ಅಂಕಣಗಳು

ಮಿತಿ ಮೀರಿದ ಬೆಲೆಯೇರಿಕೆ, ಮಿತಿಯಿಲ್ಲದ ಅಸಂಬದ್ಧ ಹೇಳಿಕೆ

Published On :

ಯಾರು ಎಷ್ಟೇ ಬೊಬ್ಬೆ ಹಾಕಿದರೂ ಲೆಕ್ಕಿಸದೆ ಹೆಚ್ಚು ಕಡಿಮೆ ಎಲ್ಲಾ ಸರಕುಗಳ ಬೆಲೆಗಳು ಮುಂದೆ ಮುಂದೆ ಓಡುತ್ತಿವೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಗ್ರಾಹಕರ ಬೆಲೆ ಸೂಚ್ಯಂಕದಲ್ಲಿ ಎರಡಂಕಿಯ ಹೆಚ್ಚಳ. ಏರುತ್ತಿರುವ ಆಹಾರ ಪದಾರ್ಥಗಳ ಮತ್ತು ಇಂಧನದ ಬೆಲೆಗಳು ಎಲ್ಲ ದೃಷ್ಟಿಯಿಂದ ಕಳವಳಕಾರಿ. ಹಣದುಬ್ಬರದಿಂದ ಅಭಿವೃದ್ಧಿ ಯೋಜನೆಗಳ ವೆಚ್ಚಗಳ ಅಂದಾಜುಗಳು ಅಡಿ ಮೇಲಾಗಿವೆ. 2012-13ನೆಯ ಸಾಲಿನ ಕೇಂದ್ರ ವಿತ್ತ ಸಚಿವಾಲಯದ ಆರ್ಥಿಕ ಸಮೀಕ್ಷೆ ಬೆಲೆಯೇರಿಕೆಯಿಂದ ಜನಸಾಮಾನ್ಯರ ಉಳಿತಾಯದ ಸಾಮರ್ಥ್ಯ ಕುಸಿದು ಹೋಗಿದೆಯೆಂಬ ಸತ್ಯವನ್ನು ಹೊರಗೆಡಹಿದೆ. 12ನೆಯ ಪಂಚವಾರ್ಷಿಕ ಯೋಜನೆಯ ತೀವ್ರ ಸ್ವರೂಪದ ಬಾಲಗ್ರಹ ಪೀಡೆಗೆ ತುತ್ತಾಗಿದೆ.
2010ರಲ್ಲಿ ರಿಸರ್ವ್ ಬ್ಯಾಂಕಿನ (ಆರ್‌ಬಿಐನ) ಮಾಜಿ ಗವರ್ನರ್ ಡಿ ಸುಬ್ಬರಾವ್  ಬೆಲೆಯೇರಿಕೆಯನ್ನು ನಿಗ್ರಹಿಸುವುದು ತಮ್ಮ ಬ್ಯಾಂಕಿನ ಹಣಕಾಸಿನ ನೀತಿಯ ಪ್ರಮುಖ ಗುರಿಯೆಂದು ಹೇಳಿದ್ದರು. ನಂತರ ಸೇತುವೆಯನ್ನು ಕೊಚ್ಚಿಕೊಂಡು ಹೋಗುವಷ್ಟು ನೀರು ಹರಿದು ಹೋಯಿತು! ಆರ್‌ಬಿಐ ಮತ್ತು ಆರ್ಥಿಕ ಬೆಳವಣಿಗೆಯ ವಿಚಾರವನ್ನು ಮುಂದಿಟ್ಟುಕೊಂಡ ವಿತ್ತ ಸಚಿವಾಲಯಗಳ ನಡುವೆ ಅಸಹ್ಯ ಹುಟ್ಟಿಸುವಷ್ಟು ತಿಕ್ಕಾಟ. ಇಂಥ ತಿಕ್ಕಾಟ ಇತರ ದೇಶಗಳಲ್ಲೂ ಆಗಿದೆ ಎಂದು ವಿತ್ತ ಸಚಿವ ಬಹಿರಂಗ ಹೇಳಿಕೆ ನೀಡಿ ತೃಪ್ತಿಪಟ್ಟರು. ಆದರೆ ಇಂಥ ಹೇಳಿಕೆಗಳಿಂದ ನಮ್ಮ ದೇಶಕ್ಕೆ ಯಾವ ಲಾಭವೂ ಆಗಲು ಸಾಧ್ಯವಿಲ್ಲ.
