ಅಣ್ಣಾರಿಗೇ ಶ್ರೇಯಸ್ಸು, ಕೇಜ್ರಿವಾಲ್ ಠುಸ್ಸು

ಒಂದು ಉನ್ನತ ಉದ್ದೇಶದಲ್ಲಿ ರಚನಾತ್ಮಕ ರಾಜಿಗಳಿಗೆ ಅವಕಾಶವಿರಬೇಕಾಗುತ್ತದೆ. ಸರ್ಕಾರದ ಲೋಕ್ಪಾಲ್ ವಿಧೇಯಕವನ್ನು ಕೇಜ್ರಿವಾಲ್ ಮತ್ತವರ ತಂಡ ಈಗಲೂ 'ಜೋಕ್ಪಾಲ್' ಎಂದೇ ಹಂಗಿಸಿಕೊಂಡಿದೆ. ಆದರೆ ಅಣ್ಣಾ ಮತ್ತವರ ಜತೆಗಿರುವ ಕಾರ್ಯಕರ್ತರು ತಮಗೆ ಸಮಾಧಾನವಾಗಿದೆ ಎಂದಿದ್ದಾರೆ.
ಲೋಕ್ಪಾಲ್ ವಿಧೇಯಕ ಪಾಸಾಗಿದೆ. ಇಲ್ಲೊಂದು ವ್ಯಂಗ್ಯವನ್ನು ಗಮನಿಸದೇ ಇರುವುದಕ್ಕೆ ಸಾಧ್ಯವಿಲ್ಲ. ಅರವಿಂದ ಕೇಜ್ರಿವಾಲ್ ಹಾಗೂ ಅವರ ಪಾಳಯದ ಬೆಂಕಿಯುಂಡೆ ಬ್ರಾಂಡ್ನ ಕಾರ್ಯಕರ್ತರು ಲೋಕ್ಪಾಲ್ ವಿಷಯವನ್ನು ಅಗೆದು ತೋಡಿ ಅದನ್ನು ಅತಿದೊಡ್ಡ ರಾಷ್ಟ್ರೀಯ ವಿಷಯವನ್ನಾಗಿಸಿದ್ದರು. ಈ ಆಂದೋಲನಕ್ಕೆ ಅಣ್ಣಾ ಹಜಾರೆಯವರನ್ನು ಕೇಂದ್ರ ಸ್ಥಾನಕ್ಕೆ ತಂದು ನಿಲ್ಲಿಸಿದವರೂ ಅವರೇ. ಅಣ್ಣಾ ಹಜಾರೆಯವರ ಮುಗ್ಧ ಮತ್ತು ಪ್ರಾಮಾಣಿಕ ವರ್ಚಸ್ಸು, ಅವರು ನೀಡಿದ ಲೋಕ್ಪಾಲ್ ಬೇಡಿಕೆ ಕರೆಗೆ ದೊಡ್ಡಮಟ್ಟದ ಬಲ ತಂದಿತು. ಇಡೀ ರಾಜಕೀಯ ವಲಯದಲ್ಲೇ ಅದು ಸಂಚಲನವನ್ನು ಮೂಡಿಸಿತಲ್ಲದೇ, ಏನಾದರೊಂದು ನಿರ್ಧಾರ ತೆಗೆದುಕೊಳ್ಳಬೇಕಾದ ತುರ್ತಿಗೆ ಅಧಿಕಾರಸ್ಥರನ್ನೆಲ್ಲ ದೂಡಿತು.
