ಅಂಕಣಗಳು

ಪತ್ರಕರ್ತರಿಗೆ ಲೈಸೆನ್ಸ್ ಎಂಬ ನಿರಂಕುಶ ಯೋಚನೆ

Published On :

ಭಾರತದ ಪತ್ರಕರ್ತರಿಗೆ ಪರವಾನಗಿ ನೀಡುವುದಕ್ಕೆ ಪರೀಕ್ಷೆ ನಡೆಸಬೇಕು ಎಂದು ಹೇಳಿರುವ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ಅವರು ಅತ್ಯಂತ ಟೀಕೆಗೆ ಗುರಿಯಾಗಿದ್ದಾರೆ. ಈ ಅಭಿಪ್ರಾಯ ವಿವೇಕ ರಹಿತವಾದದ್ದು ಹಾಗೂ ಹಾಸ್ಯಾಸ್ಪದ ಎಂಬ ಮಾತುಗಳ ಮೂಲಕ ಪತ್ರಕರ್ತರು ತಮ್ಮ ಭಾವನೆಗಳನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ.
ವೃತ್ತಿಪರ ಸಂಸ್ಥೆಯೊಂದರ ಮೂಲಕ ಪತ್ರಕರ್ತರಾಗುವವರಿಗೆ 'ಸಾಮಾನ್ಯ ಪ್ರವೇಶ ಪರೀಕ್ಷೆ'ಯೊಂದನ್ನು ನಡೆಸಬೇಕು. ಆ ಆಧಾರದಲ್ಲಿ ಪತ್ರಕರ್ತರಿಗೆ ಲೈಸೆನ್ಸ್ ಕೊಡಬೇಕು ಎಂಬುದು ಮನೀಶ್ ತಿವಾರಿಯವರ ಸಲಹೆ. ಇಷ್ಟಾದ ನಂತರವೇ ಖಾಸಗಿ ಕಾಲೇಜುಗಳಲ್ಲಿ ದಂಡಿಯಾಗಿ ಹಣತೆತ್ತು ಕೋರ್ಸು ಮುಗಿಸಿದ ಹೆಚ್ಚಿನವರು ಮಾಧ್ಯಮ ಮಾರುಕಟ್ಟೆಯಲ್ಲಿ ಉದ್ಯೋಗ ಹುಡುಕಿಕೊಂಡು ತಾವು ಏನನ್ನು ಕಲಿತಿದ್ದಾರೋ ಅಥವಾ ಕಲಿತಿಲ್ಲವೋ ಅದನ್ನು ಪ್ರಾಕ್ಟೀಸ್‌ಗೆ ತರಲು ಅರ್ಹರಾಗುತ್ತಾರೆ ಎಂಬುದು ತಿವಾರಿ ಆಲೋಚನಾ ಧಾಟಿ. 'ನನಗನ್ನಿಸುವುದು ಏನೆಂದರೆ ಪಠ್ಯದಲ್ಲಿ ಗುಣಮಟ್ಟವನ್ನು ತಂದು ಅದನ್ನು ಎಲ್ಲ ಸಂಸ್ಥೆಗಳಲ್ಲಿ ಜಾರಿಗೆ ತರುವುದಕ್ಕೂ ಮುಂಚೆ, ಮಾಧ್ಯಮ ಸಾಮ್ರಾಜ್ಯವು ಕಾಮನ್ ಎಕ್ಸಾಮ್ ಒಂದನ್ನು ಹೊಂದುವ ಬಗ್ಗೆ ಯೋಚಿಸಬೇಕಾಗಿದೆ.' ಎಂದರು ತಿವಾರಿ.
ನಿರೀಕ್ಷೆಯಂತೆಯೇ ಭಾರತೀಯ ಮಾಧ್ಯಮದ ಬಹುದೊಡ್ಡ ವರ್ಗ ತನ್ನ ಪ್ರಖರ ಪ್ರತಿಭಟನೆಯನ್ನು ದಾಖಲಿಸಿತು. ಈ ಕುರಿತ ಟೀಕೆಗಳಿಗೆ ಮೀರಿದ ರಾಜಕೀಯ ಸಂವಾದವೊಂದು ಈ ನಿಟ್ಟಿನಲ್ಲಿ ತೆರೆದುಕೊಂಡಿದೆ. ಸಂಸತ್ತಿನಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿರುವ ಜೇ ಪಾಂಡಾ ಟ್ವೀಟ್ ಮಾಡಿದರು: 'ಮುಂದೆ ನೀವು ಟ್ವಿಟ್ಟರ್‌ನಲ್ಲಿ ಸಂದೇಶ ನೀಡುವುದಕ್ಕೂ ಮೊದಲು ಸರ್ಕಾರದ ಲೈಸೆನ್ಸ್ ಪಡೆಯುವ ಸ್ಥಿತಿ ಬರಬಹುದು.'
