ಯಾವ ಪುರುಷಾರ್ಥಕ್ಕೆ ಈ ಪೋಸ್ಟರ್ ಸಂಸ್ಕೃತಿ?

Updated on: 

ರಾಜಕೀಯ ಮೊಗಸಾಲೆಗಳ ಆರಾಮಾಸನಗಳಲ್ಲಿ ಕೊನೆತನಕ ಬಾಯಿ ಚಪಲವನ್ನು ತಣಿಸುವುದಕ್ಕೆ ಈ ಬಾರಿ ಸಾಕಾದಷ್ಟು ಗ್ರಾಸವನ್ನು ಉತ್ತರ ಭಾರತದ ರಾಜ್ಯಗಳ ವಿಧಾನ ಸಭೆ ಚುನಾವಣೆ ಫಲಿತಾಂಶ, ಆಮ್ ಆದ್ಮಿ ಪಾರ್ಟಿಯ ಕೇಜ್ರಿವಾಲ ಅವರ ವರ್ತನೆ ಸಾಕಷ್ಟು ಒದಗಿಸಿದೆ.
ಈಗ ಚರ್ಚೆಗೆ ಗುರಿಯಾಗಿರುವುದು ಬಿಜೆಪಿಯ ಜಯ ಹಾಗೂ ದೆಹಲಿಯಲ್ಲಿನ ಪಕ್ಷದ ಗಮನಾರ್ಹ ಸಾಧನೆಗೆ ಮೋದಿ ಅವರಿಗೆ ಹೊಸದಾಗಿ ಲಭ್ಯವಾಗಿರುವ "ಇಮೇಜ್‌" ಎಷ್ಟರ ಮಟ್ಟಿಗೆ ಕಾರಣ ಎನ್ನುವ ಪ್ರಶ್ನೆ.. ಫಲಿತಾಂಶವನ್ನು ಚಿಕಿತ್ಸಕರ ದೃಷ್ಟಿಯಿಂದ ವಿಶ್ಲೇಷಿಸಿರುವವರ ಅನಿಸಿಕೆಗಳನ್ನು ಗಮನಿಸಿದರೆ, ಮೋದಿ "ಇಮೇಜ್‌" ರಾಜಸ್ಥಾನ, ಮ. ಪ್ರದೇಶ್, ಚತ್ತೀಸ್‌ಗಡಗಳಲ್ಲಿ ಹೇಳಿಕೊಳ್ಳುವಂತಹ ಪ್ರಭಾವ ಬೀರಿಲ್ಲ. ಅಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇದ್ದೇ ಇತ್ತು. ಅದು ದೆಹಲಿಯಲ್ಲಿ ಕೆಲಸ ಮಾಡಿದ್ದರೆ, ಅದನ್ನು ಅಂತಿಮವಾಗಿ ಆಮ್ ಆದ್ಮಿಯ ಪೂರಕೆ ಗುಡಿಸಿಹಾಕಿತ್ತು. ಇದರ ಅರ್ಥ ಈ ಚುನಾವಣೆಯ ಫಲಿತಾಂಶದಿಂದಲೇ ಮಾರ್ಚ್- ಏಪ್ರಿಲ್ ಲೋಕಸಭೆ ಚುನಾವಣೆಯ ಸಂಭವನೀಯ ಫಲಿತಾಂಶದ ಊಹೆಗಳು ನಿರರ್ಥಕ ಎನ್ನುವುದೇ.  ಆದರೂ, ಈಗ ಬೆಂಗಳೂರಿನಲ್ಲಿನ ರಸ್ತೆಗಳಲ್ಲಿ, ಎಲ್ಲೆಲ್ಲಿ ಜಾಗ ಸಿಕ್ಕಿದರೂ ಅಲ್ಲಿ, ಅನಂತಕುಮಾರ್ ಅವರು ನರೇಂದ್ರ ಮೋದಿ ಜತೆಗಿರುವ ಭಿತ್ತಿ ಪ್ರತ್ರಗಳ ಪ್ರದರ್ಶನ ಹಾಗೂ ಕೆಲವು ಕಡೆಗಳಲ್ಲಿ ಉತ್ತರ ಭಾರತದಲ್ಲಿ ಬಿಜೆಪಿ ವಿಜಯಕ್ಕೆ ಬೆಂಗಳೂರಿನ ನಾಯಕರ ಕಾಣಿಕೆ ಎನ್ನುವ ವಾಕ್ಯಗಳೂ ಕಂಡುಬರುತ್ತಿವೆ. ಇದು ಬಿಜೆಪಿಯ ಅಧಿಕೃತವಾದ ಪ್ರಕಟನೆಯೋ ಅಥವಾ ಅನಂತಕುಮಾರ್ ಅವರ ಅಭಿಮಾನಿಗಳ ಉತ್ಸಾಹದ ಪ್ರದರ್ಶನದ ಫಲವೋ ಗೊತ್ತಾಗುತ್ತಿಲ್ಲ. ಅದೇನೇ ಆದರೂ ಇಂತಹ ಪೋಸ್ಟರ್ ಸಂಸ್ಕೃತಿಯ ಪ್ರದರ್ಶನದಿಂದ, ಬಿಜೆಪಿ ಅಥವಾ ಅನಂತಕುಮಾರ್ ಅವರ ಅಭಿಮಾನಿಗಳು ಸಾಧಿಸುವ ಪುರುಷಾರ್ಥವಾದರೂ ಏನು?
