ದಬ್ಬಾಳಿಕೆಗೂ ಅಲುಗಾಡಲಿಲ್ಲ ನಮ್ಮ ಪ್ರಜಾಪ್ರಭುತ್ವ

2013 ಮುಗಿಯುತ್ತ ಬಂದಿದೆ. ಪ್ರಮುಖ ಚುನಾವಣಾ ಯುದ್ಧವೊಂದು ಈಗಷ್ಟೇ ಅಂತ್ಯವಾಗಿದೆ. ಮುಂಬರುವ ವರ್ಷದಲ್ಲಿ ಮತ್ತೊಂದು ಯುದ್ಧ ನಡೆಯಲಿದೆ. 2014ರ ಪೂರ್ವಾರ್ಧದಲ್ಲಿ ಸೋನಿಯಾ-ಮನಮೋಹನ್ ಸಿಂಗ್ರ ಆಡಳಿತದ ಹಣೆಬರಹ ನಿರ್ಧಾರವಾಗಲಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ನೋಡಿರುವ ಮಾಧ್ಯಮಗಳು, ಇದನ್ನು "ಕಾಂಗ್ರೆಸ್ಗೆ ಹೊರದಾರಿ" ಎಂದು ಕರೆಯುತ್ತಿವೆ. ಈ ಕುರಿತು ಎಮ್.ಜೆ. ಅಕ್ಬರ್ ಅವರ ಲೇಖನ 'ಸಂಡೇ ಟೈಮ್ಸ್' ಪತ್ರಿಕೆಯಲ್ಲಿ ಡಿ.15ರಂದು ಪ್ರಕಟವಾಗಿದೆ. ಅವರ ಲೇಖನದ ಶೀರ್ಷಿಕೆ: "Post-poll lessons for the winners, and whiners''. ಆ ಲೇಖನದ ಕೊನೆಯ ಮೂರು ಸಾಲುಗಳು ಸಾರಾಂಶವನ್ನು ತಿಳಿಸಿಕೊಡುತ್ತವೆ: 'ಪ್ರತಿಯೊಬ್ಬ ಭಾರತೀಯನೂ ಕುಪಿತನಾದಾಗ, ಇಡೀ ಭಾರತವೇ ಸಿಟ್ಟಿನಿಂದ ತಹತಹಿಸುತ್ತದೆ. 2013ರಲ್ಲಿ ಇದರ ಝಲಕು ನಮಗೆ ಕಾಣಿಸಿದೆ. ಈ ಸಿಟ್ಟಿನ ಪೂರ್ಣರೂಪವನ್ನು ನಾವು 2014ರಲ್ಲಿ ನೋಡಲಿದ್ದೇವೆ." ಎನ್ನುತ್ತಾರೆ.
ಹೀಗಾಗಿ, ಮುಂಬರುವ ಹಣಾಹಣಿಯಲ್ಲಿ ಕಾಂಗ್ರೆಸ್ ಮೇಲಿನ ನಿರೀಕ್ಷೆ ಭಿನ್ನವಾಗೇನೂ ಇರಲಾರದು. ಒಂದು ಬಲಿಷ್ಠ ಪ್ರಜಾಪ್ರಭುತ್ವದಲ್ಲಿ ಸಮೂಹ ರೋಷವೊಂದು ಹೇಗೆ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕಾರಣವಾಗುತ್ತದೆ ಎನ್ನುವುದನ್ನು ನಮ್ಮ ದೇಶ 1977ರಲ್ಲೇ ಕಂಡಿದೆ. ನಾನು ಕಳೆದ ವಿಧಾನಸಭಾ ಚುನಾವಣೆಗಳಿಗೂ ಮುಂಚಿನಿಂದಲೂ ಈ ಎಚ್ಚರಿಕೆಯನ್ನು ಕಾಂಗ್ರೆಸ್ಗೆ ಕೊಡುತ್ತಲೇ ಬಂದಿದ್ದೇನೆ.
ಭಾರತದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಸೋತದ್ದು 1977ರ ಸಂಸತ್ ಚುನಾವಣೆಗಳಲ್ಲಿ. ಅಲ್ಲಿಯವರೆಗೂ, ಅಂದರೆ ಸ್ವಾತಂತ್ರ್ಯ ದೊರಕಿದ 30 ವರ್ಷಗಳವರೆಗೂ ಭಾರತದಲ್ಲಿ ಕಾಂಗ್ರೆಸ್ನದ್ದೇ ಅಧಿಪತ್ಯವಿತ್ತು.
ಕಾಂಗ್ರೆಸ್ನ ಈ ಸೋಲಿಗೆ ಬಲಿಷ್ಠ ಕಾರಣವೊಂದಿತ್ತು. ಶ್ರೀಮತಿ ಇಂದಿರಾಗಾಂಧಿಯವರ ವಿರುದ್ಧದ ಚುನಾವಣಾ ಅಹವಾಲನ್ನು ಆಗ ಅಲಹಾಬಾದ್ ಹೈ ಕೋರ್ಟ್ ಒಪ್ಪಿಕೊಂಡಿತ್ತು. ಅವರು ಲೋಕಸಭಾ ಚುನಾವಣೆಗಳಿಗೆ ಸ್ಪರ್ಧಿಸುವುದು ಅಕ್ರಮವೆಂದು ಹೇಳಿದ್ದಷ್ಟೇ ಅಲ್ಲದೆ, 6 ವರ್ಷಗಳವರೆಗೆ ಅವರು ಸಂಸತ್ತನ್ನು ಪ್ರವೇಶಿಸುವುದನ್ನು ಅದು ನಿಷೇಧಿಸಿತು. ಸಹಜವಾಗಿಯೇ ವಿರೋಧ ಪಕ್ಷಗಳು ಇಂದಿರಾರ ರಾಜೀನಾಮೆ ಕೇಳಿದವು. ಇದಕ್ಕೆ ಇಂದಿರಾ ಗಾಂಧಿಯವರ ಪ್ರತಿಕ್ರಿಯೆ ತೀರಾ ಅಸಹಜವಾಗಿತ್ತು. ಅವರು ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿಬಿಟ್ಟರು!
ಅಲ್ಲದೆ ಇದರ ನಂತರ ಅನುಸರಿಸಲಾದ ಕೆಲವು ನಡೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ವಿನಾಶದ ತುದಿಗೆ ಎಳೆದುಕೊಂಡು ಹೋದವು. ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಚಂದ್ರಶೇಖರ್ರಂಥ ದೇಶಭಕ್ತರನ್ನಷ್ಟೇ ಅಲ್ಲದೆ, ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಸುಮಾರು 1 ಲಕ್ಷ ಜನರನ್ನು, ಸುಮಾರು 300 ಮಂದಿ ಮಾಧ್ಯಮದವರನ್ನೂ ಜೈಲಿಗೆ ದೂಡಲಾಯಿತು. ಇನ್ನು ಮಾಧ್ಯಮಗಳ ಮೇಲೂ ಅನೇಕ ನಿರ್ಬಂಧಗಳನ್ನು ಹೇರಲಾಯಿತು.