ಇದೇನೆ ಇದ್ದರೂ ವಾಸ್ತವ ಏನೆಂದರೆ ಭಾರತೀಯ ರಾಜಕಾರಣದ ಬಹುದೊಡ್ಡವರ್ಗ ಮಾಧ್ಯಮವನ್ನು ತನಗೆ ಅಡ್ಡಗಾಲಾಗಿ ನಿಂತಿರುವ ವ್ಯವಸ್ಥೆ ಎಂದೇ ಪರಿಭಾವಿಸುತ್ತದೆ. ಅಭಿಪ್ರಾಯ ನಿರೂಪಣೆಯಲ್ಲಿ ಸರ್ಕಾರದ ನಿಯಂತ್ರಣವನ್ನು ತಡೆಯುತ್ತಿರುವ ಶಕ್ತಿಯೇ ಮಾಧ್ಯಮ ಎಂಬ ಅಸಹನೆ ಈ ರಾಜಕೀಯ ವರ್ಗಕ್ಕಿದೆ.
ಮನೀಶ್ ತಿವಾರಿ ಅವರಂಥ (ಸುಳ್ಳು) ಮಾಹಿತಿಯ ಮಂತ್ರಿ ಇರಬೇಕಾದರೆ ಸುಳ್ಳನ್ನು ಹರಡುವುದಕ್ಕೆಂದೇ ಹಿಟ್ಲರ್ ನೇಮಿಸಿಕೊಂಡಿದ್ದ ಜೋಸೆಫ್ ಗೊಬ್ಬೆಲ್ಸ್‌ನಂಥ ವ್ಯಕ್ತಿಗಳ ಅವಶ್ಯ ಈ ಕಾಲದಲ್ಲೇನಿದೆ? ಮನೀಶ್ ತಿವಾರಿ ಯೌವ್ವನದ ದಿನಗಳಿಂದಲೂ ಕಾಂಗ್ರೆಸ್ ಆವಾರದಲ್ಲೇ ವಿಕಸನ ಹೊಂದಿದವರು. ಇದೀಗ ಕಾಂಗ್ರೆಸ್‌ನ ಪ್ರಚಾರ ಸಮಿತಿಯ ಅಗ್ರಶ್ರೇಣಿಯಲ್ಲೂ ಇದ್ದಾರೆ. ಇವರದ್ದೇ ಪ್ರಚಾರಾಂದೋಲನವು ನರೇಂದ್ರ ಮೋದಿಯವರನ್ನು ವಿರೋಧಿಸುವುದಕ್ಕೆ ಅವರು ಫ್ಯಾಸಿಸ್ಟ್ ಧೋರಣೆ ಹೊಂದಿದ್ದಾರೆ ಎಂಬ ಕಾರಣ ಕೊಡುತ್ತದೆ. ಲೈಸೆನ್ಸ್‌ನ ಏಕಚಕ್ರಾಧಿಪತ್ಯದಲ್ಲಿ ಅಭಿಪ್ರಾಯ ನಿರೂಪಣೆಯನ್ನೇ ತಂದು ನಿಲ್ಲಿಸಲು ಹೊರಟವರಿಗೆ ಇಂಥ ಆರೋಪ ಮಾಡುವ ನೈತಿಕತೆ ಎಲ್ಲಿದೆ?
