ಅಂಕಣಗಳು

ವೆಚ್ಚ ಮುಖ್ಯವಲ್ಲ, ಸಮತೋಲನದ ಸಂಕೇತವೇ ಮುಖ್ಯ

Published On :

'ಬೆಳಗಾವಿಯಲ್ಲಿ ಎದುರಾದ ಎರಡು ಮುಖಗಳು' ಎಂಬ ಶೀರ್ಷಿಕೆಯಡಿಯಲ್ಲಿ ಮಾಜಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಬರೆದ ಲೇಖನದಲ್ಲಿ ವರ್ಷಕ್ಕೆ ಒಂದು ಬಾರಿ ಸುಮಾರು ಹತ್ತು ದಿನಗಳ ಅಧಿವೇಶನಕ್ಕಾಗಿ ನೂರಾರು ಕೋಟಿ ರೂಪಾಯಿಗಳ ಖರ್ಚಿನಲ್ಲಿ ಸುವರ್ಣಸೌಧ ನಿರ್ಮಿಸಿರುವ ಬಗ್ಗೆ ಮತ್ತು ಈ ದೊಡ್ಡ ಕಟ್ಟಡವನ್ನು ವರ್ಷದಲ್ಲಿ ಉಳಿದ ದಿನಗಳು ಯಾವುದೇ ಉಪಯೋಗ ಮಾಡುವ ಕುರಿತು ಏನೂ ನಿರ್ಧಾರ ಕೈಗೊಳ್ಳದಿರುವ ಬಗ್ಗೆ ಅನೇಕರ ಆಕ್ಷೇಪಣೆ ಇದೆ ಎಂಬ ಚಿಂತನೆಗೆ ಇಂಬು ಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಆಶೋತ್ತರಗಳ ಪ್ರತೀಕವಾಗಿರುವ ಬೆಳಗಾವಿಯಲ್ಲಿ ನಿರ್ಮಾಣವಾಗಿರುವ ಸುವರ್ಣಸೌಧ ಪ್ರಾದೇಶಿಕ ಅಸಮತೋಲನವನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳ ಒಂದು ಸಾಂಕೇತಿಕ ಕಟ್ಟಡವೇ ಹೊರತು ವೆಚ್ಚದ ಲೆಕ್ಕಾಚಾರ ಮತ್ತು ಇಲ್ಲಿ ಅಧಿವೇಶನ ನಡೆಯಬೇಕೆ ಬೇಡವೇ ಎಂಬ ಕಲ್ಪನೆಯ ಸಾಮ್ರಾಜ್ಯದ ಕೂಸು ಅಲ್ಲ ಎಂಬ ವಿಷಯವನ್ನು ವಿನಮ್ರನಾಗಿ ಹೇಳಬೇಕಾಗಿದೆ.
ಕರ್ನಾಟಕ ರಾಜ್ಯದಲ್ಲಿ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವೆ ಇರುವ ತಾರತಮ್ಯ ಮತ್ತು ಪ್ರಾದೇಶಿಕ ಅಸಮತೋಲನವನ್ನು ಎಳೆಎಳೆಯಾಗಿ 1994-1999ರ ಅವಧಿಯಲ್ಲಿ ಎಚ್.ಕೆ. ಪಾಟೀಲರು ರಾಜ್ಯದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದಾಗ ಬಿಡಿಸಿ ಇಟ್ಟಿದ್ದರು. ಅವರು ಬರೆದ 'ಚಲುವ ಕನ್ನಡ ನಾಡು, ನನಸಾಗದ ಕನಸು' ಪುಸ್ತಕದಲ್ಲಿ ಉತ್ತರ ಮತ್ತು ದಕ್ಷಿಣಗಳ ನಡುವಿನ ತಾರತಮ್ಯ ಹಾಗೂ ಪ್ರಾದೇಶಿಕ ಅಸಮತೋಲನವನ್ನು ವಿವರವಾಗಿ ಅಂಕಿ ಸಂಖ್ಯೆಗಳೊಂದಿಗೆ ದಾಖಲಿಸಲಾಗಿತ್ತು. ಅದೇ ಪುಸ್ತಕದ ಸದಾಶಯದ ಭಾಗವಾಗಿ ಅಂದರೆ ಉತ್ತರ ಮತ್ತು ದಕ್ಷಿಣಗಳ ನಡುವಿನ ತಾರತಮ್ಯದ ಕುರಿತು ವೈಜ್ಞಾನಿಕ ಅಧ್ಯಯನವಾಗಲು ಉನ್ನತಾಧಿಕಾರ ಸಮಿತಿಯೊಂದು ನೇಮಕವಾಗಬೇಕೆಂಬ ಆಶಯ ಕೈಗೂಡಿದ್ದು ಮುಂದೆ 1994-2004ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೇ.
