ಓದುಗರ ಬೇಡಿಕೆಗಳು ವಿಚಿತ್ರವಾಗಿರುತ್ತವೆ. ಕೆಲವನ್ನು ಈಡೇರಿಸಬಹುದು. ಇನ್ನು ಕೆಲವನ್ನು ಈಡೇರಿಸುವುದು ಕಷ್ಟ. ಇತ್ತೀಚೆಗೆ ಗಾಯತ್ರಿನಗರದ ಪ್ರಶಾಂತಕುಮಾರ ಮದುವೆಗೆ ಕರೆದಿದ್ದ. ಆತ ಮದುವೆಯಾಗಲಿರುವ ಹುಡುಗಿ ಪದ್ಮಾ ಪರಿಚಿತಳೇ. ಹಾಗಂತ ಅವಳನ್ನು ನಾನು ಭೇಟಿಯಾಗಿಲ್ಲ. ಬರೀ ಎಸ್ಸೆಮ್ಮೆಸ್‌ನಲ್ಲಿಯೇ 'ಮುಖಾಮುಖಿ'ಯಾದವರು. ಪ್ರತಿದಿನ ಪತ್ರಿಕೆಯನ್ನು ಓದಿ ಪ್ರತಿಕ್ರಿಯಿಸುವ ಜಾಗೃತ ಓದುಗಳು. ಪ್ರಶಾಂತನೂ ಹಾಗೇ. ಇಬ್ಬರೂ ಬಂದು ಮದುವೆಗೆ ಕರೆದು ಹೋದರು. ಆದರೆ ಆ ದಿನ ನನಗೆ ಅವರ ಮದುವೆಯೆಂಬುದು ಮರೆತು ಹೋಗಿತ್ತು. ಪ್ರಶಾಂತ ಫೋನ್ ಮಾಡಿ, 'ಸಾರ್, ನಮ್ಮ ಮದುವೆಗೆ ಬೇರೆ ಯಾರನ್ನೂ ಕರೆದಿಲ್ಲ, ನಿಮ್ಮ ಹೊರತಾಗಿ. ನೀವೇ ಪುರೋಹಿತರು, ನೀವೇ ಬಂಧು-ಬಳಗ. ನಾನು ಹಾಗೂ ಪದ್ಮಾ ನಿಮಗಾಗಿ ಕಾಯುತ್ತಿದ್ದೇವೆ, ಬೇಗ ಬನ್ನಿ' ಅಂದ.
ನಾನು ಅಲ್ಲಿಗೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಮಗ್ನನಾಗಿದ್ದೆ. ಆದರೆ ಮದುವೆಯನ್ನು ತಪ್ಪಿಸಿಕೊಳ್ಳುವಂತಿಲ್ಲ. ಮುಹೂರ್ತ ಬೇರೆ ಸಮೀಪಿಸುತ್ತಿದೆ. ಉಳಿದೆಲ್ಲ ಕೆಲಸಗಳನ್ನು ಬದಿಗೊತ್ತಿ 'ಓದುಗ ಮಹಾಶಯ'ನ ಮದುವೆಗೆ ಹೋದೆ. ಕಲ್ಯಾಣಮಂಟಪದಲ್ಲಿ ಪ್ರಶಾಂತ-ಪದ್ಮಾಳ ತಂದೆ-ತಾಯಿ ಹಾಗೂ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ಹೊರತಾಗಿ ಬೇರೆ ಯಾರೂ ಇರಲಿಲ್ಲ. ಅಬ್ಬಬ್ಬಾ ಅಂದ್ರೆ ಹದಿನೈದು ಜನರಿದ್ದಿರಬಹುದು. ಮದುವೆ ಸಾಗಿಸಲು ಪುರೋಹಿತರೂ ಇರಲಿಲ್ಲ. ಆ ಜವಾಬ್ದಾರಿಯಿಂದ ಹಿಡಿದು ಹೆಣ್ಣು ಒಪ್ಪಿಸುವ ತನಕ ನನ್ನದೇ ಪೌರೋಹಿತ್ಯ! ಪ್ರಶಾಂತ-ಪದ್ಮಾ ಈ ಪರಿಯ 'ಯಡವಟ್ಟು'ಗಳು ಎಂಬುದು ಗೊತ್ತಿರಲಿಲ್ಲ.