ಕಳೆದ ಅಗಸ್ಟ್ 17ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಮನಮೋಹನ ಸಿಂಗ್‌ರಿಂದ "ಆರ್‌ಬಿಐನ ಇತಿಹಾಸ: ಹಿನ್ನೋಟ-ಮುನ್ನೋಟ" ಪುಸ್ತಕದ ನಾಲ್ಕನೆಯ ಆವೃತ್ತಿಯ ಬಿಡುಗಡೆ. ಅವರ ಮಾಮೂಲಿ ಶೈಲಿಯಲ್ಲಿ ಬೆಲೆಯೇರಿಕೆ ಮತ್ತು ಆರ್ಥಿಕ ಬೆಳಣಿಗೆಗಳ ಸಂಬಂಧವನ್ನು ವಿಶ್ಲೇಷಿಸಿದರು. ಹುದ್ದೆಯಿಂದ ನಿರ್ಗಮಿಸುತ್ತಿರುವ ಸುಬ್ಬರಾವ್‌ರತ್ತ ಪ್ರಧಾನಿ ಕನಿಷ್ಠ ಸೌಜನ್ಯವನ್ನೂ ತೋರಿಸಲಿಲ್ಲ. ಅವರ ಸಮ್ಮುಖದಲ್ಲಿ ಕೇಂದ್ರ ಬ್ಯಾಂಕಿನ ಸಾಂಪ್ರದಾಯಿಕ ಹಣಕಾಸು ನೀತಿಯನ್ನು ಟೀಕಿಸಿದರು. ಅದಕ್ಕೆ ಸುಬ್ಬರಾವ್ ಖಾರವಾಗಿ ಪ್ರತಿಕ್ರಿಯಿಸಬೇಕಾಯಿತು.
ಮಿತಿಮೀರಿದ ಬೆಲೆಯೇರಿಕೆ ಈಗಿನ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರಿಗೂ ಸವಾಲು ಒಡ್ಡುತ್ತಿದೆ. ಸಾಂಪ್ರದಾಯಿಕ ಹಣಕಾಸಿನ ನೀತಿಗೆ ಸ್ಪಷ್ಟ ವಿದಾಯ ಹೇಳಲು ಅವರಿಗೆ ಈ ತನಕ ಸಾಧ್ಯವಾಗಿಲ್ಲ. ಅಕ್ಟೋಬರ್ 29ರಂದು ಅವರಿಂದ ತ್ರೈಮಾಸಿಕ ಹಣಕಾಸು ಪರಾಮರ್ಶೆಯ ನೀತಿಯ ಪ್ರಕಟಣೆ. ರೆಪೊ ದರವನ್ನು 0.25ರಷ್ಟು ಹೆಚ್ಚಿಸಿದ ಅವರು ಆರ್‌ಬಿಐ ಹಣದುಬ್ಬರವನ್ನು ಮುತುವರ್ಜಿಯಿಂದ ಪರಿಶೀಲಿಸುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 2010ರಲ್ಲಿ ಸುಬ್ಬರಾವ್ ಹೇಳಿದ್ದನ್ನು ರಾಜನ್ ಇನ್ನೊಂದು ರೀತಿಯಲ್ಲಿ ಹೇಳಿದರು. "ಬೆಲೆಯೇರಿಕೆ ನಮ್ಮ ಅರ್ಥವ್ಯವಸ್ಥೆಯ ದೊಡ್ಡ ಶತ್ರು ಎಂಬ ಭಾವನೆ ಸಾರ್ವತ್ರಿಕವಾಗಿದೆ. ಅದನ್ನು