ಹಿರಿಯ ನಾಗರಿಕರಿಗೆ ಏಕೀ ದುರವಸ್ಥೆ?

ಅರವತ್ತೈದು ವರ್ಷದ ಮೀರಾ ಪೈ ಉಡುಪಿ ಕಾಡಬೆಟ್ಟಿನ ನಿವಾಸಿ. ಸುಮಾರು ಎರಡು ದಶಕಗಳ ಹಿಂದೆ ಅಪಘಾತವೊಂದರಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ ಅವರಿಗೆ ಜೀವವಿಮೆ, ಆರೋಗ್ಯ ವಿಮೆ ಹಾಗೂ ಅಪಘಾತವಿಮೆಯ ಅವಶ್ಯಕತೆಯ ಬಗ್ಗೆ ಸರಿಯಾದ ಅರಿವು ಮೂಡಿತ್ತು. 2009ರ ಆಗಸ್ಟ್ ತಿಂಗಳಲ್ಲಿ ಉಡುಪಿಯ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪನಿಯಿಂದ ಆರೋಗ್ಯ ವಿಮಾ ಪಾಲಿಸಿಯೊಂದನ್ನು ಖರೀದಿಸಿದ್ದರು. ಹಿರಿಯ ನಾಗರಿಕರು ಅನಾರೋಗ್ಯಕ್ಕೆ ಒಳಗಾದಾಗ ಸಂಪೂರ್ಣ ಚಿಕಿತ್ಸಾ ವೆಚ್ಚ ಪಾವತಿಸುವ ವಿಮಾ ಯೋಜನೆ ಇದು. ಒಂದು ವರ್ಷ ಅವಧಿಯೊಳಗೆ ಒಂದು ಲಕ್ಷ ರುಪಾಯಿವರೆಗಿನ ಆಸ್ಪತ್ರೆಯ ಬಿಲ್ಗಳನ್ನು ಪಾವತಿಸಲು 4,300 ರು ಪ್ರೀಮಿಯಂ ತೆರಬೇಕಾಯಿತು. ಅಂದಿನಿಂದ ಪ್ರತಿ ಆಗಸ್ಟ್ ತಿಂಗಳಲ್ಲಿ ಪಾಲಿಸಿಯನ್ನು ನವೀಕರಿಸಿದ್ದಾರೆ. ತಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದ ಮೀರಾ ಪೈ ಮೊದಲ ಮೂರು ವರ್ಷಗಳ ಕಾಲ ಯಾವುದೇ ಕ್ಲೈಮ್ ಸಲ್ಲಿಸಿರಲಿಲ್ಲ.
2012 ನವೆಂಬರ್ ತಿಂಗಳಲ್ಲಿ ಒಮ್ಮಿಂದೊಮ್ಮೆಲೆ ಅವರ ದೃಷ್ಟಿ ಮಂದವಾಗತೊಡಗಿತು. ಉಡುಪಿಯ ನೇತ್ರತಜ್ಞ ಡಾ. ಸಂದೀಪ್ ಶಣೈಯವರನ್ನು ಕಂಡು ವಿಚಾರಿಸಿದಾಗ ಆಕೆಯ ಬಲಗಣ್ಣಲ್ಲಿ ಕ್ಯಾಟಕಾಕ್ಟ್ (cataract) ಬೆಳೆದಿರುವುದಾಗಿಯೂ ಎಡಗಣ್ಣಿನ ದೃಷ್ಟಿ ಅದಾವುದೋ ಕಾರಣಕ್ಕೆ ಮಂದವಾಗಿರುವುದಾಗಿಯೂ ತಿಳಿಸಿದರು. ಕಾರಣವೇನೆಂದು ತಿಳಿಯಲು ಕೆಲವು ತಪಾಸಣಾ ಪರೀಕ್ಷೆಗಳನ್ನು ನಡೆಸುವಂತೆ ಪ್ರಿಸ್ಕ್ರಿಪ್ಷನ್ ಬರೆದು