'ಅಲ್ಲ ಮಾರಾಯ, ನೀನೇನೋ ಫೋನ್ ಮಾಡಿ ನೆನಪಿಸಿದೆ. ಒಂದು ವೇಳೆ ನಾನು ಬರದೇ ಇದ್ದಿದ್ದರೆ ಏನು ಮಾಡ್ತಾ ಇದ್ದಿರಿ. ನಮ್ಮಂಥ ಪತ್ರಕರ್ತರನ್ನು ನೆಚ್ಚಿಕೊಂಡರೆ ನಿನ್ನ ಮದುವೆಯೂ ನಿಂತು ಹೋಗ್ತಿತ್ತಲ್ಲ?' ಎಂದು ಕೇಳಿದೆ. 'ಅದೇನು ಮಹಾಸಾರ್? ನಿಮ್ಮ ಅನುಕೂಲದ ದಿನದಂದು ನಿಮ್ಮ ಮನೆಯಲ್ಲೋ, ಆಫೀಸಿನಲ್ಲೋ, ನಿಮ್ಮ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಳ್ಳುತ್ತಿದ್ದೆವು.' ಎಂದ ಪ್ರಶಾಂತ. ಅಪರೂಪದ ಜೋಡಿ. ಇಬ್ಬರೂ ಅಕ್ಷರ ಪ್ರೇಮಿಗಳು. ಏನೋ ನೆಪ ಹೇಳಿ, ಆ ಮದುವೆಯನ್ನು ತಪ್ಪಿಸಿಕೊಂಡಿದ್ದರೆ ಎಂಥ 'ಅನಾಹುತ'ವಾಗುತ್ತಿತ್ತಲ್ಲ ಅಂದುಕೊಂಡೆ. ನೂತನ ವಧು-ವರನ ಜತೆಗೆ ಕುಳಿತು ಊಟ ಮಾಡಿ, ಅವರೊಂದಿಗೆ 2 ಗಂಟೆ ಕಳೆದು ವಾಪಸ್ ಬರುವಾಗ, 'ಸಾರ್, ನಮ್ಮ ಮದುವೆಗೆ ನೀವೇ ಸಾಕ್ಷಿ. ತುಂಬಾ ಚೆಂದವಾದ ದಾಂಪತ್ಯ ಜೀವನ ಸಾಗಿಸುತ್ತೇವೆ. ನಮ್ಮ ಹೆತ್ತವರಿಗೆ, ಕೈ ಹಿಡಿದವಳಿಗೆ ಎಂದೆಂದೂ ವಂಚನೆ ಮಾಡೊಲ್ಲ. ಸುಂದರ, ಸರಳ ಬದುಕು ಕಟ್ಟಿಕೊಳ್ಳುವ ಆಸೆಯಿದೆ' ಎಂದು ಭಾವುಕನಾಗಿ ನುಡಿದ.
'ಪ್ರಶಾಂತ್, ಬದುಕಿನ ಉದ್ದೇಶವೇ ಅದು. ಸುಂದರ, ಸರಳ ಬದುಕನ್ನು ಕಟ್ಟಿಕೊಡುವ ನಿನ್ನ ಆಸೆ ಕೈಗೂಡಲಿ. ನಿನ್ನ ಮಗುವಿನ ನಾಮಕರಣಕ್ಕೆ ಕರೆಯುವುದನ್ನು ಮರೆಯಬೇಡ' ಅಂದೆ. ನವದಂಪತಿಗಳು ಪುಳಕಿತರಾದರು.
ಇನ್ನೇನು ಅವರಿಂದ ಬೀಳ್ಕೊಂಡು ಕಾರು ಹತ್ತಬೇಕು ಎನ್ನುವಾಗ, 'ಸಾರ್ ಒಂದ್ನಿಮಿಷ' ಎಂದ ಪ್ರಶಾಂತ್. 'ಕೆಲ ದಿನಗಳ ಹಿಂದೆ To the Nurses of the world ಎಂಬ ಪುಸ್ತಕದಲ್ಲಿ ಓದಿದ ಒಂದು ಪ್ರಸಂಗ ವಿಪರೀತವಾಗಿ ನನ್ನನ್ನು ಕಾಡಿತು. ಇದು ಸಾಮಾನ್ಯವಾದ ಆದರೆ ಗಾಢವಾದ ಪ್ರೇಮ ಪ್ರಸಂಗದ ಕತೆ. ಇತರರಿಗೂ ಪ್ರೇರಣೆ, ಜೀವನ ಸ್ಫೂರ್ತಿ ನೀಡಲಿ. ನಮ್ಮ ಮದುವೆಯ ನೆನಪಿಗೆ ಇದು ನಿಮ್ಮ ಅಕ್ಷರ ಉಡುಗೊರೆಯಾಗಲಿ. ಸಾರ್, ನಮ್ಮನ್ನು ನಿರಾಶೆ ಮಾಡಬೇಡಿ' ಎಂದು ಆ ಕೃತಿಯ ಜೆರಾಕ್ಸ್ ಮಾಡಿದ ಕೆಲವು ಪುಟಗಳನ್ನು ನನ್ನ ಕೈಗಿತ್ತ. ಇಬ್ಬರೂ ಕೆಲಕ್ಷಣ ಮುಖಮುಖ ನೋಡಿಕೊಂಡೆವು. ಇಬ್ಬರಿಗೂ ಮತ್ತೊಮ್ಮೆ ಶುಭಹಾರೈಕೆ ಸಲ್ಲಿಸಿ ಕಾರು ಹತ್ತಿದೆ.
