ಸಿದ್ದು ಬೇಟೆಗೆ ಜೆಡಿಎಸ್-ಬಿಜೆಪಿ ಮೈತ್ರ್ಯಾಸ್ತ್ರ

ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರಲ್ಲ ಎಂಬುದು...
Updated on: 

ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರಲ್ಲ ಎಂಬುದು ಹಳೆಯ ಮಾತು. ಆದರೆ ಈ ಮಾತಿಗೆ ವಜನ್ ಬರುವುದು ಅದನ್ನಾಡುವ ವ್ಯಕ್ತಿ, ಆ ವ್ಯಕ್ತಿಯ ಗುಣಧರ್ಮ ಹಾಗೂ ಅನುಭವದ ಹಿನ್ನೆಲೆಯಲ್ಲಿ. ಹೀಗಾಗಿ ಈ ಸವಕಲು ಪದ ಯಾವಾಗ ಬೇಕಾದರೂ ಕಿಮ್ಮತ್ತು ಪಡೆದುಕೊಳ್ಳಬಹುದು, ಯಾವಾಗ ಬೇಕಾದರೂ ಕಳೆದುಕೊಳ್ಳಬಹುದು.
ಆದರೆ ಈ ಶತ್ರು ಮತ್ತು ಮಿತ್ರ ಶಬ್ದದ ನಡುವಣ ಅಂತರವನ್ನು ಸಂದರ್ಭಕ್ಕೆ ತಕ್ಕಂತೆ ಕುಗ್ಗಿಸಿ, ಹಿಗ್ಗಿಸುವ ಚಾಕಚಕ್ಯತೆ ಇರುವ ಮಾಜಿ ಪ್ರಧಾನಿ ದೇವೇಗೌಡರು ಪತ್ರಿಕೆಗೆ ಇತ್ತೀಚೆಗೆ ಕೊಟ್ಟ ಸಂದರ್ಶನದಲ್ಲಿ ಪುತ್ರ ಕುಮಾರಸ್ವಾಮಿಗೆ ಹೇಳಿದ್ದ ಇದೇ ಮಾತನ್ನು ಪುನರುಚ್ಚರಿಸಿದ್ದರು. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷ ನಾಯಕ ಕುಮಾರಸ್ವಾಮಿ ಏಕವಚನದಲ್ಲಿ ಕಿತ್ತಾಡಿಕೊಂಡ ಹಿನ್ನೆಲೆಯಲ್ಲಿ ಗೌಡರು ಈ ಹಿತವಚನ ಕೊಟ್ಟಿದ್ದರು. ಆದರೆ ಲೋಕಸಭೆ ಮರುಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಆಡಿದ್ದಾರೆ ಎಂಬುದು ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಏಕೆಂದರೆ ಅವರು ಈ ಹೇಳಿಕೆ ಕೊಟ್ಟ ಮರುದಿನವೇ ಬಿಜೆಪಿ ಈ ರಾಜಕೀಯ ಒಪ್ಪಂದವನ್ನು ಪರೋಕ್ಷವಾಗಿ ಒಪ್ಪಿಕೊಂಡಿತ್ತು.
ಹೌದು, ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರಗಳ ಮರುಚುನಾವಣೆಯಲ್ಲಿ ಜೆಡಿಎಸ್‌ನ ಒಂದು ಕಾಲದ ಪರಮ ವೈರಿ ಹಾಗೂ ರಾಷ್ಟ್ರೀಯ ಪಕ್ಷ ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿಲ್ಲ. ಪ್ರತ್ಯುಪಕಾರವಾಗಿ ಜೆಡಿಎಸ್ ಕೂಡ ಧಾರವಾಡ, ಚಿತ್ರದುರ್ಗ ಹಾಗೂ ಹಾವೇರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕಿಲ್ಲ. ಎರಡೂ ಪಕ್ಷಗಳು ಪರಸ್ಪರ ಹಗೆಯನ್ನು ಮರೆತು ಅವಳಿ ಮಕ್ಕಳಂತಾಗಿವೆ. ಅವಕಾಶವಾದ ರಾಜಕಾರಣ ತತ್ವ, ಸಿದ್ಧಾಂತ, ಘನತೆ, ಗೌರವವನ್ನು ಬಲಿ ತೆಗೆದುಕೊಂಡಿದೆ.
ಮೇಲ್ನೋಟಕ್ಕೆ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರುಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತಮ್ಮ ವೈಷಮ್ಯ ಮರೆತು ಈ ಹೊಂದಾಣಿಕೆ ಮಾಡಿಕೊಂಡಂತೆ ಕಾಣುತ್ತಿದೆ. ಆದರೆ ಹಿಂದೆ ಇರುವುದು ಮುಂದಾಲೋಚನೆ. ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಮೈತ್ರಿಗೆ ಒಪ್ಪಿದರೆ, ಜೆಡಿಎಸ್ ನಾಯಕರು ತಮ್ಮ ಜನ್ಮ ಶತ್ರುವಿನ ರೀತಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಣಿಯುವುದಕ್ಕಾಗಿ ಸಖ್ಯಕ್ಕೆ ಕೈ ಚಾಚಿದೆ. ಅಷ್ಟು ಮಾತ್ರವಲ್ಲಈ ಎರಡೂ ಪಕ್ಷಗಳು ಒಟ್ಟಾಗಿ ರಣತಂತ್ರವನ್ನು ರೂಪಿಸಿವೆ. ಯಾವ ದೃಷ್ಟಿಯಿಂದ ನೋಡಿದರೂ ಸದ್ಯದ ಪರಿಸ್ಥಿತಿಯಲ್ಲಿ ಈ ಹೊಂದಾಣಿಕೆ ಪಕ್ಷ-ಪಕ್ಷಗಳ ನಡುವಿನ ಮೈತ್ರಿಯ ರೀತಿ ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ನಡುವಿನ ವೈಷಮ್ಯ ಅನಾವರಣಕ್ಕೆ ಇದು ವೇದಿಕೆಯಾಗಿದೆ ಎಂಬುದು ಢಾಳಾಗಿ ಕಾಣುತ್ತಿದೆ.
ಈ ಒಪ್ಪಂದದ ಹಿಂದೆ ಕಾಂಗ್ರಸ್ಸೇತರ ಶಕ್ತಿಗಳನ್ನು ಒಂದು ಮಾಡುವ ಜತೆಗೆ ಸಿದ್ದರಾಮಯ್ಯ ಅವರನ್ನು ಮಣಿಸುವುದು ಪ್ರಧಾನ ಉದ್ದೇಶ. ಏಕೆಂದರೆ ರಾಜ್ಯದ ಬದಲಾದ ರಾಜಕಾರಣದಲ್ಲಿ ಸಿದ್ದರಾಮಯ್ಯ ಒಂದು ಪ್ರಮುಖ ಶಕ್ತಿಯಾಗಿ ಕಾಣುತ್ತಿದ್ದಾರೆ. ಕಾಂಗ್ರೆಸ್ಸನ್ನು ವೇದಿಕೆಯಾಗಿಸಿಕೊಂಡು ಅವರು ಕಳೆದ ವಿಧಾನಸಭೆ ಚುನಾವಣೆಯಿಂದ ಇಲ್ಲಿಯವರೆಗೆ ಪ್ರಯೋಗಿಸುತ್ತಿರುವ 'ಅಹಿಂದ' ರಾಜಕಾರಣದ ದಾಳ ಬಿಜೆಪಿ ಹಾಗೂ ಜೆಡಿಎಸ್ ಎರಡನ್ನು ಸಪ್ಪೆಯಾಗಿಸಿದೆ. ಮಾತ್ರವಲ್ಲ ಬಿಜೆಪಿಯಿಂದ ಸಿಡಿದು ಕೆಜೆಪಿ ಎಂಬ ಪ್ರಾದೇಶಿಕ ಪಕ್ಷವನ್ನು ರಚಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಟವನ್ನು ಕಟ್ಟಿ ಹಾಕಿದೆ. ಜನತಾ ಪರಿವಾರದಿಂದ ವಲಸೆ ಬಂದವರೆಂಬ ಪಟ್ಟ ಹೊತ್ತಿದ್ದರೂ ಬದಲಾದ ಪರಿಸ್ಥಿತಿಯಲ್ಲಿ ಅವರನ್ನು ಸಹಿಸಿಕೊಳ್ಳುವುದು ಮೂಲ ಕಾಂಗ್ರೆಸಿಗರಿಗೆ ಅನಿವಾರ್ಯವಾಗಿದೆ. ಆದರೆ ಇದು ಸಿದ್ದರಾಮಯ್ಯನವರನ್ನು