ಕೊಟ್ಟರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಪ್ರಯೋಗಾಲಯಗಳಲ್ಲಿ ತಪಾಸಣೆಯೂ ನಡೆಯಿತು. ಪ್ರಯೋಗಾಲಯಗಳ ವರದಿಗಳ ವಿಶ್ಲೇಷಣೆ ನಡೆಸಿದ ವೈದ್ಯರು ಮೀರಕ್ಕನ ಎಡಗಣ್ಣಿನ ರಕ್ತನಾಳ ಒಂದರಲ್ಲಿ ರಕ್ತಪರಿಚಲನೆ ಸ್ತಬ್ಧವಾಗಿರುವುದನ್ನು ಗಮನಿಸಿದರು. ಇಂತಹ ಪರಿಸ್ಥಿತಿಯನ್ನು ಸೆಂಟ್ರಲ್ ರೆಟಿನಲ್ ವೈಯಿನ್ ಒಕ್ಲುಶನ್ (central Retinal occlusion) ಎನ್ನುತ್ತಾರೆ. ಈ ರಕ್ತನಾಳದಲ್ಲಿ ಪುನಃ ರಕ್ತ ಹರಿಯುವಂತೆ ಮಾಡಲು ಬಂದ್ ಆಗಿರುವಂತಹ ರಕ್ತನಾಳವನ್ನು ತೆರೆದುಕೊಳ್ಳುವಂತೆ ಮಾಡುವುದೇ ಅತೀ ಅವಶ್ಯ. ಅದಕ್ಕಾಗಿ LUCENTIS ಹಾಗೂ AVASTIN ಎಂಬ ಎರಡು ಇಂಜೆಕ್ಷನ್ಗಳನ್ನು ನೇರವಾಗಿ ರಕ್ತನಾಳಗಳಿಗೆ ನೀಡುವುದೇ ಸರಿಯಾದ ಚಿಕಿತ್ಸೆ. 20 ದಿನಗಳ ಅವಧಿಯಲ್ಲಿ ಎರಡು ಬಾರಿ ಈ ಚಿಕಿತ್ಸೆ ನೀಡಿದ ಅನಂತರ ಆಕೆಯ ದೃಷ್ಟಿ ಸರಿಯಾಗುವಾಗ ಒಂದು ತಿಂಗಳು ಕಳೆಯಿತು. ಪ್ರತಿ ಬಾರಿಯೂ ಇಂಜೆಕ್ಷನ್ ನೀಡಿದಾಗ ಕನಿಷ್ಟ 24 ಗಂಟೆಗಳ ಅವಧಿಗೆ ಎಡಗಣ್ಣಿಗೆ ಬ್ಯಾಂಡೇಜ್ ಹಾಕುವುದು ಅವಶ್ಯವಾಗಿತ್ತು. ಕ್ಯಾಟರಾಕ್ಟ್ ಪೀಡಿತ ಬಲಗಣ್ಣಿಗೆ ದೃಷ್ಟಿ ಮಂದವಿರುವಾಗ ಎಡಗಣ್ಣಿಗೆ ಬ್ಯಾಂಡೇಜ್ ಹಾಕಿದಾಗ ರೋಗಿಯೋರ್ವಳು ತನ್ನ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡುವುದಾದರೂ ಹೇಗೆ? ಇದನ್ನರಿತ ವೈದ್ಯರು ಆಕೆಯನ್ನು ಪ್ರತಿ ಬಾರಿ ಒಂದೆರಡು ದಿನಗಳ ಕಾಲ ನರ್ಸಿಂಗ್ ಹೋಂನಲ್ಲಿರಿಸಿ ಎಡಗಣ್ಣಿನ ಬ್ಯಾಂಡೇಜ್ ತೆಗೆದ ಮೇಲೆಯೇ ಬಿಡುಗಡೆ ಮಾಡುತ್ತಿದ್ದರು. ಕಣ್ಣಿಗೆ ನೀಡಿದ ಎರಡು ಇಂಜೆಕ್ಷನ್ಗಳ ಬೆಲೆ (62,500 ರು.) ಎರಡು ಬಾರಿ ಸರ್ಜನರ ಫೀಸು (4,000ರು) ಹಾಗೂ ತಪಾಸಣಾ ವೆಚ್ಚ (3,840 ರು) ಸೇರಿಸಿ ಒಟ್ಟು 83,902 ರು.