ಟಿಂಬುಕ್ಟು- ಆಫ್ರಿಕಾದ ಮಾಲಿ ದೇಶದ ಪ್ರಮುಖ ಆಡಳಿತ ಪ್ರದೇಶ. ಇಸ್ಲಾಮಿಕ್ ತೀವ್ರವಾದಿ ಬಂಡುಕೋರರು ಈ ಪ್ರದೇಶವನ್ನು ವಶಪಡಿಸಿಕೊಂಡು ಅದನ್ನೊಂದು ಸ್ವತಂತ್ರ ದೇಶವೆಂದು ಘೋಷಿಸಿದ್ದರು. ಇದೀಗ ಫ್ರಾನ್ಸ್ನ ಸೇನೆಯು ಮಾಲಿ ಸರ್ಕಾರದ ಸಹಯೋಗದೊಂದಿಗೆ ಅವರನ್ನೆಲ್ಲ ಹೊರಗೋಡಿಸಿದೆ. ವರ್ಷಗಳ ಕಾಲ ಉಗ್ರರ ಕ್ರೂರ ಆಡಳಿತದಲ್ಲಿ ನಲುಗಿದ್ದ ಜನತೆ ಈಗ ನಿಟ್ಟುಸಿರು ಹೊರಚೆಲ್ಲಿದೆ. ಆ ಸೈತಾನ ಪರ್ವದ ನೋವುಗಳು ಈಗ ಅಕ್ಷರಗಳಾಗಿ ಬಿಚ್ಚಿಕೊಳ್ಳುತ್ತಿವೆ. 'ನ್ಯೂಯಾರ್ಕ್ ಟೈಮ್ಸ್'ನ ವರದಿಯೊಂದು ಆ ಯಾತನೆಯ ಕಾಲಘಟ್ಟಕ್ಕೆ ಕನ್ನಡಿ ಹಿಡಿದಿದೆ. ಇಸ್ಲಾಂ ತೀವ್ರವಾದಿಗಳ ಕೈಯಲ್ಲಿ ನಮ್ಮ ಬದುಕು ಸಿಲುಕಿಕೊಂಡರೆ ಹೇಗಿರುತ್ತದೆ ಎಂಬ ಎಚ್ಚರಿಕೆ ಗಂಟೆ ನಮ್ಮ ಎದೆಯಲ್ಲಿ ಮೊಳಗಬೇಕಾದರೆ ಆ ವರದಿಯ ಪ್ರಮುಖಾಂಶಗಳನ್ನು ಗಮನಿಸಬೇಕಿರುವುದು ಅವಶ್ಯ.
----
ಇಸ್ಲಾಮಿಕ್ ಉಗ್ರರು ಆ ಪಟ್ಟಣವನ್ನು ವಶಪಡಿಸಿಕೊಂಡಾಗ ಒಲ್ಲದ ಮನಸ್ಸಿನಿಂದಲೇ ಡಾ. ಇಬ್ರಾಹಿಂ ಮೈಗಾ ಒಪ್ಪಂದವೊಂದನ್ನು ಮಾಡಿಕೊಂಡರು. ಉಗ್ರರು ಹೇಳಿದ ಯಾವುದೇ ಕೆಲಸವನ್ನಾದರೂ ತಾನು ಮಾಡಲು ಸಿದ್ದ. ಅದು ಗಾಯಗಳನ್ನು ತೊಳೆಯುವುದಾಗಿರಬಹುದು, ಅವರ ಜ್ವರಕ್ಕೆ ಆರೈಕೆ ಕೊಡುವುದಿರಬಹುದು ಇಲ್ಲವೇ ತಲೆಗೆ ವಸ್ತ್ರ ಕಟ್ಟಿಕೊಂಡಿದ್ದು ಸರಿಯಾಗಲಿಲ್ಲ ಎಂಬ ಕಾರಣಕ್ಕೆ ಇವರಿಂದ ದಯನೀಯ ಹೊಡೆತ ತಿಂದ ಮಹಿಳೆಯರಿಗೆ ಬ್ಯಾಂಡ್ಏಡ್ ಹಾಕುವುದಿರಬಹುದು... ಇವೆಲ್ಲವಕ್ಕೆ ಪ್ರತಿಯಾಗಿ ತಮ್ಮ ಆಸ್ಪತ್ರೆ ಸುಸೂತ್ರವಾಗಿ ನಡೆದುಕೊಂಡಿರುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು.
