ಈಗ ಎಲ್ಲೆಲ್ಲೂ ಬಜೆಟ್ ಅಧಿವೇಶನದ ಬಗ್ಗೆಯೇ ಚರ್ಚೆ. ಸಿಎಂ ಜಗದೀಶ ಶೆಟ್ಟರ್ ಫೆ.8ರಂದು ಬಜೆಟ್ ಮಂಡಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಬೆಟ್ಟಿಂಗ್. ವಿಧಾನಸಭೆಯ ಪ್ರಸಕ್ತ ಅವಧಿ ಮೇ 31ಕ್ಕೆ ಆಖೈರು ಆಗುವುದರಿಂದ ಅಷ್ಟರೊಳಗೆ ಚುನಾವಣೆ ನಡೆಯಲೇಬೇಕು. ಹೀಗಾಗಿ ಹೇಗಾದರೂ ಮಾಡಿ ಜನಪ್ರಿಯ ಬಜೆಟ್ ಮಂಡಿಸಿ, ಚುನಾವಣೆಗೆ ಹೋಗುವ ಇರಾದೆ ಶೆಟ್ಟರ್ ಅವರದ್ದು. ಅದೇ ರೀತಿ ಮೈಸೂರು ನಗರ ಪಾಲಿಕೆಯ ಪ್ರಸಕ್ತ ಚುನಾಯಿತ ಆಡಳಿತ ಮಂಡಳಿಯ ಅವಧಿಯು ಫೆ.17ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಮೈಸೂರು ಪಾಲಿಕೆಯಲ್ಲಿ ಕೂಡ ಬಜೆಟ್ ಭಜನೆ ನಡೆಯುತ್ತಿದೆ. ಫೆ.7ಕ್ಕೆ ಬಜೆಟ್ ಮಂಡಿಸಲು ತಯಾರಿ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ರಾಜ್ಯ ಚುನಾವಣಾ ಆಯೋಗ ಫೆ.4ರಂದು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಿಸಿದಲ್ಲಿ ಇಲ್ಲಿ ಕೂಡ ಬಜೆಟ್ ಮಂಡನೆಗೆ ಅವಕಾಶ ಸಿಗದೇ ಹೋಗಬಹುದು.
ಸ್ಕಾಟ್ಲೆಂಡ್ನಲ್ಲೂ 'ಎಲ್ಲಾ' ಪತ್ತೆಯಾಗಲ್ಲ ಕಣ್ರಿ!
ಮೈಸೂರಿನಲ್ಲಿ ಸರಗಳ್ಳತನ ನಿರಂತರವಾಗಿ ನಡೆಯುತ್ತಿದೆ. ಬಹಳ ದಿನಗಳ ನಂತರ ಪೊಲೀಸರು ಮೂವರು ಸರಗಳ್ಳರನ್ನು ಹಿಡಿದಿದ್ದರು. ಈ ಸಂಬಂಧ ವಿವರ ನೀಡಲು ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ಸುದ್ದಿಗೋಷ್ಠಿ ಕರೆದಿದ್ದರು. ಆಗ ಪತ್ರಕರ್ತನೊಬ್ಬ ಏನ್ಸಾರ್, ಪ್ರತಿ ಸರ್ಕಲ್ನಲ್ಲಿ ನಿಂತು ಹೆಲ್ಮೆಟ್ ಹಾಕದವರನ್ನು ಅಟ್ಯಾಕ್ ಮಾಡಿ, ಕ್ರಿಮಿನಲ್ಗಳ ರೀತಿ ಹಿಡಿತೀರಿ. ಆದ್ರೆ, ಸರಗಳ್ಳರನ್ನು ಹಿಡಿಯಕ್ಕೆ ಆಗ್ತಾ ಇಲ್ವಲ್ಲ ಯಾಕೆ ಎಂಬ ಪ್ರಶ್ನೆ ಎಸೆದರು. ಇದರಿಂದ ವಿಚಲಿತರಾದಂತೆ ಕಂಡ ಪೊಲೀಸ್ ಆಯುಕ್ತರು, ಬೆಂಗ್ಳೂರು ಇರ್ಲಿ, ಸ್ಕಾಟ್ಲೆಂಡ್ನಲ್ಲೂ ಎಲ್ಲಾ ಕೇಸುಗಳು ಪತ್ತೆಯಾಗಲ್ಲ ಕಣ್ರಿ ಎಂಬ ಉತ್ತರ ಕೊಟ್ರು. ಸ್ಕಾಟ್ಲೆಂಡ್ನಲ್ಲೂ ಸರಗಳ್ಳತನ ಉಂಟಾ? ನಮ್ ಆಯುಕ್ತರು ಅಲ್ಲಿಂದ ಯಾವಾಗ ವಿವರ ತರಿಸಿಕೊಂಡ್ರು ಎಂದು ಗೊಣಗಿಕೊಂಡು ಸುಮ್ಮನಾದರು.