ಗಳು ವೆಚ್ಚವಾಗಿದ್ದವು. ಎಲ್ಲಾ ಬಿಲ್ಲುಗಳ ಸಹಿತ ಅವರು ನ್ಯೂ ಇಂಡಿಯಾ ಅಶ್ಯೂರೆನ್ಸ್ ಡಿವಿಜನಲ್ ಮ್ಯಾನೇಜರ್ ಕಚೇರಿಗೆ ತೆರಳಿದರು. ಅಲ್ಲಿದ್ದ ಅಧಿಕಾರಿಯೋರ್ವರು ಮಂಗಳೂರಿನಲ್ಲಿರುವ ಟಿ.ಟಿ. ಹೆಲ್ತ್ ಕೇರ್ ಎಂಬ ಸಂಸ್ಥೆಗೆ ಅರ್ಜಿ ಬರೆಯುವಂತೆ ಸೂಚಿಸಿದರು. ಅವರಿವರ ಸಹಾಯದಿಂದ 22.3.2013ರಂದು ಅರ್ಜಿ ಸಲ್ಲಿಸಿದ್ದೂ ಆಯಿತು. ತಾನು ನ್ಯೂ ಇಂಡಿಯಾ ಎಶ್ಸೂರೆನ್ಸ್ ಕಂಪನಿಯೊಂದಿಗೆ ವಿಮಾ ಒಪ್ಪಂದ ಮಾಡಿಕೊಂಡಿರುವಾಗ ಇನ್ನೊಂದು ಕಂಪನಿಗೆ ಯಾಕೆ ಅರ್ಜಿ ಸಲ್ಲಿಸಬೇಕೆಂದು ಆಕೆಗೆ ತಿಳಿಯಲಿಲ್ಲ.
ಇದಾಗಿ ಎರಡು ವಾರಗಳ ನಂತರ ಅವರಿಗೆ ಒಂದು ಪುಟದ ಕಂಪ್ಯೂಟರ್ ಮುದ್ರಿತ ಹಾಳೆಯೊಂದು ಬಂದಿತ್ತು. ಅದನ್ನು ಪತ್ರವೆನ್ನುವಂತೆಯೂ ಇರಲಿಲ್ಲ. ಏಕೆಂದರೆ ಅದು ಯಾರನ್ನೂ ಉದ್ದೇಶಿಸಿಯೂ ಬರೆದುದಾಗಿರಲಿಲ್ಲ. ಯಾರ ಸಹಿಯೂ ಇರಲಿಲ್ಲ. "ಈ ವರದಿ ಕಂಪ್ಯೂಟರ್ ಮುದ್ರಿತವಾಗಿರುವುದರಿಂದ ಸಹಿಯ ಅಗತ್ಯವಿಲ್ಲ" ಎಂದು ಸೂಚಿಸಲಾಗಿತ್ತು. ಅನ್ಸೂರೆನ್ಸ್ ವ್ಯವಹಾರದ ಕಾರ್ಯವಿಧಾನಗಳೆಲ್ಲ ಈ ರೀತಿ ಬದಲಾದದ್ದು ಯಾವಾಗ ಎಂದು ಅವರು ಆಶ್ಚರ್ಯಗೊಂಡರು. ಈ ದಾಖಲೆಯನ್ನು ಪರಿಶೀಲಿಸಿದಾಗ ಆಕೆಗೆ ಆಶ್ಚರ್ಯವಾಯಿತು. ಆಕೆ ಸಲ್ಲಿಸಿದ್ದ ಒಟ್ಟು 83,902 ರುಪಾಯಿಗಳ ಬಿಲ್ಗಳಲ್ಲಿ ಸರ್ಜನ್ ಫೀಸು (2,000ರು.) ಹಾಗೂ ಆಪರೇಶನ್ ಖರ್ಚು (1000ರು.) ಸೇರಿಸಿ, 3000 ರೂಪಾಯಿಗಳನ್ನು ಮಂಜೂರು ಮಾಡಲಾಗಿತ್ತು. ಔಷಧಿಯ ಬೆಲೆ ಸಹಿತ ಎಲ್ಲ ಬಾಬ್ತುಗಳ ಎದುರು "ಈ ಚಿಕಿತ್ಸೆ ಹೊರರೋಗಿಯಾಗಿ ನೀಡಲು ಸಾಧ್ಯವಿದ್ದುದ್ದರಿಂದ ಹಣ ನೀಡಲು ಸಾಧ್ಯವಿಲ್ಲ" ಎಂದು ಸೂಚಿಸಲಾಗಿತ್ತು.
