ಅಂಕಣಗಳು

ಕನ್ನಡದ ಧ್ವಜ ಗೌರವಿಸಿಕನ್ನಡದ ಧ್ವಜ ಗೌರವಿಸಿ

Published On :

1960ರ ದಶಕದಲ್ಲಿ ಬೆಂಗಳೂರು ನಗರದ ಕೇಂದ್ರ ಸ್ಥಾನಗಳಾದ ಈಗಿನ ಮೆಜೆಸ್ಟಿಕ್ ಹಾಗೂ ಒಕಳೀಪುರಂ ಭಾಗಗಳು ಹೊರರಾಜ್ಯಗಳವರ ವಶಕ್ಕೆ ಹೋಗಿ ಕನ್ನಡಿಗರು ದ್ವಿತೀಯ ದರ್ಜೆ ನಾಗರೀಕರಾಗಬೇಕಾದ ಸಂದರ್ಭದಲ್ಲಿ ಬೆಂಗಳೂರನ್ನು ಕನ್ನಡಿಗರಿಗಾಗಿ ಉಳಿಸಲು ಕರ್ನಾಟಕ ನೆಲ-ಜಲ, ಭಾಷೆಗಳನ್ನು ಉಳಿಸಿಕೊಂಡು ಹೋಗುವ ಕುರಿತು ಕನ್ನಡಪರ ಚಿಂತಕರಾಗಿದ್ದ ಖ್ಯಾತ ಕಾದಂಬರಿಕಾರರಾದ ಮಾನ್ಯ ಶ್ರೀ ಅ.ನ.ಕೃ. ತ.ರಾ.ಸು., ಕನ್ನಡಪರ ಕಾಳಜಿ ಹೊಂದಿದ ಎಂ. ರಾಮಮೂರ್ತಿ, ವಾಟಾಳ್ ನಾಗರಾಜ್ ಮುಂತಾದವರು ಸಮಾನ ಮನಸ್ಕರೊಂದಿಗೆ ಚಿಂತನ-ಮಂಥನ ಮಾಡಿ ಕರ್ನಾಟಕದಲ್ಲಿ 'ಕನ್ನಡಪಕ್ಷ' ವೆಂಬ ರಾಜಕೀಯ ಪಕ್ಷ ಸ್ಥಾಪಿಸಲು ನಿರ್ಧರಿಸಿದರು. ಧ್ವಜ ಬೇಕೆಂಬ ಕುರಿತು ಚರ್ಚಿಸಿದ ಕನ್ನಡಪರ ಸಂಘಟನೆಗಳು ಎಂ. ರಾಮಮೂರ್ತಿಯವರ ನೇತೃತ್ವದಲ್ಲಿ ವಿವಿಧ ಭಾಗಗಳಲ್ಲಿರುವ ಪಕ್ಷಗಳ ಧ್ವಜಗಳು, ತಮಿಳುನಾಡಿನಲ್ಲಿರುವ ಡಿ.ಎಂ.ಕೆ. ಧ್ವಜಗಳ ಅಧ್ಯಯನ ಮಾಡಿ ಕನ್ನಡದ ತಾಯಿ ಭುವನೇಶ್ವರಿಯ ಸುಮಂಗಲತನವನ್ನು ಪ್ರತಿನಿಧಿಸುವ ಅರಿಶಿನ-ಕುಂಕುಮದ ಬಣ್ಣಗಳನ್ನು ಬಳಸಿಕೊಂಡು ಹಳದಿ ಹಾಗೂ ಕೆಂಪು ವರ್ಣಗಳನ್ನೊಳಗೊಂಡ ಯಾವೊಂದನ್ನು "ಕನ್ನಡಪಕ್ಷ"ದ ಧ್ವಜವಾಗಿ ಸ್ವಾಭಿಮಾನಿ ಕನ್ನಡಿಗರ ಪರವಾಗಿ ಅಂಗೀಕರಿಸಿದ್ದರು.
ಕಾರಣಾಂತರಗಳಿಂದ ಅಂದಿನ ಸಾಹಿತಿಗಳು ಹಾಗೂ ಕನ್ನಡ ಚಳವಳಿಗಾರರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳು ಬಂದು ಕನ್ನಡಪಕ್ಷ ರಾಜಕೀಯವಾಗಿ ಅಸ್ತಿತ್ವಕ್ಕೆ ಬರಲಿಲ್ಲ? ಆದರೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಹಳದಿ-ಕೆಂಪು ವರ್ಣದ ಧ್ವಜ ಕನ್ನಡಿಗರ ಮನದಲ್ಲಿ ಉಳಿದು ಅದನ್ನು ಸಮಯೋಚಿತವಾಗಿ ಬಳಸಲಾಗುತ್ತಿತ್ತು.