ಒಂದು ಅಪರೂಪದ ಮದುವೆಯಲ್ಲಿ ಕಳೆದ ಸಾರ್ಥಕ ಕ್ಷಣಗಳು ನನ್ನದಾಗಿದ್ದವು. ಅಕ್ಷರ ಸಂಬಂಧ ನನ್ನನ್ನು ಈ ರೀತಿ ಕಟ್ಟಿ ಹಾಕಿತ್ತು. ಆ ಮದುವೆಗೆ ನನ್ನದೇ ಪೌರೋಹಿತ್ಯ ಎಂಬ ಸುಳಿವನ್ನು ಅವರಿಬ್ಬರು ಮೊದಲೇ ನೀಡಿದ್ದರೆ, ನಾನು ಹೂಗುಚ್ಛದ ಜತೆ ಉಡುಗೊರೆಯೊಂದಿಗೆ ಹೋಗುತ್ತಿದ್ದೆ.
ನನಗೆ ಅಚ್ಚರಿ ಮೂಡಿಸಲೆಂದೇ ಅವರು ಹೆಣೆದ ಸಣ್ಣ ತಂತ್ರ ಅದಾಗಿತ್ತು. ಒಂದು ವೇಳೆ ಕೆಲಸದ ಒತ್ತಡ ನೆಪ ಹೇಳಿ ಮದುವೆಗೆ ಹೋಗದೆ ತಪ್ಪಿಸಿಕೊಂಡಿದ್ದರೆ, ನಾನು ಅವರನ್ನು ಎಷ್ಟು ನಿರಾಸೆ ಮಾಡುತ್ತಿದ್ದೆ, ನನ್ನಿಂದ ಎಂಥ ಅಪಚಾರವಾಗುತ್ತಿತ್ತು ಎಂದು ಮನಸ್ಸಿನಲ್ಲಿಯೇ ಪದೇ ಪದೆ ಜಗಿಯುತ್ತಿದ್ದಾಗ, ಪ್ರಶಾಂತ್ ನೀಡಿದ ಕಾಗದಗಳ ಮೇಲೆ ಗಮನ ಹರಿಯಿತು.
ಏಳೆಂಟು ನಿಮಿಷಗಳಲ್ಲಿ ಆ ಪ್ರೇಮಕತೆಯನ್ನು ಓದಿ ಪಕ್ಕಕ್ಕಿಟ್ಟಾಗ ಮನಸ್ಸು ಪೂರ್ತಿ ಒದ್ದೆಯಾದ ಅರಳೆ ಹಾಸಿಗೆಯಂತಾಗಿತ್ತು. ನನ್ನೊಳಗೇ ಚಡಪಡಿಸಿದೆ. ಈ ಕತೆಯನ್ನೇಕೆ ಪ್ರಶಾಂತ್ ನನಗೆ ಕೊಟ್ಟ? ಈ ಕತೆಯನ್ನು ಪತ್ರಿಕೆಯ ಓದುಗರಿಗೂ ತಿಳಿಸಿ ಎಂದು ಏಕೆ ಹೇಳಿದ? ಈ ಕತೆಯನ್ನು ಅಕ್ಷರ ಉಡುಗೊರೆಯಾಗಿ ಕೊಡಿ ಎಂದು ಹೇಳಿದ್ದೇಕೆ? ಈ ಯಾವ ಪ್ರಶ್ನೆಗಳಿಗೂ ಉತ್ತರ ಸಿಗಲಿಲ್ಲ. ಅದೇನೇ ಇರಲಿ, ಈ ಕತೆ ಅವನಿಗೆ ಅಕ್ಷರ ಉಡುಗೊರೆಯಾಗುವುದಿದ್ದರೆ ಅದಕ್ಕಿಂತ ಹೆಚ್ಚಿನ ಸಂತೋಷ ಏನಿದೆ ಎಂದು ಆತ ಕೊಟ್ಟ ಕತೆಯನ್ನು ನಿಮಗೂ ಹೇಳುತ್ತಿದ್ದೇನೆ.
