'ಕೊನೆಗೂ ಅನ್ಸಿದ್ದು ಛೇ, ನಾನು ಹೋಗ್ಬಾರ್ದಿತ್ತು...'

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಕೇದಾರದಿಂದ ಬಂದ ಮರು ಬೆಳಗ್ಗೆ ನಾನು...
Updated on: 

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಕೇದಾರದಿಂದ ಬಂದ ಮರು ಬೆಳಗ್ಗೆ ನಾನು ಹೊರಟು, ಸಂಜೆಗೆ ರುದ್ರಪ್ರಯಾಗ ಸೇರಿ, ಅಲ್ಲಿಂದ ಹೃಷಿಕೇಶ, ದಿಲ್ಲಿ ತಲುಪಿರಬೇಕಿತ್ತು ಇಷ್ಟೊತ್ತಿಗೆ. ಎಸ್‌ಡಿಎಂ ಹರತ್‌ಸಿಂಗ್ ರಾವತ್‌ಗೆ ಥ್ಯಾಂಕ್ಸ್ ಲೆಟರ್ ಬರೆದಿಟ್ಟು ಬಂದವನೇ ಹೋಟೆಲ್ ರೂಮು ಸೇರಿ ಮನತೃಪ್ತಿಯಾಗುವಷ್ಟು ಮಿಂದು, ಹೊಟ್ಟೆ ತುಂಬ ರೋಟಿ ದಾಲ್ ಮೆದ್ದು, ಎಲ್ಲ ಲಗ್ಗೇಜು ಪ್ಯಾಕ್ ಮಾಡಿ ಮನೆಗೊಂದು ಫೋನ್ ಮಾಡಿ ನಾಡಿದ್ದು ಬೆಳಗ್ಗೆಯೇ ಬೆಂಗಳೂರಿನಲ್ಲಿರುತ್ತೇನೆ ಎಂದು ಹೇಳಿ ನಿಶ್ಚಿಂತೆಯಿಂದ ಮಲಗಿದ್ದೆ. ಗುಪ್ತಕಾಶಿಯಿಂದ ನನ್ನ ಟ್ಯಾಕ್ಸಿ ನಿಲ್ಲಿಸಿ ಬಂದಿದ್ದ ಮಯಾಲಿಗೆ ಹೋಗುವ ಮಿನಿ ಬಸ್ (ಅದೇ ಬಸ್‌ನಲ್ಲಿ 3 ದಿನದ ಹಿಂದೆ ನಾನು ಬಂದ್ದದು) ಬೆಳಗ್ಗೆ 6.30ಕ್ಕೆ ಹೊರಡುವುದಿತ್ತು. ಹಿಮಾಲಯದ ತಪ್ಪಲಿನಲ್ಲಿ ಯಾವುದೂ ನಮ್ಮ ಕೈಲಿರುವುದಿಲ್ಲ ಎಂಬ ಬದುಕಿನ ಭೀಕರ ಅನಿಶ್ಚಿತದ ವಾಸ್ತವ ಅರ್ಥವಾಗಿದ್ದು ಮರುದಿನ ಬೆಳಗ್ಗೆ ಲಗ್ಗೇಜು ಹೊತ್ತು ಬಸ್‌ನ ಸಮೀಪಕ್ಕೆ ಬಂದಾಗಲೇ. ಆಗಲೇ ನನ್ನ ಸಾರಥಿ ಸತ್ಯೇಂದರ್ ಅಲ್ಲಿ ಹಾಜರಿದ್ದ. 'ಸಾಬ್, ಆಜ್ ವಾಪೀಸ್ ಜಾನೆ ಕೆ ಲಿಯೆ ಕೋಯಿ ಚಾನ್ಸ್ ನಹಿ' ಅಂದ. ನಾವು ಹೋಗಬೇಕಿದ್ದ ರಸ್ತೆಯಲ್ಲಿ ರಾತ್ರಿಯ ಮಳೆಯಿಂದಾಗಿ ಮೂರು ಕಡೆ ಭೂಕುಸಿತ ಸಂಭವಿಸಿತ್ತು. ಅದು ತೆರವುಗೊಂಡ ಹೊರತೂ ಬಸ್ ಮುಂದಕ್ಕೆ ಚಲಿಸುವಂತಿರಲಿಲ್ಲ. ಈಗಲ್ಲ ಇನ್ನೊಂದು ತಾಸು, ಎರಡರಲ್ಲಾದರೂ ರಸ್ತೆ ಸರಿಯಾಗಿ ಹೊರಡುವ ಆಶಾಭಾವವನ್ನೇ ನುಂಗಿಹಾಕಿತ್ತು ಮಳೆಯ ನಿರಂತರತೆ. ಮಧ್ಯಾಹ್ನ ಹನ್ನೆರಡರವರೆಗೆ ನೋಡಿ 'ಆಜ್ ನಹೀಂ ಸಾಬ್, ಕಲ್ ದೇಖೂಂಗಾ' ಎಂದು ಬಿಟ್ಟ ಬಸ್‌ನ ಚಾಲಕ. ಅಷ್ಟೊತ್ತಿನ ನಂತರ ಹೊರಟರೆ ನಿಗದಿತ ಸ್ಥಳವನ್ನು ಕತ್ತಲಾಗುವುದರೊಳಗೆ ಸೇರಲು ಸಾಧ್ಯವಾಗುತ್ತಿರಲಿಲ್ಲ. ರಾತ್ರಿ ಪಯಣವೆಂದರೆ ಅದು ಜೀವದೊಂದಿಗಿನ ಜೂಜು. ಮತ್ತೆ ಲಾಡ್ಜ್ ಹೊಕ್ಕಿದ್ದೆ.ಅವತ್ತಿಡೀ ಮಾಡಲು ಬೇರಿನ್ನೇನೂ ಕೆಲಸವಿರಲಿಲ್ಲ. ಹೀಗಾಗಿ ಹೋಟೆಲ್‌ನ ಲಾಂಜ್‌ನಲ್ಲಿ ಕುಳಿತು ಎದುರಿನ ಊಖಿಮಠದ ಗುಡ್ಡವನ್ನು ದಿಟ್ಟಿಸುತ್ತಾ ಸಮಯ ಕಳೆಯುತ್ತಿದ್ದೆ. ಅದೇ ಸಂದರ್ಭದಲ್ಲೇ ಗೊತ್ತಾದದ್ದು ನನ್ನಂತೆಯೇ ಬಸ್ ಇಲ್ಲದೇ ಕಾಯುತ್ತಿರುವ ಇನ್ನಷ್ಟು ಮಂದಿ ಅಲ್ಲಿ ಹತಾಶೆಯಿಂದ ಉಳಿದಿದ್ದಾರೆ ಎಂಬುದು. ಅವರೆಲ್ಲರೂ ದುರಂತದ ದಿನ ಕಳೆದುಕೊಂಡ ಬಂಧುಗಳನ್ನು ಹುಡುಕುತ್ತಾ ಬಂದವರು.
-----
ಕಾಯುವಿಕೆಯ ಒಂದು ದಿನ ಮುಗಿದಿತ್ತು. ಮರು ಬೆಳಗ್ಗೆಯೂ ಆಶಾದಾಯಕವಾಗಿರಲಿಲ್ಲ. ಮಳೆಯ ಅಬ್ಬರವೇನೋ ಕಡಿಮೆಯಾಗಿತ್ತು. ಆದರೆ, ಗುಡ್ಡದ ಕುಸಿತ ನಿಂತಿರಲೇ ಇಲ್ಲ. ಅದು ನಿಂತ ಹೊರತೂ ರಸ್ತೆಯನ್ನು ತೆರವುಗೊಳಿಸಲು ಸಾಧ್ಯವಿರಲಿಲ್ಲ. ಇವತ್ತೂ ಬಸ್ ಹೊರಡುವ ಲಕ್ಷಣ ಕಾಣಲಿಲ್ಲ. ಅಷ್ಟರಲ್ಲಿ ನಮ್ಮ ಲಾಡ್ಜ್‌ನಲ್ಲೇ ಉಳಿದಿದ್ದ ಕಾನ್ಪುರದ ಅರ್ಜುನ್‌ಸಿಂಗ್ ಬಂದು 'ಕಾಡಿನಲ್ಲಿ ಒಂದು ಕಾಲುಹಾದಿಯಿದೆ. ಅಲ್ಲಿಂದ ನಡೆದು ಹೊರಟರೆ ಮುಂದಿನ ಹಳ್ಳಿ ಸೇರುವುದು ದೊಡ್ಡ ಸಂಗತಿಯೇನಲ್ಲ. ಆದರೆ ಕುಸಿತದ ಭಾಗವನ್ನು ದಾಟುವುದೇ ಸವಾಲು' ಎಂದ. ಆತ ದುರಂತದಲ್ಲಿ ತಮ್ಮನನ್ನು ಕಳೆದುಕೊಂಡಿದ್ದ. ಹಾಗೆಯೇ ಲಖನೌದಿಂದ ಹೆತ್ತವರನ್ನು ಹುಡುಕುತ್ತಾ ಬಂದಿದ್ದ ನರೇಂದ್ರ, ತಂಗಿ- ಭಾವನನ್ನು