ಒಮ್ಮೊಮ್ಮೆ ಭ್ರಮಾಧೀನ 'ಧರ್ಮಸೆರೆ' ಹೇಗೆ ದಾರಿ ತಪ್ಪಿಸಿಬಿಡುತ್ತದೆ ನೋಡಿ. ಇತ್ತೀಚೆಗೆ ಬೆಂಗಳೂರಲ್ಲಿ ಎಫ್ಎಂ ರೇನ್ಬೋ ಆರ್ಜೆಗಳ ಸಭೆ ಕರೆಯಲಾಗಿತ್ತು. ನಲ್ವತ್ತಕ್ಕೂ ಹೆಚ್ಚು ಜಾಕಿಗಳು ಭಾಗವಹಿಸಿದ್ದರು. ವೃತ್ತಿಕ್ಷಮತೆಗೆ ಉತ್ಸಾಹ ಇಂಜೆಕ್ಟ್ ಮಾಡೋದು ಉದ್ದೇಶ. ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಮಿಲನ್ ಸರ್ದು ಸಭೆಯ ರಾಯಭಾರ. ಈ ಮಿನಲ್ ಸರ್ ಬಾನುಲಿ ಪಡಶಾಲೆಯಲ್ಲಿ ಮತೀಯವಾದದ 'ಬಿಸಿಲ್ಗುದುರೆ ಸವಾರ' ಎಂದೇ ಖ್ಯಾತ. ತಾವು ಕಣ್ಣಿಗೆ ಕಟ್ಟಿಕೊಂಡಿರುವ ಮತೀಯವಾದದ ಕಪ್ಪುಬಟ್ಟೆ ಬೇರೆಯವರಿಗೆ ಕಾಣ್ಸಲ್ಲ ಅಂತ ಭ್ರಮೆ. ಜತೆಗೆ ಅನಗತ್ಯ ಪ್ರೌಢಿಮೆ ಮೆರೆವ ತವಕ. ಮೊನ್ನಿನ ಜಾಕಿಗಳ ಸಭೆಯಲ್ಲಿ ತಮ್ಮ 'ಕೌಶಲ್ಯ' ಮೆರೆಯಲು ಹೋಗಿದ್ದಾರೆ. ಆದರೆ ಪ್ರಯತ್ನ ಮತ್ತು ನಸೀಬಿನ 'ಮಿಲನ'ವಾಗದೆ ಸರಣಿಯೋಪಾದಿಯಲ್ಲಿ ಜಾರಿಬಿದ್ದು, ನಗೆಪಾಟಲಿಗೆ ಗುರಿಯಾಗಿದ್ದಾರೆ. ಅಂದು ಅದದ್ದೇನೆಂದರೆ...? ಮಾತು ಶುರು ಮಾಡಿದ ಸಾಹೇಬರು, 'ನಾನು ಎಫ್ಎಂ ರೇನ್ಬೋ ಕೇಳೋದೇ ಇಲ್ಲ. ಸೆಲೂನ್ಗೆ ಹೋಗ್ತೇನೆ. ಅಲ್ಲಿನ ಕೆಲಸದ ಹುಡುಗರು ರೆಗ್ಯುಲರ್ ರೇನ್ಬೋ ಕೇಳುಗರು. ಯಾರ್ಯಾರು ಹೆಂಗೆಂಗೆ ನಿರೂಪಣೆ ಮಾಡ್ತಾರೆ ಅಂತ ಹಂಗಂಗೆ ಫೀಡ್ಬ್ಯಾಕ್ ಕೊಡ್ತಾರೆ. ಹಂಗಾಗಿ ಇಲ್ಲಿರೋ ಎಲ್ಲರ ಕ್ಯಾಲಿಬರ್ ನಂಗೊತ್ತು' ಅಂತ ಪುಂಗಿದ್ದಾರೆ. ಇವರೇ ರೇಡಿಯೊ ಕೇಳದಿದ್ದ ಮೇಲೆ ಯಾವ ಸೀಮೆ ಮುಖ್ಯಸ್ಥರು? ಇಂಥವರಿದ್ದರೆ 'ಎಫ್ಎಂ ರೇನ್ಬೋ ಹೋಗಿ ಎಫ್ಎಂ ರುಯಿನ್ಬೋ' ಆಗೋದ್ರಲ್ಲಿ ಅನುಮಾನ ಇಲ್ಲ ಅಂತ ಆರ್ಜೆಗಳು ಸಿಟ್ಟನ್ನು