ಗಲ್ಲಿಗಲ್ಲಿಗೆ ಬೇಕಾದುದು ದೇವಾಲಯಗಳಲ್ಲ, ಶೌಚಾಲಯಗಳು!
ಇಂದು ನಮ್ಮ ವೈಯಕ್ತಿಕ, ಸಾಂಸಾರಿಕ, ಸಾಮಾಜಿಕ ಹಾಗೂ ರಾಷ್ಟ್ರೀಯ ಜನ ಜೀವನಗಳು ತಾಳ ತಪ್ಪಿ ಹಳಿ ಬಿಟ್ಟು ಮೇರೆ ಮೀರಿ ಅಸ್ತವ್ಯಸ್ತವಾಗಲು, ಹಲವಾರು ಕಾರಣಗಳ ಜೊತೆಗೆ ನಮ್ಮನ್ನು ಆವರಿಸಿರುವ ಮೂಢನಂಬಿಕೆಗಳು ಮತ್ತು ಮೂಲಭೂತ ಸೌಕರ್ಯಗಳ ಕೊರತೆಗಳೂ ಕಾರಣ. ಒಂದು ಕಡೆ ನಾಗಾಲೋಟದಿಂದ ಮುಂದುವರಿಯುತ್ತಿರುವ ವಿಜ್ಞಾನ, ಇನ್ನೊಂದೆಡೆ ಅದರ ಜೊತೆಯಲ್ಲೇ ಬೆಳೆಯುತ್ತಿರುವ ಮೂಢನಂಬಿಕೆಗಳ ಆಚರಣೆಗಳು. ಮತ್ತೊಂದೆಡೆ ಅದನ್ನು ನುಂಬುವ ಎಡಬಿಡಂಗಿಗಳು. ದೇವರು, ಜಾತಿ-ಮತ, ಧರ್ಮ, ಭೂತ-ಪ್ರೇತ, ಜನ್ಮ-ಪುನರ್ಜನ್ಮ, ವಾಸ್ತು-ಜ್ಯೋತಿಷ್ಯ, ಶಕುನ-ಅಶುಭ, ಮಡಿ-ಮೈಲಿಗೆ, ಮುಹೂರ್ತ ಇನ್ನೂ ಲೆಕ್ಕವಿಲ್ಲದಷ್ಟು ವಿಷಯಗಳಿಗೆ ನಮ್ಮದೇ ಆದ ವ್ಯಾಖ್ಯಾನ ವಿಶ್ಲೇಷಣೆಗಳನ್ನು ಕೊಟ್ಟು, ಸಂಬಂಧ-ನಿರ್ಬಂಧಗಳನ್ನು ವಿಧಿಸಿ, ವೈಭವೀಕರಿಸಿ ಈ ಕಟ್ಟುನಿಟ್ಟಿನೊಳಗೆ ಬದುಕುವ ಪಾಡು ನಮ್ಮದಾಗಿದೆ. ಈ ಪ್ರಕ್ರಿಯೆಯಲ್ಲಿ ಅವಿದ್ಯಾವಂತರ ಜೊತೆ ವಿದ್ಯಾವಂತರೂ ಸೇರಿಕೊಂಡಿರುವುದು ದುರದೃಷ್ಟಕರ. ಹೀಗಾಗಲು ಕಾರಣ 'ವಿದ್ಯೆಗೂ ವಿಚಾರವಂತಿಕೆಗೂ ವ್ಯತ್ಯಾಸವಿದೆ' ಎಂಬ ಕಟುಸತ್ಯ. ಕಾರಣ ಶಿಕ್ಷಣ-ಸಂಸ್ಕಾರ-ವೈಚಾರಿಕತೆ ಎಲ್ಲವೂ ಭಿನ್ನ ಭಿನ್ನವಾದ ಪ್ರಕ್ರಿಯೆಗಳು. ಎಲ್ಲಿಯವರೆಗೆ ಜನರಲ್ಲಿ ಜ್ಞಾನದ, ಸಂಸ್ಕಾರದ, ವೈಚಾರಿಕತೆಯ, ವೈಜ್ಞಾನಿಕ ಮನೋಭಾವದ ಕೊರತೆ ಇದೆಯೋ, ಕಟ್ಟು ಕಟ್ಟಳೆಗಳನ್ನು, ಸಂಪ್ರದಾಯಗಳನ್ನು ಮೂಢನಂಬಿಕೆಗಳನ್ನು ಪ್ರಶ್ನಿಸಿ ಸತ್ಯಾಸತ್ಯತೆಗಳನ್ನು ಆಚೆಗೆ ಹೊರಹಾಕುವ ಎದೆಗಾರಿಕೆ ಇಲ್ಲವೋ, ಅಲ್ಲಿಯವರೆಗೆ ಮೂಢನಂಬಿಕೆಗಳದ್ದೇ ಮೇಲುಗೈ.