---
ಪ್ರೀತಿಯನ್ನೇ ಆಧಾರಸ್ತಂಭವಾಗಿಟ್ಟುಕೊಂಡು ಜೀವನಕ್ಕೊಂದು ಉದ್ದೇಶವಿದ್ದರೆ, ಅಂಥ ಬದುಕು ಮತ್ತೊಂದಿಲ್ಲ. ಜಗತ್ತಿನಲ್ಲಿ ಅದಕ್ಕೂ ಮಿಗಿಲಾದ ಜೀವವಿಮೆ ಇನ್ನೊಂದಿಲ್ಲ.
ನೀವು ನನ್ನ ಅಪ್ಪನ ಹತ್ತಿರ ಹೋಗಿ. ನೀನು ಬೆಳಗ್ಗೆ ಬೆಳಗ್ಗೆ ಅಷ್ಟು ಮುಂಚಿತವಾಗಿ ಏಕೆ ಏಳುತ್ತೀಯಾ ಅಂತ ಕೇಳಿದರೆ, ಆತ ನಿಸ್ಸಂದೇಹವಾಗಿ ತಕ್ಷಣ ಹೇಳುವ ಉತ್ತರವೇನು ಗೊತ್ತಾ? 'ನನ್ನ ಹೆಂಡತಿಗಾಗಿ.' ಆತನ ಪ್ರತಿ ಮಾತಿನಲ್ಲಿ, ಪ್ರತಿ ನಡೆಯಲ್ಲಿ, ಪ್ರತಿ ಯೋಚನೆಯಲ್ಲಿ ಅಮ್ಮ ಬರಲೇಬೇಕು. ಕನಿಷ್ಠ ಅವಳ ನೆರಳಾದರೂ ಹಾದು ಹೋಗಬೇಕು. ಆತ ಅಡುಗೆ ಮನೆಗೆ ಹೋದ ಅಂದ್ರೆ, ತನ್ನ ಹೆಂಡತಿಗೆ ಕಾಫಿ ಮಾಡಲು ಹೋಗಿರಬಹುದು ಎಂದು ಭಾವಿಸಬಹುದು. ಆತ ಒಬ್ಬನೇ ಕಾಫಿ ಕುಡಿದಿದ್ದಾಗಲಿ, ತಿಂಡಿ ತಿಂದಿದ್ದಾಗಲಿ, ಊಟ ಮಾಡಿದ್ದಾಗಲಿ ಇಲ್ಲವೇ ಇಲ್ಲ. ಮೊದಲ ಗುಟುಕು ಹೆಂಡತಿಗೆ ಕುಡಿಸಿ, ಮೊದಲ ತುತ್ತನ್ನು ಹೆಂಡತಿಗೆ ತಿನ್ನಿಸಿ, ಆನಂತರ ಆತ ಸೇವಿಸುವುದು. ಇದು ಇಂದು ನಿನ್ನೆಯ ದೃಶ್ಯವಲ್ಲ. ಅದ್ಯಾವಾಗಿನಿಂದ ಶುರುವಾಯಿತೋ ಅವರಿಗೂ ಗೊತ್ತಿರಲಿಕ್ಕಿಲ್ಲ.
ಅಂದಹಾಗೆ ನನ್ನ ಅಪ್ಪ-ಅಮ್ಮ, ಅವರಿಗೆ ಒಂಭತ್ತು ವರ್ಷಗಳಾದಾಗ ಮೊದಲ ಭೇಟಿಯಾಗಿದ್ದು. ಪ್ರತಿದಿನ ಪಾರ್ಕಿನ ಬೆಂಚಿನ ಮೇಲೆ ಅವರಿಬ್ಬರೂ ಹೋಮ್‌ವರ್ಕ್ ಮಾಡುತ್ತಿದ್ದರು. ಅಮ್ಮ ಅಪ್ಪನ ಇಂಗ್ಲಿಷ್ ಅನ್ನು ಕರೆಕ್ಟ್ ಮಾಡುತ್ತಿದ್ದಳು. ಅಪ್ಪ ಅಮ್ಮನ ಗಣಿತವನ್ನು ಕರೆಕ್ಟ್ ಮಾಡುತ್ತಿದ್ದ. ಇವರಿಬ್ಬರನ್ನೂ ಸ್ಕೂಲಿನ ಎಲ್ಲ ಮೇಷ್ಟ್ರುಗಳು ಶಾಲೆಯ 'ಅತ್ಯುತ್ತಮ ವಿದ್ಯಾರ್ಥಿ' (ವಿದ್ಯಾರ್ಥಿಗಳು ಅಲ್ಲ, ವಿದ್ಯಾರ್ಥಿ) ಎಂದು ಕರೆಯುತ್ತಿದ್ದರು. ಕ್ಲಾಸಿನ ಹೊರಗೆ ಬಂದರೆ ಇಬ್ಬರೂ ಒಟ್ಟಿಗೆ ಪಠ್ಯ-ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದರು. ನೋಟ್ಸ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಅವಳ ಹೋಮ್‌ವರ್ಕ್‌ಗಳನ್ನು ಇವನೇ ಮಾಡಿಬಿಡುತ್ತಿದ್ದನಂತೆ.