'ಚಲುವ ಕನ್ನಡ ನಾಡು, ನನಸಾಗದ ಕನಸು' ಪುಸ್ತಕ ಪ್ರಕಟವಾಗಿ ರಾಜ್ಯದ ಉದ್ದಗಲಕ್ಕೂ ಜನಜಾಗೃತಿ ಉಂಟಾಯಿತು. 1999ರ ಆರಂಭದಲ್ಲಿ ಕರ್ನಾಟಕದ ಪ್ರದೇಶ ಕಾಂಗ್ರೆಸ್ ಸಮಿತಿಗೆ ಎಸ್.ಎಂ. ಕೃಷ್ಣರವರು ಅಧ್ಯಕ್ಷರಾಗಿ ನೇಮಕಗೊಂಡ ಮೇಲೆ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಿದ್ಧತಾ ಸಮಿತಿಗೆ ಎಚ್.ಕೆ. ಪಾಟೀಲರು ಸದಸ್ಯರಾದರು. ಈ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಒಂದು ವೇಳೆ ಕಾಂಗ್ರೆಸ್ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದರೆ ಉತ್ತರ-ದಕ್ಷಿಣದ ಮಧ್ಯ ತಾರತಮ್ಯ ಮತ್ತು ಪ್ರಾದೇಶಿಕ ಅಸಮತೋಲನದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ಉನ್ನತಾಧಿಕಾರ ಸಮಿತಿಯೊಂದನ್ನು ನೇಮಕ ಮಾಡಲಾಗುವುದು ಎಂದು ಪಕ್ಷದ ವಾಗ್ದಾನವಾಗಿ ಪರಿವರ್ತಿಸಿದರು. ಮುಂದೆ ಕಾಂಗ್ರೆಸ್ ಪಕ್ಷದ ಸರ್ಕಾರ ಎಸ್.ಎಂ. ಕೃಷ್ಣರವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತು. ಜಲಸಂಪನ್ಮೂಲ ಸಚಿವರಾಗಿ ಅಧಿಕಾರವಹಿಸಿಕೊಂಡ ಎಚ್.ಕೆ. ಪಾಟೀಲರು ಸರ್ಕಾರದ ಆರಂಭದ ದಿನಗಳಲ್ಲಿಯೇ ಮುಖ್ಯಮಂತ್ರಿಯವರೊಂದಿಗೆ ಹಲವಾರು ಬಾರಿ ಚರ್ಚಿಸಿ ಖ್ಯಾತ ಆರ್ಥಿಕ ತಜ್ಞ ವೈ.ಕೆ. ಅಲಘ್ ಅವರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ನೇಮಿಸುವಲ್ಲಿ ಯಶಕಂಡರು. ಕಾರಣಾಂತರಗಳಿಂದ ಅಲಘ್ ಅವರು ಈ ಜವಾಬ್ದಾರಿಯನ್ನು ಒಪ್ಪಿಕೊಳ್ಳಲಿಲ್ಲ. ನಂತರದ ದಿನಗಳಲ್ಲಿ ಎಚ್.ಕೆ. ಪಾಟೀಲರು ಪ್ರಾದೇಶಿಕ ಅಸಮತೋಲನದ ಬಗ್ಗೆ ಅಧ್ಯಯನ ಮಾಡಲು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ತಮ್ಮ ಪ್ರಯತ್ನದಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಅವರು ಸೂಕ್ತ ವ್ಯಕ್ತಿಯೆಂದು ನಿರ್ಣಯಿಸಿ ಹಲವಾರು ಸಲ ಅವರ ಮನೆಗೆ ಎಡತಾಕಿ ಈ ಜವಾಬ್ದಾರಿಯನ್ನು ಒಪ್ಪಿಕೊಳ್ಳುವಂತೆ ಮನವೊಲಿಸಿದರು.
