ಅಂಕಣಗಳು

ಹೊಲಸು ಮಾಡದಿರುವುದು ಕರ್ತವ್ಯವಾಗಬೇಕು! (ಗೋಡೆ ಬರಹ)

Published On :

ಬೈಟು ಕಾಫಿಯಲ್ಲಿ ಪ್ರಕಟವಾದ ಒಂದು ಲೇಖನದ ಬಗ್ಗೆ ನನ್ನ ತಕರಾರಿದೆ. ಕೊಳ್ಳೇಗಾಲದ ಸಮೀಪ ಚಿಕ್ಕಲ್ಲೂರಿನ ಜಾತ್ರೆಯ ಬಗೆಗಿನ ಲೇಖನವದು. ಈ ಲೇಖನ ಇಂದಿನ ದಿನಮಾನದಲ್ಲಿ ಬೇಕಾಗಿತ್ತಾ ಎನ್ನುವುದು ನನ್ನ ಪ್ರಶ್ನೆ. ನಾವು ಪ್ರಕಟಿಸಿದ್ದು ಮಾಹಿತಿ ಮಾತ್ರ. ಇದರಲ್ಲಿ ನಮ್ಮ ತಪ್ಪೇನಿದೆ? ಎಂದು ನೀವು ವಾದ ಮಾಡಬಹುದು. ಆದರೆ ದುರ್ಬಲ ಮನಸ್ಸಿನ ವ್ಯಕ್ತಿಗಳಿಗೆ, ಚಟಗಳ ದಾಸರಾದವರಿಗೆ ದೇವರ ಹೆಸರಿನಲ್ಲಿ ಹೆಂಡ ಕುಡಿದು, ಖಂಡ ತಿಂದು, ಭಂಗಿ ಸೇದ ಬನ್ನಿ ಎಂದು ಆಹ್ವಾನಿಸುವಂತಿದೆ ನಿಮ್ಮ ಲೇಖನ. ಇಂತಹ ಸುದ್ದಿಗಳ ಪ್ರಚಾರ ಬೇಡವೇ ಬೇಡ ಎನ್ನುವುದು ನನ್ನ ಅಭಿಪ್ರಾಯ. ಹೊಲಸನ್ನು ನೊಣ ಮುಕ್ಕುವುದು ಸ್ವಾಭಾವಿಕ, ಆದರೆ ಹೊಲಸು ಮಾಡದಿರುವುದು ನಮ್ಮ ಕರ್ತವ್ಯ. ಅಂತಹ ಹೊಲಸು ಕನ್ನಡ ಪ್ರಭದಲ್ಲಿ ಬರಬೇಕೆ ಎನ್ನುವುದು ನನ್ನ ಪ್ರಶ್ನೆ. ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸಿದ ಹಾಗೂ ಇಂದಿಗೂ ಪ್ರತಿಪಾದಿಸುತ್ತಿರುವ ಅನೇಕರು ಇದ್ದಾರೆ. ಅಂತಹವರ ಬಗ್ಗೆ ನಿಮ್ಮ ಪತ್ರಿಕೆಯ ಅಮೂಲ್ಯ ಸ್ಥಳ ಬಳಕೆಯಾಗಲಿ ಎಂದು ನನ್ನ ಬಯಕೆ. ಕ್ಷುದ್ರ ವಿಚಾರಗಳಿಗೆ ಸ್ಥಳ ಕೊಟ್ಟು ಮೊದಲೇ ಕೆಟ್ಟಿರುವ ಸಮಾಜಕ್ಕೆ ಪುನಃ ಕಾಣಿಕೆ ಬೇಡ ಎನ್ನುವುದಷ್ಟೇ ನನ್ನಂತಹ ಓದುಗರ ಬಯಕೆ.
-ಜಿ. ಗೋಪಾಲಕೃಷ್ಣ, 14/37
ಮುಖ್ಯರಸ್ತೆ, ಕಂಪ್ಲಿ- ಬಳ್ಳಾರಿ