ಅವರಿಬ್ಬರಲ್ಲಿ ಅದೆಂಥ ಅನ್ಯೋನ್ಯವಿತ್ತೋ ಏನೋ? ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಇಬ್ಬರೂ ಈ ಸಂಬಂಧದ ಗೆಳೆತನವನ್ನು ಗೌರವಿಸುತ್ತಿದ್ದರು, ಪ್ರೀತಿಸುತ್ತಿದ್ದರು. ಅಪ್ಪನಿಗೆ ಇವಳೇ ನನ್ನ ಸಂಗಾತಿ, ಸ್ನೇಹಿತೆ, ಪತ್ನಿ ಎಂದು ಖಾತ್ರಿಯಾಗಿ ಹೋಗಿತ್ತು. ಅಮ್ಮ ಕೂಡ ಇಷ್ಟೇ. ಅವಳಿಗೂ ಯಾವುದೇ ಸಂದೇಹವಿರಲಿಲ್ಲ. ಅವರಿಬ್ಬರೂ ಮೊಟ್ಟ ಮೊದಲ ಬಾರಿಗೆ ತಬ್ಬಿಕೊಂಡು ಚುಂಬಿಸಿದ್ದು ಅವರಿಗೆ ಹದಿನೇಳು ವರ್ಷಗಳಾದಾಗ. ಈಗ ಇಬ್ಬರಿಗೂ ಎಂಭತ್ತೇಳು ವರ್ಷ ವಯಸ್ಸು! ಅವರಿಬ್ಬರೂ ಮೊದಲ ಸಲ ಭೇಟಿಯಾದಂದಿನಿಂದ ಇಲ್ಲಿ ತನಕ ಒಟ್ಟಿಗೇ ಇದ್ದಾರೆ.
ಅವರಿಬ್ಬರ ಪ್ರೀತಿ, ಸಂಬಂಧ ಎಷ್ಟು ಗಾಢವಾದುದು, ಎಷ್ಟು ಗಟ್ಟಿಯಾದುದು ಎಂಬುದು ಬೇರೆಯವರ ಗಮನಕ್ಕೆ ಬಂದಿದ್ದು 1964ರಲ್ಲಿ. ಅಪ್ಪನಿಗೆ ಏಕಾಏಕಿ ನೋವು ಕಾಣಿಸಿಕೊಂಡಿತು. ಅಮ್ಮ ಸ್ವತಃ ಕಾರನ್ನು ಡ್ರೈವ್ ಮಾಡಿಕೊಂಡು ಅಪ್ಪನನ್ನು ಆಸ್ಪತ್ರೆಗೆ ಕರೆದು ಕೊಂಡು ಬಂದಳು. ಅಪ್ಪನನ್ನು ವೈದ್ಯರು ಪರೀಕ್ಷಿಸಿದರು. ಅವರು ಹೇಳಿದ್ದನ್ನು ಕೇಳಿ ಅಮ್ಮ ಅಲ್ಲಿಯೇ ಕುಸಿದು ಬಿದ್ದಳು.
ಕ್ಯಾನ್ಸರ್!
ಹೆಚ್ಚೆಂದರೆ ಆರು ತಿಂಗಳು ಬದುಕಬಹುದು ಎಂದರು.