ಬೆಳೆಸಿದ ಪರಿವಾರದ ಮುಖಂಡರಿಗೆ ಕಹಿಯಾಗಿದೆ. ಜತೆಗೆ ಅವರು ಒಂದಾದ ಮೇಲೊಂದರಂತೆ ತೇಲಿ ಬಿಡುತ್ತಿರುವ ಜನಪ್ರಿಯ ಯೋಜನೆಗಳ ಪ್ರವಾಹ ತಮ್ಮನ್ನು ಕೊಚ್ಚಿಕೊಂಡು ಹೋಗಬಹುದು ಎಂಬ ಭಯ ಬಿಜೆಪಿಯನ್ನು ಆವರಿಸಿದೆ. ಕಾಂಗ್ರೆಸ್ ಎಂಬ ಬಲಾಡ್ಯ ವೃಕ್ಷದ ಮೇಲೆ ಕುಳಿತ ಸಿದ್ದರಾಮಯ್ಯ ಮುಂಬರುವ ದಿನಗಳಲ್ಲಿ ತಮ್ಮೆಲ್ಲರನ್ನೂ ಆಪೋಶನ ತೆಗೆದುಕೊಳ್ಳಬಹುದೆಂಬ ಆತಂಕ ಉಳಿದೆಲ್ಲ ಪಕ್ಷಗಳನ್ನು ಹಾಗೂ ಮುಖಂಡರನ್ನು ಕಾಡುತ್ತಿದೆ. ಇದರ ಫಲವೇ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಯ ರೂಪದಲ್ಲಿ ಜನ್ಮ ತಾಳಿದೆ. ಅಷ್ಟು ಮಾತ್ರವಲ್ಲ ಯಡಿಯೂರಪ್ಪ ನೇತೃತ್ವದ ಕೆಜೆಪಿ ಹಾಗೂ ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ಸನ್ನು ಇದರೊಳಗಡೆ ಸೇರಿಸಿಕೊಳ್ಳುವ ಪ್ರಯತ್ನಕ್ಕೆ ಚಾಲನೆ ನೀಡಿದೆ.
ಹಾಗೆ ನೋಡಿದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ ಪ್ರತಿಪಕ್ಷಗಳನ್ನು ಇಷ್ಟು ಬೇಗ ಒಂದೇ ತಕ್ಕಡಿಯಲ್ಲಿ ತಂದಿರಿಸುತ್ತದೆ ಎಂಬ ಕನಸನ್ನು ಯಾರೂ ಕಂಡಿರಲಿಲ್ಲ. ಏಕೆಂದರೆ ಐದು ವರ್ಷದ ಹಿಂದೆ ಕರ್ನಾಟಕದ ರಾಜಕೀಯ ಚಿತ್ರಣ ಅಂಥದೊಂದು ವಾತಾವರಣವನ್ನೇ ನಿರ್ಮಾಣ ಮಾಡಿತ್ತು. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಊಹೆಗೂ ನಿಲುಕದ ರೀತಿಯಲ್ಲಿ ಉರುಳಿಸಿದ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಮೈತ್ರಿ ಸಾಧಿಸಿ ಟ್ವೆಂಟಿ-20 ಸರ್ಕಾರವನ್ನು ರಚಿಸಿದ್ದರು. ಆಗ ಈ ಮೈತ್ರಿಯನ್ನು ಇದೇ ದೇವೇಗೌಡರು ಕಟು ಶಬ್ದದಲ್ಲಿ ಖಂಡಿಸಿದ್ದರು. ಮಾತ್ರವಲ್ಲ ತಮ್ಮ ರಾಜಕೀಯ ಉತ್ತರಾಧಿಕಾರಿ ಕುಮಾರಸ್ವಾಮಿ ಅವರ ವಿರುದ್ಧ ಕೋಪಿಸಿಕೊಂಡಿದ್ದರು. ಇದು ತಮ್ಮ ಜಾತ್ಯತೀತ ತತ್ವ, ಸಿದ್ಧಾಂತಕ್ಕೆ ಸಲ್ಲದ ಮೈತ್ರಿ ಎಂದಿದ್ದರು. ಆದರೆ ಕೆಲವೇ ದಿನಗಳಲ್ಲಿ ತಮ್ಮ ಕುಮಾರ ಕಂಠೀರವನ ಆಡಳಿತಕ್ಕೆ ಭೇಷ್ ಎಂದು ಇಷ್ಟು ದಿನ ಮಾಡಿಕೊಂಡಿದ್ದು ಹುಸಿಮುನಿಸೇ ? ಎಂಬ ಅನುಮಾನ ಬರುವಂತೆ ವರ್ತಿಸಿದ್ದರು.
ಆದರೆ ಕುಮಾರಸ್ವಾಮಿ ಅವರ ಅಧಿಕಾರಾವಧಿ ಮುಗಿಯುವ ಹೊತ್ತಿಗೆ ಮತ್ತೆ ದೇವೇಗೌಡರ ಮನಸ್ಸಿನಲ್ಲಿ ಸುಪ್ತವಾಗಿದ್ದ ಜಾತ್ಯತೀತ ಪ್ರಜ್ಞೆ ಮತ್ತೆ ಮಿಟುಕಾಡಲಾರಭಿಸಿತು. ಪರಿಣಾಮವಾಗಿ ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದೇ ನಿರಾಸೆಗೊಳಿಸಿದರು. ಈ ನಂಬಿಕೆ ದ್ರೋಹ, ವಚನ ಭ್ರಷ್ಟತೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ ಬಿಜೆಪಿ ಅಧಿಕಾರಕ್ಕೆ ಬಂತು. ಕಳೆದ ಐದು ವರ್ಷದಿಂದಲೂ ಬಿಜೆಪಿ ನಾಯಕರನ್ನು ದುಃಸ್ವಪ್ನದಂತೆ ಕಾಡಿದ ಕುಮಾರಸ್ವಾಮಿ ಹಾಗೂ ದೇವೇಗೌಡರು, ಇನ್ನು ಮುಂದೆ ಈ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಕನಸಿನ ಮಾತು ಎಂಬ ಸ್ಥಿತಿ ನಿರ್ಮಾಣವಾಗುವುದಕ್ಕೆ ಕಾರಣರಾದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡರೂ ಅವಕಾಶ ಸಿಕ್ಕಾಗಲೆಲ್ಲ ಜೆಡಿಎಸ್‌ನ ಅವಕಾಶವಾದಿ ರಾಜಕಾರಣವನ್ನು ಟೀಕಿಸುತ್ತಾ ತಾವು ತತ್ವದ ಆಧಾರದ ಮೇಲೆ ರಾಜಕಾರಣ ಮಾಡುತ್ತೇವೆ ಎಂಬ ಸ್ಲೋಗನ್ನನ್ನು ತೂರಿ ಬಿಟ್ಟಿದ್ದರು. ಆದರೆ ಈಗ ಅದೆಲ್ಲವೂ ಒಂದು ಭ್ರಮಾಲೋಕದಲ್ಲಿನ ಘಟನೆ ಎಂಬಂತೆ ಉಭಯ ಪಕ್ಷದ ನಾಯಕರು ವರ್ತಿಸುತ್ತಿದ್ದಾರೆ. ಅವಕಾಶವಾದಿ ರಾಜಕಾರಣದ ಮುಂದೆ ಇದೆಲ್ಲವೂ ಗೌಣವಾಗಿ ಬಿಟ್ಟಿದೆ.
ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಗಮನಾರ್ಹ ಅಂಶವೆಂದರೆ ದೇವೇಗೌಡರ ದಿವ್ಯ ಮೌನ. ರಾಜಕಾರಣದ ಹೊರಮನೆಯಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಅವರು ತಿಳಿದು, ತಿಳಿಯದಂತೆ ಇದ್ದಾರೆ. ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡ ಕಾರಣಕ್ಕೆ ತಮ್ಮ ಕುಮಾರನ ವಿರುದ್ಧ ಗುಟುರು ಹಾಕಿದ್ದ ಅವರ ಮಾತುಗಳು ಈಗ ಎಲ್ಲಿ ಹೋದವು ? ಎಂಬ ಅನುಮಾನ ಕಾಡುವಂತೆ ವರ್ತಿಸುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಖುದ್ದು ಕುಮಾರಸ್ವಾಮಿ ಅವರೇ ಬಿಜೆಪಿ ಮುಖಂಡರನ್ನು ಭೇಟಿ ಮಾಡಿರುವುದು ಕಂಡೂ ಕಾಣದಂತೆ ಇದ್ದಾರೆ.
