ಮಂಗಳೂರಿಗರು ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿದ್ದಾರೆಯೇ?

ಹಿಂದು ಯುವಕ ಮುಸ್ಲಿಂ ಮಹಿಳೆ ಜತೆ ಮಾತನಾಡಿದ್ದಕ್ಕೆ ಆತನ ಮರ್ಮಾಂಗಕ್ಕೆ ಒದ್ದು, ಬ್ಲೇಡ್ನಿಂದ ಕುಯ್ಯುವ ಶಿಕ್ಷೆ. ಇದು ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನದಲ್ಲಿರುವ ಹಿಂದುಗಳ ದಾರುಣ ಕತೆಯಲ್ಲ. ಮಂಗಳೂರಿನಲ್ಲಿರುವ ಮೂಲಭೂತವಾದಿಗಳ ಅಂಧ ಕಾನೂನು!
ಬಂಟ್ವಾಳ ಗಡಿಯಾರ ಬಳಿ ಡಿ.21ರಂದು ಜಯರಾಮ ಪೂಜಾರಿ ಪರಿಚಿತ ಮುಸ್ಲಿಂ ಮಹಿಳೆ ಜತೆ ಮಾತನಾಡುತ್ತಿರುವ ವೇಳೆ ಆಗಮಿಸಿದ ಮೊಹಮ್ಮದ್ ಫೈಸಲ್, ಸಲ್ಮಾನ್, ಹಬೀಬ್, ಆದಂ ಮತ್ತಿತರರ ತಂಡ ಸೇರಿಕೊಂಡು ವಿವಸ್ತ್ರಗೊಳಿಸಿ ಹೊಡೆಯುತ್ತಾರೆ. ಕೆನ್ನೆಗೆ ಹೊಡೆದ ರಭಸಕ್ಕೆ ಮೂರ್ಛೆ ಹೋಗಿದ್ದವನ ಮೇಲೆ ಅಪ್ಪಟ ತಾಲಿಬಾನಿಗಳಂತೆ ನರ್ತಿಸುತ್ತಾರೆ (ಬಹುಶಃ ವಿಟ್ಲ ಪತ್ರಕರ್ತನ ಮೇಲೆ ಇದೇ ರೀತಿ ಹಲ್ಲೆ ಮಾಡಿರುವುದು ಪ್ರೇರೇಪಣೆ ಇರಬಹುದು). ಹಿಂದೊಮ್ಮೆ ಜಯರಾಮರ ಕಾಲು ಮುರಿದು ರಾಡ್ ಹಾಕಲಾಗಿತ್ತು. ರಕ್ಕಸರ ಕುಣಿತದಿಂದಾಗಿ ಮತ್ತೆ ಕಾಲು ಮುರಿದು ಬಾತು ಹೋಗಿದೆ. ಕಿವಿಗಳೆರಡು ಕೇಳುತ್ತಿಲ್ಲ. ಕಣ್ಣು, ಮೂಗಿನಿಂದ ರಕ್ತ ಸುರಿದಿದೆ. ಇಷ್ಟಕ್ಕೆ ಬಿಡದ ರಕ್ಕಸರು ಮರ್ಮಾಂಗಕ್ಕೆ ಒದ್ದು, ಬ್ಲೇಡ್ನಿಂದ ಕತ್ತರಿಸಿದ್ದಾರೆ. ಜಯರಾಮ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಮೂರು ದಿನಗಳ ಹಿಂದೆ..