ಈ ಮನವೊಲಿಕೆಯ ಫಲವಾಗಿ ಕರ್ನಾಟಕದಲ್ಲಿ ಉತ್ತರ-ದಕ್ಷಿಣಗಳ ಮಧ್ಯದ ತಾರತಮ್ಯ ಮತ್ತು ಪ್ರಾದೇಶಿಕ ಅಸಮತೋಲನದ ಬಗ್ಗೆ ವೈಜ್ಞಾನಿಕ ಅಧ್ಯಯನವಾಗಲು ಸಾಧ್ಯವಾದ ಆ ಒಂದು ಅಧ್ಯಾಯ ಕರ್ನಾಟಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಅಧ್ಯಾಯ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪ್ರಾದೇಶಿಕ ಅಸಮತೋಲನವನ್ನು ಅಧ್ಯಯನ ಮಾಡಿ ಹಿಂದುಳಿದಿರುವಿಕೆಯನ್ನು ಗುರುತಿಸಿ ಒಂದು ವಿವರವಾದ ದಾಖಲೆ ಸಮೇತದ ವರದಿಯನ್ನು ನೀಡಲು ಡಾ. ನಂಜುಂಡಪ್ಪನವರು ಮಾಡಿದ ಪ್ರಯತ್ನ ಅವಿಸ್ಮರಣೀಯ ಹಾಗೂ ನಾಡಿನ ತಾಯಿ ಭುವನೇಶ್ವರಿಗೆ ಸಲ್ಲಿಸಿದ ನಿಜವಾದ ಸೇವೆ. ಹೀಗೆ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸಿ ರಾಜ್ಯದ ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಇಂಬು ಕೊಡುವ ಸಮತೋಲಿತ ಅಭಿವೃದ್ಧಿಯ ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಉತ್ತರ ಕರ್ನಾಟಕದ ಹಿರಿಯ ನಾಯಕರಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಎಚ್.ಕೆ. ಪಾಟೀಲರು ಪ್ರಮುಖ ಸ್ಥಾನಮಾನಗಳನ್ನು ಹೊಂದಿದ್ದಾಗಲೇ. ವೀರಪ್ಪ ಮೊಯ್ಲಿಯವರ ಸರ್ಕಾರದಲ್ಲಿ ಜವಳಿ ಮತ್ತು ಆಹಾರ ಸಂಸ್ಕರಣೆ ಸಚಿವರಾಗಿದ್ದ ಸಂದರ್ಭದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಕಚೇರಿಯನ್ನು ಕೈಮಗ್ಗ ನೇಕಾರರ ಸಾಂದ್ರತೆ ಹೆಚ್ಚಾಗಿರುವ ಉತ್ತರ ಕರ್ನಾಟಕ ಭಾಗಕ್ಕೆ ಅಂದರೆ ಹುಬ್ಬಳ್ಳಿಗೆ ಸ್ಥಳಾಂತರಿಸಿದ ಕ್ರಮ. ಆಹಾರ ಸಂಸ್ಕರಣೆಯ ಅತ್ಯಂತ ಅಗತ್ಯದ ಶೀತಲ ಗೃಹಗಳ ನಿರ್ಮಾಣವು ಪ್ರದೇಶವಾರು ಹಂಚಿಕೆಯಾಗಿದ್ದು ಇದೇ ಮೊದಲ ಬಾರಿ.
ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗದ ನೀರಾವರಿ ಕಾಮಗಾರಿಗಳ ಅನುಷ್ಠಾನಕ್ಕೆ ಸ್ಥಾಪನೆಯಾಗಿದ್ದ ಕರ್ನಾಟಕ ನೀರಾವರಿ ನಿಗಮದ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರಿಸಿದ್ದು, ಕೃಷ್ಣಾ ಭಾಗ್ಯ ಜಲನಿಗಮದ ಬಲಯುತವಾದ ಪ್ರಾದೇಶಿಕ ಕಚೇರಿಯನ್ನು ಉತ್ತರ ಭಾಗದಲ್ಲಿ ಪ್ರಾರಂಭಿಸಿದ್ದು ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಗತಿಯನ್ನು ದೈನಂದಿನ ಆಧಾರದ ಮೇಲೆ ಪರಿಶೀಲನೆ ಮಾಡಿದ್ದು, ಕಾವೇರಿ ಕೊಳ್ಳದ ನೀರಾವರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕಾವೇರಿ ನೀರಾವರಿ ನಿಗಮವನ್ನು ಸ್ಥಾಪನೆ ಮಾಡಿದ್ದು ಮತ್ತು ಅಂದು ದಕ್ಷಿಣ ಕರ್ನಾಟಕ ಭಾಗದಿಂದ ಮಂತ್ರಿಯಾಗಿದ್ದ ಎಚ್. ವಿಶ್ವನಾಥ್ ಅವರು ಗುಲ್ಬರ್ಗ ಮತ್ತು ಧಾರವಾಡಗಳಲ್ಲಿ ಪ್ರತ್ಯೇಕ ಶೈಕ್ಷಣಿಕ ಆಯುಕ್ತಾಲಯಗಳನ್ನು ಸ್ಥಾಪಿಸಿದ್ದು ರಾಜ್ಯ ಸಮತೋಲಿತ ಅಭಿವೃದ್ಧಿಯ ಕನಸುಗಳನ್ನು ಬಿತ್ತಿದ ಬಹು ದೊಡ್ಡ ಆಡಳಿತಾತ್ಮಕ ಕ್ರಮಗಳು. ಉತ್ತರ ಕರ್ನಾಟಕದ ಭಾಗದಲ್ಲಿ ಹೈ-ಕೋರ್ಟ್‌ನ ಪೀಠ ಸ್ಥಾಪನೆಯಾಗಬೇಕೆಂಬ ಮಹದಾಸೆಯಿಂದ ಧಾರವಾಡದ ನೆಲ ಮತ್ತು ಜಲ ಸಂಪನ್ಮೂಲ ನಿರ್ವಹಣಾ ಸಂಸ್ಥೆಗೆ ಸೇರಿದ ಜಾಗವನ್ನು ಬಿಟ್ಟುಕೊಡಲು ಮಾಡಿದ ಐತಿಹಾಸಿಕ ನಿರ್ಣಯ ಮತ್ತು ತನ್ಮೂಲಕ ನಡೆದ ಉತ್ತರ ಕರ್ನಾಟಕದ ಕನಸು ಸಾಕಾರಗೊಳ್ಳುವ ಒಂದು ಘಟನೆ ಚಿರಸ್ಮರಣೀಯ.  ಡಾ. ಡಿ.ಎಂ. ನಂಜುಂಡಪ್ಪರವರ ಸಮಿತಿಯು 25ನೇ ಜೂನ್ 2002ರಂದು ವರದಿ ಸಲ್ಲಿಸಿತು. ಈ ವರದಿಯಲ್ಲಿ ರಾಜ್ಯದ 175 ತಾಲೂಕುಗಳ ಪೈಕಿ 114 ತಾಲ್ಲೂಕುಗಳು ಹಿಂದುಳಿದ ತಾಲೂಕುಗಳಾಗಿದ್ದು ಅತೀ ಹಿಂದುಳಿದ 39 ತಾಲೂಕುಗಳ ಪೈಕಿ 29 ತಾಲೂಕುಗಳು ಉತ್ತರ ಕರ್ನಾಟಕಕ್ಕೆ ಸೇರಿದ್ದವು ಎಂಬ ಕಳವಳಕಾರಿ ಅಂಶವು ವೈಜ್ಞಾನಿಕ ಅಧ್ಯಯನದ ಭಾಗವಾಗಿ ಹೊರಬಿದ್ದಿತು. ಇದರಿಂದಾಗಿ ಪ್ರಾದೇಶಿಕ ಅಸಮತೋಲನದ ಕೂಗು ಕೇವಲ ಕೂಗಲ್ಲ ಎಂಬ ಅಂಶವು ಸಾಬೀತಾಯಿತು.