ನಿಜ. ಹೇಳಬೇಕೆಂದರೆ, ಕರ್ನಾಟಕ ಬಿಜೆಪಿ ಲೋಕಸಭೆ ಚುನಾವಣೆಯ ವಿಚಾರ ಕುರಿತ ಚಿಂತನೆ ಆರಂಭಿಸುವುದಕ್ಕೆ ಮುಂಚೆ, ಕರ್ನಾಟಕ ಜನತಾ ಪಾರ್ಟಿಯ ಅಧ್ಯಕ್ಷ, ಯಡಿಯೂರಪ್ಪ ಅವರು ಬಿಜೆಪಿಗೆ ಹಿಂತಿರುಗುವ ವಿಚಾರ ತೀರ್ಮಾನವಾಗಬೇಕು. ಅಲ್ಲಿಯವರೆಗೆ ಬಿಜೆಪಿಯ ರಾಜ್ಯ ಮಟ್ಟದ ಚುನಾವಣೆ ತಂತ್ರ ಕುರಿತು ಚರ್ಚಿಸುವುದು ವೃಥಾ ವ್ಯರ್ಥಾಲಾಪ. ಕೆಜೆಪಿಯ ನಾಯಕಿ, ಶೋಭಾ ಕರಂದ್ಲಾಜೆ ಅವರು ಬಿಜೆಪಿಯು ಕೆಜೆಪಿಯನ್ನು ಸೇರಿಸಿಕೊಳ್ಳದೇ ಹೋದರೆ ನಾಲ್ಕೈದು ಲೋಕಸಭೆ ಕ್ಷೇತ್ರಗಳಲ್ಲೂ ಗೆಲ್ಲುವುದಿಲ್ಲ ಎನ್ನುವ ಭವಿಷ್ಯ ನುಡಿದಿದ್ದಾರೆ. ಅದಕ್ಕೆ ಅವರಿಗೆ ಯಾವ ಆಧಾರವಿದೆಯೋ ಗೊತ್ತಿಲ್ಲ. ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಿದ್ದ ಮತಗಳನ್ನೇ ಲೆಕ್ಕ ಹಿಡಿದರೆ, ಆ ಪಕ್ಷ ಎರಡು ಸ್ಥಾನಗಳನ್ನೂ ಗೆಲ್ಲುವುದು ಕಷ್ಟ. ಈಗ ಪರಿಸ್ಥಿತಿ ಬದಲಾಯಿಸಿರಬಹುದು. ಯಡಿಯೂರಪ್ಪ- ಬಿಜೆಪಿ ನಡುವಣ ಸಂಬಂಧದ ಅಂತಿಮ ಸ್ವರೂಪ ಗೊತ್ತಾಗುವವರೆಗೆ ಬಿಜೆಪಿಯ ಚುನಾವಣೆ ತಂತ್ರ ಸಿದ್ಧವಾಗುವುದು ಸಾಧ್ಯವಿಲ್ಲ.  ಹಾಗೆಂದು ಪಕ್ಷದ ಕಾರ್ಯಕರ್ತರು ಸುಮ್ಮನೆ ಕೂಡಲಿಕ್ಕೆ ಆಗುತ್ತೇನು? ಬೇರೆ ಯಾವುದೇ ರೀತಿಯ ಜನಸಂಘಟನೆಯ ಕೆಲಸ ಸಾಧ್ಯವಾಗದಿದ್ದರೆ ಪೋಸ್ಟರ್ ಹಚ್ಚುವ ಸಂಸ್ಕೃತಿಗೆ ಜೋತು ಬೀಳುವುದು ಸಹಜ.

ಬಿಗಡಾಯಿಸಿದ ಕಾಂಗ್ರೆಸ್ ರಾಜಕೀಯ: ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಒಮ್ಮತವಿದೆ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು, ಪಕ್ಷದ ಶಾಸಕಾಂಗ (ಸರ್ಕಾರ) ಮತ್ತು ಸಂಘಟನಾಂಗಗಳ (ಕೆಪಿಸಿಸಿ) ನಡುವಣ ಸಮನ್ವಯ ಸಮಿತಿ ನಡೆದ ರೀತಿಯನ್ನು ಜನರಿಗೆ ಪ್ರಾಮಾಣಿಕವಾಗಿ ವಿವರಿಸಬೇಕು. ಪಕ್ಷದಲ್ಲಿ ಅಷ್ಟೊಂದು ಪ್ರಾಮುಖ್ಯವಿರುವ ದಿಗ್ವಿಜಯ ಸಿಂಗ್ ಅವರು ಸಮನ್ವಯ ಸಮಿತಿಯ ಸಭೆಯನ್ನೇ ಬೆಂಗಳೂರಿನಲ್ಲಿ ಕರೆದು, ಒಂದು ದಿನ ಮುಂಚೆಯೇ ಬೆಂಗಳೂರಿಗೆ ಬಂದು ಪಕ್ಷದ ನಾಯಕರು, ಕಾರ್ಯಕರ್ತರ ಜತೆ ಅಂತರಂಗದ ವಿಚಾರ ವಿನಿಮಯ ನಡೆಸಿದಾಗ, ಅವರಿಗೆ ಸಿಕ್ಕಿದ ಕಾಂಗ್ರೆಸ್ಸಿನ "ಏಕತೆಯ ಚಿತ್ರ" ಭಿನ್ನವಾಗಿರುವುದನ್ನು ಮನಗಂಡು, ಸಮಿತಿಯ ಸಭೆಯನ್ನೇ ದೆಹಲಿಗೆ ವರ್ಗ ಮಾಡಿದ ರೀತಿಯನ್ನು ಗಮನಿಸಿದರೆ, ಸಿದ್ದಾರಾಮಯ್ಯ- ಡಾ. ಜಿ. ಪರಮೇಶ್ವರ ಏನಾದರೂ ಹೇಳಿಕೊಳ್ಳಲಿ, ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲವೆನ್ನುವುದು ಎಲ್ಲರಿಗೂ ಗೊತ್ತಾಗಿದೆ.  ದೆಹಲಿಯಿಂದ ತುರ್ತು ಕರೆ ಬಂದಿದೆ ಎಂದು ನೆಪ ಹೇಳಿ ವಿಮಾನ ಹತ್ತಿದ ದಿಗ್ವಿಜಯ ಸಿಂಗ್ ಅಲ್ಲಿಗೆ ಹೋದ ಅನಂತರ, ಯಾವುದೇ ರೀತಿಯ ಮಹತ್ವದ ವಿಚಾರವೂ ಯಾವ ವಲಯದಲ್ಲೂ ಪ್ರಸ್ತಾಪವಾಗಿಲ್ಲ. ಲೋಕಪಾಲ ವಿದೇಯಕ, ರಾಹುಲ ಗಾಂಧಿಯ ಕಿರೀಟಧಾರಣೆ ಹಾಗೂ ಇತರ ವಿಚಾರಗಳಿಗೂ ದಿಗ್ವಿಜಯ ಸಿಂಗ್ ಅವರಿಗೂ ಸಂಬಂಧವೇ ಇಲ್ಲ. ವಾಸ್ತವದಲ್ಲಿ, ಬೆಂಗಳೂರಿನಲ್ಲಿ ಸಮನ್ವಯ ಸಮಿತಿಯ ಸಭೆಯನ್ನು ನಡೆಸುವ ಸ್ಥಿತಿಯಲ್ಲಿ ದಿಗ್ವಿಜಯ ಸಿಂಗ್ ಹಾಗೂ ಪ್ರದೇಶ ಕಾಂಗ್ರೆಸ್ ನಾಯಕರು ಇರಲಿಲ್ಲ.