ದೇರಳಕಟ್ಟೆ ಬಳಿ ರಾತ್ರಿ ಹೊಂಚು ಹಾಕುತ್ತಿದ್ದ ಸಫ್ವಾನ್, ಸಂಶುದ್ದೀನ್, ಸಮೀರ್, ನವಾಝ್, ನಿಸಾರ್, ಅರ್ಷದ್, ಇಕ್ಬಾಲ್, ರವೂಫ್ ಎಂಬ ತಾಲಿಬಾನಿ ಸಂಸ್ಕೃತಿಯ ಪಡೆ, ಕಾರ್ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಯನ್ನು ಅಪಹರಿಸಿ ನಿರ್ಜನ ಪ್ರದೇಶದ ಮನೆಯೊಂದರಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಕೂಡಿ ಹಾಕುತ್ತಾರೆ. ಅಲ್ಲಿ ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿ ವಿದ್ಯಾರ್ಥಿನಿಯ ಬಟ್ಟೆಯನ್ನು ತಾವೇ ತೆಗೆದು ಗೆಳೆಯನಿಂದಲೇ ಅತ್ಯಾಚಾರ ನಡೆಸುತ್ತಾರೆ. ತೀಟೆ ತಿರಿಸಿಕೊಂಡ ವಿಕೃತ ಕಾಮಿಗಳು ಇದರ ಚಿತ್ರೀಕರಣ ನಡೆಸುತ್ತಾರೆ. (ಪೊಲೀಸರಿಗೆ ಸಿಕ್ಕಿದ ಸಿಡಿಯಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡುತ್ತಿರುವುದು ದಾಖಲಾಗಿದೆ) ಬಳಿಕ ವಿದ್ಯಾರ್ಥಿಯನ್ನು ಒತ್ತೆ ಇಟ್ಟು ಹಣಕ್ಕಾಗಿ ಆಕೆಯನ್ನು ಮರುದಿನ ತೊಕ್ಕೊಟ್ಟು ಬಳಿ ಕಾರ್ನಿಂದ ಹೊರದಬ್ಬುತ್ತಾರೆ. ವಿದ್ಯಾರ್ಥಿನಿ ಧೈರ್ಯ ಮಾಡಿ ನ್ಯಾಯವಾದಿಗೆ ಹೇಳಿದ್ದರಿಂದ ಪೊಲೀಸರು ರಾಜಕಾರಣಿಗಳ ಬಳಿ ಹೇಳದೆ ನೇರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಪೊಲೀಸರ ಮೇಲೆಯೇ ಕಾರ್ ನುಗ್ಗಿಸಿ ಕೊಲೆಗೆ ಯತ್ನಿಸುತ್ತಾರೆ. ಸಬ್ಇನ್ಸ್ಪೆಕ್ಟರ್ ಕೈಗೆ ತಲವಾರ್ನಿಂದ ಕಡಿಯಲು ಮುಂದಾಗಿದ್ದ ದುರುಳರನ್ನು ಅಲ್ಲಿಯೇ ಎನ್ಕೌಂಟರ್ ಮಾಡಬಹುದಾಗಿತ್ತು. ಆದರೆ, ಅರೋಪಿಗಳು ಅಲ್ಪಸಂಖ್ಯಾತರು. ಹೀಗಾಗಿ ಪೊಲೀಸರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲಿಲ್ಲ. ಅತ್ಯಂತ ಗಂಭೀರ ಪ್ರಕರಣಕ್ಕೆ ಮಾಮೂಲು ಅಪಹರಣ, ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿದೆ!
"Leave me alone, I know what Iam Doing' ಇದು ದೇರಳಕಟ್ಟೆ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅಪಹರಿಸಿ ಆತನ ಗೆಳೆಯನಿಂದಲೇ ಅತ್ಯಾಚಾರ ನಡೆಸಿ, ಬ್ಲೂ ಫಿಲಂ ಚಿತ್ರೀಕರಿಸಿದ ರಕ್ಕಸರ ತಂಡದ ಕ್ಯಾಪ್ಟನ್ ಪೊಲೀಸರ ಬಲೆಗೆ ಬೀಳುವಾಗ ಟಿಶರ್ಟ್ನಲ್ಲಿದ್ದ ಬರಹ! ಕೊಣಾಜೆ, ದೇರಳಕಟ್ಟೆ ಪರಿಸರದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ದೇಶದೆಲ್ಲೆಡೆಯಿಂದ ವಿದ್ಯಾರ್ಜನೆಗೆ ಬರುತ್ತಾರೆ. ಇವರ ಮೇಲೆ ದೌರ್ಜನ್ಯ ನಡೆಸುತ್ತಾ ಬದುಕು ಸಾಗಿಸುತ್ತಿರುವ ಅನೇಕ ಲಫಂಗ, ದುಷ್ಟರ ಪಡೆ ಬೆಳೆದು ಬಿಟ್ಟಿದೆ. ಈ ಪಾಪಿಗಳನ್ನು ಇದುವರೆಗೆ ಅತ್ಯಾಚಾರ, ಅನಾಚಾರ ನಡೆಸಿಯೂ ಹಾಗೆಯೇ ಬಿಟ್ಟಿರುವುದಕ್ಕೂ, ಟಿ ಶರ್ಟ್ನಲ್ಲಿ ಬರೆದುಕೊಂಡಿರುವುದಕ್ಕೂ ತಾಳೆಯಾಗುತ್ತದೆ.
