ಅಂಕಣಗಳು

ಲಿಂಗ ಸಮಾನತೆ ಕನಸಿಗೆ ಕ್ರಿಕೆಟ್‌ನ ಹೊಸಭಾಷ್ಯ!

Published On :

ಜಾಹೀರಾತು ಎಂಬ ಅನಿಶ್ಚಿತ ಸಂಗತಿಯ ಕುರಿತ ನಿಶ್ಚಿತವಾದ ಒಂದು ಅಂಶ ಎಂದರೆ ಅದಿಲ್ಲದೇ ಇರುವುದಕ್ಕೆ ಸಾಧ್ಯವಿಲ್ಲ. ಅದರರ್ಥ ಇದು ಯಾವಾಗಲೂ ನಿಮಗೆ ಫಲ ತಂದುಕೊಡುತ್ತದೆ ಅಂತಲೂ ಅಲ್ಲ. ಯಾವ ಜಾಹೀರಾತು ಅಭಿಯಾನ ಹಿಟ್ ಎನ್ನಿಸಿಕೊಳ್ಳುತ್ತದೆ, ಇನ್ಯಾವುದು ಬರೀ ಸಂಬಳ ಕೊಟ್ಟಿದ್ದಷ್ಟೇ ಆಯ್ತಲ್ಲ ಎಂಬಂಥ ಫಲಿತಾಂಶ ನೀಡುತ್ತದೆ ಎಂಬುದನ್ನು ಮೊದಲೇ ಊಹಿಸಿ ಹೇಳುವುದು ಸಾಧ್ಯವಾಗುವುದಿಲ್ಲ.
ಕಳೆದ ಡಿಸೆಂಬರ್‌ನಲ್ಲಿ ಭಾರತ-ಪಾಕಿಸ್ತಾನದ ನಡುವೆ ಆದ ಕ್ರಿಕೆಟ್‌ಗೆ ಪ್ರಚಾರ ಕೊಡುವ ನಿಟ್ಟಿನಲ್ಲಿ ಆದ ಜಾಹೀರಾತುಗಳು ಇತ್ತೀಚಿನ ದಿನಗಳ ವೈಫಲ್ಯಕ್ಕೆ ಉದಾಹರಣೆ. ಆ ಪ್ರಚಾರ ಚಿಕ್ಕದಾಗಿ ಮರೆತುಹೋಗುವಂತಿತ್ತು. ಅದರ ಪ್ರಚಾರಕ್ಕೆ ಇಳಿದ ಏಜೆನ್ಸಿ ಎರಡು ಪ್ರಕ್ಷುಬ್ಧ ನೆರೆದೇಶಗಳ ಮಧ್ಯೆ ಕ್ರೀಡೆಯನ್ನು ಬೆಸುಗೆಯಾಗಿ ಮಾಡುವುದನ್ನು ನೋಡಲಿಲ್ಲ. ಬದಲಿಗೆ ಇಬ್ಬರು ದಷ್ಟಪುಷ್ಟರ ನಡುವಿನ ಯುದ್ಧದಂತೆ ಅದನ್ನು ಚಿತ್ರಿಸುವುದಕ್ಕೆ ಹೋಯಿತು. ಬಹಳ ವರ್ಷಗಳಿಂದೀಚೆ ಟಿವಿ ಮಾಧ್ಯಮದ ಜಾಹೀರಾತಿನಲ್ಲಿ ನಡೆದ ಅತ್ಯುತ್ತಮ ಅಭಿಯಾನ ಎಂದರೆ ಮಹಿಳಾ ಕ್ರಿಕೆಟ್ ಬಗೆಗಿನದು. ಅದು ಮಹಿಳಾ ಕ್ರಿಕೆಟ್‌ನ ಎತ್ತರವನ್ನು ಹೆಚ್ಚಿಸಿತು.
ಮಹಿಳಾ ಕ್ರಿಕೆಟ್ ಏಕೆ ಪ್ರಚಾರಾಭಿಯಾನದ ಮುಂಚೂಣಿಯಲ್ಲಿ ನಿಂತಿತು ಎಂಬುದರಲ್ಲಿ ರಹಸ್ಯಗಳೇನಿಲ್ಲ. ಸಂಬಂಧಿಸಿದ ಏಜೆನ್ಸಿ ಆ ವಿಚಾರದಲ್ಲಿ ಬಲವಾಗಿ ನಂಬಿಕೆ ಇರಿಸಿದ್ದರಿಂದಲೇ ಮಹಿಳಾ ಕ್ರಿಕೆಟ್ ಚೆನ್ನಾಗಿ ನೆರವೇರಿತು. ಕೇವಲ ಫಂಡ್ ಎತ್ತುವುದಕ್ಕೆ ಆಟವನ್ನು ಸೀಮಿತಗೊಳಿಸಿದೇ ಅದರಾಚೆಗೂ ಯೋಚಿಸಿದ್ದರ ಪರಿಣಾಮ ಅದು.