ಗುರುವಿಗೇ ತಿರುಗು ಬಾಣ!
ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಿಸ್ತು ಹಾಗೂ ರಾಜಕೀಯ ಮತ್ಸದ್ಧಿತನದ ಬಗ್ಗೆ ಪಾಠ ಮಾಡಲು ಶುರು ಮಾಡಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಯಡಿಯೂರಪ್ಪನವರು ಒಂದಲ್ಲ, ಎರಡಲ್ಲ ಸುಮಾರು ನಾಲ್ಕು ದಶಕಗಳಿಂದ ಆರ್ಎಸ್ಎಸ್ನಲ್ಲಿ ಇದ್ದು ಶಿಸ್ತು ಕಲಿತಿದ್ದಾರೆ. ಅದನ್ನು ಸಾರ್ವಜನಿಕ ಜೀವನದಲ್ಲಿ ಮಾತ್ರವೇ ಅಲ್ಲ ವೈಯಕ್ತಿಕ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಬೇರೆ ಪಕ್ಷಕ್ಕೆ ಹೋಗಲಿ. ಹೋದ ನಂತರವೂ ಆರ್ಎಸ್ಎಸ್ ಶಿಸ್ತನ್ನು ಮೈಗೂಡಿಸಿಕೊಂಡರೆ ಏಳ್ಗೆ ಸಾಧ್ಯ ಎಂದು ಹಿತಬೋಧನೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಹೊರ ಬಂದ ನಂತರ ಗುರುಗೇನೆ ಪಾಠನಾ.. ಅರೆ ಈಸ್ಕಿ... ಎಂದು ಹೇಳುತ್ತಾ ನಗಾಡಿದ್ದು ಸಚಿವರಿಗೆ ಕೇಳಿಸಲೂ ಇಲ್ಲ. ಕಾಣಿಸಲೂ ಇಲ್ಲ!
ಕಳ್ಳರ ಕೈಚಳಕ, ಕೈ ಟಿಕೆಟ್ ತಪ್ಪುವ ಭಯ?
ಈ ಬಾರಿ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಕಿಸೆಗಳ್ಳರ ಕೈ ಚಳಕ ಭಾರೀ ಪ್ರಮಾಣದಲ್ಲಿತ್ತು. ಕಾರ್ಯಕರ್ತರು ಸಹಿತ ದೊಡ್ಡ ದೊಡ್ಡ ನಾಯಕರೇ ಪರ್ಸ್ ಕಳೆದುಕೊಂಡರು. ಅದರಲ್ಲಿಯೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಸುರತ್ಕಲ್ನ ವಿಜಯಕುಮಾರ್ ಶೆಟ್ಟಿ, ಕಾಪು ಗಂಗಾಧರ ಸುವರ್ಣ, ಜಿಪಂ ಸದಸ್ಯ ಮೆಲ್ವಿನ್ ಡಿಸೋಜ ಪ್ರಮುಖರು. ಪರ್ಸ್ನಲ್ಲಿ 10, 20 ಸಾವಿರ ಹಣ ಇದ್ದರೂ ಅದನ್ನು ವಾಪಸ್ ಕೊಡಿ ಎಂದು ಕೇಳಲಿಲ್ಲ. ಆದರೆ, ಐಡಿ ಕಾರ್ಡ್ ದಾಖಲೆಗಳನ್ನು ಮಾತ್ರ ನೀಡಿ ಎಂದು ಮೈಕ್ನಲ್ಲಿ ವಿನಂತಿಸಿದರು. ಆದರೂ ಇದು ಕಳ್ಳರ ಕಿವಿಗೆ ಮುಟ್ಟಲಿಲ್ಲ. ಕೊನೆಗೆ ಎಲ್ಲರೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬಳಿ ಹೋಗಿ ತಮ್ಮ ಪರ್ಸ್ ಕಳವಾದ ಬಗ್ಗೆ ದೂರು ನೀಡಿದರು. ಕಾರಣ ಚುನಾವಣೆಗೆ ದಾಖಲೆ ಸಲ್ಲಿಸುವಾಗ ಐಡಿ ಕಾರ್ಡ್ ಅಗತ್ಯ. ಅದಿಲ್ಲದಿದ್ದರೆ ಕಳ್ಳರಿಂದಲೇ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರೆ ಎಂಬ ದುಗುಡ ಪರ್ಸ್ ಕಳೆದುಕೊಂಡ ಕಾಂಗ್ರೆಸ್ ನಾಯಕರದ್ದಂತೆ!
ಇಂಧನ ಸಚಿವರು ಲೆಕ್ಕದಲ್ಲಿ ಹಿಂದೆ!
ಭಾಷಣದ ಮಧ್ಯೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 15 ಸೀಟು ಕಾಂಗ್ರೆಸ್ಗೆ ಬರಲಿದೆ ಎಂದು ವೀರಪ್ಪಮೊಯ್ಲಿ ಹೇಳಿದರು. ಆಗ 15 ಸೀಟುಗಳಲ್ಲ ಎಂದು ವೇದಿಕೆಯಲ್ಲಿಯೇ ಇದ್ದವರೊಬ್ಬರು ಗಟ್ಟಿಯಾಗಿ ಹೇಳಿದರು. ಆಗ ವಿಧಾನಸಭೆ ಕ್ಷೇತ್ರ ಸಂಖ್ಯೆ ಬಗ್ಗೆ ವೇದಿಕೆಯಲ್ಲಿ ಗೊಂದಲ ಉಂಟಾಯಿತು. ಮೊಯ್ಲಿ ಒಂದು ಸೀಟು ಕಡಿಮೆ ಮಾಡಿ 14 ಸೀಟುಗಳು ಎಂದರು. ವೇದಿಕೆಯಲ್ಲಿದ್ದ ಗಣ್ಯರೊಬ್ಬರು ಎದ್ದು ನಿಂತು 'ಅಲ್ಲಲ್ಲ 13 ಸೀಟು' ಎಂದರು. ಆಯ್ತು ಎಂದು ತಲೆ ಅಲ್ಲಾಡಿಸಿದ ಮೊಯ್ಲಿ ಅವರು '15ರಲ್ಲಿ 13 ಸೀಟು, ಶೇ.100ಕ್ಕೇ ನೂರು ಸೀಟುಗಳು ಕಾಂಗ್ರೆಸ್ಗೆ ಸಿಗಲಿದೆ' ಎಂದು ಹೇಳಿಬಿಟ್ಟರು. ಇಲ್ಲಿ ಶೇಕಡಾವಾರು ಲೆಕ್ಕವೂ ತಪ್ಪಿತ್ತು, ಕ್ಷೇತ್ರದ ಲೆಕ್ಕವೂ ತಪ್ಪಾಯಿತು. ದೊಡ್ಡವರು ತಪ್ಪು ಮಾಡಿದರೆ ಅದರಲ್ಲಿಯೂ ಏನೊ ಮರ್ಮ ಇರಬೇಕು ಅಲ್ವಾ ?