ಇದಕ್ಕೂ ಎರಡು ತಿಂಗಳ ಹಿಂದೆ ಮಲ್ಲೂರಿನ ಬಿಲ್ಲವ ಮನೆಯಲ್ಲಿ ಹಿರಿಯರೊಬ್ಬರು ಮೃತಪಟ್ಟಿದ್ದರು. ಅಂತಿಮ ದರ್ಶನಕ್ಕೆಂದು ಅನೇಕರು ಬಂದಿದ್ದರು. ಬಂದವರು ವಾಹನ ಪಾರ್ಕ್ ಮಾಡಿದ್ದರು. ವಾಹನ ಚಕ್ರದಿಂದ ಗಾಳಿ ತೆಗೆದ ಭಿನ್ನ ಕೋಮಿನ ಪುಂಡರು, ಕೇಳಿದಾಗ ಹಲ್ಲೆ ಮಾಡಿದರು. ಇಷ್ಟು ಸಾಲದು ಎಂಬಂತೆ 50ಕ್ಕೂ ಹೆಚ್ಚು ಮಂದಿ ತಂಡ ಮಾಡಿಕೊಂಡು ಸಾವಿನ ಮನೆಗೆ ನುಗ್ಗಿ ಅಲ್ಲಿದ್ದವರಿಗೂ ಹೊಡೆದು ತಾಲಿಬಾನಿ ಸಂಸ್ಕೃತಿ ತೋರಿಸಿದರು. ಇದುವರೆಗೆ ಒಬ್ಬನೇ ಒಬ್ಬ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಮುಸ್ಲಿಂ ಮಹಿಳೆಗೆ ನೆರವು ನೀಡಿದ ಕಾರಣಕ್ಕೆ ವಿಟ್ಲ ಪತ್ರಕರ್ತ ಪ್ರಸಾದ್ ಮೇಲೆ ಹಲ್ಲೆಗೈದ ಎಲ್ಲ ಆರೋಪಿಗಳ ಬಂಧನವಾಗಿಲ್ಲ. ಇಂಥ ಮೂಲಭೂತವಾದಿ ಸಂಘಟನೆಗಳು ಮಂಗಳೂರಲ್ಲಿ ಹೆಚ್ಚುತ್ತಿದೆ. ಶಾಲೆಗೆ ಕಳುಹಿಸಿದ ತಮ್ಮ ಮಕ್ಕಳು ದುರುಳರ ಕೈಗೆ ಸಿಕ್ಕರೆ ಎಂಬುದು ಹೆತ್ತವರ ಭೀತಿ. ಭಿನ್ನ ಕೋಮಿನ ಯುವಕ, ಯುವತಿಯರು ಜತೆಯಾಗಿ ಮಾತನಾಡಿದರೆ ತಾಲಿಬಾನಿಗಳು, ಹಿಂದು ಸಂಘಟನೆಯ ದುಶ್ಶಾಸನರು ಎಲ್ಲಿ ದಾಳಿ ಮಾಡುತ್ತಾರೊ ಎಂಬ ಹೆದರಿಕೆ. ಹಿಂದೆಲ್ಲ ಪಬ್, ಹೋಮ್ ಸ್ಟೇ ದಾಳಿಯಲ್ಲಿ ಹಿಂದು ಸಂಘಟನೆಗಳ ಹೆಸರೇ ಪ್ರಸ್ತಾಪವಾಗುತ್ತಿತ್ತು. ಆದರೆ ಈಗ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಹೆಸರೇ ಕೇಳಿಬರುತ್ತಿದೆ. ಇದು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಕಂಡ ಬದಲಾವಣೆ.