ದೇಶದ ಬೀದಿ ಬೀದಿಗಳಿಂದ ಈ ಉನ್ನತ ಉದ್ದೇಶಕ್ಕೆ ಒಕ್ಕೊರಲಿನ ಬೆಂಬಲ ಧ್ವನಿ ಮೊಳಗಿತು. ಮಾಧ್ಯಮ ಮತ್ತು ಇತರ ಸಂಸ್ಥೆಗಳು ಕೂಡ ಈ ವಿಷಯದಲ್ಲಿ ಆಡಳಿತಾರೂಢರನ್ನು ಎದುರಿಸಿ ನಿಂತವು. ಆಡಳಿತ ವ್ಯವಸ್ಥೆಗೆ ಈ ಧ್ವನಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಬೇರೆ ದಾರಿ ಇರಲಿಲ್ಲ. ಸರ್ಕಾರವು ತನಗೆ ಬೇಕಾದಂತೆ ಲೋಕ್ಪಾಲ್ ಜಾರಿಗೆ ತರುವುದು ಸಾಧ್ಯವಾಗದಂತೆ ಈ ಎಲ್ಲ ಶಕ್ತಿಗಳೂ ಸೇರಿ ಒತ್ತಡವನ್ನು ನಿರ್ಮಿಸಿದವು. ಸರ್ಕಾರವು ಈ ಆಂದೋಲನದ ಒಟ್ಟೂ ಗತಿಯನ್ನು ಅರ್ಥ ಮಾಡಿಕೊಂಡು ಅದರ ಮೇಲೆ ನಿಯಂತ್ರಣ ಸಾಧಿಸುವುದಕ್ಕೂ ಮೊದಲೇ ಅದರ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿದ್ದವು. ಭ್ರಷ್ಟಾಚಾರದ ವಿರುದ್ಧ ಭಾರತ ಎಂಬ ಅಭಿಯಾನ ಬೃಹತ್ತಾಗಿ ಬೆಳೆದುನಿಂತು, ಅಣ್ಣಾ ಹಜಾರೆ ಅದರ ಕೇಂದ್ರ ಸ್ಥಾನಕ್ಕೆ ಬಂದು ನಿಂತುಬಿಟ್ಟಿದ್ದರು.
ಎರಡು ವರ್ಷಗಳ ಹಿಂದೆ ದೇಶದ ಅಂತರಾತ್ಮವನ್ನು ಬಡಿದೆಬ್ಬಿಸಿದ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಅಣ್ಣಾ ಹಜಾರೆಯವರು ಎದ್ದು ಕಾಣುವ ಸಿಂಬಲ್ ಆಗಿದ್ದರೆ, ಕೇಜ್ರಿವಾಲ್ ಮತ್ತವರ ಕಾಮ್ರೆಡ್ಗಳು ಈ ಆಂದೋಲನದ ತಿರುಳು, ಅಂತರಂಗವಾಗಿದ್ದರು. ಆದರೆ ಬದಲಾವಣೆಗಳನ್ನು ಅರಿತುಕೊಳ್ಳುವಲ್ಲಿ ಕೇಜ್ರಿವಾಲ್ ತಂಡ ಹಿಂದೆ ಬಿತ್ತು. ಇದೀಗ ಸಂಸತ್ತು ಲೋಕ್ಪಾಲ್ ಮಸೂದೆಯನ್ನು ಅಂಗೀಕರಿಸಿರುವ ಹಂತದಲ್ಲಿ ಅದರ ಶ್ರೇಯಸ್ಸನ್ನೂ ದೇಶದ ಕೃತಜ್ಞತೆಯನ್ನೂ ಸ್ವೀಕರಿಸುತ್ತಿರುವ ವ್ಯಕ್ತಿಯಾಗಿ ಅಣ್ಣಾ ಹಜಾರೆ ಕಾಣಿಸಿಕೊಳ್ಳುತ್ತಿದ್ದರೆ, ಕೇಜ್ರಿವಾಲ್ ಇದ್ದಕ್ಕಿದ್ದಂತೆ ಚೌಕಟ್ಟಿನಿಂದ ಹೊರಗೆ ಸರಿದವರಂತೆ ತೋರುತ್ತಿದ್ದಾರೆ. ಪರಿಸ್ಥಿತಿ ಹೇಗೆಲ್ಲ ಬದಲಾವಣೆ ಆಗುತ್ತದೆ! ಅಣ್ಣಾ ಜಯದ ನಗೆ ನಕ್ಕವರಂತಿದ್ದರೆ, ಕೇಜ್ರಿವಾಲ್ ಸುಮ್ಮನೆ ಸಿಡಿಮಿಡಿಗುಟ್ಟುತ್ತಿರುವವರಂತೆ ತೋರುತ್ತಿದ್ದಾರೆ.
