ಅಂಕಣಗಳು

ಬಡವರು ಅದೆಷ್ಟು ದಿನ ಸರ್ಕಾರದ ಹಂಗಿನಲ್ಲೇ ಬದುಕುವುದು?

Published On :

ಪ್ರಭು, ನಿನಗೆ ದೇವರಲ್ಲಿ ನಂಬಿಕೆ ಇಲ್ಲದಿರಬಹುದು. ಆದರೆ ರಾಜಾ ಪ್ರತ್ಯಕ್ಷ ದೇವರು ಎಂದು ನಂಬಿರುವ ಪ್ರಜೆಗಳು ವೈಯಕ್ತಿಕ ನೆಲೆಯಲ್ಲಿ ತಮ್ಮಿಷ್ಟದಂತೆ ಶಕ್ತಿಯೊಂದನ್ನು ಆರಾಧಿಸುತ್ತಾರೆ. ಅವರಿಗಾಗಿ ಮತ್ತು ಅದರಲ್ಲಿ ಅವರಿಗೆ ನಂಬಿಕೆ ಹುಟ್ಟುವ ರೀತಿಯಲ್ಲಿ ಮಂದಿರಗಳನ್ನು, ಪೂಜಾ ಸ್ಥಳಗಳನ್ನು ನಿರ್ಮಿಸು. ಆಗ ನಿನ್ನ ಆಡಳಿತ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ...
ಚತುರಮತಿ ಚಾಣಕ್ಯ ಅವರು ನಂದ ಕುಲಾಧಿಪತಿಗೆ ನೀಡಿದ ಈ ಮಾರ್ಗದರ್ಶನ ಅಂದು ಜಾರಿಗೆ ಬಾರದೇ ಹೋದರೂ ಇಂದು ಭಾರತದ ರಾಜಕಾರಣಿಗಳ ಮಟ್ಟಿಗೆ ವೇದವಾಕ್ಯ ಎನಿಸಿದೆ. ಜನತೆಯಲ್ಲಿ ಭ್ರಮೆ ಹುಟ್ಟಿಸಿ ತಾವು ಅಧಿಕಾರದ ಗದ್ದುಗೆಯಲ್ಲಿ ನಿಶ್ಚಿಂತೆಯಿಂದ ಹೇಗೆ ಮುಂದುವರಿಯಬೇಕು ಎನ್ನುವುದಕ್ಕೆ ಈ ಚಾಣಕ್ಯ ನೀತಿ ಭಗವದ್ಗೀತೆಯಾಗಿ ಪರಿಣಮಿಸಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅನುಸರಿಸುವ ಮಾರ್ಗ ಇದುವೇ. ಜನಪರ ಯೋಜನೆಯ ಹೆಸರಿನಲ್ಲಿ ಇದು ಆಗಾಗ ಮುಖ ಬದಲಿಸುತ್ತ ಸದಾ ಜಾರಿಯಲ್ಲಿ ಇರುತ್ತದೆ.
ಅಂದರೆ ಪ್ರಜೆಗಳನ್ನು ಭ್ರಮೆಯಲ್ಲೇ ಬದುಕುವಂತೆ ಮಾಡುವುದು. ದೊರೆ (ಆಡಳಿತಾರೂಢ ಸರ್ಕಾರ) ಏನೇ ಮಾಡಿದರೂ ನಮ್ಮ ಹಿತಕ್ಕಾಗಿಯೇ ಮಾಡುತ್ತಾನೆ ಎಂದು ಗಟ್ಟಿಯಾಗಿ ನಂಬುವುದು. ನಮ್ಮ ನೋವು- ಸಂಕಷ್ಟಗಳಿಗೆ ದೊಡ್ಡದಾದ ಕೈಯಿಂದ ನೆರವಾಗುತ್ತಾನೆ ಎಂದು ವಿಶ್ವಾಸ ಇಡುವುದು. ಅನ್ನ, ಬಟ್ಟೆ, ಆಸರೆ, ಆರೋಗ್ಯ, ಉದ್ಯೋಗ, ಅಕ್ಷರ ದಾಸೋಹ ನೀಡಿ ಸಲಹುತ್ತಾನೆ ಎನ್ನುವ ಹಂಗಿನ ಸಹಾಯವನ್ನು ಹಕ್ಕು ಎಂದು ಪರಿಭಾವಿಸಿ ಒಪ್ಪುವುದು.