ಮುಸ್ಲಿಂ ಮೂಲಭೂತವಾದಿಗಳ ದಾಳಿಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವುದು ಡಿವೈಎಫ್ಐ! ಇದಕ್ಕೂ ಕಾರಣ ಇದೆ. ವಿಟ್ಲದ ಪತ್ರಕರ್ತ ಮತ್ತು ಬಂಟ್ವಾಳ ಗಡಿಯಾರದ ಜಯರಾಮ ಪೂಜಾರಿ ಡಿವೈಎಫ್ಐ ಪಾಳಯದವರು! ಹಿಂದೂ ಸಂಘಟನೆಗಳನ್ನು ವಿರೋಧಿಸುತ್ತಿದ್ದ ಎಡಪಂಥೀಯ ಸಂಘಟನೆಗಳಿಗೆ ಮುಸ್ಲಿಂ ಮೂಲಭೂತವಾದಿಗಳ ಬಿಸಿ ನೇರವಾಗಿಯೇ ತಟ್ಟಿದೆ.
ಇನ್ನು ಪಾಕ್ ಉಗ್ರಗಾಮಿಗಳ ಮುಂಬಯಿ ದಾಳಿಗಿಂತಲೂ ಪಬ್ ದಾಳಿಗೆ ಹೆಚ್ಚು ಪ್ರಚಾರ ಕೊಟ್ಟ ರಾಷ್ಟ್ರೀಯ ಸುದ್ದಿವಾಹಿನಿಗಳು ಈಗ ತೆಪ್ಪಗೆ ಮಲಗಿವೆ. ಅವಕ್ಕೆ ತಾಲಿಬಾನಿ ಕೃತ್ಯಗಳು ಕಾಣುತ್ತಿಲ್ಲವೋ ಅಥವಾ ಕಂಡರೂ ಕುರುಡರಂತೆ ವರ್ತಿಸುತ್ತಿವೆಯೋ? ಹೋಮ್ ಸ್ಟೇ ದಾಳಿಯಾದಾಗ ಮಂಗಳೂರಿಗೆ ಬಂದು "ಹಿಂದುತ್ವಕ್ಕೆ ಅಪ್ಪ, ಅಮ್ಮ ಯಾರು?" ಎಂದು ಕೇಳಿ, ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡ ಬುದ್ಧಿಜೀವಿ ಪತ್ರಕರ್ತೆ ಈಗ ತಮ್ಮ ಅಪ್ಪ ಅಮ್ಮ ಯಾರು ಎಂದು ಹುಡುಕುವ ಬ್ಯುಸಿಯಲ್ಲಿದ್ದಾರೊ ಏನೋ? ತಾಲಿಬಾನಿ ಕೃತ್ಯಗಳ ಬಗ್ಗೆ ಬಾಯಿ ಬಿಡುತ್ತಿಲ್ಲ ಪಾಪ.