ವೈಜ್ಞಾನಿಕ ಆಧಾರಗಳಿಲ್ಲದ ಮೂಢನಂಬಿಕೆಗಳಿಗೆ ವೈಚಾರಿಕತೆಯೊಂದೇ ಇತಿಶ್ರೀ ಹಾಡಬಲ್ಲದು. ತನ್ನ ಮಗುವಿಗೆ ಕುಡಿಸಲು ತೊಟ್ಟು ಹಾಲಿಲ್ಲದ ತಾಯಿ, ಸಾಲ ಮಾಡಿಯಾದರೂ ಸರಿ ಲೋಟ ಹಾಲನ್ನು ನಾಗರ ಪಂಚಮಿ ದಿನದಂದು ಹಾವಿಲ್ಲದ ಹುತ್ತದ ಮೇಲೆ, ಇಲ್ಲವೇ ಕಲ್ಲು ನಾಗನ ಮೇಲೆ ಸುರಿದರೆ ಏನು ಪುರುಷಾರ್ಥ? ಚಮಚ ತುಪ್ಪವನ್ನು ತಿನ್ನದ ಕೋಟ್ಯಂತರ ಬಡ ಮಕ್ಕಳು ಇರುವಾಗ ವಿಶ್ವ ಶಾಂತಿಗಾಗಿ ಲೋಕಕಲ್ಯಾಣಕ್ಕಾಗಿ ಡಬ್ಬಿ ಡಬ್ಬಿ ತುಪ್ಪವನ್ನು ಹೋಮ ಕುಂಡಕ್ಕೆ ಸುರಿದರೆ ಯಾರ ಕಲ್ಯಾಣವಾಯಿತು? ಉಡಲು ತುಂಡು ಬಟ್ಟೆಯೇ ಇಲ್ಲದ ಅಸಂಖ್ಯಾತ ಬಡವರು ಇರುವ ಈ ನಾಡಿನಲ್ಲಿ ರೇಷ್ಮೆ ಸೀರೆಗಳನ್ನೇ ಹೋಮ ಕುಂಡಕ್ಕೆ ಹಾಕಿ ಸುಟ್ಟರೆ ಏನು ಬಂತು? ಪಿತೃಕಾರ್ಯವೆಂದರೆ, ಅವರು ಸತ್ತ ಮೇಲೆ ಒದ್ದೆ ಉಟ್ಟುಕೊಂಡು ಮಡಿಯಿಂದ ಮಾಡುವ ಕ್ರಿಯೆ ಹಾಗೂ ತದನಂತರ ಮಾಡುವ ವಡೆ-ಪಾಯಸದ ಭರ್ಜರಿ ಊಟಕ್ಕಿಂತಲೂ, ಅವರು ಜೀವಂತವಾಗಿರುವಾಗಲೇ ಶ್ರದ್ಧೆಯಿಂದ ಮಾಡುವ ಅವರ ಸೇವೆಯೇ ನಿಜವಾದ ಶ್ರಾದ್ಧವೆನಿಸದೆ? ಅಕ್ಷಯ ತದಿಗೆಯ ದಿನವೇ ಚಿನ್ನವನ್ನು ಖರೀದಿಸಿದವರಿಗೆಲ್ಲ ಶುಭವಾಯಿತೇ? ಖರೀದಿಸಲು ಸಾಧ್ಯವಾಗದವರಿಗೆಲ್ಲ ಅಶುಭವಾಯಿತೇ?
