅಗತ್ಯವಿರುವಷ್ಟು ಸರ್ವೆಯರ್‌ಗಳ ನೇಮಕವಾಗಲಿಲ್ಲ. ಈ ಕೊರತೆಯನ್ನು ತುಂಬಲು ಖಾಸಗಿ ಸರ್ವೆಯರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಅರಣ್ಯ ಮತ್ತು  ಕಂದಾಯ ಇಲಾಖೆ ಗಡಿ ಗುರುತು ಮಾಡುವ ಕೆಲಸ ಈವರೆಗೆ ಮಾಡಿಲ್ಲ. ಉದಾಹರಣೆಗೆ ಹೇಳುವುದಾದರೆ ಚಿಕ್ಕಮಗಳೂರು ಜಿಲ್ಲೆಯ ಮಸಗಲಿ ಅರಣ್ಯ ಭೂಮಿಯಲ್ಲಿ ಒತ್ತುವರಿ ಮಾಡಿಕೊಂಡವರನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ 2002ರಲ್ಲಿ ಆದೇಶ ಹೊರಡಿಸಿತ್ತು. ಈವರೆಗೆ ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡಿಲ್ಲ. ಕಳೆದ 10 ವರ್ಷಗಳಲ್ಲಿ  ಈವರೆಗೆ ಶೇ. 50 ರಷ್ಟು ಮಾತ್ರ ಸರ್ವೆ ಕಾರ್ಯ ನಡೆದಿದೆ.
ಹಲವು ಪ್ರಕರಣಗಳಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿದರೆ ಮಾತ್ರ ಒತ್ತುವರಿ ಭೂಮಿಯ ನಿಖರವಾದ ಮಾಹಿತಿ ಸಿಗಲಿದೆ. ಈ ಕೆಲಸ ಸಕಾಲದಲ್ಲಿ ಸಮರೋಪಾದಿಯಲ್ಲಿ ನಡೆಯಬೇಕಾದರೆ ಈ ಎರಡು ಇಲಾಖೆಗಳಲ್ಲಿ ಖಾಲಿ ಇರುವ ಹಾಗೂ ಹೊಸದಾಗಿ ಸರ್ವೆಯರ್‌ಗಳನ್ನು ನೇಮಕ ಮಾಡಿಕೊಳ್ಳಬೇಕು. ಆದರೆ, ಸರ್ಕಾರ ಇದರತ್ತ ಗಮನ ಹರಿಸುತ್ತಿಲ್ಲ.
ಬಾಲಸುಬ್ರಹ್ಮಣ್ಯನ್ ಕಮಿಟಿ ನೀಡಿರುವ ವರದಿಯ ಆಧಾರದ ಮೇಲೆ ತಕ್ಷಣಕ್ಕೆ ಒತ್ತುವರಿ  ತೆರವಿಗೆ ಮುಂದಾಗಲು ಕಾನೂನಿನಲ್ಲಿ ಅವಕಾಶ ಇಲ್ಲ. ಕಾರಣ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(3) ಮತ್ತು 104ರಲ್ಲಿ ಒತ್ತುವರಿ ಭೂಮಿ ತೆರವಿಗೆ ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದೆ. ಅವರು ಸೆಕ್ಷನ್ 39ರ ಕಾರ್ಯವಿಧಾನ ಅನುಸರಿಸಬೇಕು. ಅಂದರೆ ಪ್ರತಿ ಒತ್ತುವರಿ ಭೂಮಿ ಸರ್ವೆ ಮಾಡಿ ಗುರುತು ಮಾಡಬೇಕು. ಚಕ್‌ಬಂದಿ ಗುರುತಿಸಿ 15 ದಿನಗಳ ಕಾಲಾವಕಾಶ ನೀಡಿ ನೋಟೀಸ್ ಜಾರಿ ಮಾಡಬೇಕು. ನಂತರದಲ್ಲಿ ಒತ್ತುವರಿ ಯಾಕೆ ತೆರವುಗೊಳಿಸಬಾರದೆಂದು ಕಾರಣ ಕೇಳಿ ಸಂಬಂಧಪಟ್ಟವರಿಗೆ ನೋಟೀಸ್ ಜಾರಿ ಮಾಡಬೇಕು. ಆ ನೋಟೀಸ್‌ಗೆ ಉತ್ತರ ಬಂದ ನಂತರ ಸೂಕ್ತ ಕಾಲಾವಕಾಶ ನೀಡಿ ವಿಚಾರಣೆ ನಡೆಸಬೇಕು. ಬಳಿಕ ಒತ್ತುವರಿ ತೆರವು ಮಾಡಲು ತಹಶೀಲ್ದಾರ್ ಆದೇಶ ಹೊರಡಿಸಬೇಕು. ಈ ಆದೇಶ ಸಾಮೂಹಿಕವಾಗಿ ಮಾಡಲು