ದಿವಂಗತ  ಇಂದಿರಾ ಗಾಂಧಿ ಅವರ ಗರೀಬಿ ಹಟಾವೋ ಯೋಜನೆಯಿಂದ ಇಂದಿನ ಸಿದ್ದರಾಮಯ್ಯ ಅವರ 1 ರುಪಾಯಿ ದರದಲ್ಲಿ 30 ಕೆಜಿ ಅಗ್ಗ ದರದ ಬಡವರಿಗೆ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯ ವರೆಗೆ ಈ ದೇಶದ ಆಡಳಿತ ಜನತೆಯಲ್ಲಿ ಭ್ರಮೆಯನ್ನೇ ಹುಟ್ಟಿಸುತ್ತ, ಸರ್ಕಾರದ ಹಂಗಿನಲ್ಲೇ ಜೀವನ ಸಾಗಿಸಿ ಎಂದು ಜನತೆಯನ್ನು ಒಪ್ಪಿಸುತ್ತಲೇ ಸಾಗಿದೆ. ಗರೀಬಿ ಹಟಾವೋ ಎಂದು ಕೂಗಿ ಹೇಳಿ ಮೂರು ದಶಕವಾಗುತ್ತ ಬಂದಿದ್ದರೂ ಅಂತ್ಯೋದಯ, ಅನ್ನಭಾಗ್ಯ, ಆಸರೆ, ವೃದ್ಧಾಪ್ಯ ವೇತನದಂಥ ಸಾಮಾಜಿಕ ಸಮಬಾಳಿನ ಯೋಜನೆಗಳು ಚಾಲ್ತಿಯಲ್ಲಿ ಇವೆ ಎಂದರೆ ನಿಜಕ್ಕೂ ಈ ದೇಶದಲ್ಲಿ ಚಾಣಕ್ಯ ನೀತಿ ಯಶಸ್ವಿಯಾಗಿದೆ ಎಂದೇ ಅರ್ಥ.
ಮೇಲು ನೋಟಕ್ಕೆ ಈ ಯೋಜನೆಗಳು ಜನಪರ, ಬಡವರಪರ ಎನಿಸಿದರೂ ನಿಜಕ್ಕೂ ಬಡವರನ್ನು ಅವಮಾನಿಸುವ ಯೋಜನೆಗಳೇ ಆಗಿವೆ ಎನ್ನದೇ ವಿಧಿಯಿಲ್ಲ. ರವೀಂದ್ರನಾಥ ಠ್ಯಾಗೋರ ಅವರ ಕೃತಿಯಲ್ಲಿ ಒಂದು ಕಥೆ ಬರುತ್ತದೆ. ಅದು ಪ್ರಜೆಗಳಿಗೆ ಮೀನು ಹಿಡಿದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕಥೆ. ಬಡವರ ಮೇಲೆ ಕರುಣೆ ತೋರಿ ನಿತ್ಯ ಉಚಿತವಾಗಿ ಮೀನು ಪೂರೈಸುವ ಬದಲು, ಆ ಬಡವರಿಗೆ ಮೀನು ಹಿಡಿಯುವುದು ಹೇಗೆ ಎಂದು ಕಲಿಸಿ ಸ್ವಾವಲಂಬಿ ಮಾಡುವ ಕಥೆ ಸದ್ಯ ಆಡಳಿತ ನಡೆಸುವ ಕಾಂಗ್ರೆಸ್ಸಿಗರಿಗೆ ಮತ್ತು ಸ್ವತಹ ಸಿದ್ದರಾಮಯ್ಯ ಅವರಿಗೆ ಗೊತ್ತು. ಆದಾಗ್ಯೂ ಅದೇಕೆ ಸಿದ್ದರಾಮಯ್ಯ ಅಗ್ಗದ ಅಕ್ಕಿಯ ಅನ್ನಭಾಗ್ಯಕ್ಕೆ ಬೆನ್ನು ಹತ್ತಿದರು ಎನ್ನುವ ಜನಪ್ರಿಯತೆಯ ಹೆಜ್ಜೆಗಳನ್ನು ಅರಸುತ್ತ ಹೋದರೆ ಸಿಗುವುದು ಅದೇ ಚಾಣಕ್ಯ ನೀತಿ. ದೊರೆ ನಮ್ಮನ್ನು ಸಾಕುತ್ತಿದ್ದಾರೆ ಎನ್ನುವ ಭ್ರಮೆ.