ಹೋಮ್ ಸ್ಟೇ ದಾಳಿಯಾದಾಗ ಬಿಜೆಪಿ ಸರ್ಕಾರ, ಹಿಂದು ಸಂಘಟನೆಗಳನ್ನು, ದಾಳಿಕೋರರನ್ನು ಹಿಗ್ಗಾ ಮುಗ್ಗಾ ಝಾಡಿಸಿದ್ದ, ನೈತಿಕ ಪೊಲೀಸ್ಗಿರಿ ನಡೆಯುವ ಕಾರಣಕ್ಕೆ ಸರ್ಕಾರವನ್ನು ವಜಾ ಮಾಡಬೇಕು ಎಂದು ಗುಡುಗಿದ್ದ ಜನಾರ್ದನ ಪೂಜಾರಿ, ಈಗ ಜನರ ಮುಂದೆ ಕಾಗಕ್ಕ ಗುಬ್ಬಕ್ಕ ಕತೆ ಹೇಳುತ್ತಿದ್ದಾರೆ. 'ನೈತಿಕ ಪೊಲೀಸ್ಗಿರಿಗೆ ಸರ್ಕಾರ ಕಾರಣ ಅಲ್ಲ. ಸರ್ಕಾರ ಅಂದರೆ 6 ಕೋಟಿ ಜನರು. ಜನರೇ ಇದಕ್ಕೆ ಕಾರಣ'
ವಾರೆ ವ್ಹಾ, ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ಎಂದು ದಾಸರು ಇದಕ್ಕೇ ಹೇಳಿರಬೇಕು. ಪೂಜಾರಿಯವರು ಮುಂದುವರಿದು ಹೇಳ್ತಾರೆ- 'ಅತ್ಯಾಚಾರ ನಿಲ್ಲಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಶಾಲೆ ಪುಸ್ತಕಗಳಲ್ಲಿ ಅತ್ಯಾಚಾರ ಶಿಕ್ಷೆ ಕುರಿತ ವಿವರ ನೀಡುವ ಪಾಠ ಬರೆಸಬೇಕು. ಇದನ್ನು ಮೇಷ್ಟ್ರು ಬೋಧಿಸಿದರೆ ಮಕ್ಕಳಲ್ಲಿ ಜಾಗೃತಿಯಾಗಿ ಅತ್ಯಾಚಾರಕ್ಕೆ ಕಡಿವಾಣ ಬೀಳಬಹುದು'. ನೀರು ಬೇಕು ಎಂದಾಗ ಬಾವಿ ತೋಡಲು ಹೊರಟಂತಿದೆ ಇವರ ಉತ್ತರ.
ದೇರಳಕಟ್ಟೆ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ ಅತ್ಯಾಚಾರ ಪ್ರಕರಣವನ್ನು ಯಾವುದೇ ಜಾತಿ, ಮತ ನೋಡದೆ ಖಂಡಿಸಬೇಕು ಎಂಬುದು ಪೂಜಾರಿಗಳ ಉದಾತ್ತ ಧ್ಯೇಯ. ಸರಿ, ಆದರೆ ಇದೇ ಉದಾತ್ತ ಮನಸ್ಸು ಹೋಮ್ ಸ್ಟೇ ದಾಳಿ ಮಾಡಿದ ಪ್ರಕರಣದಲ್ಲಿ, ಪಬ್ ದಾಳಿ ಪ್ರಕರಣದಲ್ಲಿ, ಚರ್ಚ್ ದಾಳಿ ಪ್ರಕರಣದಲ್ಲಿ ಏಕೆ ಬಂದಿಲ್ಲ? ಹಿಂದು ಸಂಘಟನೆಗಳು. ಹಿಂದುತ್ವ ಟೀಕೆಗಳು ಪೂಜಾರಿ ಬಾಯಿಯಲ್ಲಿ ಅದೆಷ್ಟು ಸಾರಿ ಹೊರ ಬಿದ್ದವು?
ಅವರು ಮಾಡಿದರೆ ರಾಸ ಲೀಲೆ, ಇವರು ಮಾಡಿದರೆ ಲೀಲೆ! ಆಹಾ...