ನಿಗ್ರಹಿಸುವಲ್ಲಿ ಯುಪಿಎ ಸರಕಾರ ವಿಫಲವಾಗಿದೆಯೆಂಬ ನರೇಂದ್ರ ಮೋದಿಯವರ ಟೀಕೆ ಸರಿಯಾಗಿದೆ, ಸಕಾಲಿಕವಾಗಿದೆ." ಹಣದುಬ್ಬರ ಹದ್ದು ಮೀರಿದೆಯೆಂದು ತೋರಿಸುವ ಸಂಗತಿ ಸ್ಪಷ್ಟ. ರಿಸರ್ವ್ ಬ್ಯಾಂಕ್ ಬೆಲೆಯೇರಿಕೆಯ ದರ ಪ್ರತಿಶತ 4.5ರಿಂದ 5ರಷ್ಟಿದ್ದರೆ ಅದು ಆರ್ಥಿಕ ಬೆಳವಣಿಗೆ ಕಾಣುತ್ತಿರುವ ರಾಷ್ಟ್ರದಲ್ಲಿ ಹಿತಕರ ಮಟ್ಟ ಅಥವಾ ಹೊಸ್ತಿಲ ಮಿತಿಯೆಂಬುದು ಹಳೆಯ ತೀರ್ಮಾನ. ಬೆಲೆಯೇರಿಕೆಯ ದರ ಈ ಹೊಸ್ತಿಲ ಮಿತಿಯನ್ನು ದಾಟಿದರೆ ಆರ್ಥಿಕ ಬೆಳವಣಿಗೆಯ ದರ ಕುಗ್ಗುವ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯನ್ನು ಆರ್‌ಬಿಐ ಒಪ್ಪಿಕೊಂಡಿದೆ. 9ನೆಯ ಮತ್ತು 10ನೆಯ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಬೆಲೆಯೇರಿಕೆಯ ದರ ಹಿತಕರ ಮಟ್ಟ ಮೀರುವ ಸ್ಪಷ್ಟ ಸೂಚನೆಗಳಿದ್ದವು. ಆದರೆ ತಾತ್ವಿಕವಾಗಿ ಅಥವಾ ವಾಸ್ತವದಲ್ಲಿ ಬೆಲೆಯೇರಿಕೆ ಈ ಮಟ್ಟವನ್ನು ಮೀರಿಲ್ಲ ಎನ್ನುವ ಅಲ್ಪ ಸಮಾಧಾನ ಅಧಿಕಾರಾರೂಢ ಪಕ್ಷಗಳದ್ದಾಯಿತು. ರೋಗ ಇರುವ ತನಕವೂ ತಾಳ್ಮೆ ತೋರಬೇಕೆಂದು ಕೌನ್ಸೆಲಿಂಗ್ ಮಾಡುವ ವೈದ್ಯರಿಗೆ ಇಲ್ಲಿ ಕೊರತೆಯಿಲ್ಲ. ಹಳೆಯ ರೋಗ ಈಗ ತೀರಾ ಗಂಭೀರವಾಗಿದೆ. ಜನಸಾಮಾನ್ಯರ ಹಿತಾನುಭವ ಮಾಯವಾಗಿ ವರ್ಷಗಳೇ ಕಳೆದಿವೆ. ಹಿತಾನುಭವದ ಬದಲು ಕೇಂದ್ರ ಸಚಿವರೊಬ್ಬರಿಗೆ ಕಪಾಳ ಮೋಕ್ಷದ ಅನುಭವ ಕೆಲವೊಂದು ಸನ್ನೀವೇಶದಲ್ಲಿ ಬೆಲೆಯೇರಿಕೆಯ ವೇಗ ಸ್ವಲ್ಪ ಕಡಿಮೆಯಾಗಿ ಕೇಂದ್ರ ಸರಕಾರ ಬಿಗಿ ಹೇಳಿಕೆ ನೀಡಿ ಜನ ಮರೆಯುವಷ್ಟರಲ್ಲಿ ಬೆಲೆಗಳು ಸರಕಾರಕ್ಕೆ ಹುಬ್ಬು ಹಾರಿಸುತ್ತ ಮೇಲೆ ಜಿಗಿಯುತ್ತವೆ. ಸರಕಾರವನ್ನು ಪೇಚಿಗೆ ಸಿಲುಕಿಸಿ ಬಿಡುತ್ತವೆ. ಆರವತ್ತರ ದಶಕದಲ್ಲಿ ಹುಟ್ಟಿಕೊಂಡು ಈಗಲೂ ಆಗಾಗ ಹೆಡೆಯೆತ್ತುತ್ತಿರುವ ಅಭಿವೃದ್ಧಿಶೀಲ ದೇಶದಲ್ಲಿ ಅತಿಪ್ರಸರಣ ಅನಿವಾರ್ಯ ಎನ್ನುವ ವಾದದಿಂದ ಈ ತನಕ ಆದ ಅನುಕೂಲಕ್ಕಿಂತ ಅನಾನುಕೂಲ ಎಷ್ಟೋ ಹೆಚ್ಚು. 1970ರ ದಶಕದಲ್ಲಿ ನೊಬೆಲ್ ಪಾರಿತೋಷಕ ವಿಜೇತ ಅರ್ಥಶಾಸ್ತಜ್ಞ ಮಿಲ್ಟನ್ ಫ್ರೀಡ್ಮನ್ ಈ ವಾದವನ್ನು ಬಲವಾಗಿ ಅಲ್ಲಗಳೆದಿದ್ದರು. ಆರ್‌ಬಿಐನ ಮಾಜಿ ಗವರ್ನರ್ ಎಲ್.ಕೆ. ಝಾ ಅವರು ಫ್ರೀಡ್ಮನ್ನರ ಜೊತೆಗೆ ದನಿಗೂಡಿಸಿದ್ದರು.
ಈಗ ಬೆಲೆಯೇರಿಕೆ ಮಿತಿ ಮೀರಿರುವಾಗ ಮಿತಿಯಿಲ್ಲದ ಅಸಂಬದ್ಧ ಹೇಳಿಕೆಗಳ ಸುರಿಮಳೆ. ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಅವರಿಗೆ ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ಏನು ಕಾರಣ ಎಂಬ ಪ್ರಶ್ನೆ ಎದುರಾದಾಗ " ಬಡವರು ಮೊದಲು ಊಟದ ವೇಳೆ ರೊಟ್ಟಿ ಅಥವಾ ಚಪಾತಿಯ ಜೊತೆ ಒಂದು ಥರದ ಪಲ್ಯ ತಿನ್ನುತ್ತಿದ್ದರು. ಈಗ ಅವರ ಕಿಸೆಯಲ್ಲಿ ದುಡ್ಡು ಹೆಚ್ಚಾಗಿದೆ. ಹೀಗಾಗಿ ಎರಡು ಥರ ಪಲ್ಯ ತಿನ್ನಲು ಆರಂಭಿಸಿದ್ದಾರೆ. ಆದರೆ ಅದಕ್ಕೆ ತಕ್ಕಂತೆ ತರಕಾರಿ ಉತ್ಪಾದನೆ ಆಗುತ್ತಿಲ್ಲ. ಬೆಲೆಯೇರಿಕೆಗೆ ಇದೇ ಕಾರಣ!" ಶಹಬ್ಬಾಸ್ ಎಂಥಾ ಮೇಧಾವಿತನದ ಉತ್ತರ!