ನಿಜವಾಗಿ ಶುಭವಾಗಿದ್ದು ಚಿನ್ನದ ವ್ಯಾಪಾರಿಗಲ್ಲವೇ? ಅಂದ ಮೇಲೆ ಚಿನ್ನದ ಬೆಲೆ ಕಡಿಮೆ ಇರುವ ದಿನವೇ ಅಕ್ಷಯತದಿಗೆಯಾಗಬೇಕಲ್ಲವೇ! ಸಾಲ ಮಾಡಿಯಾದರೂ ಅಕ್ಷಯ ತದಿಗೆ ದಿನವೇ ಚಿನ್ನ ಕೊಂಡುಕೊಳ್ಳುವುದು ಮೂಢನಂಬಿಕೆಯಲ್ಲವೇ? 'ಬದಲಿಪನೆ ಜ್ಯೋತಿಷ್ಯನು ನಿಮ್ಮ ಗ್ರಹಗತಿಯನು?' ಎಂದು ಡಿ.ವಿ.ಜಿ.ಯವರು ಕೇಳಿದಂತೆ, ಬಹುಭಾಗ ಬುರುಡೆ ಬಿಡೋದನ್ನೆ ಹೊಟ್ಟೆಯ ಪಾಡಿಗೆ ಒಂದು ವೃತ್ತಿಯನ್ನಾಗಿ ಮಾಡಿಕೊಂಡ ಜಾತಕ ಹೇಳುವ ಜ್ಯೋತಿಷಿಗಳಿಂದ ನಮ್ಮ ಹಣೆ ಬರಹವನ್ನು ಬದಲಾಯಿಸಲಾದೀತೇ? ಭಗವಂತ ನಮಗೆ ಹಣೆಯನ್ನು ಮಾತ್ರ ಕೊಟ್ಟ. ನಮ್ಮ ಹಣೆಬರಹವನ್ನು ಬರೆಯಬೇಕಾದವರು ನಾವೇ ಅಲ್ಲವೇ?
ರಾಜಕಾರಣಿಗಳಂತೂ ನಾಮಪತ್ರ ಸಲ್ಲಿಕೆಯಿಂದ ಹಿಡಿದು, ಪ್ರಮಾಣವಚನದವರೆಗೂ ಶುಭಮುಹೂರ್ತಗಳಿಗಾಗಿ ಕಾಯುತ್ತಿರುತ್ತಾರೆ. ಶುಭ ಮುಹೂರ್ತದಲ್ಲಿ ಅಧಿಕಾರವಹಿಸಿಕೊಂಡವರು ಮತ್ತೆ ಅಧಿಕಾರ ಕಳೆದುಕೊಂಡಿಲ್ಲವೇ? ಬಿದ್ದು ಮಣ್ಣಾಗಿಲ್ಲವೇ? ಕೆಲಸ ಕಾರ್ಯಗಳ ಯಶಸ್ಸು, ಅಧಿಕಾರದ ಮುಂದುವರಿಕೆ ನಮ್ಮ ಕ್ರಿಯಾಶಕ್ತಿ, ಜ್ಞಾನಶಕ್ತಿ, ಅರಿವು- ಆಸಕ್ತಿ ಹಾಗೂ ಪ್ರಾಮಾಣಿಕ ಪ್ರಯತ್ನಗಳ ಮೇಲೆ ಅವಲಂಬಿತವಾಗಿದೆಯೇ ಹೊರತು ಮುಹೂರ್ತಗಳ ಮೇಲೆ ಅಲ್ಲವಲ್ಲ! ಲಕ್ಕಿ ನಂಬರ್ಸ್ನಂಥ ಸಣ್ಣಪುಟ್ಟ ವಿಚಾರಗಳಿಂದ ಹಿಡಿದು, ಮಡೆ ಸ್ನಾನ, ಪ್ರಾಣಿ ಬಲಿಯಂಥ ದೊಡ್ಡ ಆಚರಣೆಗಳೆಲ್ಲವನ್ನೂ ನಂಬಿಕೆಗಳ ಕೈಗೆ ಒಪ್ಪಿಸಿಬಿಟ್ಟರೆ ನಮ್ಮ ವಿಚಾರವಂತಿಕೆ ಕೆಲಸ ಮಾಡೋದು ಯಾವಾಗ?