ನಿಮಗೆ ಅಚ್ಚರಿ ಆಗಬಹುದು, ಹಿಂದುತ್ವದ ಪ್ರಬಲ ಬೇರು ಎಂದು ಕರೆಸಿಕೊಂಡಿರುವ ಮಂಗಳೂರು ತಾಲೂಕಿನಲ್ಲಿ ಆಯ್ಕೆಯಾದ ನಾಲ್ಕೂ ಶಾಸಕರೂ ಅಲ್ಪಸಂಖ್ಯಾತರು! ಇಲ್ಲಿನ ಜನ ಸಾಮಾನ್ಯರು ಯಾವುದೇ ಜಾತಿ ಮತ ನೋಡದೆ ಮತ ಹಾಕಿದ್ದಾರೆ. ಇದೀಗ ಆಯಕಟ್ಟಿನ ಜಾಗಗಳಿಗೂ ಅಲ್ಪಸಂಖ್ಯಾತರ ನೇಮಕವಾಗುತ್ತಿದೆ. ಅಲ್ಪಸಂಖ್ಯಾತರ ದೌರ್ಜನ್ಯ ತಡೆಗಟ್ಟಲು ಜಿಲ್ಲಾ ಅಪರಾಧ ಗುಪ್ತವಾರ್ತೆ ದಳ ಮುಖ್ಯಸ್ಥರು, ನಗರ ಅಪರಾಧ ಗುಪ್ತವಾರ್ತೆ ದಳ ಮುಖ್ಯಸ್ಥರು, ಮೂಡಾ ಆಯುಕ್ತರು, ವಾರ್ತಾಧಿಕಾರಿ ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲಾಧಿಕಾರಿಯೂ ಅಲ್ಪಸಂಖ್ಯಾತರು. ಎಲ್ಲಕ್ಕಿಂತ ಹೆಚ್ಚಾಗಿ ಗೃಹ ಸಚಿವರೇ ಅಲ್ಪಸಂಖ್ಯಾತರು. ಬಹಳ ಸಂತೋಷ, ಯಾರೇ ಇರಲಿ, ಬರಲಿ ಇಲ್ಲಿಗೆ ಒಳ್ಳೆಯ ಅಧಿಕಾರಿಗಳು ಬೇಕು. ಆದರೆ ಅಧಿಕಾರಿಗಳಿಗೆ ಸ್ವಾತಂತ್ರ್ಯ ಇದೆಯೇ? ಅದೂ ಇಲ್ಲ. ಅಲ್ಪಸಂಖ್ಯಾತರು ಅಧಿಕಾರಕ್ಕೆ ಬಂದರೆ ಬಹುಸಂಖ್ಯಾತರಿಗೆ ರಕ್ಷಣೆ ನೀಡಬೇಡವೇ? ಆದರೆ ಕರಾವಳಿಯಲ್ಲಿ ಆಗುತ್ತಿರುವುದೇನು?
ಇಂಥ ಪ್ರಕರಣ ನಿರ್ಲಕ್ಷಿಸಿದಷ್ಟು ಲಾಭ ಮಾಡಿಕೊಳ್ಳುವ ಪಕ್ಷ ಬಿಜೆಪಿ ಎಂಬುದನ್ನು ಕಾಂಗ್ರೆಸ್ ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು. ಆರೋಗ್ಯ ಸಚಿವ ಯು.ಟಿ.ಖಾದರ್ ಎಲ್ಲ ಸಮುದಾಯದ ಜನಪ್ರಿಯ ವ್ಯಕ್ತಿ. ಆದರೆ ಖಾದರ್ ತಮ್ಮ ಖದರ್ ತೋರಲೇ ಇಲ್ಲ. ಉಳ್ಳಾಲ, ಕೊಣಾಜೆ ಪರಿಸರದಲ್ಲಿ ಭೀತಿ ಹುಟ್ಟಿಸಿದ್ದ, ಇರಾ ಸಮೀಪ ಹಾಡಹಗಲೇ ಜನರನ್ನು ಅಟ್ಟಾಡಿಸಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಮಾಡಿಸಿ ತಳವಾರ್ ಹಿಡಿದುಕೊಂಡು ಬೀದಿ ರೌಡಿಸಂ ಮಾಡುತ್ತಿದ್ದ ನವಾಝ್, 'ವೈದ್ಯಕೀಯ ವಿದ್ಯಾರ್ಥಿಗಳ ಅಪಹರಣ', 'ಬ್ಲೂಫಿಲಂ ಚಿತ್ರೀಕರಣ' ಆರೋಪಿ. ಆತನನ್ನು ಅಂದು ಪೊಲೀಸರು ಬಂಧಿಸಿರಲಿಲ್ಲ. ಏಕೆಂದರೆ ಆತ ಕೊನೆಯಲ್ಲಿ ಒಂದು ಒಳ್ಳೆ ಕೆಲಸ (?) ಮಾಡಿದ್ದ, ನರೇಂದ್ರ ಮೋದಿಯನ್ನು ಅಭಿನಂದಿಸಿ ಹಾಕಿದ್ದ ಬ್ಯಾನರ್ ಹರಿದು ಹಾಕಿದ್ದ.
ಕಾಂಗ್ರೆಸ್ ನಿಷ್ಠರಿಗೆ ಇದು ಸಾಕಾಗಿತ್ತು. ಮೋದಿ ವಿರೋಧಿಸುವ ಮನಸ್ಸುಗಳಿಗೆ ತಕ್ಷಣ ಆತ ನಾಯಕನಾಗಿದ್ದ! ಇದೇ ನವಾಝ್ ಪಕ್ಷೇತರನಾಗಿ ಮೂಲಭೂತವಾದಿ ಸಂಘಟನೆ ಬೆಂಬಲದಲ್ಲಿ ಸ್ಪರ್ಧಿಸಿದ್ದ. ಇದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬ ಕಾರಣಕ್ಕೆ ಆತನನ್ನು ಬಿಜೆಪಿ ಕಾರ್ಯಕರ್ತ ಎಂದು ಸಚಿವ ಯು.ಟಿ. ಖಾದರ್ 'ಆಫ್ದ ರೆಕಾರ್ಡ್' ಎಂದು ಸುದ್ದಿಗೋಷ್ಠಿಯಲ್ಲಿಯೇ ಹೇಳುತ್ತಾರೆ.
ಎಲ್ಲ ರೌಡಿಗಳು ರಾಜಕೀಯ ಪಕ್ಷಕ್ಕೆ ಸೇರಿದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಧರ್ಮದ ರಕ್ಷಣೆಗೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಹಿಂದೆ ಇರುವುದು ಆತನ ಸ್ವಾರ್ಥ ಎಂಬುದನ್ನು ಮರೆಯಬಾರದು.
ಉಸ್ತುವಾರಿ ಸಚಿವ ರಮಾನಾಥ ರೈಗಳಿಗೆ ಏನು ಕೇಳಿದರೂ 'ನನಗೆ ಗೊತ್ತಿಲ್ಲ' ಎಂಬುದು ಸಿದ್ಧ ಉತ್ತರ. ಅಧಿಕಾರಿಗಳು ಅವರ ಕೆಲಸ ಮಾಡುತ್ತಾರೆ ಎನ್ನುವ ರೈಗಳಿಗೆ ತಮ್ಮ ಕೆಲಸ ಮಾಡಲು ಪುರುಸೊತ್ತಿಲ್ಲ. ಪೂಜಾರಿ, ಖಾದರ್ ಕನಿಷ್ಠ ಸುದ್ದಿಗೋಷ್ಠಿಯಾದರೂ ಮಾಡುತ್ತಾರೆ. ಆದರೆ ರೈಗಳು ನೇರವಾಗಿ ಠಾಣೆಗೆ ಕರೆ ಮಾಡುತ್ತಾರೆ. ಅವರನ್ನು ಬಿಡಿ, ಇವರನ್ನು ಬಿಡಿ. ದನಗಳ್ಳರಿಗೆ ಈಗ ಠಾಣೆಗಳಲ್ಲಿ ರಾಜಮರ್ಯಾದೆ! ಪಬ್ ದಾಳಿಯಾದಾಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಆರ್.ಅಶೋಕ್, ಸಿ.ಟಿ. ರವಿ, ಕೇಂದ್ರ ಸಚಿವೆ ರೇಣುಕಾ ಚೌಧರಿ, ಮಂಗಳೂರು ತಾಲಿಬಾನ್ ಆಗುತ್ತಿದೆ ಎಂದು ಪುಂಖಾನುಪುಂಖವಾಗಿ ಘೋಷಿಸಿದ್ದರು. ಈಗ ಅವರೆಲ್ಲಿದ್ದಾರೆ?