ಪೂಜಾರಿ ಕೈ ಬಿಡದ ಕೇಸರಿ
ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಗೂ ಕೇಸರಿ ಬಣ್ಣಕ್ಕೂ ಹಾವು, ಮುಂಗುಸಿ ಸಂಬಂಧ ಇದ್ದ ಹಾಗೆ. ಕೇಸರಿ ಬಣ್ಣದ ಲುಂಗಿ ತೊಟ್ಟಿದ್ದ ಉದ್ಯಮಿ ವಿಜಯನಾಥ ವಿಠಲ ಶೆಟ್ಟಿಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದವರು. ಉಡುಪಿ ಮಲ್ಪೆಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಸಮಾರೋಪದಲ್ಲಿ ಕೇಸರಿ ಪ್ರಹಸನ ಹೀಗಿತ್ತು. ವೇದಿಕೆಯಲ್ಲಿ ಡಾ. ಜಿ. ಪರಮೇಶ್ವರ, ಸಿದ್ದರಾಮಯ್ಯ ಮತ್ತು ಜನಾರ್ದನ ಪೂಜಾರಿ ಬಲೂನ್ಗಳನ್ನು ಹಾರಿಸಲು ಸಿದ್ಧವಾಗಿ ನಿಂತಿದ್ದರು. ಪೂಜಾರಿ ಕೈಯಲ್ಲಿದ್ದದ್ದು ಕೇಸರಿ ಬೆಲೂನ್ಗಳ ರಾಶಿ! ಪರಮೇಶ್ವರ ಮತ್ತು ಸಿದ್ದರಾಮಯ್ಯ ಬಿಳಿ, ಹಸಿರು ಬಲೂನ್ ಗುಚ್ಛಗಳನ್ನು ಮೇಲಕ್ಕೆ ಬಿಟ್ಟರು. ಕೇಸರಿಗೆ ಪೂಜಾರಿ ಮೇಲೆ ಸಿಟ್ಟೋ, ಪೂಜಾರಿಗೆ ಕೇಸರಿ ಮೇಲೆ ಸಿಟ್ಟೋ ಗೊತ್ತಿಲ್ಲ. ಕೇಸರಿ ಬಲೂನ್ ಮಾತ್ರ ಆಕಾಶಕ್ಕೆ ಹೋಗಲೇ ಇಲ್ಲ. ಅದು ಅಲ್ಲೇ ಇದ್ದ ಮರದ ಮೇಲೆ ನಿಂತಿತ್ತು. ಜಪ್ಪಯ್ಯ ಎಂದರೂ ಮೇಲೆ ಹಾರಲೇ ಇಲ್ಲ. ಕೊನೆಗೆ ಕಾರ್ಯಕರ್ತ ಹೇಮಂತ್ ಮರಹತ್ತಿ ತನ್ನ ಕೈಯಲ್ಲಿದ್ದ ಬಾವುಟದಿಂದ ಬಲೂನ್ಗಳನ್ನು ಹರಸಾಹಸ ಮಾಡಿ ಕುಟ್ಟಿ ದೂಡಿದರು. ಆಗ ಬಲೂನ್ ಆಗಸಕ್ಕೆ ನೆಗೆಯಿತು. ಬಲೂನ್ ಮೇಲಕ್ಕೆ ಹೋಗುವಂತೆ ಮಾಡಿ, ತನ್ನ ಮಾನ ಕಾಪಾಡಿದ ಕಾರ್ಯಕರ್ತನ ಹೆಸರು ಹೇಳಿ ಪೂಜಾರಿ ಕೊಂಡಾಡಿದರು!
-ನಂಬಿರಾಜ್