ಪಕ್ಕಕ್ಕಿಟ್ಟು ಪಕಪಕನೆ ನಕ್ಕಿದ್ದಾರೆ. ಸಾಹೇಬರ ಪ್ರವರ ಇಷ್ಟಕ್ಕೆ ಮುಗಿದಿಲ್ಲ. ತಮ್ಮ ಸಮುದಾಯದ ಜಾಕಿಯೊಬ್ಬರನ್ನು ಬೂಸ್ಟ್ ಮಾಡುತ್ತಾ ಜೂನಿಯರ್ಗಳ ಬಗ್ಗೆ ನಿನ್ನ ಅಭಿಪ್ರಾಯ ಏನೆಂದು ಕೇಳಿದ್ದಾರೆ. ಆದರೆ ಆ ಜಾಕಿಗೆ ಅನಗತ್ಯ ಬೂಸ್ಟ್ ಇಷ್ಟ ಇರಲಿಲ್ಲ. ಅಷ್ಟೊತ್ತಿಗಾಗಲೇ ಅವರ ವರ್ತನೆಯಿಂದ ಬೇಸತ್ತಿದ್ದ ನುಣ್ಣನೆ ತಲೆಯ ಆ ಜಾಕಿ, 'ನೋಡಿ ನಾನು ಸೆಲೂನ್ಗೆ ಹೋಗೋಲ್ಲ. ನನ್ನ ತಲೆಗೆ ಅದರ ಅಗತ್ಯವೂ ಇಲ್ಲ' ಎಂದಾಗ ಆರ್ಜೆಗಳು ಮತ್ತೊಮ್ಮೆ ಬಿದ್ದು, ಬಿದ್ದು ನಕ್ಕಿದ್ದಾರೆ. ಮುಂದುವರಿದ ಜಾಕಿ, 'ಕೆಲವರು ಚೆನ್ನಾಗಿ ನಿರೂಪಣೆ ಮಾಡ್ತಾರೆ. ಇನ್ನೂ ಕೆಲವರು ಮಾಡಲ್ಲ. ಮಾಡದವರು ಕಲೀತಾರೆ. ಮಾಡುವವರಿಗೆ ಅದರ ಅಗತ್ಯ ಇಲ್ಲ' ಎಂದಾಗ ಸಾಹೇಬರ ಮುಖದಲ್ಲಿ 'ಎಫ್ಎಂ ಬ್ಲಾಕ್ಬೋ'. ತಮ್ಮ ಪ್ರಯತ್ನ ವೇಸ್ಟ್ ಆದರೂ ಪಟ್ಟು ಬಿಡದ ಸಾಹೇಬರು, 'ಏನಪ್ಪಾ ನಾನೇನು ನಿನ್ನನ್ನ ಇಂಟರ್ವ್ಯೂ ಮಾಡ್ತಾ ಇದ್ದೀನಾ? ಒಳ್ಳೆ ಸೆಲೆಬ್ರೆಟಿ ಥರಾ ಆನ್ಸರ್ ಮಾಡ್ತಿದ್ದೀಯಲ್ಲಾ' ಅಂತಂದಾಗ ಬಂದ ಪ್ರತ್ಯುತ್ತರ. 'ನೀವು ಹಾಗೆ ಭಾವಿಸಿಕೊಂಡರೆ ನನ್ನ ಅಭ್ಯಂತರ ಏನೂ ಇಲ್ಲ.' ಸಭೆ ಮತ್ತೊಮ್ಮೆ ನಗೆಗಡಲಲ್ಲಿ ಮಿಂದೆದ್ದಾಗ ಆರ್ಜೆ ನೊಣಪು ತಲೆ ಮತ್ತಷ್ಟು ಪಳಪಳ ಹೊಳೆಯುತ್ತಿತ್ತು. ಮಿಲನ್ ಸಾಹೇಬರ 'ಕಾಲಿತಲೆ'ಯ ಪ್ರತಿಬಿಂಬದಂತೆ! ಜಯನಗರ ಒಂಬತ್ತನೇ ಬ್ಲಾಕ್ ಸೆಲೂನ್ನಿಂದ ಹೊರಟ ಈ ಸುದ್ದಿ ಬೆಂಗಳೂರು, ಹಾಸನ ದಾಟಿ ಇಡೀ ರಾಜ್ಯಾದ್ಯಂತ ಎಫ್ಎಂ ಕಾಮನಬಿಲ್ಲಿಗಿಂತ ಸ್ಪೀಡಾಗಿ ಪ್ರಸಾರ ಕಾಣುತ್ತಿದೆ.
ಚಿತಾಗಾರ ಉದ್ಘಾಟನೆಗೂ ಸಿಹಿ ಹಂಚಿ ಸಂಭ್ರಮ!