ಹುಡುಕುತ್ತಾ ಬಂದಿದ್ದ ಉತ್ತರ ಪ್ರದೇಶದ ಹಳ್ಳಿಯೊಂದರ ರಾಘವೇಂದ್ರ ಸಿಂಗ್ ಸೇರಿದ್ದರು. ಒಂದಷ್ಟು ಚರ್ಚೆ. ಬಸ್‌ಗಾಗಿ ಕಾದರೆ ಒಂದು ದಿನವಾದರೂ ಆಗಬಹುದು, ವಾರವೂ ಆಗಬಹುದು. ಧೈರ್ಯವಾಗಿ ಮುನ್ನುಗ್ಗಿ ಹೊರಟುಬಿಡೋಣ. ಏನಾದರೂ ಮಾಡಿ ಅಗಸ್ತ್ಯಮುನಿ ಗ್ರಾಮವಿದ್ದಲ್ಲಿಗೆ ಹೋಗಿ ಸೇರಿಬಿಟ್ಟರೆ ಅಲ್ಲಿಂದ ಮುಂದಕ್ಕೆ ವಾಹನಗಳು ಸಿಕ್ಕೇ ಸಿಗುತ್ತವೆ ಎಂಬ ಭರವಸೆಯೊಂದಿಗೆ ಹೊರಟು ನಿಂತೆವು. ಎಲ್ಲರೂ ಒಟ್ಟಿಗೇ ಇರುವುದರಿಂದ ಇನ್ನಷ್ಟು ಧೈರ್ಯ ಬಂದಿತ್ತು. ಆರಂಭದಲ್ಲಿ ಎಲ್ಲವೂ ಹರಟೆ, ಕೇಕೆ, ನಗುವಿನೊಂದಿಗೆ ಸುಲಭದಲ್ಲೇ ಹಾದಿ ಸಾಗುತ್ತಿತ್ತು. ಆದರೆ 2 ಕಿ.ಮೀ. ನಡೆಯುವ ಹೊತ್ತಿಗೆ ಅಂದುಕೊಂಡಷ್ಟು ಸುಲಭವಿಲ್ಲ ಎಂಬ ಅರಿವು ಒಬ್ಬೊಬ್ಬರಿಗೇ ಆಗಲಾರಂಭಿಸಿತು. ಬೆಟ್ಟದ ದುರ್ಗಮ ಹಾದಿಯಲ್ಲಿ ನಮ್ಮ ದೇಹವೇ ನಮಗೆ ಅಸಹನೆ ಮೂಡಿಸುವಷ್ಟು ಭಾರವೆನಿಸುತ್ತಿರುವಾಗ ಮಣಭಾರದ ಚೀಲ ಹೊತ್ತು ನಡೆಯುವುದು ಅಸಾಧ್ಯವೆನಿಸಿತು. ಕೈಯಲ್ಲಿದ್ದ ನೀರ ಬಾಟಲಿಯೂ ಹೊರೆಯೆನಿಸಿತು. ಬೆಳಗ್ಗೆ ತಿಂಡಿ ಯಾರದ್ದೂ ಅಗಿರಲಿಲ್ಲ. ಮುನ್ನೆಚ್ಚರಿಕೆಗಾಗಿ ತಂದಿದ್ದ ಬಿಸ್ಕೆಟ್ ಪ್ಯಾಕ್‌ಗಳು ಒಂದೊಂದಾಗಿ ಹೊರಬಂದು ಖಾಲಿಯಾಗತೊಡಗಿತು. ಒಬ್ಬೊಬ್ಬರೇ ಹಿಂದೆ ಬೀಳತೊಡಗಿದರು. ತೀರಾ ಹಿಂದುಳಿದವರಲ್ಲಿ ನಾನೇ ಮೊದಲಿಗ ಎಂದು ಮತ್ತೆ ಹೇಳಬೇಕಿರಲಿಲ್ಲ. ಮುಂದೆ ಹೋಗಿ ಅವರೆಲ್ಲ ನನಗಾಗಿ ಕಾಯುತ್ತಾ ನಿಲ್ಲುವುದು ಅಭ್ಯಾಸವೆಂಬಂತಾಯಿತು. ಹೀಗೆ ಹಿಂದುಳಿದಿದ್ದಾಗಲೇ ಕಾಲ ಕೆಳಗೇ ಏನೋ ಸರಿದಾಡಿದಂತಾದದ್ದು. ಸತ್ಯೇಂದರ್ 'ಸಾಬ್‌' ಎಂದು ಕೂಗಿದ್ದ. 'ಕೆಳಕ್ಕೂ ನೋಡಬೇಡಿ, ಯಾವುದೇ ಕಾರಣಕ್ಕೂ ಕಾಲೆತ್ತಬೇಡಿ' ಎಂಬ ಸೂಚನೆ ಬೇರೆ. 