"ನಾವೇನೂ ಮಾಡಲು ಸಾಧ್ಯವಿಲ್ಲ. ನೀವೇ ಟಿ.ಟಿ.ಕೆ. ಕಂಪನಿಯೊಂದಿಗೆ ವ್ಯವಹರಿಸಿ ಬಗೆಹರಿಸಿಕೊಳ್ಳಿ" ಎಂದು ಪುಕ್ಕಟ್ಟೆ ಸಲಹೆ ನೀಡಿದ ನ್ಯೂ ಇಂಡಿಯಾ ಅಶೂರೆನ್ಸ್ ಅಧಿಕಾರಿಗಳು ಕೈ ತೊಳೆದುಕೊಂಡರು. ತಿಂಗಳು ಮೂರು ಕಳೆದರೂ ಕ್ಲೈಮ್ ಹಣ ಸಿಗದಿದ್ದಾಗ ಎಲ್ಲಾ ದಾಖಲೆಗಳೊಂದಿಗೆ ಉಡುಪಿಯಲ್ಲಿರುವ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿದರು. ಅಲ್ಲಿನ ಕಾರ್ಯಕರ್ತರ ಸಲಹೆಯಂತೆ ಟಿ.ಟಿ.ಕೆ.ಯವರಿಗೂ ವಿಮಾ ಕಂಪನಿಗೂ ಪತ್ರ ಬರೆದು ತಡ ಮಾಡದೇ ಹಣ ನೀಡಲು ಆಗ್ರಹಿಸಿದರು. 45 ದಿನಗಳು ಕಳೆದರೂ ಈ ಎರಡನೇ ಪತ್ರಕ್ಕೂ ಕಂಪನಿಗಳೆರಡೂ ಉತ್ತರಿಸದಿದ್ದಾಗ ದಿನಾಂಕ 16.7.2013ರಂದು 3ನೇ ಪತ್ರ ಬರೆದರು. "ನೀವು ನೀಡಿದ ಪಾಲಿಸಿಯ ಎಲ್ಲಾ ಷರತ್ತುಗಳನ್ನು ಪರಿಶೀಲಿಸಿದ್ದೇನೆ. ಆದರೆ ಯಾವುದೇ ಅನಾರೋಗ್ಯಕ್ಕೆ ವೈದ್ಯರ ಫೀಸು ಮಾತ್ರ ನೀಡುತ್ತೇವೆ. ಔಷಧಿಯ ಕ್ರಯ ನೀಡುವುದಿಲ್ಲ ಎಂಬ ಷರತ್ತನ್ನು ನೋಡಿಲ್ಲ" ಎಂದು ಬರೆದ ಮೀರಾ ಅಂತಹ ಷರತ್ತೊಂದಿದ್ದರೆ ಅದನ್ನಾದರೂ ತೋರಿಸಿ ಎಂದರು. ಅವರು ಬರೆದ 3 ಪತ್ರಕ್ಕೂ ವಿಮಾ ಕಂಪನಿ/ ಟಿ.ಟಿ.ಕೆ. ಕಂಪನಿಯಾಗಲಿ ಉತ್ತರಿಸೇ ಇದ್ದುದಕ್ಕೆ ಕಾರಣಗಳೇನು?