ಸರ್ಕಾರ ಎಂದರೆ ಯಾರದ್ದೋ, ಎಲ್ಲಿಯದೋ ಅಲ್ಲ. ಅದು ನಮ್ಮೆಲ್ಲರದು. ಶ್ರೀಮಂತರು, ಮಧ್ಯಮ ವರ್ಗದವರು, ಬಡವರು, ಕಡುಬಡವರು, ಭೂರಹಿತರು, ಕೃಷಿ ಕೂಲಿ ಕಾರ್ಮಿಕರು, ವಿವಿಧ ಕಾರಣಕ್ಕೆ ಸಾಮಾಜಿಕ ಶೋಷಣೆ ಅನುಭವಿಸುತ್ತ ಬಂದವರು, ಅಶಕ್ತರು ಎಲ್ಲರದ್ದೂ. ಸರ್ಕಾರ ಇರುವುದು ಮೂಲಭೂತ ಸೌಕರ್ಯಕಗಳನ್ನು ಕಲ್ಪಿಸಲು ಮತ್ತು ಜನತೆಯ ಸೇವೆಗಾಗಿ ಎನ್ನುವ ವಾಸ್ತವ ಅರುಹುವ ಕೆಲಸ ಆಗಬೇಕಿದೆ. ಆದರೆ, ಈ ವಾಸ್ತವ ಗೊತ್ತಾದರೆ ತಮ್ಮ ಬೇಳೆ ಬೇಯುವುದಿಲ್ಲ ಎನ್ನುವ ಅಳುಕು ಸರ್ಕಾರ ನಡೆಸುವವರನ್ನು ಅಗ್ಗದ ಪ್ರಚಾರಕ್ಕೆ ಇಳಿಯುವಂತೆ ಮಾಡುವುದರಿಂದ ಇಂಥ ಯೋಜನೆಗಳು ದಂಡಿಯಾಗಿ ಜಾರಿಯಾಗುತ್ತಲೇ ಸಾಗಿವೆ ಎನ್ನುವುದಕ್ಕೆ ಅನ್ನಭಾಗ್ಯ ಅತ್ಯುತ್ತಮ ನಿದರ್ಶನ.