'ಮೈ ಲಖಡಿ ಲೇಕೆ ಆಥಾ ಹೂಂ ಸಾಬ್, ಏಕೀ ಮಿನಿಟ್‌' ಎಂದವನೇ ದಪ್ಪದೊಂದು ಮರದ ತುಂಡು ತಂದು ನನ್ನ ಕಾಲ ಪಕ್ಕದಲ್ಲೇ ತನ್ನೆಲ್ಲ ಶಕ್ತಿ ಒಗ್ಗೂಡಿಸಿ ಪ್ರಹಾರ ನಡೆಸಿದ್ದ. ಭಯದಲ್ಲಿ ಕಣ್‌ಕತ್ತಲೆ ಬಂದಿತ್ತು ನನಗೆ. ನಂತರವೇ ಗೊತ್ತಾದದ್ದು ನಾನು ಈವರೆಗೆ ನಿಂತದ್ದು ಹಾವೊಂದರ ತಲೆಯ ಮೇಲೆಂದು! ಒಮ್ಮೆಲೆ ಮೈಯೆಲ್ಲಾ ಕಂಪಿಸಿಬಿಟ್ಟಿತು. ಈ ಭಾಗದಲ್ಲಿ ಇಂಥ ಹಾವುಗಳು ಮಾಮೂಲು ಎಂದು ಯಾವುದೇ ಉದ್ವೇಗವಿಲ್ಲದೇ ಹೇಳುತ್ತಿದ್ದ ಸತ್ಯೇಂದರ್. ಮೊದಲೇ ಹೇಳಿದ್ದರೆ ನಾನು ಬರುತ್ತಲೇ ಇರಲಿಲ್ಲ. ನನಗೂ ಹಾವಿಗೂ ಆಜನ್ಮ ವೈರತ್ವ. ಇನ್ನೊಂದು ಹೆಜ್ಜೆಯನ್ನೂ ಮುಂದಕ್ಕೆ ಇಡಲಾರೆ ಎಂದು ನಿಂತುಬಿಟ್ಟೆ. ಸಾಬ್ ಈಗಾಗಲೇ ಇಂಥ ಹತ್ತಾರು ಹಾವುಗಳನ್ನು ನೀವು ದಾಟಿಕೊಂಡೇ ಬಂದಿದ್ದೀರಿ. ನಿಮಗೆ ಗೊತ್ತಾಗಲಿಲ್ಲ ಅಷ್ಟೆ. ಹೆಚ್ಚು ಹೊತ್ತು ಇಲ್ಲಿಯೇ ನಿಂತಿದ್ದರೆ ನಿಮಿಷಕ್ಕೆ ಒಂದರಂತೆ ಹಾವುಗಳು ಕಾಲ ಕೆಳಗೆ ನುಸುಳುತ್ತವೆ. ಬಿಸಿಲು ಹೆಚ್ಚಿದಷ್ಟೂ ಪೊಟರೆಯೊಳಗಿನ ಕಾವು ಹೆಚ್ಚಿ ಹಾವುಗಳು ಹೊರಬರುವುದು ಹೆಚ್ಚು ಎಂದು ಪುಟ್ಟ ಪ್ರಬಂಧವನ್ನೇ ಉಗ್ಗುತ್ತಾ ಮಂಡಿಸಿದ್ದ ಸತ್ಯಾಭಾಯ್. ಉದ್ದುದ್ದ, ಅಡ್ಡಡ್ಡ ಸೀಳಿಬಿಡಬೇಕು ಅವನನ್ನು ಎನ್ನಿಸಿತು. ಸಾಧ್ಯವಾದಷ್ಟು ಕಲ್ಲುಗಳ ಮೇಲೆಯೇ ಕಾಲಿಟ್ಟುಕೊಂಡು ಬನ್ನಿ ಎನ್ನುವ ಸಲಹೆ ಬೇರೆ. ಮತ್ತೆ ಹಾವು ಬಂದು ಬಿಟ್ಟೀತು ಎಂಬ ಭಯದಲ್ಲಿ ಹಾರುತ್ತಾ, ಹಾರುತ್ತಾ ನಡೆಯತೊಡಗಿದೆ. ಹಾರಬೇಡಿ, ಕಲ್ಲುಗಳ ಕೆಳಗೆ ನೆಲ ಮೆತ್ತಗಾಗಿರುತ್ತದೆ. ಬಂಡೆಯೊಂದಿಗೆ ನೀವೂ ಕುಸಿದು ಕೆಳಗೆ ಉರುಳುತ್ತೀರಾ ಎಂದ ಸತ್ಯಾ. ಕೊಂದು ಹಾಕ್ತೀನಿ ನಿನ್ನ ಎಂದೆ. ಅದಕ್ಕಾದರೂ ನನ್ನನ್ನು ಹಿಂಬಾಲಿಸಿ ಬೇಗ ಬನ್ನಿ ಎಂದು ಕುಶಾಲು ಮಾಡಿ ಉಗ್ಗುತ್ತಾ ಹೊರಟುಬಿಟ್ಟ.