 ಸಿಬಲ್ ಅವರದ್ದು ಯಾವ ಸೀಮೆಯ ಅರ್ಥಶಾಸ್ತ್ರವೋ ತಿಳಿಯುತ್ತಿಲ್ಲ. ಇಲ್ಲಿರುವ ಬೆಲೆಯೇರಿಕೆಯ ರಾಜಕೀಯಕ್ಕೆ ಸಿಬಲ್ ಅವರ ಅಸಂಬದ್ಧ ಹೇಳಿಕೆಯಿಂದ ಹೊಸ ಟಿಸಿಲು ಮೂಡಿಕೊಂಡಿದೆ. ಅವರಿಗೆ ಎದುರಾದ ಪ್ರಶ್ನೆ ಸಿಬಲ್ ಅವರಿಗೆ ಅರ್ಥವಾಗಲಿಲ್ಲವೇ ಅಥವಾ ತರಕಾರಿಯೊಂದೇ ಅಗತ್ಯ ವಸ್ತುವೆಂದು ಕಾನೂನು ಸಚಿವರು ಭಾವಿಸಿಬಿಟ್ಟರೆ? ಸಗಟು ಬೆಲೆಯ ಸೂಚ್ಯಂಕ ಮತ್ತು ಗ್ರಾಹಕರ ಬೆಲೆಗಳ ಸೂಚ್ಯಂಕಗಳಲ್ಲಿ ಆದ ಏರಿಕೆಯ ಪರಿಜ್ಞಾನವೇ ಕಾನೂನು ಸಚಿವರಿಗೆ ಇಲ್ಲವಾಯಿತೆ?
ಸಿಬಲ್ ಅವರ ತರ್ಕವನ್ನು ಮುಂದುವರಿಸಿಕೊಂಡು ಹೋದರೆ ಇನ್ನಷ್ಟು ಅಸಂಬದ್ಧ ವಿಚಾರಗಳಿಗೆ ಅವಕಾಶ ಬರುತ್ತದೆ. ಗೃಹ ನಿರ್ಮಾಣದ ಎಲ್ಲ ವಸ್ತುಗಳು ದುಬಾರಿಯಾಗಿರುವುದು ಶ್ರೀಮಂತರಿಗೂ ಕಡ ತಲೆ ನೋವು. ಇಂಧನದ ಬೆಲೆ ಹೆಚ್ಚುತ್ತಿರುವುದರಿಂದ ಎಲ್ಲರಿಗೂ ಚಿಂತೆ. ಬಡವರು ಈ ಎಲ್ಲ ವಸ್ತುಗಳನ್ನು ಕೊಳ್ಳುವಷ್ಟು ಶ್ರೀಮಂತರಾಗಿಬಿಟ್ಟಿದ್ದರೆ ಆಹಾರ ಭದ್ರತೆಯ ಕಾನೂನು ಏಕೆ ಬೇಕಿತ್ತು? ಸಿಬಲ್ ಅವರ ಹೇಳಿಕೆ ಆಘಾತಕಾರಿ. ಬಡತನವನ್ನು ಮತ್ತು ಬಡವರನ್ನು ಅವರು ದೂಷಿಸಿದಂತಾಗಿದೆ. ಇಂಥ ಸಚಿವರಿರುವ ಯುಪಿಎ ಸರಕಾರ ಬಡವರ ಸರಕಾರವೆಂದು ಹೇಳಿದರೆ ಇನ್ನೊಂದು ಉಡಾಫೆಯ ಮಾತಾಗುತ್ತದೆ.