ಇದೆಲ್ಲವನ್ನೂ ಗಮನಿಸಿದವರಿಗೆ ಏಕೆ ಹೀಗೆ ? ಏನೀ ರಾಜಕೀಯದಾಟದ ಗುಟ್ಟು? ಎಂಬ ಪ್ರಶ್ನೆ ಮೂಡಿದರೆ, ಅದಕ್ಕೆ ದೊರೆಯುವ ಸರಳ ಉತ್ತರ ಅಸ್ಥಿತ್ವದ ಪ್ರಶ್ನೆ !
ಹೌದು. ಸ್ಥಿತ್ಯಂತರಗೊಂಡ ರಾಜ್ಯ ರಾಜಕಾರಣ ಬಿಜೆಪಿ, ಜೆಡಿಎಸ್, ಕೆಜೆಪಿ ಹಾಗೂ ಬಿಎಸ್‌ಆರ್ ಪಕ್ಷಕ್ಕೆ ಅಸ್ಥಿತ್ವ ಉಳಿಸಿಕೊಳ್ಳುವ ಸವಾಲನ್ನು ಒಡ್ಡಿದೆ. 120 ಶಾಸಕರ ಬಲದೊಂದಿಗೆ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಿರುವ ಕಾಂಗ್ರೆಸ್‌ಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಛಿದ್ರಗೊಂಡ ಪ್ರತಿಪಕ್ಷಗಳನ್ನು ಮೆಟ್ಟಿ ನಿಲ್ಲುವುದು 'ಶ್ವಾಸೋಚ್ವಾಸ' ಪ್ರಕ್ರಿಯೆಯಷ್ಟೇ ಸುಲಭ. 2014ರಲ್ಲಿ ಎದುರಾಗುವ ಲೋಕಸಭಾ ಚುನಾವಣೆಯನ್ನು ಬಿಟ್ಟರೆ ಕಾಂಗ್ರೆಸ್ಸನ್ನು ಸದೆಬಡಿಯುವ ಮತ್ಯಾವ ಸುವರ್ಣಾವಕಾಶವೂ ಪ್ರತಿಪಕ್ಷಗಳ ಮುಂದೆ ಇಲ್ಲ. ಆದರೆ ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಕುದುರೆ ಧಾವಿಸುತ್ತಿರುವ ವೇಗಕ್ಕೆ ಕಡಿವಾಣ ಹಾಕಬೇಕಿದ್ದರೆ, ಅದು ಮುಂದಿಡುವ ಸವಾಲನ್ನು ನಿಗ್ರಹಿಸಬೇಕಿದ್ದರೆ ಬಿಡಿ ಬಿಡಿಯಾಗಿರುವ ಪ್ರತಿಪಕ್ಷಗಳ ಶಕ್ತಿ ಸಾಲುವುದೇ ಇಲ್ಲ. ಹೀಗಾಗಿ ಮೈತ್ರಿ ಅನಿವಾರ್ಯ ಎನಿಸಿದೆ.