1975ರಿಂದ 1977ರವರೆಗಿನ ಈ ದುರಂತಮಯ ಸನ್ನಿವೇಶದಲ್ಲೂ ಪ್ರಜಾಪ್ರಭುತ್ವ ಬದುಕುಳಿಯಿತೆಂದರೆ, ಅದರ ಶ್ರೇಯಸ್ಸು ಸಲ್ಲಬೇಕಾದದ್ದು ಎರಡು ಅಂಶಗಳಿಗೆ. ಮೊದಲನೆಯದು, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಮತ್ತವರನ್ನು ಬೆಂಬಲಿಸಿದ ರಾಜಕೀಯ ಪಕ್ಷಗಳ ದಿಟ್ಟತನದ ಹೋರಾಟ. ಈ ರಾಜಕೀಯ ಪಕ್ಷಗಳು ಜಯಪ್ರಕಾಶ್ ನಾರಾಯಣ್ ಅವರ ನಾಯಕತ್ವವನ್ನು ತುರ್ತುಪರಿಸ್ಥಿತಿಗಿಂತಲೂ ಹಿಂದೆಯೇ, ಅಂದರೆ ಅವರು ಭ್ರಷ್ಟಾಚಾರ ವಿರೋಧಿ ಆಂದೋಲನ ಶುರು ಮಾಡಿದಾಗಲೇ ಒಪ್ಪಿಕೊಂಡಿದ್ದವು. ಎರಡನೆಯದಾಗಿ, 1977ರ ಲೋಕಸಭಾ ಚುನಾವಣೆಗಳಲ್ಲಿನ ಮತದಾರರ ಆಕ್ರೋಶಭರಿತ ನಿರ್ಣಾಯಕ ತೀರ್ಪು.
ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತರ ಭಾರತದ 236 ಲೋಕಸಭಾ ಸ್ಥಾನಗಳಲ್ಲಿ ಕೇವಲ ಎರಡನ್ನು ಮಾತ್ರ ಗೆದ್ದಿತ್ತು. ಒಂದು ರಾಜಸ್ಥಾನದಲ್ಲಿ, ಇನ್ನೊಂದು ಮಧ್ಯಪ್ರದೇಶದಲ್ಲಿ. ಆ ಚುನಾವಣೆಯಲ್ಲಿ ಪ್ರಧಾನಿ ಇಂದಿರಾಗಾಂಧಿಯವರೂ ಸೋತರು. ಇತ್ತೀಚಿನ ನಾಲ್ಕು ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಗಳ ಫಲಿತಾಂಶ ತುರ್ತುಪರಿಸ್ಥಿತಿಯ ನಂತರ ಕಾಂಗ್ರೆಸ್ ಅನುಭವಿಸಿದ ಎರಡನೆಯ ಅತಿ ಹೀನಾಯ ಸೋಲಿನಂತೆಯೇ ಇವೆ. ಕಾಂಗ್ರೆಸ್ ಮತದಾರರನ್ನು ಒಲಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನ ಮಾಡಿತಾದರೂ ಸೋಲಿನಿಂದ ತಪ್ಪಿಸಿಕೊಳ್ಳಲು ಮಾತ್ರ ಅದಕ್ಕೆ ಸಾಧ್ಯವಾಗಲಿಲ್ಲ. ಮುಖ್ಯವಾಗಿ ರಾಜಸ್ಥಾನದಲ್ಲಿ ಅದು ಮತದಾರರಿಗೆ ಚುನಾವಣೆಯ ಹಿಂದಿನ ದಿನಗಳಲ್ಲಿ ಅನೇಕ ಆಮಿಷಗಳನ್ನು ಒಡ್ಡಿತು. ಲೇಖನವೊಂದರಲ್ಲಿ ನಾನು ಭ್ರಷ್ಟಾಚಾರ, ಹಣದುಬ್ಬರ, ಕಪ್ಪುಹಣದ ಬಗ್ಗೆ ಬರೆದಿದ್ದೆ. 2014ರ ಲೋಕಸಭಾ ಚುನಾವಣೆಗಳಲ್ಲಿ ಒಂದು ವೇಳೆ ಕಾಂಗ್ರೆಸ್ ಕೇವಲ ಎರಡಂಕಿ ಸ್ಥಾನಗಳನ್ನು ಗಳಿಸಿದರೂ ಅಚ್ಚರಿಪಡಬೇಕಿಲ್ಲ ಎಂದು ಅದರಲ್ಲಿ ಹೇಳಿದ್ದೆ.