ಅಸಂಬದ್ಧ ಹೇಳಿಕೆಗಳ ಸರಮಾಲೆ ಇಲ್ಲಿದೆ. ಸುಮಾರು ಎರಡು ವರ್ಷಗಳ ಹಿಂದೆ ಕೇಂದ್ರ ವಿತ್ತ ಸಚಿವಾಲಯದಲ್ಲಿ ಪ್ರಧಾನ ಆರ್ಥಿಕ ಸಲಹೆಗಾರರಾಗಿದ್ದ ಕೌಶಿಕ ಬಸು ನೀಡಿದ ಹೇಳಿಕೆ ವಿಚಿತ್ರವಾಗಿತ್ತು. ಗ್ರಾಮೀಣ ಜನರ ಆದಾಯ ಗಣನೀಯವಾಗಿ ಹೆಚ್ಚಿದ್ದರಿಂದ ಅವರು ಗುಣಮಟ್ಟದ ಆಹಾರ ವಸ್ತುಗಳನ್ನು ಕೊಳ್ಳುವ ಸಾಮರ್ಥ್ಯ ಪಡೆದಿದ್ದಾರೆ, ಆದ್ದರಿಂದ ಆಹಾರದ ಹಣದುಬ್ಬರ ಉಂಟಾಗಿದೆ ಎಂದು ವಾದಿಸುವ ಮೂಲಕ ಬೆಲೆಯೇರಿಕೆ ಗ್ರಾಮೀಣ ಸಮೃದ್ಧಿಯ ಸಂಕೇತವೆಂದು ಬಸು ಹೇಳಿಬಿಟ್ಟರು. 2011ರ ಜನಗಣತಿಯ ವರದಿ ತೋರಿಸುವಂತೆ ಗ್ರಾಮಗಳು ಬರಿದಾಗುತ್ತಿವೆ. ಗ್ರಾಮೀಣ ಪ್ರದೇಶದಿಂದ ಸಂಕಷ್ಟದಲ್ಲಿದ್ದ ಅನೇಕ ಜನ ನಗರ ಪ್ರದೇಶಕ್ಕೆ ವಲಸೆ ಹೋಗಿದ್ದಾರೆ. ಕೌಶಿಕ್ ಬಸು ಅವರ ಹೇಳಿಕೆ ಹುಸಿಯಾಗಿದೆ. ಗ್ರಾಮೀಣ ಬಡಜನರು ತಮ್ಮ ಹಳ್ಳಿಗಳನ್ನು ಬಿಟ್ಟಿದ್ದಾರೆ. ಈಗ ವಿಶ್ವಬ್ಯಾಂಕಿನಲ್ಲಿ ಪ್ರಮುಖ ಆರ್ಥಿಕ ತಜ್ಞರಾಗಿರುವ ಬಸು ದೇಶ ಬಿಟ್ಟಿದ್ದಾರೆ.
ಮನಮೋಹನಸಿಂಗರು ಒಮ್ಮೆ, "ಹಣದುಬ್ಬರ ನಿಯಂತ್ರಿಸುವಲ್ಲಿ ನಿರ್ಣಾಯಕವಾಗಿರುವ ಕೃಷಿಕ್ಷೇತ್ರಕ್ಕೆ ರಾಜ್ಯಗಳು ಅಗತ್ಯ ಗಮನವನ್ನು ನೀಡುತ್ತಿಲ್ಲವೆಂದು ಅವರು ಎನ್‌ಡಿಸಿ ಸಭೆಯಲ್ಲಿ ಆಪಾದನೆ ಮಾಡಿದ್ದರು. ರಾಜ್ಯಗಳ ಮೇಲೆ ಇಂಥ ಮಹತ್ವದ ವಿಷಯದಲ್ಲಿ ಕೇಂದ್ರಕ್ಕೆ ಯಾವ ಹತೋಟಿಯೂ ಇಲ್ಲವೆಂದು ಪ್ರಧಾನಿ ಒಪ್ಪಿಕೊಂಡಂತಾಗಿತ್ತು. ಅವರ ಹೇಳಿಕೆ ಜನ ಮರೆಯುವ ಮೊದಲೇ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಬೆಂಗಳೂರಿನ ವಿಕಾಸ ಸೌಧದಲ್ಲಿ (ಜುಲೈ 31, 2010ರಂದು) ಸಂವಾದ ಕಾರ್ಯಕ್ರಮ ನಡೆಸಿದರು. ಅವರಿಂದ ಅಪಾರವಾದ ಸ್ವಾಮಿಭಕ್ತಿಯ ಪ್ರದರ್ಶನ. ಬೆಲೆಯೇರಿಕೆಗೆ ರಾಜ್ಯ ಸರಕಾರಗಳು ಕೃಷಿರಂಗದತ್ತ ಅಸಡ್ಡೆ ತೋರುತ್ತಿರುವುದು ಸರಿಯಿಲ್ಲವೆಂದು ಹೇಳಿ ಮನಮೋಹನ ಸಿಂಗ್‌ರನ್ನು ಉಪಾಧ್ಯಕ್ಷರು ಬೆಂಬಲಿಸಿದರು.