ಅದೊಂದು ದಿನ ಈ ಉಗ್ರರು ಅವರಿಗೆ ಆ್ಯಂಬುಲೆನ್ಸ್ ತೆಗೆದುಕೊಂಡು ಪಬ್ಲಿಕ್ ಚೌಕವೊಂದಕ್ಕೆ ಬರುವಂತೆ ಆದೇಶವಿತ್ತರು. ಅಲ್ಲಿ ಹೋಗಿ ನೋಡಿದರೆ ದಿಗ್ಭ್ರಮೆಯಿಂದ ಜಮೆಯಾಗಿದ್ದ ಜನಸಮೂಹ. ಕಳ್ಳತನದ ಆರೋಪ ಹೊತ್ತವನಿಗೆ ಉಗ್ರರು ಶಿಕ್ಷೆ ಜಾರಿ ಮಾಡಿದ್ದರು. ಆತನ ಕೈಗಳನ್ನು ಕತ್ತರಿಸುವುದು! ನಂತರ ಅದಕ್ಕೆ ಬ್ಯಾಂಡ್ಏಡ್ ಹಾಕಬೇಕಾದ ಕರ್ತವ್ಯ ಡಾ. ಇಬ್ರಾಹಿಂ ಮೈಗಾ ಅವರದ್ದು. 'ನನಗೆ ಆಘಾತ ಅಪ್ಪಳಿಸಿತ್ತು. ಆದರೆ ಆ ಕೆಲಸ ಮಾಡಲೇಬೇಕು. ಗನ್ ಹಿಡಿದು ನಿಂತವರಿಗೆ ಪ್ರತಿರೋಧ ವ್ಯಕ್ತಪಡಿಸುವುದು ವ್ಯರ್ಥವಾಗಿತ್ತು' ಎಂದು ಆ ಭಯಾನಕ ದಿನಗಳ ವಿವರ ತೆರೆದಿಡುತ್ತಾರೆ ಡಾ. ಇಬ್ರಾಹಿಂ ಮೈಗಾ.
ಟಿಂಬುಕ್ಟು ಮತ್ತೆ ಸಹಜತೆಗೆ ಬರುವುದು ಸುಲಭದಲ್ಲಿಲ್ಲ. ಅರಬ್ ವ್ಯಾಪಾರಿಗಳು ನಿರ್ವಹಿಸುತ್ತಿದ್ದ ಅಂಗಡಿಗಳನ್ನೆಲ್ಲ ಲೂಟಿ ಮಾಡಲಾಗಿದೆ. ಉಗ್ರರ ಆಕ್ರಮಣದಲ್ಲಿ ಕೆಲ ನಿವಾಸಿಗಳು ಓಡಿಹೋಗಿದ್ದರೆ, ನಂತರ ಫ್ರಾನ್ಸ್ನ ಸೇನಾ ಕಾರ್ಯಾಚರಣೆ ವೇಳೆ ಪ್ರಾಣ ಉಳಿಸುಕೊಳ್ಳುವುದಕ್ಕಾಗಿ ಹಲವರು ಆ ನಗರ ತೊರೆದಿದ್ದಾರೆ. ಅವರೆಲ್ಲ ಹಿಂತಿರುಗಿ ಬರುವ ಸಾಧ್ಯತೆಯೇ ಕ್ಷೀಣ. ಇಸ್ಲಾಮಿಕ್ ತೀವ್ರವಾದಿಗಳಿಂದ ತಮ್ಮ ಪವಿತ್ರ ಗ್ರಂಥಗಳ ಪ್ರತಿಗಳನ್ನು ಕಾಪಾಡಿಕೊಳ್ಳುವುದಕ್ಕೆ ಅಲ್ಲಿನ ಜನ ಹೆಣಗಾಡಿದ್ದಾರೆ. ಅವರಿಗೆ ಆದರದ ಕೇಂದ್ರವಾಗಿದ್ದ ಸಂತರ ಸಮಾಧಿಗಳನ್ನೆಲ್ಲ ನೆಲಕ್ಕುರುಳಿಸಲಾಗಿದೆ. ಸಂಗೀತಕ್ಕೆ ನಿಷೇಧ ಹೇರಿದ್ದ ಇಸ್ಲಾಂ ತೀವ್ರವಾದಿಗಳಿಂದಾಗಿ ಅಲ್ಲಿನ ರೇಡಿಯೋ ವ್ಯವಸ್ಥೆ ಬರ್ಖಾಸ್ತುಗೊಂಡಿದೆ. ನೀರು ಮತ್ತು ವಿದ್ಯುತ್ ದಿನದ ಕೆಲ ಸಮಯಕ್ಕಷ್ಟೇ ಸಿಗುವ ಪರಿಸ್ಥಿತಿ.