ದೇವರ ವಿಚಾರವನ್ನೇ ತೆಗೆದುಕೊಳ್ಳೋಣ. ದೇವರ ವಿಚಾರದಲ್ಲಿ ಎಷ್ಟೊಂದು ಮೂಢನಂಬಿಕೆಗಳು! ಈ ಬಗ್ಗೆ ಜೋರಾಗಿ ಮಾತಾಡಿದರೆ ಹಲವರ ವಿರೋಧಕ್ಕೆ ಗುರಿಯಾಗಬೇಕಾದೀತು. ಹಾಗೆಂದು ನಾನೇನೂ ನಾಸ್ತಿಕನಲ್ಲ. ನನಗೂ ದೇವರ ಮೇಲೆ ಭಕ್ತಿ ಇದೆ, ಭಯವಿಲ್ಲ. ನಂಬಿಕೆ ಇದೆ ಮೂಢ ನಂಬಿಕೆಗಳಿಲ್ಲ. ನನ್ನ ದೇವರೇ ಇತರರ ದೇವರೂ ಆಗಬೇಕೆಂಬ ಹಠವೂ ಇಲ್ಲ. ನಿಜವಾಗಿ ನೋಡಿದರೆ ದೇವರನ್ನು ಕಂಡವರು ಯಾರೂ ಇಲ್ಲ, ಕಂಡವರನ್ನು ಕಂಡವರೂ ಇಲ್ಲ, 'ನಂಬಿದವರಿಗೆ ಕಲ್ಲು ಕೂಡಾ ದೇವರೇ, ನಂಬದವರಿಗೆ ದೇವರು ಕೂಡಾ ಕಲ್ಲೇ!' ಈ ದ್ವಂದ್ವದಲ್ಲಿ ಸಿಲುಕಿಕೊಂಡ ಜನರಿಗೆ ದೇವರ ಅಸ್ತಿತ್ವವನ್ನೇ ಧಿಕ್ಕರಿಸುವಷ್ಟು ಧೈರ್ಯವೂ ಇಲ್ಲ, ಒಪ್ಪಿಕೊಳ್ಳುವಷ್ಟು ವೈಚಾರಿಕತೆಯುಕ್ತವಾದ, ವೈಜ್ಞಾನಿಕವಾದ ಆಧಾರಗಳೂ ಇಲ್ಲ. ಹೆಚ್ಚಿನವರಿಗೆ ದೇವರ ಮೇಲೆ ಇರೋದು ಭಯ-ಭಕ್ತಿಯಲ್ಲ! ಸ್ವಾರ್ಥದೃಷ್ಟಿ ನಿಸ್ವಾರ್ಥ ಸೇವೆಯಲ್ಲ! ಇದೆಲ್ಲದರ ಫಲಶ್ರುತಿ, ನಂಬಲೇಬೇಕಾದ ಸತ್ಯಗಳನ್ನು ತಳ್ಳಿ, ತುಳಿದು ಮೆರೆದಾಡುತ್ತಿರುವ ಅಂಧ ವಿಶ್ವಾಸಗಳು, ಮೂಢನಂಬಿಕೆಗಳು. 'ನಾವು ನಂಬಿದ್ದೇವೆ , ಆದುದರಿಂದ ಅದು ಸತ್ಯ' ಅನ್ನುವ ಹಠಕ್ಕಿಂತ 'ಇದು ಸತ್ಯ, ಆದುದರಿಂದ ನಾವು ನಂಬಿದ್ದೇವೆ' ಎನ್ನುವ ಧೋರಣೆ ಹಿತಕರವಲ್ಲವೇ? ವೈಜ್ಞಾನಿಕವಲ್ಲವೇ?