ಇವರು ಸರ್ಕಾರದ ಪರ ಮಾಹಿತಿ ವಿಭಾಗದ ಸಚಿವರಾಗಿದ್ದಾರೆ ಹಾಗೂ ಸರ್ಕಾರೇತರವಾಗಿ ಅಂದರೆ ಪಕ್ಷದ ನೆಲೆಯಲ್ಲೂ ಪ್ರಚಾರಾಂದೋಲನದ ಮೂಲಕ ಮಾಹಿತಿ ನೀಡಿಕೆಯ ವಿಭಾಗವನ್ನೇ ಪ್ರತಿನಿಧಿಸುತ್ತಿದ್ದಾರೆ. ಇಷ್ಟಾಗಿಯೂ ಇವರಿಗೆ ಮಾಹಿತಿ ನೀಡಿಕೆಯ ಉದ್ಯೋಗದ ಬಗ್ಗೆ ತಪ್ಪು ಕಲ್ಪನೆ ಬಂದಿದ್ದು ಹೇಗೆ? ಮಾಧ್ಯಮದ ಹಲವಾರು ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಅನೇಕ ಹಿರಿಯ ಪತ್ರಕರ್ತರು ಮಾಧ್ಯಮ ಪ್ರಪಂಚವು ಆಳ ಮತ್ತು ತೀಕ್ಷ್ಣತೆಯನ್ನು ಕಳೆದುಕೊಂಡಿದೆ ಎಂಬ ಅಭಿಪ್ರಾಯ ಪಟ್ಟಿದ್ದಿದೆ. ಇದನ್ನು ಸುಧಾರಿಸಿಕೊಳ್ಳುವುದಕ್ಕೆ ಅವರು ಮಾರ್ಗೋಪಾಯಗಳನ್ನೂ ಸೂಚಿಸಿದ್ದಾರೆ. ಈಗ ಅಂತಲ್ಲ, ಈ ಹಿಂದೆಯೂ ಮಾಧ್ಯಮ ಪ್ರಪಂಚದಲ್ಲಿ ಅಧಿಕಾರ ಮತ್ತು ಹಣದ ಸುತ್ತ ಗಿರ್ಕಿ ಹೊಡೆದ ಎರಡನೆ ದರ್ಜೆಯ ಪತ್ರಕರ್ತರು ಇದ್ದರು.
ಸ್ವಾತಂತ್ರ್ಯಾನಂತರ ಬಹುದೀರ್ಘ ಅವಧಿಗೆ ವೃತ್ತಪತ್ರಿಕೆ ಎಂಬುದು ಒಂದು ಉದ್ದೇಶದ ಅಭಿಯಾನಕ್ಕೆ ಮೀಸಲಾದ ಕಾರ್ಯವಾಗಿತ್ತು. ಬೇರೆ ಉದ್ಯಮವನ್ನು ನೆಚ್ಚಿಕೊಂಡಿರುವ ಉದ್ಯಮಿಗಳು ಇದನ್ನು ಪೂರಕವೆಂಬಂತೆ ನಡೆಸಿಕೊಂಡು ಬರುತ್ತಿದ್ದರು. ಪತ್ರಕರ್ತರಿಗೂ ಯಕಶ್ಚಿತ್ ಎಂಬ ಸಂಬಳವಿತ್ತು. ಮೂರು ದಶಕಗಳವರೆಗೆ ಯಾವುದೇ ಹೊಸ ಪತ್ರಿಕೆಗಳು ಹುಟ್ಟಿಕೊಳ್ಳಲಿಲ್ಲ. ಪತ್ರಕರ್ತರು ತಮ್ಮನ್ನು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡವರಾಗಿ ಪರಿಭಾವಿಸಿಕೊಂಡಿದ್ದರು.
ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಯಾವಾಗ ತೆರವುಗೊಂಡಿತೋ ಆಗ ಪರಿಸ್ಥಿತಿ ಬದಲಾಯಿತು. ತನಿಖೆ ಮತ್ತು ಆಕ್ರೋಶದ ಪತ್ರಿಕೋದ್ಯಮ ಅಲ್ಲಿಂದಲೇ ತಲೆಎತ್ತಿ ನಿಂತಿತು. 1970ರ ದಶಕದಲ್ಲಿ ಹಲವು ನಿಯತಕಾಲಿಕಗಳು ಹುಟ್ಟಿಕೊಂಡವು. 1980ರ ವೇಳೆಗೆ ಮಾಧ್ಯಮವು ಉದ್ಯಮ ಎಂಬುದಾಗಿ ಬದಲಾಯಿತು ಹಾಗೂ ಇಲ್ಲಿ ಲಾಭಕ್ಕೆ ಅವಕಾಶ ತೆರೆದುಕೊಂಡಿತು. ಉದ್ಯಮಿಗಳು ಆಸಕ್ತಿ ತಾಳಿದ್ದರಿಂದ ಭಾರಿ ಹಣವೂ ಹರಿದುಬಂತು. ಪತ್ರಕರ್ತರಿಗೆ ಈ ಹಿಂದಿನಿಗಿಂತ ಹಲವು ಪಟ್ಟು ಹೆಚ್ಚು ಮೊತ್ತದ ಹಣ ಸಂಬಳವಾಗಿ ಸಿಗತೊಡಗಿತು.