ಕಲಿಕಾ ಕೇಂದ್ರವೆಂದೇ ಗುರುತಿಸಿಕೊಂಡಿರುವ ಟಿಂಬುಕ್ಟು ಇತಿಹಾಸದುದ್ದಕ್ಕೂ ನಾನಾ ಸಾಮ್ರಾಜ್ಯಗಳ ಆಕ್ರಮಣಕ್ಕೆ ಗುರಿಯಾಗುತ್ತಲೇ ಬಂದಿದೆ. ಇದೀಗ ಅಮೆರಿಕವೂ ಸೇರಿದಂತೆ ಹಲವು ಜಾಗತಿಕ ಶಕ್ತಿಗಳ ಪ್ರಭಾವಕ್ಕೆ ಸಿಲುಕುತ್ತಿದೆ ಈ ಪ್ರದೇಶ. ಈ ಎಲ್ಲ ಸ್ಥಿತ್ಯಂತರಗಳಲ್ಲೂ ಅಲ್ಲಿನ ಜನ ಆ ಪ್ರದೇಶದ ವೈಶಿಷ್ಟ್ಯವನ್ನು ಆದಷ್ಟೂ ಕಾಪಾಡಿಕೊಂಡು ಬಂದಿದ್ದಾರೆ.
ಹತ್ತು ತಿಂಗಳ ಹಿಂದೆ ತುರೇಗ್ ಇಸ್ಲಾಂ ತೀವ್ರವಾದಿಗಳು ಈ ಪಟ್ಟಣವನ್ನು ವಶಪಡಿಸಿಕೊಳ್ಳುತ್ತಲೇ ಮಾರುಕಟ್ಟೆ ದೋಚಿದರು, ಮಹಿಳೆಯರನ್ನು ಅತ್ಯಾಚಾರಕ್ಕೆ ಒಳಪಡಿಸಿದರು, ತಮಗೆ ಅಡ್ಡ ಬಂದವರನ್ನು ನಿರ್ದಯವಾಗಿ ಗುಂಡಿಕ್ಕಿದರು. 'ನಾವು ನಂಬಿದ ಇಸ್ಲಾಂ ಅಲ್ಲವೇ ಅಲ್ಲ ಅವರದ್ದು. ತಮ್ಮ ಸ್ವಂತದ ತೆವಲು ತೀರಿಸಿಕೊಳ್ಳುವುದಕ್ಕೆ ಧರ್ಮವನ್ನು ಕವಚವಾಗಿ ಉಪಯೋಗಿಸಿದ್ದರು ಅವರು' ಎನ್ನುತ್ತಾರೆ 78 ವರ್ಷದ ಇಮಾಮ್.ಫ್ರಾನ್ಸ್ ಸೇನಾಗಮನಕ್ಕೆ ದಿಕ್ಕೆಟ್ಟು ಓಡಿದ್ದಾರೆ ಉಗ್ರರು. ಶತಮಾನಗಳ ಭವ್ಯ ಸಾಂಸ್ಕೃತಿಕ ಇತಿಹಾಸವಿರುವ ಟಿಂಬುಕ್ಟು ಇದೀಗ ತುಸು ನಿರಾಳವಾಗಿದೆ.