ಈ ನಮ್ಮ ದೇಶದಲ್ಲಿ ಎಷ್ಟೊಂದು ದೇವರುಗಳು! ಆ ದೇವರುಗಳಿಗೆ ಎಷ್ಟೊಂದು ಹೆಸರುಗಳು? ರೂಪಗಳು, ಗುಡಿ ಮಂದಿರಗಳು! ಆಸ್ತಿಕರಿಗೆ ಅನುಕೂಲವಾಗುವಂತೆ ಊರಿಗೊಂದು ದೇವಾಲಯವಿರಲಿ. ಆ ದೇವಾಲಯದಲ್ಲಿ ಎಲ್ಲಾ ದೇವರುಗಳ ಸ್ಥಾಪನೆಯಾಗಲಿ. ಊರುಗಳೇ ಇಲ್ಲದ ಪೇಟೆ, ಪಟ್ಟಣಗಳಲ್ಲಿ ಬಡಾವಣೆಗೊಂದು ಮಂದಿರವಿದ್ದರೆ ಸಾಕಲ್ಲವೇ? ಓಡಾಡಲೂ ಜಾಗವಿಲ್ಲದ ಜನನಿಬಿಡ ಪ್ರದೇಶಗಳಲ್ಲಿ, ವಾಸ್ತವ್ಯಕ್ಕೂ, ವಾಹನ ಸಂಚಾರಕ್ಕೂ ಅಡ್ಡಿಯಾಗುವಂಥ ಗಲ್ಲಿಗಲ್ಲಿಗಳಲ್ಲಿ ದೇವಾಲಯಗಳು ಏಕೆ ಬೇಕು? ಮಾರ್ಗದ ಬದಿಗಳಲ್ಲಿ, ಸಂಧಿಗಳಲ್ಲಿ, ಗುಡಿಗಳು! ಮಾರ್ಗದಲ್ಲಿ ನಿಂತುಕೊಂಡೇ ನಮಸ್ಕಾರ ಹೊಡೀಬೇಕು. ಪ್ರದಕ್ಷಿಣೆ ಹಾಕಲಂತೂ ಜಾಗವೇ ಇಲ್ಲ. ಆದರೆ ದಕ್ಷಿಣೆಗೆ ಕೈಯೊಡ್ಡಿ ಕಾಯುತ್ತಿರುವ ಪೂಜಾರಿಗಳಂತೂ ಇದ್ದೇ ಇರುತ್ತಾರೆ. ಗುಡಿಯ ಸುತ್ತ ಕೊಳೆತು ನಾರುವ ಕಸದ ರಾಶಿ, ದೇವರಿಗೆ ಹಾಕಿದ ಹಳೇ ಹೂಮಾಲೆಗಳು, ಮಲಗಿರುವ ಬೀದಿ ನಾಯಿಗಳು, ಸೆಗಣಿ ಹಾಕುವ ಹಸುಗಳು-ಭಗವದ್ ಭಕ್ತರಿಗೆ ಭಕ್ತಿ ಎಲ್ಲಿಂದ ಬರಬೇಕು. ಆ ಗುಡಿಯೊಳಗೆ ಜಡಿದ ಬೀಗದ ಭದ್ರತೆಯಲ್ಲಿ, ತಪ್ಪಿತಸ್ಥನಂತೆ ಸದಾ ನಿಂತಿರಲು, ಅಲ್ಲೇ ಬಿದ್ದಿರಲು ದೇವರೇನು ನಮ್ಮ ದಾಸನೇ? ಕೈದಿಯೇ? ಉಸಿರಾಡಲು ಗಾಳಿಯ ಸಂಚಾರವೂ ಇಲ್ಲದ ಗರ್ಭಗುಡಿಯೊಳಗೆ ಕೂಡಿ ಹಾಕೋದು ನ್ಯಾಯ ಸಮ್ಮತವೇ? ಹೊರಲು ಭಾರವಾಗುವಷ್ಟು ಹಾರ ತುರಾಯಿಗಳನ್ನು ಹೇರಿ, ಸೆಖೆಯಾಗಿ ಬೆವರಿಳಿಯುವಷ್ಟು ಆರತಿ ಬೆಳಗಿಸಿ, ಕಿವಿ ಕಿವುಡಾಗುವಷ್ಟು ಹಾಡಿ ಹೊಗಳಿ, ತರತರದ ವಾದ್ಯಗಳನ್ನು ಒಮ್ಮೆಲೇ ಊದಿ ಅವನಿಗೆ ಕಷ್ಟ ಕೊಡೋದು ಎಷ್ಟು ಸಮಂಜಸ? ಕೊನೆಗೆ, ನಮಗೆ ಇಷ್ಟವಾದ ಭಕ್ಷ ಭೋಜ್ಯಗಳನ್ನು ಅವನ ಮುಖಕ್ಕೆ ತೋರಿಸಿ, ಮತ್ತೆ ನಾವೇ ಅವೆಲ್ಲವನ್ನೂ 'ಗುಳುಂ' ಮಾಡೋದು ದೇವರ ಪೂಜೆಯೇ? ಈ ಎಲ್ಲಾ ಹಿನ್ನೆಲೆಯಲ್ಲಿ, ದೇವರ ಕುರಿತಾದ ನಮ್ಮ ಭಾವನೆಗಳಲ್ಲಿ, ಕಲ್ಪನೆಗಳಲ್ಲಿ ಹಾಗೂ ಪೂಜಾ ವಿಧಾನಗಳಲ್ಲಿ ಬದಲಾವಣೆಗಳು ಬರಬೇಕಲ್ಲವೇ? 'ಐ ಹ್ಯಾವ್ ನಾಟ್ ಸೀನ್ ಗಾಡ್, ಬಟ್ ಐ ಹ್ಯಾವ್ ಎಕ್ಸಪೀರಿಯನ್ಸ್ಡ್ ಗಾಡ್ಲಿನೆಸ್' ಎಂಬ ಮಾತಿನಂತೆ, ಸದ್ಗುಣಗಳಲ್ಲಿ, ಸತ್ಕಾರ್ಯಗಳಲ್ಲಿ, ಮೌಲ್ಯಗಳಲ್ಲಿ ದೇವರನ್ನು ಕಾಣೋಣ. ಸರ್ವಾಂತರ್ಯಾಮಿಯಾದ ದೇವರಿಗೆ ಪ್ರತ್ಯೇಕವಾದ ಮಂದಿರಗಳು ಬೇಕಿಲ್ಲ, ಬೇಕಿದ್ದರೂ ಅವು ಎಲ್ಲಾ ಕಡೆ ಬೇಕಿಲ್ಲ, ಗಲ್ಲಿಗಲ್ಲಿಗೊಂದು ಖಂಡಿತಾ ಬೇಕಿಲ್ಲ. ಏಕಾಗ್ರತೆಯಿಂದ ಅವನ ಅಸ್ತಿತ್ವವನ್ನು ಅರಿತುಕೊಳ್ಳಲು, ಅನುಭವಿಸಲು, ಸಾಂಕೇತಿಕವಾಗಿ ಮೂರ್ತಿಯ ರೂಪದಲ್ಲಿ ಅವನನ್ನು ಪೂಜಿಸಲು ಊರಿಗೊಂದು ದೇವಾಲಯವಿದ್ದರೆ ಸಾಕು, ಅದು ಊರಾಚೆ ಇದ್ದರೆ ಇನ್ನೂ ಚೆನ್ನ.