1983-84ರಲ್ಲಿ ಕರ್ನಾಟಕದಲ್ಲಿ ಜನತಾಪಕ್ಷ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರಿಗೆ ಕರ್ನಾಟಕ ಏಕೀಕರಣಕ್ಕಾಗಿ ಮುಂಬೈ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ದಿ. ಅಂದಾನಪ್ಪ ದೊಡ್ಡಮೇಟಿಯವರು ಬರೆಸಿದ್ದ ಭುವನೇಶ್ವರಿ ತಾಯಿಯ ಭಾವಚಿತ್ರವನ್ನು ಅಳವಡಿಸಿದ ಹಳದಿ-ಕೆಂಪು ವರ್ಣದ ಧ್ವಜವನ್ನು ನಾಡಧ್ವಜವಾಗಿ ಅಂಗೀಕರಿಸಲು ಸ್ವಾಭಿಮಾನಿ ಕನ್ನಡಿಗರ ಪರವಾಗಿ ಕೋರಲಾಗಿತ್ತು. ಆದರೆ ಸಂವಿಧಾನದಡಿ ರಾಷ್ಟ್ರಧ್ವಜದೊಂದಿಗೆ ನಾಡಧ್ವಜ ಹೊಂದಲು ಅವಕಾಶವಿಲ್ಲದ ಕಾರಣ ಕನ್ನಡಿಗರ ಮನವಿಗೆ ಪುರಸ್ಕಾರ ಸಿಗಲಿಲ್ಲ.
ನಂತರದಲ್ಲಿ ಕನ್ನಡಿಗರಿಗೆ, ಕರ್ನಾಟಕದ ನೆಲ, ಜಲ, ಭಾಷೆಯ ವಿಚಾರವಾಗಿ ಕುಂದುಂಟಾದಾಗ ಅದನ್ನು ಪ್ರತಿಭಟಿಸುವ ಸಂದರ್ಭದಲ್ಲಿ ಕನ್ನಡದ ಭಾವುಟಗಳನ್ನು ವಿವಿಧ ಕನ್ನಡಪರ ಕನ್ನಡ ಸಂಘಟನೆಗಳು ಬಳಸುತ್ತಾ ಬಂದಿವೆ.
ಇತ್ತೀಚೆಗೆ ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಸ್ವಾಭಿಮಾನಿ ಕನ್ನಡಿಗರ ಭಾವನಾತ್ಮಕ ಸಂಬಂಧ ಕುರಿತು ಅಲ್ಲಲ್ಲಿ ಕನ್ನಡಧ್ವಜಸ್ಥಂಭ ಸ್ಥಾಪಿಸಿ ಅದರಲ್ಲಿ ಕನ್ನಡದ ಭಾವುಟಗಳನ್ನು ಹಾರಿಸುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ನಂತರದಲ್ಲಿ ಅವುಗಳ ಕುರಿತು ಸಮರ್ಪಕ ನಿರ್ವಹಣೆಯಿಲ್ಲದೆ ವಾತಾವರಣದ ಕಲ್ಮಷದಿಂದಾಗಿ ಧ್ವಜಗಳು ಬಣ್ಣಗೆಟ್ಟು, ಹರಿದು ಹೋದರೂ ಅವುಗಳು ಪ್ರಮುಖ ಭಾಗಗಳಲ್ಲಿ ಹಾರಾಡುತ್ತಿರುವುದನ್ನು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಇರುವ ಸಂಗೊಳ್ಳಿರಾಯಣ್ಣ ಪ್ರತಿಮೆ ಬಳಿ ಹಾಗೂ ರೈಲು ನಿಲ್ದಾಣದ ಬಳಿ ಹಾಗೂ ಇತರೆ ಭಾಗಗಳಲ್ಲಿ ಕೊಳೆಯಾದ ಕನ್ನಡಧ್ವಜ ಹಾರಾಡುತ್ತಿದ್ದು ಅದನ್ನು ಬದಲಿಸಿರುವುದಿಲ್ಲ.
 ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಕನ್ನಡಧ್ವಜಕ್ಕೆ ಸೂಕ್ತ ಗೌರವ ನೀಡುವ ಜವಾಬ್ದಾರಿ ಅವುಗಳನ್ನು ಬಳಸುವ ಕನ್ನಡಪರ ಸಂಘಟನೆಗಳ ಮೇಲಿದ್ದು ಕನ್ನಡ ಧ್ವಜಕ್ಕೆ ಯಾವುದೇ ಕುಂದು ಬಾರದಂತೆ ನೋಡಿಕೊಳ್ಳಲು ಕ್ರಮ ಜರುಗಿಸಲು ಈ ಮೂಲಕ ಕೋರುತ್ತೇನೆ.

- ಬಸವರಾಜ ಹುಡೇದಗಡ್ಡಿ
ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.