ಹಿಂದೆ ಭೂಮಾಲೀಕರು, ಪಾಳೆಯಗಾರರು, ಶ್ರೀಮಂತರು ಕೂಡ ಈಗ ಸರ್ಕಾರಗಳು ನಡೆದುಕೊಳ್ಳುವ ರೀತಿಯಲ್ಲೆ ಬಡವರಲ್ಲಿ ಭ್ರಮೆಗಳನ್ನು ಹುಟ್ಟಿಸಿ ಎಲ್ಲ ಬೇಕು-ಬೇಡಿಕೆಗಳನ್ನು ಇಡೇರಿಸುವ ಧಣಿಗಳು ಎಂದು ಗಟ್ಟಿಯಾಗಿ ನಂಬಿ ಜೀತಕ್ಕೆ ಜೋತು ಬೀಳುವಂತೆ ಮಾಡುತ್ತಿದ್ದರು. ಈಗ ಸಿದ್ದರಾಮಯ್ಯ ಸೇರಿದಂತೆ ಭಾರತ ದಲ್ಲಿನ ಬಹುತೇಕ ದೊರೆಗಳು ಪ್ರಜೆಗಳನ್ನು ಹಂಗಿನಲ್ಲಿ ಬದುಕು ನೂಕುವಂತೆ ಮಾಡುತ್ತಿದ್ದಾರೆ ಅಷ್ಟೇ. ಚಾಣಕ್ಯನ ನೀತಿ ಈ ರೀತಿ ಮುಖ ಬದಲಿಸಿದೆ ಅಷ್ಟೇ. ಠ್ಯಾಗೋರರು ಹೇಳಿದಂತೆ ಮೀನು ಹಿಡಿಯುವ ಕಲೆ ಕಲಿಸುವ ಮತ್ತು ಸ್ವಾವಲಂಬಿಯಾಗಿ ಅನ್ನ ಸಂಪಾದಿಸುವ ಸಾಮರ್ಥ್ಯವನ್ನು ಜನತೆಗೆ ನೀಡುವ ಸಾಹಸಕ್ಕೆ ಯಾರೂ ಕೈಹಾಕುತ್ತಿಲ್ಲ ಎನ್ನುವುದೇ ಇಲ್ಲಿನ ಚೋದ್ಯದ ಸಂಗತಿ.
ಇದನ್ನು ನಿವಾರಿಸಲು ದಾನ, ಉಚಿತ ಇಲ್ಲವೇ ಅಗ್ಗದ ದರದಲ್ಲಿ ಪೂರೈಕೆಯೊಂದೇ ಮಾರ್ಗವೇ ಎನ್ನುವುದು ಇಲ್ಲಿನ ಆಕ್ಷೇಪ. ಬಡವರೂ ಮೂಲವಾಹಿನಿಗೆ ಸೇರಲು ಬೇಕಿರುವ ವೇದಿಕೆ ಸಿದ್ಧಗೊಳ್ಳಬೇಕು ಮತ್ತು ಅವರು ತಮ್ಮ ಅನ್ನವನ್ನು ತಾವೇ ಸಂಪಾದಿಸುವ ಸಾಮರ್ಥ್ಯ ಉಳ್ಳವರಾಗುವ ದಿಸೆಯಲ್ಲಿ ವ್ಯವಸ್ಥೆಯನ್ನು ಬದಲಿಸಬೇಕಿದೆ. ಇಂಥ ವಾಸ್ತವವನ್ನು ಒಪ್ಪದೇ ಬರೀ ಭ್ರಮೆಯಲ್ಲಿಯೇ ಹಂಗಿನ ಅನ್ನ ತಿನ್ನುತ್ತಲೇ ಇರಲಿ ಎನ್ನುವ ಕೊಳಕು ಮನಸ್ಥಿತಿಯವರು ಬೃಹತ್ ಕೈಗಾರಿಕೆ, ಐಟಿ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಸಬ್ಸಿಡಿ ನೀಡುತ್ತಿರುವಾಗ ಬಡವರಿಗೆ ಅಗ್ಗದ ಅಕ್ಕಿ ಕೊಟ್ಟರೇ ಏನು ತಪ್ಪು ಎಂದು ವಾದಿಸುತ್ತಾರೆ. ಉದ್ಯೋಗ ಸೃಷ್ಠಿಗಾಗಿ ಮತ್ತು ಔದ್ಯಮಿಕ ಸಂಪತ್ತು ಹೆಚ್ಚಿಸಲು ಕೈಗಾರಿಕೆಗಳು ಬೇಕಲ್ಲವೇ. ಅದಕ್ಕೆ ಅಗತ್ಯ ಸಬ್ಸಿಡಿ ನೀಡುವುದು ಅನಿವಾರ್ಯ. ಅನವಶ್ಯಕ ಸೌಲತ್ತು ನೀಡಿದರೆ ಅದನ್ನು ಪ್ರಶ್ನಿಸುವ ಮತ್ತು ಅದನ್ನೆಲ್ಲ ವಾಪಸ್ ಕಕ್ಕಿಸುವ ಮಾರ್ಗ, ಕಾನೂನು ನಮ್ಮಲ್ಲಿ ತುಂಬ ಗಟ್ಟಿಯಾಗಿದೆ. ಅದನ್ನು ಜಾರಿಗೊಳಿಸುವಲ್ಲಿನ ಲೋಪಗಳು ಭ್ರಷ್ಟಾಚಾರಕ್ಕೆ ಅಣಿ ಮಾಡುತ್ತಿರುವುದನ್ನೇ ಹೋಲಿಕೆ ಮಾಡಿಕೊಂಡು ಬಡವರನ್ನು ಸರ್ಕಾರದ ಹಂಗಿನಲ್ಲೇ ಬದುಕು ನೂಕುವಂತೆ ಮಾಡುವುದು ಎಷ್ಟು ಸರಿ?
