ಬುದ್ಧಿಜೀವಿಗಳ ಕೆಸರೆರಚಾಟದಲ್ಲಿ ಕಳೆಗುಂದುತ್ತಿರುವ ಭಾರತ
ಇತ್ತೀಚಿಗೆ ಗಿರೀಶ್ ಕಾರ್ನಾಡ್ರವರು ಮುಂಬೈಯಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ನೈಪಾಲರ ಬಗ್ಗೆ ಮಾಡಿದ ಟೀಕೆ, ಈ ದೇಶದ ಗೃಹಮಂತ್ರಿಗಳ ಹಿಂದೂ ಭಯೋತ್ಪಾದನೆ ಬಗೆಗಿನ ಹೇಳಿಕೆ, ಆಶಿಷ್ ನಂದಿಯವರ ಭ್ರಷ್ಟಾಚಾರ ಮತ್ತು ಓಬಿಸಿ ಜಾತಿಗಳ ಬಗೆಗಿನ ಹೇಳಿಕೆ...ಹೀಗೆ ಒಂದಲ್ಲಾ ಒಂದು ರೀತಿ ಕೆಲ ಸೆಲೆಬ್ರಿಟಿಗಳು, ಬುದ್ಧಿಜೀವಿಗಳು, ಸಾಹಿತಿಗಳು, ರಾಜಕಾರಣಿಗಳು ಒಂದಿಲ್ಲೊಂದು ಕಡೆ ಇಂತಹ ನುಡಿಮುತ್ತುಗಳನ್ನು ಉದುರಿಸುತ್ತಲೇ ಇರುವುದನ್ನು ನಾವು ನೋಡುತ್ತಲೇ ಇದ್ದೇವೆ. ಆನಂತರ ಮಾಧ್ಯಮಗಳಲ್ಲಿ ಈ ಬಗ್ಗೆ ಅತಿ ಗಂಭೀರವಾಗಿ ಚರ್ಚೆಗಳು ನಡೆಯುತ್ತವೆ, ಆಗ ಹೇಳಿಕೆ ನೀಡಿದವರು ತಾವು ಹಾಗೆ ಹೇಳಿಲ್ಲಾ ಎಂದೋ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆಯೆಂದೋ ಹೇಳುತ್ತಾರೆ ಅಥವಾ ಕೆಲವರು ತಮ್ಮ ಹೇಳಿಕೆಗೆ ಅಂಟಿಕೊಂಡುಬಿಡುತ್ತಾರೆ. ಆದೆಲ್ಲಾ ಎನೇ ಇರಲಿ, ಆ ಹೇಳಿಕೆಗಳು ಮಾತ್ರ ಮಾಡಬೇಕಾದ ಪರಿಣಾಮವನ್ನಂತೂ ಮಾಡಿರುತ್ತವೆ. ಅಷ್ಟಕ್ಕೂ ಪ್ರಸ್ತುತ ಸನ್ನಿವೇಶದಲ್ಲಿ ಈ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆ ಸವಾಲುಗಳು ಹಿನ್ನೆಲೆಯಲ್ಲಿ ನೋಡಿದಾಗ ಸಾಹಿತಿಗಳನ್ನಿಸಿಕೊಂಡವರು, ಬುದ್ಧಿಜೀವಿಗಳು, ರಾಜಕಾರಣಿಗಳೆನ್ನಿಸಿಕೊಂಡವರು ಯಾಕೆ ಅನಗತ್ಯವಾಗಿ ಇಂತಹ ಹೇಳಿಕೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿರುವುದು? ಇದೆಲ್ಲಾ ಈಗ ಅಗತ್ಯವಾ?
ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಕಬಂದಬಾಹುವಿನಲ್ಲಿ ಭಾರತ ಸಿಲುಕಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿದೆ. ಮೇಲ್ನೋಟಕ್ಕೆ ಭಾರತಪ್ರಕಾಶಿಸುತ್ತಿದೆ ಎನ್ನಿಸುವುದಕ್ಕೆ ಅನೇಕ ಉದ್ಯಮಿಗಳು ಬಂಡವಾಳಗಾರರು ವಿದೇಶದಲ್ಲಿನ ಉದ್ಯಮಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದರಿಂದ ನಮಗೆ ಅನಿಸುತ್ತದೆ, ಆದರೆ ಇದಕ್ಕೆ ಪೂರಕವೆನ್ನುವಂತೆ ಭಾರತದಲ್ಲಿರುವ ಎಲ್ಲಾ ಧರ್ಮದ, ಜಾತಿಯ, ವರ್ಗದ, ಜನಸಾಮಾನ್ಯರ ಬದುಕು ಪ್ರಕಾಶಿಸಬೇಕಿತ್ತು. ಇದಾವುದೂ ಆಗುತ್ತಿಲ್ಲ. ನೂರು ರುಪಾಯಿ ಕೊಟ್ಟರೂ ತುಂಬದ ತರಕಾರಿ ಬುಟ್ಟಿ, ಏರುತ್ತಿರುವ ಆಹಾರ ಧಾನ್ಯಗಳ ಬೆಲೆ!
ಕೃಷಿಯು ಕೃಷವಾಗತ್ತಾ ರೈತನ ಬೆನ್ನೆಲುಬು ಬಾಗಿ ಬೇರೆ ದಾರಿಕಾಣದೇ ರೈತನ ಮಕ್ಕಳು ದುಡಿಯಲು ನಗರಗಳತ್ತ ಗುಳೆ ಹೋಗುತ್ತಿದ್ದಾರೆ. ಸಣ್ಣಪುಟ್ಟ ಕೈಗಾರಿಕೆಗಳು, ಗುಡಿಕೈಗಾರಿಕೆಗಳು ಕಣ್ಣುಮುಚ್ಚಿವೆ. ಸ್ವಾತಂತ್ರ್ಯ ಬಂದು 65 ವರ್ಷವಾದರೂ ಜನಕಲ್ಯಾಣದ ಕನಸು ನನಸಾಗದೇ ಅದೊಂದು ಚುನಾವಣಾ ಸೂಚ್ಯಂಕದಂತೆ ಭಾಸವಾಗುತ್ತಿದೆ. ಶಿಕ್ಷಣ, ಆರೋಗ್ಯ, ಬಟ್ಟೆ, ವಸತಿ, ಇವು ಈ ದೇಶದ ಜ್ವಲಂತ ಸಮಸ್ಯೆಗಳಾಗಿ ಕಾಡುತ್ತಿವೆ. ರಾಜಕೀಯವು ಸಹ ಉದ್ಯಮವಾಗಿ ವಿವೇಚನಾಯುಕ್ತ ನಿರ್ಧಾರಗಳ ನೀತಿಗಳ ಬದಲಾಗಿ ಬರೀ ಜನಪ್ರಿಯ ಯೋಜನೆಗಳಿಗೆ ಸರ್ಕಾರಗಳು ಕಟ್ಟು ಬೀಳುತ್ತಿರುವುದರಿಂದ ದೇಶದ ಒಟ್ಟು ಆರ್ಥಿಕ ಪರಿಸ್ಥಿತಿ ದಿಕ್ಕುತಪ್ಪುತ್ತಿದೆ.
ಇಂತಹ ಸಂಧಿಗ್ಧ ಸನ್ನಿವೇಶದಲ್ಲಿ ಸಾರ್ವಜನಿಕರ ನಿಟ್ಟುಸಿರ ಬದುಕಿಗೆ ಕೊಳ್ಳಿ ಇಡುವಂತಹ ಅನಗತ್ಯ ವಿಷಯಗಳು ನಮಗೆ ಆವಶ್ಯಕವೇ? ಯಾವ ಇತಿಹಾಸವೂ ಪರಿಪೂರ್ಣವಲ್ಲ.