ಆದಾಗ್ಯೂ 1990ರ ಆರ್ಥಿಕ ಉದಾರೀಕರಣಕ್ಕೂ ಮೊದಲು ಭಾರತದಲ್ಲಿ ಮಾಧ್ಯಮ ಪ್ರಪಂಚ ಎನ್ನುವುದು ಮಿತಿಯಲ್ಲೇ ಇತ್ತು. ಸಾಕ್ಷರತೆಯಲ್ಲಾದ ಹೆಚ್ಚಳ, ಉಪಗ್ರಹ ಆಧಾರಿತ ಟವಿ ಚಾನೆಲ್‌ಗಳು ಇಂಥ ಹಲವು ಅಂಶಗಳಿಂದ ಭಾರತೀಯ ಭಾಷೆಗಳಲ್ಲಿ ಮಾಧ್ಯಮದ ಪ್ರಭೆ ಎನ್ನುವುದು ಪ್ರಜ್ವಲಿತವಾಗಿ ಬೆಳಗುತ್ತಿದೆ. ಪರಿಣಾಮವಾಗಿ ಪತ್ರಕರ್ತರಿಗೆ ಭಾರಿ ಬೇಡಿಕೆ ಕುದುರಿತು. ಆದರೆ ಉದ್ಯಮವೇನೋ ಅಗಾಧವಾಗಿ ಚಾಚಿಕೊಂಡಿತಾದರೂ ಪತ್ರಕರ್ತರನ್ನು ಸೂಕ್ತ ತರಬೇತಿನೊಂದಿಗೆ ರೂಪಿಸುವ ವೇದಿಕೆಯ ಅಭಾವ ತುಂಬಲೇ ಇಲ್ಲ.
ಈ ನಿಟ್ಟಿನಲ್ಲಿ ಭಾರತದ ಮಾಧ್ಯಮವು ಸರಿಪಡಿಸಿಕೊಳ್ಳುವ ಕ್ರಮಗಳಿಗೆ ಮುಂದಾಗಲೇಬೇಕು. ಆದರೆ ಇಂಥ ಯಾವ ಕೊರತೆಗಳಿಗೂ ಪತ್ರಕರ್ತರಿಗೆ ವಿಮಾನದ ಪೈಲಟ್‌ಗಳಂತೆ ಲೈಸೆನ್ಸ್ ಜಾರಿ ಮಾಡುವ ವ್ಯವಸ್ಥೆ ತರುವುದರಿಂದ ಉತ್ತರ ಕೊಡಲಾಗುವುದಿಲ್ಲ. ಮುಕ್ತ ಮಾಧ್ಯಮದ ದೀರ್ಘ ಸಂಪ್ರದಾಯವೇ ಭಾರತದ ಬೆನ್ನಿಗಿದ್ದು ಇಂಟರ್‌ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಈ ಕಾಲಘಟ್ಟದಲ್ಲಿ ಅದು ಮತ್ತಷ್ಟು ಪ್ರಖರವಾಗಿದೆ.
ಪತ್ರಕರ್ತರನ್ನು ಗುರಿ ಮಾಡುವುದಕ್ಕಿಂತ ಸರ್ಕಾರ ಮತ್ತು ಅದರ ರಾಜಕೀಯ ನೇತಾರರು ಮಾಧ್ಯಮದ ಒಡೆತನ ಮತ್ತು ಸಹಭಾಗಿತ್ವದ ಕುರಿತು ಇರುವ ಕಾಯ್ದೆಗಳನ್ನು ಪರಾಮರ್ಶೆ ಮಾಡುವ ಮೂಲಕ ಈ ವೃತ್ತಿಗೆ ನ್ಯಾಯ ಒದಗಿಸಬಹುದಾಗಿದೆ. ಭಾರತೀಯ ಮಾಧ್ಯಮದಲ್ಲಿ ಸ್ವಹಿತಾಸಕ್ತಿ ಗುಂಪುಗಳೇ ಅಧಿಕವಾಗಿದ್ದು ಈ ಬಲಗಳಿಂದ ಮಾಧ್ಯಮವನ್ನು ಮುಕ್ತವಾಗಿಸುವ ಕಾರ್ಯ ನಡೆದರೆ, ಉಳಿದ ಸರಿಪಡಿಕೆ ಕ್ರಮಗಳ ಬಗ್ಗೆ ನಂತರದಲ್ಲಿ ಯೋಚಿಸಬಹುದು.

- ನೀಲಾಂಜನ ಮುಖೋಪಾಧ್ಯಾಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.