-----
ಆಗಲೇ ಹಣ್ಣಾಗಿ ಹೋಗಿದ್ದೆವು. ಹಸಿವು ಹೆಚ್ಚುತ್ತಿತ್ತು. ಸ್ವಲ್ಪ ಸ್ವಲ್ಪ ದೂರ ನಡೆಯುವುದು ಬೃಹತ್ ಬಂಡೆಗಳ ಮೇಲೆ ಕೂತು ಸುಧಾರಿಸಿಕೊಂಡು ನಡೆಯುವುದು ನಡೆದೇ ಇತ್ತು. ಬಂಡೆ ಮೇಲೆ ಕೂತರೂ ನನಗೆ ಹಾವಿನದ್ದೇ ಚಿಂತೆ. ಹಾವಿಲ್ಲದಿದ್ದರೂ ಅದರ ಹೆಸರಿನಲ್ಲಿ ಎಲ್ಲರೂ ಸೇರಿ ನನ್ನನ್ನು ಹೆದರಿಸಿ ಮನರಂಜನೆ ಪಡೆಯುತ್ತಿದ್ದರು. ಪ್ರತಿಬಾರಿ ಕೂತಾಗಲೂ ನಮ್ಮನ್ನು ಏಳಲು ಅವಸರಿಸುತ್ತಿದ್ದವ ಅರ್ಜುನ್ ಸಿಂಗ್.ಏಕೆ ಎಂದು ಪ್ರಶ್ನಿಸಿದಾಗ ನಿಧಾನಕ್ಕೆ ಅವನ ಬಾಯಿಂದ ಹೊರಬಿದ್ದ ಸತ್ಯ ಮತ್ತೆ ಯಾರನ್ನೂ ಕೂರಲು ಕೊಡಲೇ ಇಲ್ಲ. ಅರಣ್ಯ ಭಾಗದಲ್ಲಿ ಎಲ್ಲವೂ ಸರಿ ಇಲ್ಲ. ಅದರಲ್ಲೂ ಪ್ರವಾಹದ ನಂತರದ ದಿನಗಳಲ್ಲಿ ಇದೇ ಕಾಡಿನಲ್ಲಿ ಅಡಗಿ ಕುಳಿತ ದರೋಡೆಕೋರರು ಕೆಳಗಿನ ರಸ್ತೆಯ ಪ್ರಯಾಣಿಕರನ್ನು ದೋಚುತ್ತಿದ್ದಾರಂತೆ. ಜತೆಗೆ ಮಳೆಯಿಂದಾಗಿ ದಿಕ್ಕೆಟ್ಟ ಆನೆಗಳ ಹಿಂಡು ಎಲ್ಲೆಂದರಲ್ಲಿ ನುಗ್ಗುತ್ತಿವೆ. ಎರಡೂ ಅಪಾಯಕಾರಿಯೇ. ಹೆಜ್ಜೆಗಳು ಬಿರುಸಾದವು,.