ಮುಗಿಸುವ ಮುನ್ನ: ನನ್ನ ಜೀವಮಾನದಲ್ಲಿ ಅನೇಕ ಯಾತ್ರೆಗಳನ್ನು ನಡೆಸಿದ್ದೇನೆ. ನನ್ನ ಹಿಂದಿನ ಯಾತ್ರೆ(ಜನಚೇತನ) 2011ರಲ್ಲಿ ನಡೆದಿತ್ತು. 40 ದಿನಗಳವರೆಗೆ ನಡೆದ ಈ ಯಾತ್ರೆ ಭ್ರಷ್ಟಾಚಾರ, ಹಣದುಬ್ಬರ, ಅದರಲ್ಲೂ ಮುಖ್ಯವಾಗಿ ಆಹಾರದುಬ್ಬರ ಮತ್ತು ಕಪ್ಪುಹಣದ ವಿರುದ್ಧದ ಪ್ರತಿಭಟನೆಯಾಗಿತ್ತು. ಭ್ರಷ್ಟಾಚಾರವನ್ನು ನಿಲ್ಲಿಸಬೇಕು, ಬೆಲೆಗಳನ್ನು ಇಳಿಸಬೇಕು ಮತ್ತು ವಿದೇಶಿ ಬ್ಯಾಂಕುಗಳಲ್ಲಿ ಕುಳಿತಿರುವ ಹಣವನ್ನು ಭಾರತಕ್ಕೆ ವಾಪಸ್ ತರಬೇಕು ಎಂದು ಆ ಯಾತ್ರೆಯ ಮೂಲಕ ಆಗ್ರಹಿಸಿದ್ದೆವು.
ಜನಚೇತನ ಯಾತ್ರೆಗೆ ನನ್ನ ಉಳಿದೆಲ್ಲ ಯಾತ್ರೆಗಳಿಗಿಂತಲೂ ಹೆಚ್ಚಿನ ಬೆಂಬಲ ದೊರಕಿದ್ದನ್ನು ನೋಡಿ ನನಗೇ ಆಶ್ಚರ್ಯವಾಗಿತ್ತು. ಈ ಆಂದೋಲನದ ನಂತರ ಭಾರತ ಸರ್ಕಾರ ಈ ವಿಷಯವಾಗಿ ಸಂಸತ್ತಿನ ಮುಂದೆ ಶ್ವೇತಪತ್ರವೊಂದನ್ನು ಇಟ್ಟಿತಾದರೂ, ತದನಂತರ ಯಾವ ಕೆಲಸಗಳೂ ಆಗಲಿಲ್ಲ. ಇದುವರೆಗೂ ಒಂದೇ ಒಂದು ಪೈಸೆಯೂ ಭಾರತಕ್ಕೆ ಹಿಂದಿರುಗಿ ಬಂದಿಲ್ಲ. ಗ್ಲೋಬಲ್ ಫೈನಾನ್ಷಿಯಲ್ ಇಂಟೆಗ್ರಿಟಿ(ಜಿಎಫ್ಐ) ಎನ್ನುವ ಲಾಭರಹಿತ ಸಂಶೋಧನಾ ಸಂಸ್ಥೆ ಇತ್ತೀಚಿನ ತನ್ನ ವರದಿಯೊಂದರಲ್ಲಿ, "2011ರಲ್ಲಿ ಭಾರತದಿಂದ ಸುಮಾರು 4 ಲಕ್ಷ ಕೋಟಿ ರುಪಾಯಿ ಕಪ್ಪುಹಣವನ್ನು ಹೊರದೇಶದ ಬ್ಯಾಂಕ್ಗಳಲ್ಲಿ ಜಮೆ ಮಾಡಲಾಗಿದೆ" ಎಂದು ಹೇಳಿದೆ. ಅಂದರೆ ಅದರ ಹಿಂದಿನ ವರ್ಷಕ್ಕಿಂತಲೂ 24 ಪ್ರತಿಶತ ಹೆಚ್ಚಿನ ಮೊತ್ತ!
- ಎಲ್.ಕೆ. ಆಡ್ವಾಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