ಲೋಕ್ಪಾಲ್ ಮಸೂದೆಗಾಗಿ ಕೇಜ್ರಿವಾಲ್ ಮತ್ತುವರ ತಂಡ ನಡೆಸಿದ ತೀವ್ರ ಹೋರಾಟವನ್ನು ಮರೆಯುವಂತಿಲ್ಲ. ಆದರೆ ಕೊನೆಯಲ್ಲಿ ನೋಡಿದಾಗ ಅವರ ತಂಡ ಬೊಬ್ಬೆ ಎಬ್ಬಿಸುವವರ ಸಮೂಹದಂತೆ ಕಾಣುವಂತಾಗಿದೆ. ಏಕೆಂದರೆ ಇವರ ತಂಡದಲ್ಲಿರುವವರ್ಯಾರೂ ಬೇರೊಂದು ದೃಷ್ಟಿಕೋನವನ್ನೂ ಗೌರವಿಸಬೇಕಾಗುತ್ತದೆ ಎಂಬ ತಿಳಿವಳಿಕೆ ಇರುವವರಂತೆ ಕಾಣುತ್ತಿಲ್ಲ. ಒಂದು ಉನ್ನತ ಉದ್ದೇಶದಲ್ಲಿ ರಚನಾತ್ಮಕ ರಾಜಿಗಳಿಗೆ ಅವಕಾಶವಿರಬೇಕಾಗುತ್ತದೆ. ತಾವು ಹೇಳಿದ್ದೇ ಅಂತಿಮ ಎಂಬ ನಿಲವೇ ಉತ್ತಮ ಹೋರಾಟ ರೂಪುಗೊಳಿಸುವುದಿಲ್ಲ. ಸರ್ಕಾರದ ಲೋಕ್ಪಾಲ್ ವಿಧೇಯಕವನ್ನು ಕೇಜ್ರಿವಾಲ್ ಮತ್ತವರ ತಂಡ ಈಗಲೂ 'ಜೋಕ್ಪಾಲ್' ಎಂದೇ ಹಂಗಿಸಿಕೊಂಡಿದೆ. ಆದರೆ ಅಣ್ಣಾ ಮತ್ತವರ ಜತೆಗಿರುವ ಕಾರ್ಯಕರ್ತರು ಸರ್ಕಾರದ ನಡೆ ತಮಗೆ ಸಮಾಧಾನ ತಂದಿದೆ ಎಂದಿದ್ದಾರೆ. ಇದೀಗ ಸಂಸತ್ತು ಲೋಕ್ಪಾಲ್ ಮಸೂದೆ ಅಂಗೀಕರಿಸಿರುವುದು ಅಣ್ಣಾ ಅವರ ಬೇಡಿಕೆಗೆ ಸಂದ ಜಯವಾದಂತಾಯಿತೇ ವಿನಃ ಕೇಜ್ರಿವಾಲ್ ತಂಡದ ಜಯವಾಗಲೇ ಇಲ್ಲ. ಅಂತಿಮ ಫಲಿತಾಂಶವನ್ನು ಹೀಗೆ ಹೇಳಬಹುದು. ಜನರ ದೃಷ್ಟಿಯಲ್ಲಿ ಅಣ್ಣಾ ಹಜಾರೆ ಹೋರಾಟಕ್ಕೆ ಜಯ ಸಿಕ್ಕಿತು. ಆದರೆ ಕೇಜ್ರಿವಾಲ್ ಕುರಿತ ಸಾರ್ವಜನಿಕ ಗ್ರಹಿಕೆಯ ಔನತ್ಯ ಕುಸಿಯಿತು.