ಅಮ್ಮನಿಗೆ ಎಚ್ಚರವಾದಾಗ ನಲವತ್ತೆಂಟು ಗಂಟೆ ಕಳೆದು ಹೋಗಿತ್ತು. ಆದರೆ ಅಪ್ಪ ಮಾತ್ರ ಗುಂಡು ಕಲ್ಲಿನಂತೆ ನಿಶ್ಚಿಂತೆಯಿಂದ ಇದ್ದ. 'ಸಾರಿ ಡಾಕ್ಟರ್, ನೀವು ಹೇಳಿದ್ದನ್ನು ನಾನು ಖಂಡಿತವಾಗಿಯೂ ಒಪ್ಪುವುದಿಲ್ಲ.' ಎಂದು ಡಾಕ್ಟರ್‌ಗೆ ಅಪ್ಪ ಹೇಳಿದ. ಡಾಕ್ಟರ್ ಮಾತ್ರ ಮರು ಮಾತಾಡದೇ ಸುಮ್ಮನಿದ್ದರು. ಇಲ್ಲ. ಇಲ್ಲ. ನೀವು ಆರು ತಿಂಗಳಲ್ಲಿ ಸಾಯುತ್ತೀರಿ ಎಂದು ಡಾಕ್ಟರ್ ಹೇಗೆ ಹೇಳಿಯಾರು?
ಅಷ್ಟಕ್ಕೆ ಸುಮ್ಮನಾಗದ ಅಪ್ಪ, 'ಡಾಕ್ಟರ್, ನನ್ನ ಮಾತಲ್ಲಿ ನಿಮಗೆ ನಂಬಿಕೆ ಕಟ್ಟಲಿಲ್ಲ ಅಂತ ಕಾಣಿಸುತ್ತೆ. ಮೃತ್ಯುಕೂಪಕ್ಕೆ ಹತ್ತಿರದಲ್ಲಿದ್ದವನ ಮಾತು ಎಂದು ನಿಮಗನಿಸಬಹುದು. ಆದರೆ ಅತ್ಯಂತ ವಿವೇಕದಿಂದ ಈ ಮಾತನ್ನು ಹೇಳುತ್ತೇನೆ, ಕೇಳಿ... ನಾನು ನನ್ನ ಹೆಂಡತಿಗಿಂತ ಒಂದು ದಿನ ಹೆಚ್ಚು ಬದುಕುತ್ತೇನೆ. ಯಾಕೆಂದರೆ ನಾನು ಅವಳನ್ನು ನನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದೇನೆ. ನನ್ನ ಪ್ರೀತಿ ಸುಳ್ಳಾಗಲು ಸಾಧ್ಯವೇ ಇಲ್ಲ. ನಾನೇದರೂ ಅವಳಿಗಿಂತ ಮೊದಲೇ ಸತ್ತರೆ ನನ್ನ ಪ್ರೀತಿ ಅಷ್ಟರಮಟ್ಟಿಗೆ ಖೊಟ್ಟಿ ಅಂತಾಗಲಿ. ಆದ್ದರಿಂದ, ನೀವು ಹೇಳಿದಂತೆ, ನಾನು ಇನ್ನೂ ಹೆಚ್ಚು ದಿನ ಬದುಕಿರುವುದಿಲ್ಲ ಎಂದು ಹೇಳಿದರಲ್ಲ ಅದನ್ನು ಸುಳ್ಳು ಎಂದು ಸಾಬೀತು ಮಾಡುತ್ತೇನೆ' ಎಂದು ಬಡಬಡಿಸಿದ. ಅದಕ್ಕೂ ಡಾಕ್ಟರ್ ಏನೂ ಹೇಳಲಿಲ್ಲ. ಅಪ್ಪನನ್ನು ಸಂತಸದಿಂದ ಬೀಳ್ಕೊಟ್ಟರು. 'ನೀವು ಕ್ಯಾನ್ಸರ್ ಅನ್ನು ಜಯಿಸಿ ಹೆಚ್ಚು ವರ್ಷ ಬದುಕಿದರೆ ನಮಗೂ ಸಂತಸವೇ. ನಮ್ಮ ಮಾತು ಸುಳ್ಳಾಗಲಿ, ನೀವು ಹೇಳಿದ್ದೇ ನಿಜವಾಗಲಿ ಎಂದು ನಾವೂ ಆಶಿಸುತ್ತೇವೆ. ಬೆಸ್ಟ್ ಆಫ್ ಲಕ್' ಎಂದು ಹರಸಿದರು.