-----
ಅಂತೂ ನಾಲ್ಕು ತಾಸು ನಡೆದು ಮುಖ್ಯ ರಸ್ತೆಗೆ ಇಳಿದು ಬಂದಿದ್ದೆವು. ಅಲ್ಲಿಯೇ ಎದುರಾದದ್ದು ನಿರೀಕ್ಷಿತ ಸವಾಲು. ಮುಂದಕ್ಕೆ ಕಾಡಿನಲ್ಲಿ ಹಾದಿಯಿಲ್ಲ. ಕಣ್ಣೆದುರು ಇದ್ದ ಹಾದಿಯಲ್ಲಿ ಕುಸಿತ ಇನ್ನೂ ನಿಂತಿಲ್ಲ. ಅದನ್ನು ದಾಟಿ ಹೋಗುವುದಾದರೂ ಹೇಗೆ? ಅರ್ಜುನ್ ಸಿಂಗ್‌ನ ಎಂಜಿನಿಯರಿಂಗ್ ತಲೆ ಓಡತೊಡಗಿತ್ತು. ಗೆಳೆಯರ ಜೊತೆ ಟ್ರಕಿಂಗ್ ಹೋದ ಅನುಭವವಿತ್ತು ಆತನಿಗೆ. ಗುಡ್ಡವನ್ನು ಸೂಕ್ಷ್ಮವಾಗಿ ಅವಲೋಕಿಸಿದ ಆತ, ಎರಡು ಕುಸಿತದ ನಡುವಿನ 6 ನಿಮಿಷಗಳ ಅಂತರದಲ್ಲಿ ಒಬ್ಬೊಬ್ಬರೇ ಆಚೆ ದಡವನ್ನು ಓಡಿ ದಾಟಬೇಕು. ಮೊದಲನೆಯವನನ್ನು ದಾಟಿಸುವುದೇ ಸಾಹಸ. ಅತನಿಗೆ ಬೇರಿನ್ನೇನೂ ಆಧಾರವಿರುವುದಿಲ್ಲ. ಕುಸಿಯುವ ಮಣ್ಣಿನ ಮೇಲೆಯೇ ಕಾಲಿಟ್ಟುಕೊಂಡು ಬ್ಯಾಲೆನ್ಸ್ ಮಾಡುತ್ತಲೇ ಸಾಗಬೇಕು. ಒಂದೊಮ್ಮೆ 6 ನಿಮಿಷಕ್ಕೆ ಮೊದಲು ದಾಟದಿದ್ದರೆ ಯಾವುದೇ ಕ್ಷಣದಲ್ಲಿ ಉರುಳಿಬರುವ ಬಂಡೆಗಳು ತಲೆ ಛಿದ್ರಗೊಳಿಸಬಹುದು. ಹಾಗೆಂದು ಅವನು ಮೇಲೆ ನೋಡುತ್ತಾ ಮುಂದೆ ಹೊರಟರೆ ಕಾಲ ಕೆಳಗೆ ಕುಸಿದು ಪ್ರಪಾತ ಸೇರುತ್ತಾನೆ. ಒಮ್ಮೆ ಒಬ್ಬ ಆಚೆಗೆ ದಾಟಿಬಿಟ್ಟರೆ ಈ ಕಡೆಯಿಂದ ಆ ಕಡೆಗೆ ದಾರ ಕಟ್ಟಿ ಎಲ್ಲರನ್ನೂ ದಾಟಿಸುವುದು ಸುಲಭ. ಒಬ್ಬ ದಾಟುವುದು ಹೇಗೆ? ಆ ಒಬ್ಬ ಯಾರು? ಪ್ರಶ್ನೆಗೆ ಉತ್ತರವಾಗಿ ನಾನೇ ನಿಂತಿದ್ದೆ. ಏಕೆಂದರೆ, ಅಚೆ ದಡಕ್ಕೆ ಹೋಗಿ  ರೋಪ್ ನಾಟ್ ಹಾಕುವ ಕೌಶಲ್ಯ ಗೂತ್ತಿದ್ದುದು ನನಗೆ ಮಾತ್ರ. ಶಾಲಾ ದಿನಗಳಲ್ಲಿ ಸ್ಕೌಟ್ ಹೇಳಿಕೊಟ್ಟ ವಿದ್ಯೆ ಅದು. ಸರಿ ಸಿದ್ಧನಾದೆ. ಉಳಿದ ನಾಲ್ವರು ತಲಾ ಹತ್ತತ್ತು ಅಡಿಗೊಬ್ಬರಂತೆ ಮೇಲಿನ ಗುಡ್ಡವನ್ನು ನಿರಕಿಸುತ್ತಾ ನಿಲ್ಲುವುದು, ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಕೂಗಿ ಎಚ್ಚರಿಸುವುದು ಎಂದು ನಿರ್ಧಾರವಾಯಿತು. ತೊಡೆ ನಡುಗುತ್ತಲೇ ಇತ್ತು. ಹಾವಿಗೆ ಹೆದರಿ ಅಪಹಾಸ್ಯಕ್ಕೀಡಾಗಿ ಅದ ಅಪಾಯವನ್ನೂ ಈ ರೀತಿಯ ಧೈರ್ಯ ತೋರಿ ಕಾಂಪೆನ್ಸೇಟ್ ಮಾಡಿಕೊಳ್ಳಬೇಕು ಎಂಬ ಹುನ್ನಾರವೂ ಇತ್ತು ಮನದೊಳಕ್ಕೆ. ಆದದ್ದಾಗಲಿ ಎಂದು ಎಲ್ಲ ಆಕ್ಷಣಕ್ಕೆ ನೆನಪಿಗೆ ಬಂದ ಎಲ್ಲ ದೇವರನ್ನೂ ಸ್ಮರಿಸಿ ಹೊರಟೆ. ಮೂರೇ ನಿಮಿಷದಲ್ಲಿ ಆಚೆ ನಿಂತಿದ್ದೆ. ಗೆಳೆಯರಿಂದ ಹರ್ಷೋದ್ಗಾರ. ನನ್ನ ಬಗ್ಗೆ ನನಗೇ ಹೆಮ್ಮೆಯಾಗಿ ಜಿಗಿದಾಡಿದೆ. ತಡ ಮಾಡಲಿಲ್ಲ ಅರ್ಜುನ್ ರೋಪ್ ಎಸೆದ. ಹತ್ತಿರದ ಗಟ್ಟಿ ಕಾಂಡ ನೋಡಿ ಗಂಟು ಹಾಕಿ ಬಿಗಿದು, ಇನ್ನೊಂದು ತುದಿಯನ್ನು ಮತ್ತೆ ಅವನತ್ತ ಎಸೆದೆ. ಅವನು ಅತ್ತ ಇನ್ನೊಂದು ಕಾಂಡಕ್ಕೆ ಸುತ್ತಿ ಈಚೆಗೆ ಕೊಟ್ಟ. ಒಮ್ಮೆ ಗಂಟು ಪರೀಕ್ಷಿಸಿ ಒಬ್ಬೊಬ್ಬರೇ ದಾಟಲು ಅನುವಾಗಿ ಎಂದೆ. ಪ್ರತಿ ಆರು ನಿಮಿಷದ ಬಳಿಕ ತುಸು ಕಾಯುವುದು ಅನಿವಾರ್ಯವಾಗಿತ್ತು. ಬಂಡೆಗಳು ಉರುಳಿ ಬರುತ್ತಲೇ ಇತ್ತು. ಒಬ್ಬ, ಇಬ್ಬರು, ಮೂರು ಜನ, ನಾಲ್ವರು... ಅಬ್ಬಾ! ಇಪ್ಪತ್ತು ನಿಮಿಷದಲ್ಲಿ ಎಲ್ಲರೂ ಈಚೆ ಬಂದಿದ್ದೆವು. ಕೊನೆಗೂ ಯುದ್ಧ ಗೆದ್ದ ಅನುಭವ. ಎಲ್ಲರೂ ಬೆವೆತು ಹೋಗಿದ್ದೆವು. ಪಕ್ಕದಲ್ಲೇ ಧುಮುಕುತ್ತಿದ್ದ ಸಣ್ಣ ಝರಿಯಲ್ಲಿ ಕೈಕಾಲು ಮುಖ ತೊಳೆದು, ಅದೇ ನೀರನ್ನು ತೃಪ್ತಿಯಾಗುವಷ್ಟು ಕುಡಿದು. ಮುಂದೆ ಹೊರಟೆವು. ಇಪ್ಪತ್ತು ಕಿ.ಮೀ. ಉದ್ದದ ನಡಿಗೆಯಲ್ಲಿ ನಮ್ಮ ಹಸಿವನ್ನು ನೀಗಿಸಿದ್ದು ಸ್ಥಳೀಯ ಕಾಡುಗಳಲ್ಲಿ ಯಥೇಚ್ಛವಾಗಿ ಸಿಗುವ ಅಂಜೂರ ಮತ್ತು ವಿಚಿತ್ರ ಸಿಹಿಯ ನಮ್ಮ ವಾಟೆಕಾಯಿಯನ್ನು ಹೋಲುವ ಆಡು ಎಂಬ ಒಂದು ರೀತಿಯ ಹಣ್ಣುಗಳು. ನಮ್ಮೊಳಗಿನ ಬಕಾಸುರ ಹಸಿವು ಹಣ್ಣಿನ ರುಚಿಯನ್ನು ಇನ್ನಷ್ಟು ಹೆಚ್ಚಿಸಿತ್ತು.