ವಿಪರ್ಯಾಸವೆಂದರೆ, ಧರ್ಮ ನಿರಪೇಕ್ಷತೆ, ಜಾತ್ಯತೀತತೆಯನ್ನು ಒಪ್ಪಿಕೊಂಡ ನಮ್ಮದೇಶದಲ್ಲಿಂದು ಈ ಶಬ್ದಗಳೇ ನಮ್ಮನ್ನಾಳುವ ಮತ್ತು ಮುಗ್ಧಜನರನ್ನು ದಾರಿತಪ್ಪಿಸುವ ಅತೀ ಗಂಭೀರ ವಿಚಾರಗಳಾಗಿರುವುದು ದುರಂತ. ಎಲ್ಲೋ ಒಂದು ಕಡೆ secularism ನಿಂದ psudosecularismನ ಕಡೆಗೆ ದೇಶ ವಾಲುತ್ತಿದೆಯೇ ಎಂದು ಅನ್ನಿಸದೇ ಇರದು. ಹಾಗಾದರೆ ಭಾರತವೂ ಕೋಮುವಾದ ಅಥವಾ ಮೂಲಭೂತವಾದದ ಕಡೆಗೆ ಜಾರುತ್ತಿದೆಯೇ? ಅಸಲಿಗೆ ಕೋಮುವಾದದ ಬಗೆಗೆ, ಜಾತೀಯತೆಯ ಬಗೆಗೆ, ಜನಸಾಮಾನ್ಯರ ಯೋಚನೆ ಏನು ಎಂದು ತಿಳಿದುಕೊಳ್ಳುವುದು ಇಲ್ಲಿ ಮುಖ್ಯವಾಗುತ್ತದೆ. ದಿನವೊಂದಕ್ಕೆ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ದುಸ್ತರವಾಗಿರುವಾಗ ನಾನು ಮುಸಲ್ಮಾನ, ಹಿಂದೂ, ಜೈನ ಎಂದು ಅವರು ಎಂದಿಗೂ ಯೋಚಿಸುತ್ತಾ ಕೂಡುವುದಿಲ್ಲ. ಹಸಿದವನಿಗೆ ಅನ್ನ ಮುಖ್ಯವಾಗುತ್ತದೆಯೇ ಹೊರತು ಜಾತಿ ಮುಖ್ಯವಾಗುವುದಿಲ್ಲ. ಅದೇನಿದ್ದರೂ ಸಕಲ ಸೌಭಾಗ್ಯಗಳನ್ನು ಅನುಭವಿಸುತ್ತಾ ಕೇವಲ ಸುಖಜೀವನ ನಡೆಸುತ್ತಿರುವವರು ಸುಮ್ಮನಿರಲಾರದೆ ಕಾಲಹರಣಕ್ಕಾಗಿ ಸೃಷ್ಟಿಸಿಕೊಂಡಿರುವ ಸನ್ನಿವೇಶಗಳು ಮಾತ್ರ.
ರಾಮನಲ್ಲಿ, ಬುದ್ಧ, ಬಸವರಲ್ಲಿ, ಮತ್ತು ಮಾನವ ಸಹಜ ದೌರ್ಬಲ್ಯಗಳ ನಡುವೆಯೂ ದೇಶಕ್ಕೊಂದು ದಾರಿ ತೋರಿದ ಗಾಂಧೀಜಿಯರವಲ್ಲಿಯೂ ಕೊಂಕನ್ನು ಕಾಣುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಅವರುಗಳೆಲ್ಲ ಜನಸಾಮಾನ್ಯರು ತಮ್ಮ ವಾಸ್ತವ ಜವಾಬ್ದಾರಿಗಳನ್ನು ಮರೆಯುವಂತೆ ಮಾಡುತ್ತಿದ್ದಾರೆ. ಇಂತಹ ದೊಡ್ಡ ಜನಸಮುದಾಯವಿರುವ ನಮ್ಮ ದೇಶದಲ್ಲಿ ಲೆಕ್ಕಹಾಕಿದರೆ ಕೇವಲ ಒಂದೋ ಎರಡೋ ಪರ್ಸೆಂಟ್ ಇರುವ ಕೆಲ ಪೂರ್ವಾಗ್ರಹಪೀಡಿತ ಬುದ್ಧಿಜೀವಗಳೆನ್ನಿಸಿಕೊಂಡವರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾ ಮುಗ್ಧನಾಗರೀಕರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ. ಮೊನ್ನೆ ಆಂಗ್ ಸಾನ್ ಸೂಕಿಯವರು 'ಪ್ರಜಾಪ್ರಭುತ್ವವೇ ಎಲ್ಲಕ್ಕೂ ಮದ್ದಲ್ಲ, ಆದರೆ ಇರುವ ವ್ಯವಸ್ಥೆಯಲ್ಲಿ ಸಧ್ಯಕ್ಕೆ ಇದೊಂದು ಉತ್ತಮವಿಧಾನ' ಎಂದು ಹೇಳಿರುವುದನ್ನು ನೋಡಿದರೆ, ಶತಶತಮಾನಗಳ ಪರಂಪರೆ ಹೊಂದಿರುವ ಮತ್ತು ಸ್ವಾತಂತ್ರ್ಯ ದೊರೆತು ಅರವತೈದು ವರ್ಷವಾಗಿದ್ದರೂ ಪ್ರಜಾಪ್ರಭುತ್ವಕ್ಕಿಂತಲೂ ಉತ್ತಮವಾದ ವ್ಯವಸ್ಥೆಯಡೆಗೆ ಸಾಗಬೇಕಿರುವ ನಾವಿನ್ನು ಯಾಕೆ ಪ್ರಭುದ್ಧರಾಗುತ್ತಿಲ್ಲ?