ಮಹಿಳಾ ಕ್ರಿಕೆಟ್ ಅನ್ನುವುದು ಬಹಳ ಸಮಯಗಳಿಂದ ಸಾರ್ವಜನಿಕರ ಗಮನವನ್ನು ತನ್ನತ್ತ ಸೆಳೆದುಕೊಳ್ಳುವುದಕ್ಕೆ, ಅವರ ಬೆಂಬಲವನ್ನು ಪಡೆಯುವುದಕ್ಕೆ ಪ್ರಯತ್ನಿಸುತ್ತಲೇ ಇತ್ತು. ಕೊನೆಗೂ ಈ ವಿಚಾರಕ್ಕೆ ಕಾಲ ಕೂಡಿ ಬಂದ ಹಾಗಿದೆ. ಮಹಿಳಾ ಕ್ರಿಕೆಟ್ ಎಂಬುದು ಈಗ ಈ ಕ್ರೀಡೆಯಲ್ಲಿ ಮೂರನೇ ದೊಡ್ಡ ಕ್ರಾಂತಿಯೊಂದನ್ನು ಅನಾವರಣಗೊಳಿಸುತ್ತ, ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುತ್ತಿದೆ.
ಕ್ರಿಕೆಟ್‌ನಲ್ಲಿ ಮೊದಲ ಕ್ರಾಂತಿ ಆದ ಕ್ಷಣ ಎಂದರೆ ಬ್ರಿಟನ್‌ನಲ್ಲಿ 'ಪ್ರೊಫೆಷನಲ್‌' ಎಂದು ಕರೆಸಿಕೊಳ್ಳುತ್ತಿದ್ದವರು 'ಅಮೆಚೂರ್‌' ಎಂಬ ಪ್ರಬೇಧಕ್ಕೆ ಸರಿ ಸಮಾನವಾದಾಗಿನದ್ದು. ಇದೀಗ ಕ್ರೀಡೆಯಲ್ಲಿ ವೃತ್ತಿಪರ ಎಂದು ಕರೆಸಿಕೊಳ್ಳುವುದು ಬಹಳ ಹೆಮ್ಮೆಯ ವಿಚಾರ. ಆದರೆ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ, ಇದಕ್ಕೂ ಮೊದಲು ಈ ಹಣೆಪಟ್ಟಿಯೇ ನಿಂದನೆಗೆ ವಸ್ತುವಾಗಿತ್ತು. ಕ್ರೀಡೆಯಲ್ಲಿ ಪ್ರತಿಭಾ ಪ್ರದರ್ಶನಕ್ಕಿಂತ ಹಣವನ್ನು ಗಮನವಾಗಿಟ್ಟುಕೊಂಡವರು ಎಂಬ ಧೋರಣೆ ವೃತ್ತಿಪರರ ಕುರಿತಾಗಿತ್ತು. ಮೋಜಿಗೆ ಆಡುತ್ತಿದ್ದ ಉನ್ನತ ವರ್ಗದವರು ದುಡಿಯುವ ವರ್ಗದ 'ವೃತ್ತಿಪರ'ರನ್ನು ಪ್ರತ್ಯೇಕ ಪ್ರವೇಶದ್ವಾರ ಬಳಸುವಂತೆ ಮಾಡಿತ್ತು. ರೇಷ್ಮೆ ದಿರಿಸುಗಳೊಂದಿಗೆ ವೈಭೋಗದಿಂದ ಇರುತ್ತಿದ್ದ ಈ ಉನ್ನತ ವರ್ಗದವರ ಜಂಬ ಅವರನ್ನು ಬೇರೆಯದೇ ವಲಯದಲ್ಲಿ ಇರಿಸಿತ್ತು. ತಾವು ಬದುಕುವುದಕ್ಕಾಗಿಯೇನೂ ಆಡುವುದು ಬೇಕಾಗಿಲ್ಲ, ಹಾಗಾಗಿ ತಾವು ವಿಶಿಷ್ಟರು ಎಂಬ ಹಮ್ಮು ಅವರದ್ದಾಗಿತ್ತು. ಅವರೊಂಥರ ದೇವರಂತೆ ವರ್ತಿಸುತ್ತಿದ್ದರು. ಆದರೆ ಎರಡನೇ ವಿಶ್ವಯುದ್ಧದ ನಂತರ ಈ ಪರಿಸ್ಥಿತಿಯಲ್ಲಿ ಬದಲಾವಣೆ ಆಯಿತು. ಇವತ್ತಿಗೆ ಪ್ರತಿಭೆಯೇ ಮೆರೆಯುತ್ತಿದೆ. ಯಶಸ್ಸಿಗೆ ಮಾತ್ರ ವ್ಯಾಪಾರಿ ಹಿತಾಸಕ್ತಿ ಒಲಿಯುತ್ತದೆ. ಈ ಯಶಸ್ಸು ಎಂಬುದು ವಂಶವಾಹಿಯನ್ನು ಆಧರಿಸಿ ಬರುವಂತದ್ದಲ್ಲ.