ದೇವಸ್ಥಾನಗಳು, ಪ್ರವಾಸಿ ಕೇಂದ್ರವಾಗಿ, ಶೈಕ್ಷಣಿಕವಾಗಿ ಸದಾ ಸುದ್ದಿಯಲ್ಲಿರುತ್ತಿತ್ತು ಈ ಬುದ್ಧಿವಂತರ ಜಿಲ್ಲೆ. ಆದರೆ ಇದೀಗ ಸಾಮೂಹಿಕ ಅತ್ಯಾಚಾರ, ಕೊಲೆ, ಅನೈತಿಕ ಪೊಲೀಸ್ಗಿರಿ ತಾಲಿಬಾನಿ ಕೃತ್ಯಗಳಿಗೆ ಸುದ್ದಿಯಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದು ಸಂಘಟನೆಗಳು ಗಲಾಟೆ ಮಾಡಿ ಶಾಂತಿ, ಸೌಹಾರ್ದಕ್ಕೆ ಧಕ್ಕೆ ತರುತ್ತಾರೆ ಎಂಬ ಭಾವನೆ ಇತ್ತು. ಆದರೆ ಈಗ ಮುಸ್ಲಿಂ ಮೂಲಭೂತವಾದಿಗಳು ಪರ್ಯಾಯ ಆಡಳಿತ ನಡೆಸುತ್ತಿದ್ದಾರೆ.
ಜನಸಾಮಾನ್ಯರು ಮಾತ್ರ ಸಂಕಷ್ಟದಲ್ಲಿಲ್ಲ. ಶ್ರೀಮಂತರೂ ಭೀತಿಯಿಂದ ಜೀವನ ನಡೆಸುತ್ತಿದ್ದಾರೆ. ಹಫ್ತಾ ಪಡೆಯಲು ಭೂಗತ ಪಾತಕಿ, ರವಿ ಪೂಜಾರಿ ಮತ್ತು ಬನ್ನಂಜೆ ರಾಜನ ನಡುವೆ ಸ್ಪರ್ಧೆ ಏರ್ಪಟ್ಟಿದೆ. ರವಿ ಪೂಜಾರಿ ಒಂದು ತಿಂಗಳಲ್ಲಿ ಜಿಲ್ಲೆಯ 33 ಮಂದಿ ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡಿದ್ದ. ಇದು ಸುದ್ದಿ ವಾಹಿನಿಗಳಲ್ಲಿ ಚರ್ಚೆಯಾಗಿ ರವಿ ಪೂಜಾರಿ ಭೂಗತ ಇಮೇಜ್ ಮತ್ತಷ್ಟು ಬೆಳೆಯಿತು. ಆಗ ಪ್ರತಿಸ್ಪರ್ಧಿ ಬನ್ನಂಜೆ ರಾಜ ಅಸ್ತಿತ್ವ ಉಳಿಸಿಕೊಳ್ಳಲು ಉದ್ಯಮಿಯನ್ನು ಕೊಲೆ ಮಾಡಿ ಸುದ್ದಿ ವಾಹಿನಿಗಳಿಗೆ ಕರೆ ಮಾಡಿ 'ನಾನೇ ಮಾಡಿದ್ದು ನನ್ನ ಬಳಿ ಸಾವಿರಾರು ಯುವಕರಿದ್ದಾರೆ' ಎನ್ನುವ ಮೂಲಕ ಜಾಹೀರಾತು ಕೊಡುತ್ತಾರೆ. ಒಟ್ಟಾರೆ ಇಲ್ಲಿನ ಜನರ ಬದುಕು ಮುಳ್ಳಿನ ಸೇತುವೆ ಮೇಲಿನ ನಡಿಗೆ, ವಾಲಿದರೆ ಪ್ರಪಾತಕ್ಕೆ ಎಂಬಂತಾಗಿದೆ.
- ಜಿತೇಂದ್ರ ಕುಂದೇಶ್ವರ
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