ನಿಜವಾಗಿಯೂ ನಮ್ಮ ಸಂವಿಧಾನಕ್ಕೆ ಉತ್ತರದಾಯಿಗಳಾಗಿರಬೇಕಾದರೆ ಜನರ, ದೇಶದ ಅಭಿವೃದ್ಧಿಗೆ ಮಾರಕವಾಗುವ ಅನವಶ್ಯಕ ಚರ್ಚೆಗಳನ್ನು ಬಿಟ್ಟುಹಾಕಿ ಜನಸಾಮಾನ್ಯರ ಬದುಕಿಗೆ ಸ್ಥಿರತೆ ತರುವ ಕೆಲಸಗಳಾಗಬೇಕು. ಇನ್ನು ನಾಗರಿಕರೂ ಕೂಡ ಅಭಿವೃದ್ಧಿ ಪರವಾದ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಮೌಲ್ಯಯುತ ರಾಜಕೀಯ ಹಾಗೂ ರಾಜಕಾರಣಿಗಳನ್ನು ಚುನಾಯಿಸಲು ಮುಂದಾಗಬೇಕು. ವೈಯಕ್ತಿಕ ಲಾಭಕ್ಕೋ ಜನ, ಸಮುದಾಯ, ಓಲೈಸುವುದನ್ನು ಬಿಡಬೇಕಿದೆ. ಉದ್ಧಾರವಾಗಬೇಕಿರುವುದು ಚುನಾವಣಾ ಸಮಯದಲ್ಲಿ ತಮ್ಮ ಒಂದು ದಿನದ ಕೆಲಸವನ್ನು ಮರೆತು ಈ ದೇಶ ರಾಜ್ಯವನ್ನು ಆಳಲು ಮತಾದೇಶ ನೀಡುತ್ತಲೇ ಬಂದಿರುವ ಎಲ್ಲ ಸಮುದಾಯದ ಜನರು. ಇನ್ನು ಸಾಧ್ಯವಾದರೆ ಬುದ್ಧಿಜೀವಿಗಳೆನ್ನಿಸಿಕೊಂಡವರ ಮಾತುಗಳಿಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದೇ ಇರುವುದು ಒಳಿತು. ಜಾತ್ಯತೀತರೆಂಬ ಸೋಗಿನಲ್ಲಿ ಕೋಮುಗಳ ನಡುವೆ, ಜಾತಿಗಳ ನಡುವೆ ಜಗಳ ಹಚ್ಚಿ ಮೈ ಕಾಸಿಕೊಳ್ಳುವವರಿವರು. ನಿಜವಾಗಲೂ ಅವರುಗಳಿಗೆ ದೇಶದ ಪರ, ದೇಶವಾಸಿಗಳ ಪರ ಕಾಳಜಿ ಇದ್ದರೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ರಚನಾತ್ಮಕ ಕೆಲಸ ಮಾಡಲಿ.
-ಸುಣಗಾರ ಮಂಜುನಾಥ
suntbh@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