ಭಾರತ- ಪಾಕಿಸ್ತಾನಗಳಲ್ಲಿ ಆದ ಎರಡನೇ ಕ್ರಿಕೆಟ್ ಕ್ರಾಂತಿ ಎಂದರೆ ಮಧ್ಯಮ ವರ್ಗಕ್ಕೇ ಸೀಮಿತವಾಗಿದ್ದ ಆಟದ ಹರವನ್ನು ವಿಸ್ತರಿಸಿದ ರೀತಿ. ಈಗ ಅದು ಮಧ್ಯಮ ವರ್ಗದ ಸೊತ್ತಾಗಿ ಉಳಿದಿಲ್ಲ. ಕ್ರಿಕೆಟ್‌ನ ಪ್ರಾತಿನಿಧ್ಯ  ಹೊಸ ಭಾರತ ಮತ್ತು ಪಾಕಿಸ್ತಾನಗಳು ಅಭಿವ್ಯಕ್ತಿ ಕಂಡುಕೊಳ್ಳುತ್ತಿರುವ ಸಣ್ಣ ಸಣ್ಣ ನಗರಗಳಿಗೆ, ಓಣಿಗಳಿಗೆ ಚಾಚಿಕೊಂಡಿದೆ. ಬಿಳಿ ರಾಜವರ್ಗದೊಂದಿಗೆ ದೇಶದ ನಗರ ಕೇಂದ್ರಿತ ಮಧ್ಯಮ ವರ್ಗವು ಹಂಚಿಕೊಳ್ಳುತ್ತಿರುವ ಒಂದು ಜಾಯಮಾನವೆಂದರೆ ಯಶಸ್ಸಿಗೆ ಅವು ಪರ್ಯಾಯ ಮಾರ್ಗಗಳನ್ನು ಹೊಂದಿರುವಂಥದ್ದು. ಅಂದರೆ ಕ್ರಿಕೆಟ್ ಎಂಬುದು ಅವರ ಮಜವಾಗಿತ್ತೇ ಹೊರತು ಹಸಿವಾಗಿರಲಿಲ್ಲ. ಆದರೆ ಈಗ, ಬದುಕಿನ ಸಂಕಷ್ಟಗಳನ್ನು ಆಟದಲ್ಲಿ ತೋರಿಸುವ ಸಾಧನೆಗಳ ಮೂಲಕ ಗೆದ್ದುಕೊಳ್ಳುವ ಹಂಬಲ, ಆಟಕ್ಕೆ ಒದಗಿಬಂದಿರುವ ಹಣಕಾಸಿನ ವಿಸ್ತಾರ ಇವೆಲ್ಲ ಕ್ರಿಕೆಟ್‌ಗೆ ಬೇರೆಯದೇ ರೂಪವನ್ನು ನೀಡಿವೆ. ಈಗ ಎಂಎಸ್ ಧೋನಿ ಸಾಧಿಸಿರುವ ಐಶ್ವರ್ಯವನ್ನು ಆತ ಹತ್ತು ವರ್ಷಗಳ ಹುಡುಗನಾಗಿದ್ದಾಗ ಯಾವುದಾದರೂ ಜ್ಯೋತಿಷಿ ಭವಿಷ್ಯ ನುಡಿದಿದ್ದೇ ಆದರೆ, ಮನೆಯವರು ಅವನಿಗೊಂದು ಕಪ್ ಚಹಾ ಕೊಟ್ಟು, ಗೇಲಿ ಮಾಡುವುದಕ್ಕೆ ಇನ್ಯಾರನ್ನಾದರೂ ಹುಡುಕಿಕೊಳ್ಳಪ್ಪಾ ಎಂದು ಹೇಳುತ್ತಿದ್ದರು. ಇನ್ನೂ ಅನೇಕ ಸಾಧಕರ ವಿಷಯದಲ್ಲೂ ಇದನ್ನೇ ಹೇಳಬಹುದಾಗಿದೆ. ಹಾಗೆ ನೋಡಿದರೆ ