ನಿಷ್ಠೆ ಎಂಬ ಗುಣ ನಮ್ಮ ವಂಶವಾಹಿಯಲ್ಲೇ ಇದೆ!

'ಎಲ್ಲರೂ ಸಮಾನರು' ಎಂದು ಹೇಳುತ್ತದೆ ಪ್ರಜಾಪ್ರಭುತ್ವ. ಆದರೆ ಭಾರತೀಯರ...
Updated on: 

'ಎಲ್ಲರೂ ಸಮಾನರು' ಎಂದು ಹೇಳುತ್ತದೆ ಪ್ರಜಾಪ್ರಭುತ್ವ . ಆದರೆ ಭಾರತೀಯರ ಮನಸ್ಸುಗಳಲ್ಲಿ ರಾಜವಂಶಗಳಿಗೆ ಮತ್ತು ಮಹಾರಾಜರುಗಳಿಗೆ ತುಸು ಜಾಸ್ತಿಯೇ ಜಾಗವಿದೆ. ಭಾರತೀಯರೆಲ್ಲರ ವಂಶವಾಹಿಯಲ್ಲಿ 'ನಿಷ್ಠೆ' ಎನ್ನುವುದು ಸೇರಿಕೊಂಡುಬಿಟ್ಟಂತಿದೆ. ಅಪ್ಪಟ ಅರಸರು ಸಿಗದಿದ್ದರೆ ನಾವು ಆ ನಿಷ್ಠೆಯನ್ನು ರಾಜಕೀಯ ಕುಟುಂಬಗಳಿಗೆ ತೋರಿಸಿ ಕೃತಾರ್ಥರಾಗುತ್ತೇವೆ. ಆದರೆ ಕರ್ನಾಟಕ ಮತ್ತು ಕೇರಳದಲ್ಲಿ ಇತ್ತೀಚೆಗೆ ಇಬ್ಬರು ಮಹಾರಾಜರುಗಳು ನಿಧನರಾದಾಗ(ಮೈಸೂರಿನ ಶ್ರೀಕಂಠದತ್ತ ಒಡೆಯರ್ ಮತ್ತು ತಿರುವಾಂಕೂರಿನ ಉಥ್ರಾಡೋಂ ತಿರುನಾಳ್ ಮಾರ್ತಾಂಡ ವರ್ಮ) ಈ ರಾಜ್ಯಗಳ ಜನತೆ ನಿಜಕ್ಕೂ ಕಂಬನಿಗರೆದಿದ್ದಾರೆ.
ಗಣರಾಜ್ಯದಲ್ಲಿದ್ದರೂ ಕೂಡ ಇವರುಗಳು ಅಧಿಕಾರವನ್ನು ಒಪ್ಪಿಕೊಂಡಿದ್ದು ಹಕ್ಕು ಎನ್ನುವ ಕಾರಣಕ್ಕಲ್ಲ, ಬದಲಾಗಿ ಭಾವನಾತ್ಮಕ ಅಲೆಗೆ ತಲೆಬಾಗಿಯಷ್ಟೆ. ತಮ್ಮ ಘನತೆಗೆ ಕುಂದುಬಾರದಂತೆ ಇಬ್ಬರೂ ಅದನ್ನು ನಿರ್ಲಿಪ್ತ ಭಾವದಿಂದಲೇ ಎದುರಿಸಿದವರು. ಒಡೆಯರ್ ಕೆಲಕಾಲ ರಾಜಕೀಯದಾಟದಲ್ಲಿ ಭಾಗಿಯಾದರಾದರೂ, ನಂತರ ಅದರಿಂದ ದೂರವೇ ಉಳಿದರು. ಮಾರ್ತಾಂಡ ವರ್ಮರಂತೂ ರಾಜಕೀಯದ ಹತ್ತಿರ ಎಂದಿಗೂ ಸುಳಿಯಲಿಲ್ಲ.
ಇನ್ನು ಮೈಸೂರು ಮತ್ತು ತಿರುವಾಂಕೂರು ಸಂಸ್ಥಾನಗಳಿಗೆ ಕುಟುಂಬದ ವಿನಾಶಕಾರಿ ವೈಷಮ್ಯಗಳ ಕೆಟ್ಟ ಗಾಳಿ ತಾಕಲಿಲ್ಲ. ಒಂದೊಮ್ಮೆ ತನ್ನ ವೈಭವದಿಂದ ಕಣ್ಣುಕುಕ್ಕಿಸುತ್ತಿದ್ದ ಬರೋಡ ಸಂಸ್ಥಾನ 1990ರ ವೇಳೆಗೆ ವ್ಯಾಜ್ಯವೊಂದರಲ್ಲಿ ಸಿಲುಕಿ ತನ್ನ ಮೆರುಗು ಕಳೆದುಕೊಂಡಿತು. ಹಲವಾರು ಅರಮನೆಗಳು, ವಜ್ರ-ಚಿನ್ನ, ಉತ್ಕೃಷ್ಟ ಆಭರಣಗಳು ಮತ್ತು ಅತ್ಯಮೂಲ್ಯ ಚಿತ್ರಗಳಿಗಾಗಿ ನಡೆದ ಆ ಜಗಳ ಈ ವರ್ಷದ ಅಕ್ಟೋಬರ್‌ನಲ್ಲಿ ಅಂತ್ಯಕಂಡಿದೆ.
ಪಟಿಯಾಲಾದ ಭೂಪಿಂದರ್ ಸಿಂಗ್ ಈ ಶತಮಾನ ಕಂಡ ಅತ್ಯಂತ ಪ್ರಖ್ಯಾತ ಮಹಾರಾಜರು. ಒಂದೆಡೆ ಪ್ರಥಮ ದರ್ಜೆ ಕ್ರಿಕೆಟ್ ಆಡಿ, ಇನ್ನೊಂದೆಡೆ 'ಊಟಕ್ಕೆ ಕುಳಿತರೆ 2-3 ಕೋಳಿಯನ್ನು ತಿಂದುತೇಗುತ್ತಿದ್ದರು' ಎನ್ನುವ ಕಾರಣಕ್ಕೂ ಖ್ಯಾತರಾಗಿದ್ದರು. ಆದರೆ ಈಗ ಆ ರಾಜವಂಶ ಕಾಂಗ್ರೆಸ್ಸಿಗ ಅಮರಿಂದರ್ ಸಿಂಗ್ ಅವರ ಹೆಸರಿಗಷ್ಟೇ ಸೀಮಿತವಾಗಿದೆ. ಅಕಾಲಿಯ ರಾಜಕಾರಣಿಗಳ ತಂತ್ರಗಳ ಮುಂದೆ ಅವರು ಲೆಕ್ಕಕ್ಕೇ ಬರುವುದಿಲ್ಲ ಬಿಡಿ. ಇನ್ನು ಮೈಸೂರು ಮತ್ತು ತಿರುವಾಂಕೂರಿನ ಮಹಾರಾಜರುಗಳಿಗೆ ಭೂಪಿಂದರ್‌ರಂಥ ವರ್ಚಸ್ಸು ಸೃಷ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಶ್ರೀಕಂಠದತ್ತ ಒಡೆಯರ್ ಅವರ ತಂದೆ ಜಯಚಾಮರಾಜೇಂದ್ರ ಒಡೆಯರ್ ಕರ್ನಾಟಕ ಸಂಗೀತದಲ್ಲಿ ಕೃತಿಗಳನ್ನು ರಚಿಸಿದ ಪ್ರತಿಭಾನ್ವಿತರು. ಉದ್ಯಮವಲಯವನ್ನು, ಶಿಕ್ಷಣವನ್ನು ಬೆಂಬಲಿಸುತ್ತಿದ್ದ ಅವರು ಅಷ್ಟೇ ಮುತುವರ್ಜಿಯಿಂದ ಸುಮಾರು 200 ಕುಸ್ತಿ ತಂಡಗಳ ಬೆಳವಣಿಗೆಗೂ ಸಹಾಯ ಮಾಡಿದವರು. ಅದೇ ಸಮಯದಲ್ಲೇ ಆಸ್ತಿಯ ವಿಚಾರವಾಗಿ ಅನೇಕ ತೊಂದರೆಗಳು ಈ ರಾಜಕುಟುಂಬಕ್ಕೆ ಎದುರಾದವು. ಅವರ ಮಗನ(ಶ್ರೀಕಂಠದತ್ತ ಒಡೆಯರ್) ರಾಜ್ಯಭಾರದಲ್ಲಿ ಈ ಸಮಸ್ಯೆಗಳು ತಾರಕಾವಸ್ಥೆಗೆ ತಲುಪಿದವು. "ಕಾಗದ ಪತ್ರಗಳ ಮೇಲಷ್ಟೇ ನನಗೆ ಬಹಳ ಆಸ್ತಿಯಿದೆ, ಆದರೆ ನನ್ನ ಬಳಿ ಹಣವಿಲ್ಲ" ಎಂದು ಶ್ರೀಕಂಠದತ್ತ ಒಡೆಯರ್ ಒಮ್ಮೆ ಹೇಳಿದಾಗ, ಅವರ ಸ್ಥಿತಿಯನ್ನು ನೋಡಿ ಜನತೆಗೆ ಒಂದು ಕ್ಷಣ ಬೇಸರವಾದದ್ದು ಸುಳ್ಳಲ್ಲ.
ಇನ್ನೊಂದೆಡೆ ಮಾರ್ತಾಂಡ ವರ್ಮ ಅವರ ವಿಷಯ ಇದಕ್ಕೆ ತದ್ವಿರುದ್ಧವಾಗಿತ್ತು. ಅವರಿಗೆ ಕಾಗದಪತ್ರಗಳಲ್ಲಿ ಲೆಕ್ಕಕ್ಕೆ ಸಿಗದಷ್ಟು ಸಂಪತ್ತು ಇತ್ತು. ಆದರೆ ಅವರ ಸ್ವತ್ತುಗಳ್ಯಾವುವೂ ಹೇಳಿಕೊಳ್ಳುವಂತೆ ಇರಲಿಲ್ಲ. ಪದ್ಮನಾಭ ಸ್ವಾಮಿದೇವಸ್ಥಾನದಲ್ಲಿ ದೊರೆತ ಚಿನ್ನವನ್ನು ನೋಡಿ ಪ್ರಪಂಚವೇ ನಿಬ್ಬೆರಗಾಯಿತಲ್ಲ, ಆ ಮಂದಿರದ ಸುಪರ್ದುದಾರಿಕೆಯನ್ನು ಮಾರ್ತಾಂಡ ವರ್ಮ ಅವರ ಕುಟುಂಬವೇ ಮೊದಲಿನಿಂದಲೂ ನೋಡಿಕೊಳ್ಳುತ್ತಾ ಬಂದಿತ್ತು. ಹಾಗಾಗೇ, ಅದರ ಅಭಿರಕ್ಷಣೆಯ ಹಕ್ಕು ತಮಗೂ ಇದೆ ಎಂದು ಅವರು ಹೇಳಿದರಾದರೂ, ಅನೇಕರು ಅದನ್ನು
ಪ್ರಶ್ನಿಸಿ ಸುಮ್ಮನಾಗಿಸಿಬಿಟ್ಟರು. ಮಾರ್ತಾಂಡ ವರ್ಮ ಕೊನೆಯವರೆಗೂ ಮಿತವ್ಯಯದ ಜೀವನ ನಡೆಸಿದರು. ಅವರ ಸಹೋದರ ಚಿಥಿರ ತಿರುನಾಳರಂತೂ ಅರಮನೆಯಲ್ಲಿ 'ಜೋಗಿ'ಯಂತೆ ಬದುಕಿ ಮರೆಯಾದರು.  