ರೋಗಿಯೋರ್ವರನ್ನು ಒಳರೋಗಿಯಾಗಿ ಚಿಕಿತ್ಸೆ ನೀಡಬೇಕೋ ಅಥವಾ ಹೊರ ರೋಗಿಯಾಗಿ ಚಿಕಿತ್ಸೆ ನೀಡಬೇಕೋ ಎಂಬುದನ್ನು ನಿರ್ಧರಿಸುವುದು ವೈದ್ಯರಿಗೆ ಸೇರಿದ್ದು. ಅದನ್ನು ಟಿ.ಟಿ.ಕೆ. ಕಂಪನಿ ನಿರ್ಧರಿಸಿದ್ದು ಹೇಗೆ? ಕೊನೆಯ ಪಕ್ಷ ಚಿಕಿತ್ಸೆ ನೀಡಿದ್ದ ವೈದ್ಯರನ್ನಾದರೂ ಸಂಪರ್ಕಿಸಿ ವಿಚಾರಿಸಬಹುದಾಗಿತ್ತು. ಹೆಲ್ತ್ಕೇರ್ ಕಂಪನಿಯವರು ಅದನ್ನು ಮಾಡಿಲ್ಲ. ಯಾವುದೇ ಚಿಕಿತ್ಸೆಯನ್ನಾಗಲಿ, ಔಷಧಿಯನ್ನಾಗಲಿ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಅಥವಾ ಇನ್ನಿತರೆ ಸರ್ಕಾರಿ ಸಂಸ್ಥೆಗಳಾಗಲಿ ನಿಷೇಧಿಸಿದ್ದರೆ ವಿಮಾ ಕಂಪನಿಯವರು ಅದರ ಹಣವನ್ನು ನಿರಾಕರಿಸಬಹುದು. ಈ ಪ್ರಕರಣದಲ್ಲಿ ಉಪಯೋಗಿಸಲಾದ AVASTIN LUCENTIS ಹಾಗೂ AVASTIN ಇಂಜೆಕ್ಷನ್ಗಳನ್ನು ಜಗತ್ತಿನಾದ್ಯಂತ ಇದೇ ರೀತಿಯ ರೋಗಿಗಳ ಚಿಕಿತ್ಸೆಗೆ ಉಪಯೋಗಿಸುತ್ತಾರೆ. ನಿಷೇಧಿತ ಪಟ್ಟಿಯಲ್ಲೂ ಈ ಔಷಧಿಗಳನ್ನು ಸೇರಿಸಿಲ್ಲ. ಹಾಗಾದರೆ ಅದರ ಕ್ರಯವನ್ನು ನೀಡದಿರಲು ಕಾರಣವೇನು? ಇಡೀ ಪಾಲಿಸಿಯಲ್ಲಿ ಔಷಧಿಯ ಕ್ರಯ ನೀಡದೇ ಚಿಕಿತ್ಸೆಯ ವೆಚ್ಚವನ್ನು ಮಾತ್ರ ನೀಡುವ ಯಾವುದೇ ನಿಯಮವಿಲ್ಲ. ಹಾಗಾದರೆ ಯಾವ ಆಧಾರದಲ್ಲಿ ಔಷಧಿವೆಚ್ಚವನ್ನು ನಿರಾಕರಿಸಲಾಯಿತು. ಅದರಲ್ಲೂ ಒಂದು ಕುತೂಹಲಕಾರಿ ವಿಚಾರವೆಂದರೆ ಮೀರಾ ಎರಡು ಬಾರಿ ಪಡೆದ ಚಿಕಿತ್ಸೆಯಲ್ಲಿ ಒಂದು ಬಾರಿಗೆ ಮಾತ್ರ ವೈದ್ಯರ ಫೀಸು ನೀಡಲಾಗಿದೆ. ಇನ್ನೊಮ್ಮೆ ನೀಡಿದ ಚಿಕಿತ್ಸೆಗಾಗಿ ವೈದ್ಯರ ಫೀಸನ್ನೂ ನಿರಾಕರಿಸಲಾಗಿದೆ. ಇದರರ್ಥವೇನು?