ಬರುವುದಿಲ್ಲ, ಪ್ರತಿ ಪ್ರಕರಣದಲ್ಲಿ ಪ್ರತ್ಯೇಕವಾಗಿ ಮಾಡಬೇಕು. ಆ  ಸಂದರ್ಭದಲ್ಲಿ ಒತ್ತುವರಿದಾರರು ನ್ಯಾಯಾಲಯಕ್ಕೆ ಅಫೀಲ್ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡಿದ್ದೆಯಾದರೆ ಮುಂದೇನೂ ಎಂಬ ಪ್ರಶ್ನೆ ಬರುತ್ತದೆ. ಆಗ ತೆರವುಗೊಳಿಸಿದ ಭೂಮಿಯನ್ನು ಮತ್ತೆ ಅಳತೆ ಮಾಡಿ ರಕ್ಷಣಾ ಬೇಲಿಯನ್ನು ಹಾಕಬೇಕು. ಇಷ್ಟೆಲ್ಲಾ ಮಾಡಲು ಹಾಲಿ ಇರುವ ಸಿಬ್ಬಂದಿಯಿಂದ ಸಾಧ್ಯವಿಲ್ಲ. ಅದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಭೂಮಿ ಸಂರಕ್ಷಣಾ ಪ್ರಾಧಿಕಾರ ರಚನೆ ಮಾಡಬೇಕು. ಇದಕ್ಕೆ ಬೇಕಾದ ಸಿಬ್ಬಂದಿ, ಅವರಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು. ಇದು, ಸರ್ಕಾರದಿಂದ ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ.
ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಬೇಕೆಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಸರ್ಕಾರವು ಒಲ್ಲದ ಮನಸ್ಸಿನಿಂದ ಇದಕ್ಕೆ ತಲೆಯಾಡಿಸುತ್ತಿದೆ. ಇದರ ಜತೆಗೆ 14-4-1990ರ ಹಿಂದೆ ಸಾಗುವಳಿ ಮಾಡುತ್ತಿರುವ ಒತ್ತುವರಿದಾರರಿಗೆ ಹಕ್ಕುಪತ್ರ ನೀಡಲು ಕಂದಾಯ ಇಲಾಖೆ ಅಕ್ರಮ- ಸಕ್ರಮದಡಿಯಲ್ಲಿ ಫಾರ್ಮ್ ನಂಬರ್ 50 ಮತ್ತು 53ರಲ್ಲಿ ಅರ್ಜಿಗಳನ್ನು ಸ್ವೀಕರಿಸಿದೆ. ಭೂ ಕಂದಾಯ ಕಾಯ್ದೆ 94-ಎ, 94-ಬಿ ಯಲ್ಲಿ ಸಾಗುವಳಿ ಭೂಮಿ ಹಾಗೂ 94-5ರಲ್ಲಿ ವಾಸದ ಮನೆಯನ್ನು ಸಕ್ರಮ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಸಕ್ರಮಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳು ಈವರೆಗೆ ಪೂರ್ಣ ಪ್ರಮಾಣದಲ್ಲಿ ಇತ್ಯರ್ಥವಾಗಿಲ್ಲ. ತಹಶೀಲ್ದಾರ್ ಅವರು ತಮಗೆ ನೀಡಿರುವ ಅಧಿಕಾರವನ್ನು ಬಳಸಿಕೊಂಡು ತೆರವಿಗೆ ಮುಂದಾದರೆ ಅಕ್ರಮ- ಸಕ್ರಮದಡಿಯಲ್ಲಿ ಅರ್ಜಿ ಸಲ್ಲಿಸಿರುವವರು ಇದೇ ಕಾರಣವನ್ನು ಮುಂದೆ ಮಾಡಿ ನ್ಯಾಯ ಕೋರಿ ನ್ಯಾಯಾಲಯದ ಮೇರೆ ಹೋಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಜನಪ್ರತಿನಿಧಿಗಳೇ ಸೃಷ್ಟಿ ಮಾಡಿರುವ ಕಾಯ್ದೆಗಳು ಒತ್ತುವರಿ ತೆರವು ಮಾಡಲು ಮುಂದಾಗುವವರ ಕೈಯನ್ನು ಕಟ್ಟಿ ಹಾಕಿದೆ.