ಈ ದಿಸೆಯಲ್ಲಿ ಮುಂದೆ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಎಚ್.ಕೆ. ಪಾಟೀಲರು ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಹೈ-ಕೋರ್ಟ್ ಪೀಠ ಸ್ಥಾಪನೆಯ ಬಹು ಮಹತ್ವದ ಘಟನೆ ಪೀಠದ ಭೌತಿಕ ಕಟ್ಟಡದ ನಿರ್ಮಾಣದ ಶಂಕುಸ್ಥಾಪನೆ ನೆರವೇರಿತು. ಮುಂದೆ ನಡೆದ ಎಲ್ಲ ಘಟನೆಗಳು ಔಪಚಾರಿಕವೇ. ಇಲ್ಲಿ ಇನ್ನೊಂದು ಮಹತ್ವದ ಘಟನೆ ಕರ್ನಾಟಕದ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ರಾಜ್ಯದ ರಾಜಧಾನಿಯನ್ನು ಹೊರತುಪಡಿಸಿ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸಲು ಸಾಧ್ಯವೇ ಎಂಬ ಕುರಿತು ಸಾಧಕ-ಬಾಧಕಗಳ ಅಧ್ಯಯನ ನಡೆಸಲು ಅಂದು ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ ದಕ್ಷಿಣಾಮೂರ್ತಿಯವರ ನೇತೃತ್ವದಲ್ಲಿ ಅಧ್ಯಯನ ಮಾಡಲು ಸಮಿತಿ ನೇಮಕಮಾಡಲಾಯಿತು. ಈ ಸಮಿತಿ ವರದಿ ಸಲ್ಲಿಸಿ ಸಾಧ್ಯತೆಯ ಬಗ್ಗೆ ಸಕಾರಾತ್ಮಕ ವರದಿ ನೀಡಿ ಮುಂದಿನ ಕ್ರಮ ಕೈಗೊಳ್ಳುವ ಮೊದಲೇ ಧರ್ಮಸಿಂಗ್ ಸರ್ಕಾರ ಪತನಗೊಂಡಿತು. ಸರ್ಕಾರಗಳು ಮುಂದುವರೆಯುವ ಸಂಸ್ಥೆಗಳೇ ಹೊರತು ಒಂದು ಪಕ್ಷದ ತಳಹದಿಯ ಮೇಲೆ ನಿರ್ಮಾಣಗೊಂಡ ಸಂಸ್ಥೆಗಳಲ್ಲ ಎಂಬುದನ್ನು ಮುಂದುವರೆಸಿದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರ ಸರ್ಕಾರಗಳು ಸುವರ್ಣಸೌಧದ ನಿರ್ಮಾಣಕ್ಕೂ ಮುನ್ನ ಒಂದು ಅಧಿವೇಶನ ನಡೆಸಿದರು. ತದನಂತರ ಸುವರ್ಣವಿಧಾನಸೌಧ ನಿರ್ಮಾಣಗೊಂಡಿತು. ಒಂದು ರಾಜ್ಯದಲ್ಲಿ ಎರಡು ಕಡೆ ಅಧಿವೇಶನ ನಡೆಸುವ ಉದಾಹರಣೆಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. 25 ವರ್ಷಗಳಿಂದಲೂ ಮಹಾರಾಷ್ಟ್ರದ ನಾಗಪುರದಲ್ಲಿ ಅಧಿವೇಶನ ನಡೆಯುತ್ತಿದೆ. ಇವತ್ತು ಜಮ್ಮು-ಕಾಶ್ಮೀರದಲ್ಲಿ ಎರಡು ರಾಜಧಾನಿಗಳೇ ಇವೆ. ಪ್ರಾದೇಶಿಕ ಅಸಮತೋಲನದ ಕಾರಣಕ್ಕಾಗಿಯೇ ಉತ್ತರ ಪ್ರದೇಶ, ಬಿಹಾರ್, ಮಧ್ಯಪ್ರದೇಶ ರಾಜ್ಯಗಳು ವಿಭಜನೆಗೊಂಡು ಪ್ರತ್ಯೇಕ ರಾಜ್ಯಗಳಾದವು. ಇದೀಗ ಆಂಧ್ರ ಪ್ರದೇಶದ ಸರದಿ. ಕರ್ನಾಟಕದಲ್ಲಿಯೂ ಅಂತಹ ಕೂಗು ಪದೇ ಪದೆ ಕೇಳಿಬರುತ್ತಿರುವುದು ಇಲ್ಲಿ ಪ್ರಸ್ತಾಪಿಸುವುದು ಪ್ರಸ್ತುತವಾಗುತ್ತದೆ.