ಆರ್. ಗುಂಡೂರಾವ್ ಸಿಎಂ ಆಗಿದ್ದಾಗ ಈಜುವ ಮೂಲಕ ಈಜುಕೊಳ ಉದ್ಘಾಟಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಅದಕ್ಕಿಂತಲೂ ಭಿನ್ನವಾಗಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ನಡೆದಿದೆ. ಚಿತಾಗಾರ ಉದ್ಘಾಟನೆಗೆ ಸಿಹಿ ಹಂಚಿ ಸಂಭ್ರಮಿಸಲಾಗಿದೆ! ಹೌದು, ಚಾಮರಾಜೇಂದ್ರ ಮೃಗಾಲಯದಲ್ಲಿ ಹೊಸದಾಗಿ ಚಿತಾಗಾರ ನಿರ್ಮಿಸಾಗಿತ್ತು. ಆದರೆ, ಇದಕ್ಕೆ ಉದ್ಘಾಟನೆ ಭಾಗ್ಯ ಮಾತ್ರ ಕೂಡಿ ಬಂದಿರಲಿಲ್ಲ. ಯಾವುದಾದರೂ ಪ್ರಾಣಿ ಸತ್ತರೆ ಅದನ್ನು ಚಿತೆಗೇರಿಸಿ ಉದ್ಘಾಟಿಸಬೇಕೆಂದು ಅಧಿಕಾರಿಗಳು ಕಾಯುತ್ತಿದ್ದರು. ಇವರ ಆಸೆ ಈಡೇರುವಂತೆ ಕವಡೆವೊಂದು ಮೃತಪಟ್ಟಿತು. ಇದೇ ಸದವಕಾಶವೆಂದು ಮಾಧ್ಯಮದವರಿಗೆ ಫೋನಾಯಿಸಿ ಮೃಗಾಲಯಕ್ಕೆ ಬರುವಂತೆ ಕರೆದರು. ಅದೇ ಮೃಗಾಲಯದಲ್ಲಿ ನಾಲ್ವರನ್ನು ಬಲಿ ಪಡೆದ ನರಭಕ್ಷಕ ಹುಲಿ ಇದ್ದಿದ್ದರಿಂದ 'ವಿಶೇಷ ಸುದ್ದಿ' ಇರಬೇಕೆಂದು ಪತ್ರಕರ್ತರು ದೌಡಾಯಿಸಿದರು. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಸತ್ತ ಕಡವೆಯನ್ನು ಚಿತಾಗಾರಕ್ಕೆ ಹಾಕುವ ಮೂಲಕ ಉದ್ಘಾಟಿಸಿ ನೆರೆದಿದ್ದ ಪತ್ರಕರ್ತರು, ಇತರೆ ಅಧಿಕಾರಿಗಳಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು!
ಸಿದ್ದರಾಮಯ್ಯ ಸರ್ಕಾರದಲ್ಲೊಬ್ಬ ಬಾಬಾ ಸಾಹೇಬ್ ಅಂಬೇಡ್ಕರ್!
ಡಿಸೆಂಬರ್ ಬಂತೆಂದರೆ ಸಾಕು ಎಲ್ಲರಿಗೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೆನಪಾಗುತ್ತಾರೆ. ಆದರೆ, ಈ ಬಾರಿ ಅವರ ಪ್ರತಿರೂಪವೇ ಪ್ರತ್ಯಕ್ಷವಾಗಿತ್ತು! ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದರಿಂದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಂಬಂಧಿಸಿದ ವಿಧೇಯಕ ಮಂಡಿಸಲು ಹೊರಟಿದ್ದರು. ಮಾರನೇ ದಿನವೇ 'ಅಂಬೇಡ್ಕರ್ ಪರಿನಿರ್ವಾಣ ದಿನ' ಬೇರೇ ಇತ್ತು. ಸ್ವಲ್ಪ ಡಿಫರೆಂಟಾಗಿ ಕಾಣಬೇಕೆಂದು ಥೇಟ್ ಅಂಬೇಡ್ಕರ್ ಅವರ ರೀತಿ ಸೂಟು, ಬೂಟು ಧರಿಸಿ ತಯಾರಾದರು. ಅಧಿವೇಶನಕ್ಕೆ ಹೊರಡುವ ಮುನ್ನವೇ ಹೊರಗಡೆ ಮಾದಿಗ ದಂಡೋರ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಅವರನ್ನು ಸಮಾಧಾನ ಮಾಡಲು ಹೋಗಿ ಭಾಷಣ ಬಿಗಿಯಲು ಶುರು ಮಾಡಿದರು. 'ಏನ್ರಿ ಇದು ಹೋರಾಟ ಮಾಡೋ ರೀತೀನಾ? ನಾನೂ ಹೋರಾಟ ಮಾಡಿದ್ದೆ. ಒಂದು ಲಕ್ಷ ಜನ ಸೇರಿಸಿದ್ದೆ. ಆ ಜೋರು ಏನಿತ್ತು ಗೊತ್ತಾ? ನೀವು ಐದು ಸಾವಿರ ಜನ ಸೇರ್ಸಿ ಹೋರಾಟ ಮಾಡ್ತೀರಲ್ಲಾ, ಹೀಗೆಲ್ಲಾ ಮಾಡಿದ್ರೆ ಒಗ್ಗಟ್ಟು ಗೊತ್ತಾಗೋದು ಹೇಗೆ? ಇದು ಹೋರಾಟವಲ್ಲ, ಬರೇ ಶೂನ್ಯ. ಇದ್ಕೆಲ್ಲಾ ಮುಖ್ಯಮಂತ್ರಿ ಬರ್ತಾರಾ' ಎಂದು ಗುಡುಗಿದರು. ಹೋರಾಟ ಮಾಡುತ್ತಿದ್ದವರು ಅಂಬೇಡ್ಕರ್ ಪ್ರತಿರೂಪದಂತಿದ್ದ ಆಂಜನೇಯ ಅವರ ಮಾತು ಕೇಳಿ ಪ್ರತಿಭಟನೆ ಕೈ ಬಿಟ್ಟು ತೆಪ್ಪಗಾದರು!
- ನಂಬಿರಾಜ್