ಅವರ ಪಕ್ಷವೇ ಅಧಿಕಾರದಲ್ಲಿರುವ ರಾಜ್ಯಗಳ ಮೇಲೂ ಪ್ರಧಾನಿಗೆ ಹತೋಟಿ ಇಲ್ಲವೇ ಕಾಂಗ್ರೆಸ್ ಸರಕಾರವಿರುವ ರಾಜ್ಯಗಳ ಮೇಲೆ ಪ್ರಭಾವ ಬೀರಲು ಪ್ರಧಾನಿಗೆ ಸಾಧ್ಯವಿಲ್ಲವೆಂದಾದರೆ ಕಾಂಗ್ರೆಸ್ಸೇತರ ಸರಕಾರವಿರುವ ರಾಜ್ಯಗಳನ್ನು ಟೀಕಿಸುವ ಉಸಾಬರಿಗೆ ಪ್ರಧಾನಿ ಹೋಗಬಾರದು. ಒಮ್ಮೆ ಶರದ್ ಪವಾರ್ ಕೃಷಿರಂಗದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಹಣ ಹೂಡಿಕೆ ಮಾಡಬೇಕೆಂದು ಹೇಳಿದ್ದರು. ಪ್ರಧಾನಿ ಸಮ್ಮುಖದಲ್ಲಿ ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಪವಾರರ ವಿರುದ್ಧ ರೇಗಿಬಿಟ್ಟಿದ್ದರು. ಇದನ್ನೆಲ್ಲಾ ಸಹಿಸಿಕೊಂಡ ಪ್ರಧಾನಿ ಬೆಲೆಯೇರಿಕೆಯ ಕುರಿತು ಅಸಂಬದ್ಧ ಹೇಳಿಕೆ ನೀಡುವಾಗ ಕೂಡ ಸಹನೆ ತೋರಿದ್ದಾರೆ
ಬೆಲೆಯೇರಿಕೆಯ ವೇಗ ಹೆಚ್ಚಿದಾಗೆಲ್ಲ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಸಿ. ರಂಗರಾಜನ್ ಸರ್ಕಾರದ ರಕ್ಷಣೆಗೆ ದೌಡಾಯಿಸುತ್ತಾರೆ. ಕ್ಯಾಲೆಂಡರ್ ನೋಡಿ ಯಾವುದಾದರೂ ಒಂದು ತಿಂಗಳ ಅಂತ್ಯದೊಳಗೆ ಮಾಧ್ಯಮಗಳ ಮುಂದೆ ಬೆಲೆಗಳು ಇಳಿಮುಖವಾಗುವ ಆಸೆ ಹುಟ್ಟಿಸಿ ನೇಪಥ್ಯ ಸೇರುತ್ತಾರೆ. ಬೆಲೆಗಳಿಗೆ ಗಡುವು ನೀಡುವ ವಿಷಯದಲ್ಲಿ ಮಾಂಟೆಕ್ ಸಿಂಗ್ ಗಂಗರಾಜನ್‌ರಿಗೆ ಸಾಥ್ ನೀಡುತ್ತಾರೆ. ಈ ಆರ್ಥಿಕ ತಜ್ಞರು ನೀಡಿದ ಯಾವ ಗಡುವೂ ಸತ್ಯವಾಗಿಲ್ಲ. ಆದರೂ ಗಡುವು ನೀಡುವ ಚಟವನ್ನು ಅವರು ಬಿಡುವುದಿಲ್ಲ.  