ಇಷ್ಟೆಲ್ಲಾ ಇಲ್ಲಿ ಪ್ರಸ್ತಾಪಿಸುತ್ತಿರುವ ಉದ್ದೇಶ ಇಷ್ಟೇ, ಉತ್ತರದ ಭಾಗದಲ್ಲಿ ಅಧಿವೇಶನ ನಡೆದಾಗ ಆ ಭಾಗದ ಸಮಸ್ಯೆಗಳು, ವಿಷಯಗಳು ಮತ್ತಿತರ ಅಂಶಗಳು ಚರ್ಚೆಗೆ ಒಳಪಡುತ್ತವೆ ಮತ್ತು ಒಳಪಡಬೇಕು ಎಂಬ ಅಂಶವು ಪ್ರಾಮುಖ್ಯತೆ ಪಡೆಯುತ್ತದೆಯೇ ಹೊರತು ಅದಕ್ಕಾಗಿ ಮಾಡಲಾದ ವೆಚ್ಚ ಪರಿಗಣಿಸುವುದು ಪ್ರಮುಖವಾಗಬಾರದು. ಅಭಿವೃದ್ಧಿಯ ಚಲನಶೀಲತೆಯನ್ನು ಪಾದರಸದಂತೆ ಕೊಂಡೊಯ್ಯುವ ಸಂದರ್ಭದಲ್ಲಿ ಅದಕ್ಕಾಗಿ ನಿರ್ಮಿಸಲಾದ ಭೌತಿಕ ಸೌಲಭ್ಯಗಳ ಸೃಷ್ಟಿಗಾಗಿ ಮಾಡಿದ ವೆಚ್ಚವು ಗೌಣವೆನಿಸಬೇಕು. ಇಂತಹ ಯಾವುದೇ ವೆಚ್ಚದ ಬಗ್ಗೆ ಚಿಂತಿಸುವ ಬದಲು ಉತ್ತರ ಭಾಗದ ಮತ್ತು ದಕ್ಷಿಣ ಭಾಗದ ಸಮಸ್ಯೆಗಳ ಬಗ್ಗೆ ಅವುಗಳ ಪರಿಹಾರದ ಬಗ್ಗೆ ಸಮತೋಲನ ಹೊಂದಿದ ಚಿಂತನೆಯನ್ನು ಆರಂಭಿಸುವುದು ಸೂಕ್ತವೆಂದು ನನ್ನ ಭಾವನೆ.  ಮಾಜಿ ಸಚಿವರಾದ ಸುರೇಶ್ ಕುಮಾರ್ ಅವರು ಪ್ರಸ್ತಾಪಿಸಿರುವ ಎಲ್ಲಾ ವಿಷಯಗಳು ಮಹತ್ವದ್ದೇ. ಆದರೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ವಿಷಯದಲ್ಲಿ ವೆಚ್ಚದ ಲೆಕ್ಕಾಚಾರ ಹಾಕಿರುವುದು ಸಮಂಜಸವೆನಿಸುವುದಿಲ್ಲ.

- ಲಕ್ಷ್ಮೀಕಾಂತ ಜೋಷಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.