ಪ್ರಣತಿಯವರಿಗೆ ನಮಸ್ಕಾರಗಳು. ತಮಗೆ ಬರವಣಿಗೆಯನ್ನು ಆ ದೇವರು ದತ್ತು ಕೊಟ್ಟು ಬಿಟ್ಟಿದ್ದಾನೆಯೆ ಎಂಬ ಸಂಶಯ ಕಾಡುತ್ತಿದೆ. ಹೌದು ಪ್ರೌಢಿಮೆ ಹಾಗೂ ಭಾವನೆಗಳ ಝೇಂಕಾರಗಳಲ್ಲಿ ಮಿಂದೆದ್ದಿರುವ ನಿಮ್ಮ ಬರಹಗಳು ಓದುಗರನ್ನು ಮೋಡಿ ಮಾಡುತ್ತಿವೆ. 'ಪ್ರೀತಿ ಪ್ರೇಮ ಪ್ರಣತಿ' ಇದು ನನ್ನ ನೆಚ್ಚಿನ ಕಾಲಂ. ನಿಮ್ಮ ಲೇಖನಗಳನ್ನು ಓದುತ್ತಾ ಕೊನೆಗೆ ಓದುಗನ ಕಣ್ಣಲ್ಲಿ ನೀರು ಮಡುಗಟ್ಟಿ ನಿಂತಿರುತ್ತದೆ. 'ನೆಮ್ಮದಿ ಖರೀದಿಗೆ ಸಿಗುವಂತಿದ್ದರೆ...', ಈ ವಾರದ ಈ ಬರಹ ನಿಜಕ್ಕೂ ಆಧುನಿಕ ಯಾಂತ್ರಿಕ ಜೀವನದ ಕಹಿ ಸತ್ಯವನ್ನು ಅರಹುವ ಬರಹ. ಕೊನೆಗೆ ಎದೆಯಲ್ಲಿ ಸತ್ಯದ ನೋವು ತುಂಬಿ ಹೋಯಿತು. ಹೀಗೆ ನಿಮ್ಮ ಬರವಣಿಗೆ ಇನ್ನೂ ಸಾಗಲಿ ನಮ್ಮಂತಹ ಓದುಗರ ಕೈ ಸೇರಿ ಅವರ ಭಾವನೆಗಳ ಬದಲಾಯಿಸುವ ಕಾರ್ಯವಾಗಲಿ.
-ಆನಂದ ಪಾಟೀಲ, ಬೆಳಗಾವಿ, ಮೊ. 9980 244917.

'ಎಲ್ಲರ ಬದುಕಿನಲ್ಲೂ ದೇವರಂತೆ ಯಾರಾದರೂ ಬಂದೇ ಬರುತ್ತಾರೆ!'ಜನವರಿ 31ರ 'ಕನ್ನಡಪ್ರಭ'ದ 'ನೂರೆಂಟು ನೋಟ'ದಲ್ಲಿ ಪ್ರೀತಿಯ ಸಂಪಾದಕರಾದ ವಿಶ್ವೇಶ್ವರಭಟ್‌ರವರು ಬರೆದ ಲೇಖನ ಅರ್ಥಪೂರ್ಣವಾಗಿತ್ತು. ಭಾನುವಾರ ಪ್ರಕಟವಾಗುವ 'ನಂಗೆ ಇಷ್ಟಾನೋ' ನನ್ನ ಅಚ್ಚುಮೆಚ್ಚಿನ ಅಂಕಣ. ದಿನ ಬೆಳಿಗ್ಗೆ 'ಕನ್ನಡಪ್ರಭ' ಪತ್ರಿಕೆ ಬರುವುದನ್ನೇ ಕಾಯುವ ನಾನು 'ಬೈಟು ಕಾಫಿ' ಕುಡಿಯುತ್ತಾ 'ಅನುಭವ ಮಂಟಪದ' ಲೇಖಕರ 'ವಿಚಾರ ತೋರಣ'ಗಳನ್ನು ತಪ್ಪದೇ ಓದುತ್ತೇನೆ. ಅವು ಮನಸ್ಸಿಗೆ ಮುದ ನೀಡುತ್ತವೆ.
-ರವಿಕುಮಾರ್ ಬಿ.ಬಿ., ಶೇಷಾದ್ರಿಪುರಂ,
ಬೆಂಗಳೂರು, ಮೊ. 944966 9897.