ಡಾಕ್ಟರ್‌ಗಳಿಗೇನು ಗೊತ್ತು. ನನ್ನ ಅಪ್ಪ-ಅಮ್ಮನ ಪ್ರೇಮ ಪುರಾಣ? ಇವನೊಬ್ಬ ಮಾಮೂಲಿ ರೋಗಿ ಅವರ ಪಾಲಿಗೆ. ಕ್ಯಾನ್ಸರ್‌ಗೆ ತುತ್ತಾಗಿದ್ದೀಯಾ ಎಂದು ಯಾರಿಗಾದರೂ ಹೇಳಿದರೆ, ಜಂಘಾಬಲವೇ ಉಡುಗಿ ಹೋಗುತ್ತದೆ. ಆದರೆ ಈವಯ್ಯ ಖುಷಿಖುಷಿಯಿಂದ ಇದ್ದ, ಏನೂ ಆಗದವರಂತೆ ಎಂದು ಡಾಕ್ಟರ್‌ಗಳು ತಮ್ಮ ತಮ್ಮೊಳಗೆ ಮಾತಾಡಿಕೊಂಡರು.
ಆರು ತಿಂಗಳು ಕಳೆಯಿತು... ಒಂದು ವರ್ಷ ಕಳೆಯಿತು...ಎರಡು...ಮೂರು... ಐದು ವರ್ಷಗಳೂ ಕಳೆದವು. ಅಪ್ಪ ಎಂದಿಗಿಂತ ಹೆಚ್ಚು ಉಲ್ಲಸಿತನಾಗಿದ್ದ. ಅವನ ಸಂತಸ, ಚಟುವಟಿಕೆ ಕಂಡು ನಮಗೆಲ್ಲ ಬೆರಗು ಮೂಡಿತ್ತು. ಇದನ್ನು ತಮಾಷೆಯೆನ್ನಬೇಕೋ, ವಿಚಿತ್ರವೆನ್ನಬೇಕೋ ಗೊತ್ತಿಲ್ಲ, ಅಪ್ಪನಿಗೆ ತಾನು ಕ್ಯಾನ್ಸರ್ ಪೀಡಿತನೆಂಬುದು ಮರೆತು ಹೋಗಿತ್ತು!
ವರ್ಷಗಳು ಉರುಳಿದವು... ಹತ್ತು ವರ್ಷಗಳಾದವು... ಹದಿನೈದು... ಇಪ್ಪತ್ತು ವರ್ಷಗಳಾದವು. ಅಪ್ಪ ಗುಂಡುಕಲ್ಲು. ಬೆಳಗ್ಗೆ ಬೇಗನೆ ಎದ್ದು ಅಪ್ಪನಿಗೆ ಕಾಫಿ ಮಾಡಿಟ್ಟು ಎಬ್ಬಿಸಿ, ಸ್ನಾನ ಮಾಡಿ, ಬೆಳಗಿನ ಉಪಾಹಾರವನ್ನು ಸಿದ್ಧಪಡಿಸುತ್ತಿದ್ದ. ಅಮ್ಮನಿಗೆ ಕಷ್ಟವಾಗಬಾರದೆಂದು ಅವಳ ಎಲ್ಲ ಕೆಲಸಗಳನ್ನು ತಾನೇ ಮಾಡುತ್ತಿದ್ದ ಅಥವಾ ಅವಳಿಗೆ ನೆರವಾಗುತ್ತಿದ್ದ.
ಇಪ್ಪತ್ಮೂರು ವರ್ಷಗಳಾದವು. ಕ್ಯಾನ್ಸರ್ ಎಲ್ಲಿ ಓಟಕಿತ್ತಿತ್ತೋ ಗೊತ್ತಿಲ್ಲ. ಆದರೆ ಅಪ್ಪನಿಗೊಂದು ಆಘಾತ ಕಾದಿತ್ತು. ತನ್ನ ಎಂಭತ್ತಾರನೆ ವಯಸ್ಸಿನಲ್ಲಿ ಅಮ್ಮ ತೀರಿಕೊಂಡಳು. ಅದಾಗಿ ಸರಿಯಾಗಿ ಒಂದು ವರ್ಷದ ಬಳಿಕ ಅಪ್ಪನೂ ನಿಧನನಾದ. 'ನಾನು ಹೇಳಿರಲಿಲ್ಲವಾ, ಅವಳು ತೀರಿ ಹೋದ ಬಳಿಕವೇ ನಾನು ಸಾಯೋದು ಅಂತ' ಎಂದು ಸಾಯುವುದಕ್ಕೆ ಕೆಲ ತಾಸುಗಳ ಮೊದಲು ಹೇಳಿದ. ಕೊನೆಯಲ್ಲಿ ಆತ ಹೇಳಿದ ಮಾತು ಈಗಲೂ ನನ್ನ ಕಿವಿಯಂಗಳದಲ್ಲಿ ಕುಳಿತಿದೆ-'ಆ ಇಪ್ಪತ್ಮೂರು ವರ್ಷಗಳು ನನ್ನ ಪಾಲಿನ ಅತ್ಯಂತ ಸುಮಧುರ ಆರು ತಿಂಗಳುಗಳು.'