ಇನ್ನು ಅರಣ್ಯ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಹೇಳುವುದಾದರೆ ಕರ್ನಾಟಕ ಅರಣ್ಯ ಕಾಯ್ದೆ- 1963ರ ಕಲಂ 64-ಎ ಪ್ರಕಾರ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಅವಕಾಶ ನೀಡಲಾಗಿದೆ. ಆದರೆ, ಇದರಲ್ಲಿ ಸುಮಾರು 50 ವರ್ಷಕ್ಕಿಂತ ಮೊದಲು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ, ಅವರನ್ನು ಸಕ್ರಮಗೊಳಿಸಲು ಅವಕಾಶ ಇದೆ. ಇದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದ ಇನಾಂ ಭೂಮಿಯ ಪ್ರಕರಣ ಒಂದು  ಉದಾಹರಣೆ ನೀಡುವುದಾದರೆ, ಇಲ್ಲಿನ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವವರಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರ ನೀಡಲಾಗಿದೆ. ಇನ್ನುಳಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮ್ಮನ್ನು ತೆರವುಗೊಳಿಸಬಾರದು. ನೂರಾರು ವರ್ಷಗಳಿಂದ ವಾಸವಾಗಿರುವ ಹಾಗೂ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸಬೇಕೆಂದು ತೆರವು ಪ್ರಶ್ನಿಸಿ ಈ ಭಾಗದ ಜನರು ಸುಪ್ರೀಂಕೋರ್ಟ್‌ನ ಮೆಟ್ಟಿಲು ಏರಿದ್ದಾರೆ.
ಇನ್ನು ಘೋಷಿತ ಅರಣ್ಯದಲ್ಲಿ ಅರಣ್ಯೇತರ ಚಟುವಟಿಕೆ ಅಥವಾ ಅದರ ವಿಲೇವಾರಿಗೆ ಅವಕಾಶ ಇಲ್ಲ. 1986ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ, ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಏನನ್ನೂ ಮಾಡುತ್ತಿಲ್ಲ. ಇದರಲ್ಲಿ  ನಿರ್ದಿಷ್ಟವಾದ ಉದ್ದೇಶಗಳಿಗೆ ಮಾತ್ರ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಲು ಅವಕಾಶ ಇದೆ. ಇದರ ಜತೆಗೆ ಕೇಂದ್ರ ಸರ್ಕಾರ ಅನೂಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ- 2006 ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯ ಪ್ರಕಾರ 13-12-2005ರ ಹಿಂದೆ ಮೂರು ತಲೆಮಾರಿನಿಂದ ಅರಣ್ಯದಲ್ಲಿ ವಾಸಿಸುತ್ತಿರುವ ಪಾರಂಪರಿಕ ಅರಣ್ಯ ವಾಸಿಗಳು ಮತ್ತು ಬುಡಕಟ್ಟು ಜನಾಂಗದವರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಗರಿಷ್ಟ 3 ಎಕರೆವರೆಗಿನ ಭೂಮಿಯನ್ನು ಮಂಜೂರು ಮಾಡಲು ಅವಕಾಶ ನೀಡಲಾಗಿದೆ. ಮಂಜೂರಾದ ಭೂಮಿಯನ್ನು ಬೇರೆಯವರಿಗೆ ಯಾವತ್ತೂ ಸಹ ಪರಭಾರೆ ಮಾಡಲು ಅವಕಾಶ ಇಲ್ಲ. ಆದರೆ, ಪಾರಂಪರಿಕವಾಗಿ ಅನುಭವಿಸಬಹುದು.
ಹೀಗೆ ಅರಣ್ಯ ಮತ್ತು ಕಂದಾಯ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಸಾಗುವಳಿ ಚೀಟಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಯ್ದೆಗಳನ್ನು ರಚನೆ ಮಾಡಿಕೊಂಡಿವೆ. ಒತ್ತುವರಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಚಾತಕ ಪಕ್ಷಿಯಂತೆ ಸಾವಿರಾರು ಕುಟುಂಬಗಳು ಕಾಯುತ್ತಿವೆ. ಇಂತಹ ಸಂದರ್ಭದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ಜಂಟಿ ಸರ್ವೆ ಮಾಡಿಸದೆ ಬಾಲಸುಬ್ರಹ್ಮಣ್ಯನ್ ಕಮಿಟಿಯ ವರದಿ ಜಾರಿ ಮಾಡಲು ಸರ್ಕಾರ ಮುಂದಾದರೆ ಹಗಲು ಕಂಡ ಬಾವಿಗೆ ರಾತ್ರಿ ಬಿದ್ದಂತಾಗುತ್ತದೆ. ಯಾವುದೇ ಪೂರ್ವ ಸಿದ್ಥತೆ ಇಲ್ಲದೆ ಒತ್ತುವರಿ ತೆರವು ಎಂಬ ಬ್ರಹ್ಮಾಸ್ತ್ರ ಪ್ರಯೋಗ ಮಾಡಲು ಯಾವ ಸಂದರ್ಭದಲ್ಲೂ ಸಾಧ್ಯವಿಲ್ಲ.


  ಆರ್. ತಾರಾನಾಥ್
  ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.