ಅದರ ಜತೆಗೆ ಕಳೆದೊಂದು ದಶಕದಿಂದ ರಾಷ್ಟ್ರವನ್ನು ಆಳುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ದೇಶದ ಎಲ್ಲ ಭಾಗಗಳಲ್ಲೂ ವಿರೋಧದ ಅಲೆ ಏಳುತ್ತಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಸೃಷ್ಟಿಯಾಗಿರುವ ಪ್ರತಿಕೂಲ ಹವಾಮಾನದ ಲಾಭವನ್ನು ಪಡೆದು ದಿಲ್ಲಿಗದ್ದುಗೆ ಏರುವುದಕ್ಕೆ ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಆದರೆ ಏಕಪಕ್ಷೀಯವಾಗಿ ಇದು ಅಸಾಧ್ಯ. ಹೀಗಾಗಿ ಕಾಶ್ಮೀರದಿಂದ ಕೇರಳದವರೆಗೆ ಹೊಸ ಮೈತ್ರಿಯ ಶೋಧದಲ್ಲಿರುವ ಬಿಜೆಪಿ ಪ್ರಾದೇಶಿಕ ಮಟ್ಟದಲ್ಲಿ ಬಲ ಹೊಂದಿರುವ ಸಣ್ಣಪುಟ್ಟ ಕಾಂಗ್ರೆಸ್ಸೇತರ ಶಕ್ತಿಗಳನ್ನು ಒಟ್ಟಾಗಿಸಲು ಮುಂದಾಗಿದೆ. ಬಿಜೆಪಿಯ ಪ್ರಚಾರ ಸಾರಥ್ಯದ ಜವಾಬ್ದಾರಿ ಹೊತ್ತಿರುವ, ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಬಿಜೆಪಿಯ ಎಲ್ಲ ರಾಜ್ಯ ಘಟಕಗಳಿಗೂ ಈ ಸಂದೇಶವನ್ನು ರವಾನಿಸಿದ್ದಾರೆ. ಕಮಲಪಕ್ಷದ ದೆಹಲಿ ಪ್ರಯಾಣದ ಕನಸು ನನಸಾಗಬೇಕಿದ್ದರೆ ಅದಕ್ಕೆ ಒಂದೊಂದು ಲೋಕಸಭಾ ಕ್ಷೇತ್ರದ ಸ್ಥಾನವೂ ತುಂಬಾ ಬೆಲೆ ಬಾಳುವಂತದ್ದು. ಹೀಗಾಗಿ ಎಲ್ಲೆಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆಯೋ, ಆ ಎಲ್ಲ ರಾಜ್ಯಗಳಲ್ಲಿ ಪ್ರತಿಪಕ್ಷಗಳ 'ಸಂಯೋಜನೆ'ಗೆ ಸೂಚನೆ ನೀಡಿದ್ದಾರೆ.
ದಕ್ಷಿಣದ ಉಳಿದ ರಾಜ್ಯಗಳಲ್ಲಿ ಈ ಮಹಾಮೈತ್ರಿ ಯಶಸ್ವಿಯಾಗದಿದ್ದರೂ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‌ಗೆ ಆತಂಕ ತರುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಅಹಿಂದ ಮತದೊಂದಿಗೆ ಆಟವಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಕ್ಕಲಿಗರ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಕಡಿವಾಣ ಹಾಕಬಲ್ಲದು. ಅದೇ ರೀತಿ ವೀರಶೈವರೂ ಒಳಗೊಂಡಂತೆ ಮೇಲು ವರ್ಗದವರ ಪಕ್ಷ ಎಂದೇ ಪರಿಗಣಿಸಲ್ಪಿಟ್ಟಿರುವ ಬಿಜೆಪಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ತಡೆಗೋಡೆ ನಿರ್ಮಿಸಬಲ್ಲದು. ಈ ಲೆಕ್ಕಾಚಾರದ ಆಧಾರದ ಮೇಲೆ ಮುಂದಿನ ಲೋಕಸಭಾ ಚುನಾವಣೆಯ 28 ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಸೀಟು ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶವನ್ನು ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರುಚುನಾವಣೆಯ ಮೈತ್ರಿ ತೆರೆದಿಟ್ಟಿದೆ. ತನ್ನ ಸೈದ್ಧಾಂತಿಕ ವೈರಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ವೈಯಕ್ತಿಕ ಶತ್ರು ಸಿದ್ದರಾಮಯ್ಯನವರ ಮೇಲೆ ಮೇಲುಗೈ ಸಾಧಿಸುವುದಕ್ಕೆ ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಇದಕ್ಕೆ ಆಧಾರ 'ರಾಜಕಾರಣದಲ್ಲಿ ಯಾರೂ ಶಾಶ್ವತ ವೈರಿಗಳಲ್ಲ' ಎಂಬ ಹಳೇ ಸವಕಲು ಸಿದ್ಧಾಂತ!!
ಲಗೋರಿ: ಆಡುವ ಮಾತೆಲ್ಲವೂ ನಿಜವೇ ಆದರೆ ಸುಳ್ಳೆಂಬ ಶಬ್ದ ಎಲ್ಲಿರುತ್ತಿತ್ತು ?

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com