ಅಂತೆಯೇ ಜನಸಾಮಾನ್ಯರಿಗೆ ಬೇಕಾದುದು ಮೂಲಭೂತ ಸಾಕರ್ಯಗಳು. ಪೇಟೆ ಪಟ್ಟಣಗಳಲ್ಲಂತೂ ಸಾಕಷ್ಟು ಸಂಖ್ಯೆಯಲ್ಲಿ ಶೌಚಾಲಯ, ಸ್ನಾನದ ಮನೆಗಳಿಲ್ಲದೆ ದಿನ ಬೆಳಗಾದರೆ ಪರದಾಡುವ ಜನರ ಪರಿಸ್ಥಿತಿಯನ್ನು ವಿವರಿಸಿ ಹೇಳಬೇಕೇ? ಕೆಲವು ಹಳ್ಳಿಗಳಲ್ಲಂತೂ ಸೂರ್ಯೋದಯಕ್ಕೆ ಮುನ್ನ, ಇಲ್ಲವೇ ಸೂರ್ಯಾಸ್ಥವಾದ ನಂತರ ಮಾತ್ರ ಮಹಿಳೆಯರು ಮಲಮೂತ್ರ ವಿಸರ್ಜನೆಗೆ ಬಯಲು ಕಡೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಇನ್ನು ಮೂತ್ರಾಲಯ, ಶೌಚಾಲಯ ಇಲ್ಲದಾಗ ಜನ ಸಿಕ್ಕ ಸಿಕ್ಕಲ್ಲಿ ಮಲ ಮೂತ್ರ ವಿಸರ್ಜನೆ ಮಾಡದೆ ಇನ್ನೇನು ಮಾಡುತ್ತಾರೆ? ಹೊಲಸು ಮಾಡಿದವರಿಗೆ ದಂಡ ವಿಧಿಸಬೇಕೆಂಬ ಸರ್ಕಾರದ ಸಂಕಲ್ಪ ಸ್ವಾಗತಾರ್ಹ. ಆದರೆ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕಾದುದು ಕೂಡ ಆದ್ಯ ಕೆಲಸವಲ್ಲವೇ? ಒಂದು ಕಡೆ ಎಲ್ಲರಿಗೂ ಅನ್ನ, ಆಶ್ರಯ, ಅಕ್ಷರ, ಆರೋಗ್ಯ ಎಂಬ ಭಾಷಣ. ನೋಡಿದರೆ ಯಾವೂದೂ ಇಲ್ಲ. ಅಂದಮೇಲೆ ಆರೋಗ್ಯವಂತ, ಸದೃಢ, ಸುಶಿಕ್ಷಿತ ಪ್ರಜೆಗಳ ನಿರ್ಮಾಣ ಹೇಗೆ ಸಾಧ್ಯ? ನಮಗೆ ಬೇಕಾದುದು ಆಶ್ವಾಸನೆಗಳಲ್ಲ ಅನುಷ್ಠಾನಗಳು, ಸಹಾನುಭೂತಿಯಲ್ಲ ಸಹಾಯಹಸ್ತ, ಕನಿಕರವಲ್ಲ ಕಾರ್ಯಾಚರಣೆ. ಈ ಹಿನ್ನೆಲೆಯಲ್ಲಿ, ಗಲ್ಲಿಗಲ್ಲಿಗೊಂದು ದೇವಾಲಯಗಳಿಲ್ಲದಿದ್ದರೂ ಪರವಾಗಿಲ್ಲ, ಶೌಚಾಲಯಗಳಂತೂ ಕಡ್ಡಾಯವಾಗಿ ಇರಲಿ!
(ಈ ಬರಹದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ-9341218234)
- ಡಾ. ಕೆ.ಪಿ. ಪುತ್ತೂರಾಯ
drputhuraya@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