ಪತ್ರ ಸಿಕ್ಕಿದ ಮರುದಿನವೇ ಪ್ರತಿಷ್ಠಾನಕ್ಕೆ ಉತ್ತರಿಸಿದ ವಿಮಾ ಕಂಪನಿಯ ಡಿವಿಜನಲ್ ಮ್ಯಾನೇಜರ್ ಮೀರಾಪೈಯವರ ಮೂರು ಪತ್ರಗಳಿಗೂ ಉತ್ತರಿಸದೇ ಇದ್ದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದಷ್ಟು ಶೀಘ್ರವಾಗಿ ಸಂಬಂಧಿತರೊಂದಿಗೆ ಚರ್ಚಿಸಿ ಉತ್ತರ ನೀಡುವ ಆಶ್ವಾಸನೆ ನೀಡಿದ್ದಾರೆ. ಇದೀಗ ಪ್ರತಿಷ್ಠಾನ ಪತ್ರ ಬರೆದು 10 ದಿನಗಳು ಕಳೆದಿವೆ. ಎರಡೂ ಕಂಪನಿಗಳಿಂದ ಉತ್ತರವಿಲ್ಲ.
ಜೀವನದುದ್ದಕ್ಕೂ ಒಳ್ಳೆಯ ಜೀವನ ನಡೆಸಿದವರು ವೃದ್ಧರಾಗಿ ಅನಾರೋಗ್ಯಕ್ಕೆ ಒಳಗಾದಾಗ ತಮ್ಮ ಮಕ್ಕಳ ಮುಂದೆ ಕೈ ಚಾಚಬಾರದು ಎಂಬುದಕ್ಕಾಗಿ ಆರೋಗ್ಯವಿಮಾ ಯೋಜನೆಗಳಿಗೆ ಸೇರುತ್ತಾರೆ. ಹಿರಿಯ ನಾಗರಿಕರನ್ನು ಸತಾಯಿಸಬಾರದು ಎಂಬ ಮೂಲ ತತ್ವವನ್ನು ಪಾಲಿಸದ ಈ ಅಧಿಕಾರಿಗಳ ಮನೋಭಾವಕ್ಕೆ ಏನೆನ್ನಬೇಕು? ಶತಕೋಟಿ ಡಾಲರುಗಳ ವಿಮಾ ವ್ಯವಹಾರವನ್ನು ಕಬಳಿಸಲು ಖಾಸಗಿ ಕಂಪನಿಗಳು ಅದರಲ್ಲೂ ಬಹು ರಾಷ್ಟ್ರೀಯ ವಿಮಾ ಕಂಪನಿಗಳು ಹಾತೊರೆಯುತ್ತಿರುವಾಗ ಅಧಿಕಾರಿಗಳು ಬಳಕೆದಾರರಿಗೆ ಈ ರೀತಿ ಕಿರುಕುಳ ನೀಡುತ್ತಿದ್ದರೆ ರಾಷ್ಟ್ರೀಯ ವಿಮಾ ಕಂಪನಿಗಳು ದಿವಾಳಿಯಾಗದೇ ಮತ್ತೇನಾಗಬೇಕು? ಈ ಅಧಿಕಾರಿಗಳು ಖಾಸಗಿ ಕಂಪನಿಗಳೊಂದಿಗೆ ಒಳ ಒಪ್ಪಂದಗಳೇನಾದರೂ ಮಾಡಿಕೊಂಡಿರಬಹುದೇ? ಸಾರ್ವಜನಿಕ ಹಿತಾಸಕ್ತಿ ಸಂಘಟನೆಗಳು ಈ ಅನ್ಯಾಯದ ವಿರುದ್ಧ ಇನ್ನೂ ಹೆಚ್ಚಿನ ಜನಾಭಿಪ್ರಾಯ ರೂಪಿಸುವ ಮುನ್ನ ಅಧಿಕಾರಿಗಳು ಸೂಕ್ತ ಉತ್ತರ ನೀಡುವರೇ?
- ಡಾ.ರವೀಂದ್ರನಾಥ ಶಾನುಭಾಗ
ಉಡುಪಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