ಕೇಜ್ರಿವಾಲ್ ರಾಜಕೀಯ ಜೀವನಕ್ಕೆ ಸಹ ಪಾಸಾಗಿರುವ ಲೋಕ್ಪಾಲ್ ಮಸೂದೆ ಕೆಲ ಆತಂಕಗಳನ್ನು ತಂದೊಡ್ಡಬಹುದು. ಅರವಿಂದ ಕೇಜ್ರಿವಾಲ್ ರಾಜಕೀಯ ಪ್ರಯಾಣವು ಭ್ರಷ್ಟತೆ ರಹಿತ, ಧೈರ್ಯಶಾಲಿ ಪರ್ಯಾಯ ರಾಜಕೀಯದ ಘಟಕವೊಂದನ್ನು ಹುಟ್ಟುಹಾಕಿರುವ ಭಯರಹಿತ ವರ್ಚಸ್ಸಿನದ್ದು. ಕ್ಲಾಸ್ ಮತ್ತು ಮಾಸ್ ಎಲ್ಲರನ್ನೂ ತಲುಪಿರುವ, ರಾಜಕೀಯದಲ್ಲಿ ಒಂದು ಹಿತವಾದ ಗಾಳಿ ಎಂದೇ ಪರಿಗಣಿತವಾಗಿರುವವರು ಕೇಜ್ರಿವಾಲ್. ಆದರೆ ಲೋಕ್ಪಾಲ್ ಶ್ರೇಯಸ್ಸನ್ನು ಅವರಿಂದ ಕಿತ್ತುಕೊಂಡಲ್ಲಿ ಅವರು ಅಷ್ಟೇ ತೂಕ ಉಳಿಸಿಕೊಂಡಿರುತ್ತಾರೆಯೇ ಎಂಬುದು ಪ್ರಶ್ನೆ.
ಲೋಕ್ಪಾಲ್ ಮಸೂದೆ ಕಾನೂನಾಗುತ್ತಲೇ ಉಳಿದ ರಾಜಕೀಯ ಪಕ್ಷಗಳಿಗೆ ಕೇಜ್ರಿವಾಲ್ ಅವರನ್ನು ಗೌರವಿಸಬೇಕಾದ ದರ್ದು ಇರುವುದೇ ಇಲ್ಲ. ಅಣ್ಣಾ ಅವರನ್ನು ದೇಶದ ಅಭಿರುಚಿ ಅರಿತುಕೊಂಡವರಾಗಿ, ತಾತ್ವಿಕ ದೃಷ್ಟಿಯ ಹಿರಿಯಜ್ಜನಾಗಿ ಉಳಿದುಬಿಡುತ್ತಾರೆ. ಅವರ ಈ ಪ್ರಭೆ ಕೇಜ್ರಿವಾಲ್ ಮತ್ತವರ ತಂಡವನ್ನು ಮುಸುಕಾಗಿಸಬಹುದು. ಇದು ಕೇಜ್ರಿವಾಲ್ ಮತ್ತವರ ಗುಂಪನ್ನು ಅಪ್ರಸ್ತುತ ಹಂತಕ್ಕೆ ತಳ್ಳೀತು. ಕೇಜ್ರಿವಾಲ್ ಅವರ ತಂಡ ಮಸೂದೆಯ ಕುರಿತ ಮಾತುಗಳನ್ನು ಮುಂದುವರಿಸಿದೆ. ಸರ್ಕಾರದ ವಿಧೇಯಕದಲ್ಲಿ ಜೀವ ಇಲ್ಲ ಎಂದಿದೆ. ಆದರೆ ಈ ಬಾರಿ ಅವರ ಮಾತುಗಳಿಗೆ ಈ ಹಿಂದಿನಂತೆ ಅನುಮೋದನೆ ಸಿಗುತ್ತಿಲ್ಲ. ಒಂದು ರಾಜಕೀಯ ಪಕ್ಷವಾಗಿ ಆಮ್ ಆದ್ಮಿ ಪಾರ್ಟಿ ತನ್ನ ಮೊಟ್ಟೆಗಳನ್ನೆಲ್ಲ ಒಂದೇ ಬುಟ್ಟಿಯಲ್ಲಿಟ್ಟಂತೆ ಆಗಿದೆ. ಲೋಕ್ಪಾಲ್ ವಿಷಯದ ಮೇಲೆಯೇ ವರ್ಚಸ್ಸು ಬೆಳೆಸಿಕೊಂಡ ಆ ಗುಂಪು. ಇದುವರೆಗೆ ಮತ್ಯಾವುದೇ ಪ್ರಮುಖ ವಿಷಯದ ಬಗ್ಗೆ ಮಾತನಾಡಿಲ್ಲ. ಲೋಕ್ಪಾಲ್ ವಿಷಯ ಮುಗಿಯುತ್ತಲೇ ಅವರ ರಾಜಕೀಯ ಎದುರಾಳಿಗಳು ನಿರಾಳರಾಗುತ್ತಾರೆ. ವಾಸ್ತವದಲ್ಲಿ ಆಮ್ ಆದ್ಮಿಯ ಮೇಲೆ ಮುಗಿಬೀಳುವುದಕ್ಕೆ ಅವರು ವಿಧೇಯಕ ಪಾಸಾಗುವುದನ್ನೇ ಕಾಯುತ್ತಿದ್ದರು ಎಂದರೆ ತಪ್ಪಿಲ್ಲ.