ದೇಶದ ಸಂಪತ್ತಿನಲ್ಲಿ ಸಮಾನ ಹಂಚಿಕೆ. ದುಡಿಯುವ ಸಾಮರ್ಥ್ಯಯುಳ್ಳ ಆಸಕ್ತ ಎಲ್ಲರಿಗೂ ಕೃಷಿ ಭೂಮಿ, ಅವುಗಳಿಗೆ ಸೂಕ್ತ ನೀರಾವರಿ, ಬೆಳೆದ ಬೆಳೆಗೆ ಸೂಕ್ತ ಬೆಲೆ, ಸ್ಥಳೀಯ ಕಚ್ಚಾವಸ್ತು ಬಳಸಿಕೊಳ್ಳುವ ಕೈಗಾರಿಕೆಗಳು, ಎಲ್ಲರ ಕೈಗೂ ಉದ್ಯೋಗ, ಶ್ರಮಕ್ಕೆ ತಕ್ಕ ಸಂಬಳ, ಗುಣಮಟ್ಟದ ಶಿಕ್ಷಣ, ಆದಾಯದಲ್ಲಿನ ಸೋರಿಕೆ ತಡೆಗಟ್ಟುವಿಕೆ, ಮನೆ ಬಾಗಿಲಿಗೆ ಆಡಳಿತ, ನೈರ್ಮಲ್ಯ ಕಾಪಾಡುವುದು, ಉತ್ತಮ ಆರೋಗ್ಯ ಸೇವೆಗಳನ್ನು ನೀಡಿ ಜಾಗತಿಕ ಪೈಪೋಟಿಗೆ ದೇಶದ ಜನತೆಯನ್ನೂ ಅಣಿಗೊಳಿಸುವ ಸರಳ ಮತ್ತು ಅಗತ್ಯ ಸೂತ್ರಗಳನ್ನು ಬದಿಗಿಟ್ಟು ಬರೀ ಹಂಗಿನಲ್ಲೇ ಬದುಕಿ ಎನ್ನುವುದೂ ಒಂದು ಸರ್ಕಾರವೇ?
ರೈತರ ಸಾಲ ಮನ್ನಾ, ಪರಿಶಿಷ್ಟರ ಸಾಲ ಮನ್ನಾ, ನೇಕಾರರ ಸಾಲ ಮನ್ನಾ, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ಅಗ್ಗದರದ ಪಡಿತರ, ಸೀರೆ, ಪಂಚೆ, ಉಚಿತ ಶಿಕ್ಷಣ, ಮಧ್ಯಾಹ್ನದ ಬಿಸಿಯೂಟ, ಉಚಿತ ಹಾಲು, ಉಚಿತ ಸೈಕಲ್, ಕೋಟ್ಯಧೀಶರಾಗಿದ್ದರೂ ಅವರ ತಲೆಮಾರುಗಳ ಜನರಿಗೆ ಮೀಸಲಾತಿ.  ಹೀಗೆ ಸಾಗುತ್ತದೆ ಉಚಿತ ದಾನದ ದಂಡಯಾತ್ರೆ.