ಅಪ್ಪ ಆಸ್ಪತ್ರೆಯ ವೈದ್ಯರಿಗೆ ವಿಸ್ಮಯನಾಗಿಬಿಟ್ಟ. ಕ್ಯಾನ್ಸರ್ ಕಣಗಳಿಂದ ಜರ್ಝರಿತವಾದ ದೇಹ ಇಪ್ಪತ್ಮೂರು ವರ್ಷ ಬದುಕಿದ್ದಾದರೂ ಹೇಗೆ? ಈ ಪ್ರಶ್ನೆಗೆ ಅಪ್ಪನೇ ಹೇಳುತ್ತಿದ್ದ- ನಾನು ಮೊದಲ ವಿಶ್ವ ಯುದ್ಧದಲ್ಲಿ ವೈದ್ಯನಾಗಿದ್ದೆ. ಕೈ ಕಾಲು ಕಳೆದುಕೊಂಡ ಅಸಂಖ್ಯ ಸೈನಿಕರ ನರಳಾಟವನ್ನು ಕಣ್ಣಾರೆ ಕಂಡಿದ್ದೆ. ಕೆಲವು ಸೈನಿಕರು ತಮ್ಮ ಕೈ ಕಾಲುಗಳನ್ನು ತಾವೇ ಕತ್ತರಿಸಿಕೊಳ್ಳುತ್ತಿದ್ದರು. ನಮ್ಮ ದೇಹವನ್ನು ನಿಯಂತ್ರಿಸುವುದು ಮನಸ್ಸು. ಅದನ್ನು ಗಟ್ಟಿ ಮಾಡಿಕೊಂಡರೆ ಎಂಥ ನೋವನ್ನಾದರೂ ಸಹಿಸಿಕೊಳ್ಳಬಹುದು. ಅಷ್ಟಕ್ಕೂ ನಾನು ಹೇಳಿದ ಹಾಗೆ ನನ್ನ ದೇಹ ಕೇಳುತ್ತದೆ. ತುಸು ಎದೆ ನೋವು ಕಾಣಿಸಿಕೊಂಡರೆ 'ಶಟಪ್, ಇಂದು ನನಗೆ ಪಾರ್ಟಿಯಿದೆ, ಹೆಂಡತಿ ಜತೆ ಹೋಗಬೇಕು' ಎಂದು ಹೇಳುತ್ತಿದ್ದ.
ಸಾಯಲು ಎರಡು ದಿನಗಳ ಮೊದಲು, 'ಮಕ್ಕಳೇ ನಾನು ನಿಮ್ಮ ಅಮ್ಮನನ್ನು ನೋಡಬೇಕು. ನಾನು ಸದ್ಯದಲ್ಲಿಯೇ ಹೊರಡಲಿದ್ದೇನೆ. ನೀವು ನಿಧಾನವಾಗಿ ಬನ್ನಿ. ನಿಮ್ಮ ಬದುಕು ದೀರ್ಘವಾಗಿದೆ. ಒಂದು ವರ್ಷವಾಯಿತು ಒಬ್ಬಳೇ ಇದ್ದಾಳೆ, ಅವಳನ್ನು ಅಲ್ಲಿ ಬಿಟ್ಟು ನಾನೊಬ್ಬನೇ ಹೇಗೆ ಇರಲಿ?' ಎಂದು ಹೇಳಿದ್ದ.
ಒಂದು ಗುರಿ, ಪ್ರೀತಿ ಹಾಗೂ ಕನಸು ಇದ್ದರೆ ನಮ್ಮ ದೇಹ ಹಾಗೂ ಬದುಕಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಬಹುದೇನೋ ಎಂಬ ಪಾಠವನ್ನು ಅಪ್ಪ ನಮಗೆ ಬಿಟ್ಟು ಹೋದ.
---
ಅದೆಲ್ಲ ಸರಿ. ಈ ಕತೆಯನ್ನೇ ನನಗೆ ಅಕ್ಷರ ಉಡುಗೊರೆಯಾಗಿ ಕೊಡಿ ಎಂದು ಪ್ರಶಾಂತ ಹೇಳಿದ್ಯಾಕೆ? ಗೊತ್ತಾಗುತ್ತಿಲ್ಲ. ಆತನ ದಾಂಪತ್ಯ ಬೆಚ್ಚಗಿರಲಿ.
- ವಿಶ್ವೇಶ್ವರ ಭಟ್
vbhat@me.com