ನೈತಿಕ ಮೇಲ್ಸ್ಥರವನ್ನು ಏರಿದ ಅಣ್ಣಾ ತಂಡ ಇದೀಗ ದೇಶದ ಪ್ರಮುಖ ನಾಗರಿಕ ಒಕ್ಕೂಟ ಎನ್ನಿಸಿಕೊಳ್ಳುತ್ತದೆ. ಕೇಜ್ರಿವಾಲ್ ತೆರವುಗೊಳಿಸಿದ ಬಂಡಾಯದ ಸುಧಾರಣಾವಾದಿ ವೇದಿಕೆಯ ಸಂಪೂರ್ಣ ಅವಕಾಶ ಅಣ್ಣಾ ತಂಡದ್ದು. ಪ್ರಾಯೋಗಿಕ ಹಾದಿಯಲ್ಲಿ, ಕಾರಣಗಳಿಗೆ ಬೆಲೆ ಕೊಡುತ್ತಾರೆ ಎಂಬ ಕಾರಣಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಅಣ್ಣಾ ಅವರೊಂದಿಗೆ ವ್ಯವಹರಿಸುವುದಕ್ಕೆ ಹಿಂದೆಮುಂದೆ ನೋಡುವುದಿಲ್ಲ. ಕೊನೆಗೂ ಪರಿಸ್ಥಿತಿಯ ವ್ಯಂಗ್ಯ ಎಲ್ಲಿಗೆ ಬಂತೆಂದರೆ ಇದೀಗ ಕೇಜ್ರಿವಾಲ್ ತಂಡ ಅಣ್ಣಾ ಅವರನ್ನೇ ತಮ್ಮ ನೇರ ಪ್ರತಿಸ್ಪರ್ಧಿ ಎಂದು ಪರಿಗಣಿಸುವಂತಾಗಿದೆ. ಕೇಜ್ರಿವಾಲ್ ತಮ್ಮದೇ ಪಕ್ಷವನ್ನು ಹೊಂದಿರುವುದರಿಂದ ರಾಜಕೀಯ ಸರ್ಕಸ್ಸುಗಳಲ್ಲಿ ಅವರೂ ಭಾಗವಹಿಸಲೇಬೇಕಾಗುತ್ತದೆ. ಆದ್ದರಿಂದ ಇನ್ನು ಮುಂದೆ ಅದೇ ವರಸೆಯಲ್ಲಿ ಅವರನ್ನು ಎದುರುಗೊಳ್ಳಲಿರುವ ರಾಜಕೀಯ ಪಕ್ಷಗಳು ಅವರನ್ನು ದೊಡ್ಡ ಆತಂಕ ಎಂದು ಪರಿಗಣಿಸುತ್ತಿಲ್ಲ. ಅವರ ಓಲೈಕೆ- ಗಮನ ಎಲ್ಲವೂ ಅಣ್ಣಾರಿಗೆ ಮಾತ್ರ ಸೀಮಿತ ಈಗ. ಲೋಕ್ಪಾಲ್ ಅನುಷ್ಠಾನಕ್ಕೆ ಬಂದ ನಂತರ ಕೇಜ್ರಿವಾಲ್ ತಮ್ಮ ದಾರಿ ಕಂಡುಕೊಳ್ಳುವುದು ಹೇಗೆ ಎಂಬುದು ಸದ್ಯಕ್ಕೆ ಆಸಕ್ತಿಕೆರಳಿಸಿರುವ ಅಂಶ.
- ಅಕ್ಷಯ್ ಮಿಶ್ರಾ
ಫಸ್ಟ್ಪೋಸ್ಟ್ ಡಾಟ್ಕಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