---
ಅಂತೂ ಮಧ್ಯಾಹ್ನ ಒಂದು ಗಂಟೆಗೆ ಅಗಸ್ತ್ಯಮುನಿ ಸೇರಿದ್ದವು. ಮುಂದಿನ ಹತ್ತು ನಿಮಿಷದಲ್ಲಿ ಟೆಂಪೋ ಟ್ರ್ಯಾಕ್ಸ್ ಏನೋ ಬಂತು. ಹತ್ತು ಜನ ಕೂರುವ ಜಾಗದಲ್ಲಿ ಇನ್ನೂ ಒಂಬತ್ತು ಜನ ಹೆಚ್ಚಿಗೆ ತುರುಕಿದ್ದರು. ಬೇರೆ ವಾಹನ ಬರುವ ನಂಬಿಕೆ, ಕಾಯುವ ತಾಳ್ಮೆ ಇರಲಿಲ್ಲ. ಒಳಗೆ ಜಾಗ ಇರಲಿಲ್ಲ. ಟ್ರ್ಯಾಕ್ಸ್‌ನ ಟಾಪ್ ಏರಿದ್ದೆವು. ಹತ್ತು ಕಿ.ಮೀ.ನಷ್ಟು ಅಂಬಾರಿಯಲ್ಲೇ ಪಯಣ ನಮ್ಮದು. ಅಷ್ಟಕ್ಕೆ ತಲಾ ನೂರೈವತ್ತು ರು. ಸುಲಿದಿದ್ದ. ಯಾರದ್ದೋ ಮದುವೆಯಲ್ಲಿ ಉಂಡವನೇ ಜಾಣನಂತೆ, ಸುಲಿಗೆಗೆ ನಿಂತಿದ್ದರು ಎಲ್ಲರೂ. ಅಲ್ಲಿಂದ ಮತ್ತಷ್ಟು ದೂರ ನಡಿಗೆ. ಮತ್ತೆ ಬಂದ ಪರಿಹಾರ ಸಾಮಗ್ರಿಗಳ ಪುಟ್ಟ ವ್ಯಾನ್‌ನ ಹಿಂಬದಿ ಕುಳಿತು ಪಯಣ. ಇಂಥ ಹತ್ತಾರು ಸರ್ಕಸ್ ಮಾಡುತ್ತಾ ಕೊನೆಗೂ ಮಯಾಲಿ ಸೇರಿದ್ದೆವು ಐವರೂ. ಮುಂದಿನದ್ದು ನಿರೀಕ್ಷಿಸಿದಂತೆಯೇ ನಡೆದಿತ್ತು. ಮನೆ ಸೇರುವಾಗ ಜೀವಮಾನದ ಅತ್ಯಮೂಲ್ಯ ಖಜಾನೆ ಜತೆಗಿತ್ತು. ಆದರೆ, ಅದಕ್ಕೂ ಮೀರಿದ ವಿಷಾದ, ನೋಡಬಾರದ್ದನ್ನು ನೋಡಿದ ಸಂಕಟ. ಪತ್ರಕರ್ತನಾಗಿ ಅದೂ ನೀರಿನ ಅಧ್ಯಯನಿಯಾಗಿ ಮಹತ್ವಪೂರ್ಣ ಅವಕಾಶವೊಂದನ್ನು ದಕ್ಕಿಸಿಕೊಂಡ ತೃಪ್ತಿ ನನಗಿದೆ. ಆದರೆ ಅಲ್ಲಿ ಕಂಡ, ಕೇಳಿದ ಒಂದೊಂದೂ ನೋವಿನ ಚಿತ್ರಣವನ್ನು ಇಂದಿಗೂ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಬಹುಶಃ ಜೀವನದ ಕೊನೆಯವರೆಗೂ ಅಂಥ ನೋವಿನ ಚಿತ್ರಣ ನನ್ನನ್ನು ಕಾಡದೇ ಬಿಡದು. ಹೀಗಾಗಿ ಮರಳಿ ಬಂದಾಗ ನನಗನ್ನಿಸಿದ್ದು, 'ಛೇ ನಾನು ಹೋಗಲೇ ಬಾರದಿತ್ತು...'

ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com