ಪ್ರತಾಪ್ ಸಿಂಹ ಅವರ ಲೇಖನ 'ಕೃತಘ್ನ ವ್ಯವಸ್ಥೆಗೆ ಪೊಲೀಸರು ಕೃತಜ್ಞರಾಗಿರಲು ಸಾಧ್ಯವೇ?' (ಕ.ಪ್ರ. 2/2) ಮಾಹಿತಿ ಪೂರ್ಣವಾಗಿತ್ತು. ನಮ್ಮನ್ನು ರಕ್ಷಿಸುವ ಪಡೆಯನ್ನೇ ರಕ್ಷಿಸುವವರಿಲ್ಲ ಎಂಬ ನೈಜತೆಯನ್ನು ಸರಳ ಹಾಗೂ ವಾಸ್ತವಿಕ ಉದಾಹರಣೆಗಳೊಂದಿಗೆ ಲೇಖಕರು ನಮ್ಮ ಮುಂದಿಟ್ಟಿದ್ದಾರೆ. ಒಂದು ಮಾತಂತೂ ಸತ್ಯ. ಒಬ್ಬ ಸಾಮಾನ್ಯ ಪೇದೆಗೆ ಅವನ ಹಿರಿಯ ಅಧಿಕಾರಿಗಳಿಂದ ಯಾವ ರೀತಿಯ ಟ್ರೀಟ್‌ಮೆಂಟ್ ಸಿಗುತ್ತದೋ ಅದೇ ಧಾಟಿಯ ನಡವಳಿಕೆ ಒಬ್ಬ ಸಾಮಾನ್ಯ ಪೇದೆಯಿಂದ ಸಾಮಾನ್ಯ ನಾಗರಿಕನಿಗೂ ಸಿಗುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪೊಲೀಸ್ ಸಂಸ್ಕೃತಿಯೇ ಹೀಗೆ ಅಂತ ಅನಿಸುತ್ತದೆ. ಒಬ್ಬ ಕಾನ್‌ಸ್ಟೇಬಲ್ ಸಹ ತಾನೊಬ್ಬ ದಂಡನಾಯಕ ಎಂಬಂತೆ ವರ್ತಿಸಿ 'ಯಾಕಲೇ', 'ಏನಲೇ' ಭಾಷೆಯನ್ನೇ ಬಳಸುತ್ತಾನೆ. ಹೀಗಿರುವಾಗ ಆತ ತನ್ನ ಹಿರಿಯ ಅಧಿಕಾರಿಗಳಿಂದ ಇನ್ನೇನು ಅಪೇಕ್ಷಿಸಲು ಸಾಧ್ಯ? ಪೊಲೀಸ್ ನಿಜ ಅರ್ಥದಲ್ಲಿ ರಕ್ಷಕರು ಅಂತಿದ್ದರೂ ಇಂದು ಪೊಲೀಸ್ ಅಂದಾಕ್ಷಣ ಹೆದರುವ ಪರಿಸ್ಥಿತಿ ಬಂದೊದಗಿದೆ. ಏನನ್ನೋ ಸಾಧಿಸಲು ಹೊರಟು, ವಿನಾಕಾರಣ ಯಾರನ್ನಾದರೂ ಥಳಿಸಿ ಅವರಿಂದ ತಮಗೆ ಬೇಕಾದ್ದನ್ನು ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತಮಗಾಗುವ ಅವಮಾನ, ಶೋಷಣೆಗಳನ್ನು ಜನರ ಮೇಲೆ ತೋರಿಸುತ್ತಾರೋ ಅಂತೆಲ್ಲ ಅನಿಸುತ್ತಿದೆ. ನಿಜ, ಒಬ್ಬ ಸಾಮಾನ್ಯ ಪೇದೆ ಪಡುವ ಕಷ್ಟ, ನೋವು, ತಾಕಲಾಟಗಳನ್ನು ಪ್ರತಾಪಸಿಂಹ ಸ್ಪಷ್ಟಪಡಿಸಿದ್ದಾರೆ. ಇವರುಗಳ ಹೀನಾಯ ಪರಿಸ್ಥಿತಿಗೆ ಪೊಲೀಸ್ ವ್ಯವಸ್ಥೆಯೇ ಕಾರಣವಾದ್ದರಿಂದ, ಅವಶ್ಯಕತೆ ಇರುವುದು ಈ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆಯದ್ದು. ಆದರೆ ಅದು ಯಾವಾಗ ಆಗುತ್ತದೆ ಎಂಬುದೇ ಬಹುದೊಡ್ಡ ಪ್ರಶ್ನೆ. ಪೊಲೀಸ್ ಇಲಾಖೆಯಲ್ಲಿ ಯಾವುದೂ ಸರಿ ಇಲ್ಲ ಎಂಬುದಕ್ಕೆ ಅಂದೇ ಪ್ರಕಟವಾದ 'ನೋಡ್ರಣ್ಣ, ಎಡಿಜಿಪಿಗೇ ಕಚೇರಿ ಇಲ್ಲ' ವರದಿಯೇ ನಿದರ್ಶನ.
-ಶಂಕರನಾರಾಯಣಭಟ್, ಮಾಡಗೇರಿ,
ಹೊನ್ನಾವರ, ಮೊ. 9632 821920.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.