ಬೆಲೆಗಳನ್ನು ನಿಯಂತ್ರಿಸುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದ ಪಿ. ಚಿದಂಬರಂ ಈಗ ಹತಾಶರಾಗಿದ್ದಾರೆ. ನವೆಂಬರ್ 22ರಂದು ಸಿಂಗಾಪುರದಲ್ಲಿ ಕೇಂದ್ರ ಸರಕಾರ ಮತ್ತು ಆರ್‌ಬಿಐ ತೆಗೆದುಕೊಂಡ ಹಲವು ಕ್ರಮಗಳ ಹಿನ್ನೆಲೆಯಲ್ಲಿ ಹಣದುಬ್ಬರ ದರ ಶೇ.5ಕ್ಕೆ ತಗ್ಗಲಿದೆಯೆಂಬ ವಿಶ್ವಾಸ ವ್ಯಕ್ತಪಡಿಸಿದರು. ಕೇವಲ ಒಂದು ವಾರದ ಒಳಗೆ ಅವರ ಆಶಾವಾದ ಮಾಯವಾಗುವಂತಾಯಿತು. ನವೆಂಬರ್ 29ರಂದು ನವದೆಹಲಿಯಲ್ಲಿ ಅವರು ಹತಾಶ ಸ್ವರದಲ್ಲಿ ಪ್ರತಿಕ್ರಿಯಿಸಿದರು. ದೇಶದ ಹಣದುಬ್ಬರ ಪ್ರಮಾಣ ಎಣೆಯಿಲ್ಲದೆ ಏರಿಕೆಯಾಗುತ್ತಿದೆ, ಸದ್ಯಕ್ಕಂತೂ ಇದನ್ನು ಸಂಪೂರ್ಣ ಹತೋಟಿಯಲ್ಲಿಡುವುದು ಸಾಧ್ಯವಿಲ್ಲದ ಮಾತು ಎಂದು ವಿತ್ತ ಸಚಿವರು ಪರಿಸ್ಥಿತಿಯ ಒತ್ತಡದಿಂದಲೋ ಅಥವಾ ಒತ್ತಡದ ಪರಿಸ್ಥಿತಿಯಿಂದಲೋ ಒಪ್ಪಿಕೊಳ್ಳುವ ಸೌಜನ್ಯ ತೋರಿದರು. ಜೊತೆಗೆ ಅವರ ಹುಟ್ಟುಗುಣವಾದ ರಾಜಕೀಯವನ್ನೂ ಪ್ರದರ್ಶಿಸಿದರು. ಆಹಾರ ಪದಾರ್ಥಗಳ ಮತ್ತು ಇಂಧನದ ಬೆಲೆಗಳನ್ನು ನಿಯಂತ್ರಿಸಲು ಹಣಾಸಿನ ನೀತಿಗೆ ಸಾಧ್ಯವಿಲ್ಲವೆಂದು ಹೇಳುವ ಮೂಲಕ ಪರ್ಯಾಯವಾಗಿ ಅವರ ಮೂಲ ಇಚ್ಛೆಯ ವಿರುದ್ಧ ಸಾಂಪ್ರದಾಯಿಕ ಹಣಕಾಸಿನ ನೀತಿಯನ್ನು ಮುಂದುವರಿಸಿದ ರಿಸರ್ವ್ ಬ್ಯಾಂಕಿಗೆ ಸಣ್ಣ ಏಟು ನೀಡಿದರು.
ಏರುತ್ತಿರುವ ಆಹಾರ ವಸ್ತುಗಳ ಬೆಲೆಯೇರಿಕೆಯಿಂದ ತಮ್ಮ ಸರ್ಕಾರ ರಾಜಕೀಯವಾಗಿ ಬೆಲೆತೆರಬೇಕಾಗಿದೆ ಎಂದು ಚಿದಂಬರಂ ಈಗ ಒಪ್ಪಿಕೊಂಡಿದ್ದಾರೆ. ಖಂಡಿತ ಇದು ಅಸಂಬದ್ಧ ಹೇಳಿಕೆಯಲ್ಲ!

- ಪ್ರೊ. ಜಿ.ವಿ. ಜೋಶಿ ನಿಟ್ಟೆ
​anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.