ದೆಹಲಿಯಲ್ಲಿ ಆಗಿದ್ದಾದರೂ ಏನು?: ಲೋಕಸಭೆ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಗಳನ್ನು ಎಐಸಿಸಿ ನಾಯಕರು ಪಡೆಯಲೇ ಇಲ್ಲ. ಅವರ ಮುಂದೆ ಎರಡು ಪಟ್ಟಿಗಳಿದ್ದವು. ಅದರಲ್ಲಿ ಪ್ರಬಲ ಜಾತಿಗಳ ಅಭ್ಯರ್ಥಿಗಳ ಹೆಸರೇ ಇರಲಿಲ್ಲ. ಅದನ್ನು ಸಹಜವಾಗಿಯೇ ಎಐಸಿಸಿ ನಾಯಕತ್ವ ಹಿಂದಕ್ಕೆ ಕಳಿಸಿದೆ. ಸಿದ್ದರಾಮಯ್ಯ- ಡಾ. ಪರಮೇಶ್ವರ್ ಅವರು ಸೇರಿಕೊಂಡು ಸರ್ವ ಸಮ್ಮತವಾಗಬಲ್ಲ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವ ವಾತಾವರಣ ರಾಜ್ಯದಲ್ಲಿ ಈಗ ಇಲ್ಲ. ಇವೆಲ್ಲದರ ನಡುವೆಯೇ ಸಿದ್ದು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಈ ಹಂತದಲ್ಲಿ ಮಂತ್ರಿಮಂಡಲದ ವಿಸ್ತರಣೆ, (ಪುನರ್‌ರಚನೆಯ ಮಾತೇ ಇಲ್ಲ) ಬೋರ್ಡು, ನಿಗಮ, ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರ ನೇಮಕ, ಹಾಗೂ ಪಂಚಾಯಿತಿ ರಾಜ್ಯ ಸಂಸ್ಥೆಗಳ ಪುನರ್‌ರಚನೆಯಂತಹ ಕ್ರಮಕ್ಕೆ ಕೈ ಹಾಕಿ ಸಂಕಟದಲ್ಲಿ ಸಿಕ್ಕಿ ಬೀಳುವಷ್ಟು ಅನನುಭವಿಯಲ್ಲ ಸಿದ್ದರಾಮಯ್ಯ. ಅದಕ್ಕೆ ವ್ಯತಿರಿಕ್ತವಾಗಿ ದೆಹಲಿಯ ಸೂಚನೆ ಬಂದರೆ ಪಾಪ ಸಿದ್ದರಾಮಯ್ಯ ಅಸಹಾಯಕರು.

ಜಾತ್ಯತೀತ ಜನತಾದಳ: ಜೆಡಿಎಸ್ ಸಮಸ್ಯೆಗಳು ಏನಿದ್ದರೂ ರಾಜ್ಯಕ್ಕೇ ಅಥವಾ ಒಂದು ಭಾಗಕ್ಕೇ ಸೀಮಿತವಾಗಿರುವುದು ಸಹಜ. ಹಲವು ಸಮಸ್ಯೆಗಳಿಂದಾಗಿ, ರಾಷ್ಟ್ರೀಯ ನಾಯಕ ದೇವೇಗೌಡರೇ ಎಲ್ಲ ಅಧಿಕಾರವನ್ನು ತಮ್ಮ ಕೈಯಲ್ಲೇ ಕೇಂದ್ರೀಕರಿಸಿಕೊಂಡಿದ್ದಾರೆ. ದೇವೇಗೌಡರಂತೂ ಹಾಸನದಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಅವರ ಕುಟುಂಬದವರ ಬಗ್ಗೆ ಇನ್ನೂ ಇತ್ಯರ್ಥವಾಗಿಲ್ಲ.
ಜೆಡಿಎಸ್‌ಗೆ, ಬೇರೆ ಯಾವ ಪಕ್ಷದ ನೆರವೂ ಬೇಕಾಗಿಲ್ಲ.  ಆದರೆ ವೈಯುಕ್ತಿಕವಾಗಿ ದೇವೇಗೌಡರಿಗೆ ಇನ್ನೂ ರಾಷ್ಟ್ರೀಯ ನಾಯಕತ್ವದ "ಗೀಳು" ಹೋಗಿಲ್ಲ. ತೃತೀಯರಂಗ ಅಥವಾ ಬೇರೆ ಯಾವುದೇ ರಂಗದ ವಿಚಾರದಲ್ಲಿ, ಆರಂಭದ ಹಂತದಲ್ಲೇ ಮಾತುಕತೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುವುದಕ್ಕೆ ದೇವೇಗೌಡರಿಗೆ ಇಷ್ಟವಿಲ್ಲ.  ಎಷ್ಟಾದರೂ ಒಮ್ಮೆ ಪ್ರಧಾನಿಯಾಗಿದ್ದವರು, ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ - ಬಿಜೆಪಿ ಗಳೆರಡನ್ನೂ ಏಕಕಾಲದಲ್ಲಿ ವಿರೋಧಿಸಿದರೂ ಅವೆರಡರಲ್ಲಿ ಯಾವುದಾದರೊಂದು ಪಕ್ಷದ ಬೆಂಬಲವನ್ನು ಪಡೆಯುವುದು ಅಸಾಧ್ಯವೇನೂ ಅಲ್ಲ ಎನ್ನುವುದನ್ನು ತೋರಿಸಿಕೊಟ್ಟವರು. (ದೇವೇಗೌಡರು ಪ್ರಧಾನಿಯಾಗಿದ್ದ ಸರ್ಕಾರಕ್ಕೆ ಕಾಂಗ್ರೆಸ್ಸಿನ ಬೆಂಬಲವಿತ್ತು). ಈಗಲೂ ಅದರ ಪುನರಾವರ್ತನೆ ಸಾಧ್ಯ. ಎಂದು ನಂಬಿರುವವರು. ಹಾಗೆಂದ ಮಾತ್ರಕ್ಕೇ ಎಂಭತ್ತರ ಗಡಿ ದಾಟಿದ ಅನಂತರವೂ ದೇವೇಗೌಡರಿಗೆ ಪ್ರಧಾನಿ ಪೀಠದಲ್ಲಿ ಮತ್ತೆ ಪ್ರತಿಷ್ಠಾಪನೆಯಾಗುವ ಹಂಬಲ ಇದೆ ಎಂದೇನೂ ಅಲ್ಲ. ಈಗಿನ ರಾಷ್ಟ್ರೀಯ ರಾಜಕೀಯದಲ್ಲಿ ದೊಡ್ಡವರೆನಿಸಿಕೊಂಡ ಸಣ್ಣವರ ವರ್ತನೆಯನ್ನೂ ಅವರು ಬಲ್ಲರು. ಅಲ್ಲಿ (ದೆಹಲಿ ) ಎಲ್ಲರ ಕಾಲಿನಲ್ಲೂ ಕೆಸರು ಅಂಟಿರುವುದನ್ನು ಅವರು ಬಲ್ಲರು.   ರಾಜ್ಯದ ಎಲ್ಲ ಭಾಗಗಳ ಜನರ ಗಮನವನ್ನು ಸೆಳೆಯಬಲ್ಲ ಶಕ್ತಿ ಆ ಪಕ್ಷಕ್ಕೆ ಈಗ ಇಲ್ಲ.
ಸದ್ಯಕ್ಕೆ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ನಿರ್ದಿಷ್ಟವಾದ ನಿಲುವಿಗಾಗಿ ತೊಳಲಾಡುತ್ತಿರುವುದು ಬಿಜೆಪಿ. ಕಾಂಗ್ರೆಸ್ಸಿನ ಸಮಸ್ಯೆ ಆಂತರಿಕ ವ್ಯಕ್ತಿ - ಜಾತಿ ಆಧಾರಿತ ತಿಸ್ರಗಳಷ್ಟೇ ಈ ಚಿತ್ರವನ್ನು ಗಮನಿಸಿದರೆ, ಬಿಜೆಪಿಯಲ್ಲಿ ಈಗಿನ ತೊಳಲಾಟವೇ ಬಹುಕಾಲ ಮುಂದುವರಿದರೆ, ರಾಷ್ಟ್ರೀಯ ರಾಜಕೀಯದಲ್ಲಿ ಕರ್ನಾಟಕ ಒಂದು ರಾಜ್ಯವಾಗಿ, ಇಲ್ಲಿನ ರಾಜಕೀಯ ಪಕ್ಷಗಳು ಪ್ರತ್ಯೇಕವಾಗಿ, ನಿರ್ಣಾಯಕವಾದ ಪಾತ್ರವನ್ನು ವಹಿಸುವ ಸಂಭವ ತೀರ ಕಡಿಮೆ. ರಾಜ್ಯದಲ್ಲಿ ಈಗ ಅಂತಹ ನಾಯಕರು ಯಾವ ಪಕ್ಷದಲ್ಲೂ ಇಲ್ಲ.

ಕಿಡಿಗೇಡಿತನ: ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷಗಳ ನಾಯಕರ ಮೇಲೆ ಕೋಪ ಇದ್ದರೂ ಇರಬಹುದು. ಆದರೆ ಈಚೆಗೆ, ಅವರಿಗೆ ಬಿಎಸ್‌ವೈ - ಕುಮಾರಸ್ವಾಮಿ ಅವರ ಹೆಸರು ಕೇಳಿದರೇ ಆಗುವುದಿಲ್ಲವಂತೆ ಯಾಕೆ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com