ರಾಜಕುಟುಂಬಗಳ ವೈಭವದ ಮಾನದಂಡದಿಂದ ನೋಡುವುದಾದರೆ, ತಿರುವಾಂಕೂರಿನ ರಾಜಕುಟುಂಬಕ್ಕೆ ಆ ಪಟ್ಟಿಯಲ್ಲಿ ಕೊನೆಯ ಸ್ಥಾನ ಸಿಗುವುದು ಖಚಿತ. ತುಸು ದೊಡ್ಡ ಬಂಗಲೆಯೇ ಮಾರ್ತಾಂಡ ವರ್ಮ ಅವರ ಅರಮನೆ. ಅದನ್ನು ಮೈಸೂರಿನ ಅರಮನೆಗೆ ಯಾವ ರೀತಿಯಿಂದಲೂ ಹೋಲಿಸುವುದಕ್ಕೆ ಸಾಧ್ಯವಿಲ್ಲ. ಮೈಸೂರು ಅರಮನೆ ದಕ್ಷಿಣ ಭಾರತದ ತಾಜ್‌ಮಹಲ್‌ನಂತಿದೆ. ಇನ್ನು 700 ಎಕರೆ ವಿಸ್ತಾರದ ಜಾಗದಲ್ಲಿರುವ ಬರೋಡಾದ ಲಕ್ಷಿವಿಲಾಸ ಅರಮನೆ, ಬಡ ಎಲಿಜಬತ್ ರಾಣಿಯ ಬಕಿಂಗ್‌ಹ್ಯಾಮ್ ಅರಮನೆಗಿಂತ ನಾಲ್ಕು ಪಟ್ಟು ದೊಡ್ಡದಿದೆ.ಆದರೆ ಇವುಗಳ ನಿರ್ವಹಣೆ ಅಷ್ಟು ಸುಲಭದ ಕೆಲಸವಲ್ಲ. ಮೈಸೂರಿನ ಅರಮನೆಯ ನಿರ್ವಹಣೆಯನ್ನು ಪ್ರವಾಸಿಗರ ಪ್ರವೇಶ ಶುಲ್ಕದಿಂದ ಮಾಡಲಾಗುತ್ತದೆ. ಆದರೆ ಆ ಮೊತ್ತ ಯಾವುದಕ್ಕೂ ಸಾಲದು.
ಬಹುಶಃ ಇದೇ ಕಾರಣಕ್ಕೋ ಏನೋ, ಹಲವಾರು ಮಹಾರಾಜರುಗಳು ರಾಜಕೀಯಕ್ಕೆ ಧುಮುಕಿದರು. ಜೈಪುರ್‌ನ ಮಹಾರಾಣಿ ಗಾಯತ್ರಿ ದೇವಿಯವರು 1962 ರಲ್ಲಿ ಸಂಸತ್ತಿನಲ್ಲಿ ಜಾಗ ಗಿಟ್ಟಿಸಿಕೊಳ್ಳಲು ಯಶಸ್ವಿಯಾದರಾದರೂ ಕಾಂಗ್ರೆಸ್‌ನ ಕೆಂಗಣ್ಣಿಗೆ, ಅದರಲ್ಲೂ ಮುಖ್ಯವಾಗಿ ಇಂದಿರಾಗಾಂಧಿಯವರ ಕೋಪಕ್ಕೆ ಸಿಲುಕಿ ತಿಹಾರ್ ಜೈಲು ಸೇರಿದರು. ಅಲ್ಲಿ ಅವರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಯಿತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇತ್ತೀಚೆಗಷ್ಟೇ ಮಹಾರಾಣಿಯೊಬ್ಬರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಮಹಾರಾಣಿ ನಿಜಕ್ಕೂ ತಮ್ಮ ರಾಜಗಾಂಭೀರ್ಯವನ್ನು ಬಿಟ್ಟಿಲ್ಲ. ಅತಿ ಬೇಗ ಕೋಪಗೊಳ್ಳುವ ಅವರು, ಆಗಾಗ ಯುರೋಪ್ ಪ್ರವಾಸಕ್ಕೆ ಹೋಗುವುದುಂಟು. ಇನ್ನು ರಾತ್ರಿ ಎಂಟು ಗಂಟೆಯ ನಂತರ ಅವರ ವಿಶ್ರಾಂತಿ. ಆನಂತರ ಪ್ರಜೆಗಳಿಗೆ ಅವರ ದರ್ಶನ ಭಾಗ್ಯವಿಲ್ಲ!  ದೆಹಲಿಯಲ್ಲಿಯೂ ಒಬ್ಬ ಯುವರಾಜನನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಬೇಕೆಂಬ ಹಪಾಹಪಿ ಶುರುವಾಗಿದೆ. ನಮ್ಮ ಮಹಾರಾಜರು, ಮಹಾರಾಣಿಯರು ಮತ್ತು ಯುವರಾಜರುಗಳು ನೂರ್ಕಾಲ ಬಾಳಲಿ!

- ಟಿ.ಜೆ.ಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com