ಅಗ್ಗ ದರದಲ್ಲಿ ಅಕ್ಕಿ ಕೊಟ್ಟು ಕರ್ನಾಟಕ ಸರ್ಕಾರ ತನ್ನ ರಾಜ್ಯದ ಜನತೆಯನ್ನು ಸಾಕುತ್ತಿದೆ. ಆ ಜನರಿಗೆ ತಮ್ಮ ಅನ್ನ ಸಂಪಾದಿಸುವ ಶಕ್ತಿ ಇಲ್ಲ ಎನ್ನುವ ಸಂಗತಿ ಈಗ ವಿದೇಶಗಳಲ್ಲಿ ದೊಡ್ಡ ರೀತಿಯ ಚರ್ಚೆಯಾಗುತ್ತಿದೆ. ಐಟಿ ದಿಗ್ಗಜ ಎನಿಸುವ ಕರ್ನಾಟಕದಲ್ಲಿ ಇಷ್ಟೊಂದು ಬಡತನ- ಹಸಿವು ಇದೆಯೇ ಎಂದು ಅಲ್ಲಿನ ಜನ ಹುಬ್ಬೇರಿಸಿ ಕರ್ನಾಟಕದತ್ತ ಮರುಕದಿಂದ ನೋಡುತ್ತಿದ್ದಾರಂತೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಎದುರು ಕರ್ನಾಟಕದ ಬಡತನ-ಹಸಿವು ಅನಾವರಣ ಆಗುತ್ತಿರುವುದು ಸರ್ಕಾರಕ್ಕೆ ಶ್ರೇಯಸ್ಸು ತರುತ್ತದೆಯೇ?
ಇವನ್ನೆಲ್ಲ ಬಡವರಿಗೆ ನೀಡುವುದು ತಪ್ಪು ಎನ್ನುವುದು ಇಲ್ಲಿನ ಅರ್ಥವಲ್ಲ. ಅಸಹಾಯಕರು, ಇವನ್ನೆಲ್ಲ ಪಡೆಯಲು ಅಸಮರ್ಥರಾದವರಿಗೆ ಧಾರಾಳವಾಗಿ ನೀಡಬೇಕು. ಅದೇ ಕಾಲಕ್ಕೆ ಇಂಥ ಸಹಾಯ ಎಷ್ಟು ದಿನ ನೀಡಬೇಕು ಮತ್ತು ಈ ಎಲ್ಲ ಸೌಲಭ್ಯಗಳನ್ನು ಅವರೇ ಸಂಪಾದಿಸುವಂತೆ ಮಾಡುವ ಕುರಿತಂತೆ ಆಡಳಿತಗಾರರು ಚಿಂತಿಸಿ, ಸೂಕ್ತ ಯೋಜನೆ ರೂಪಿಸಬೇಕು. ಹಂಗಿನ ಬಿಸಿಯೂಟಕ್ಕಿಂತ ಇಂಗಿತದ ತಂಗಳೇ ಲೇಸು ಎನ್ನುವ ಸರ್ವಜ್ಞನ ಮಾತಿನಂತೆ ಬಡವರು ಬದುಕುವ ಭರವಸೆ, ಸ್ವಾಭಿಮಾನ, ಸ್ವಾವಲಂಬನೆ ಮೂಡಿಸುವುದು ಸರ್ಕಾರದ ಕರ್ತವ್ಯವಲ್ಲವೆ?



 - ಉಮೇಶ್ ಪೂಜಾರ
ಸಂಪಾದಕರು
ಸವಿನುಡಿ, ದಿನಪತ್ರಿಕೆ
ಬಾಗಲಕೋಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.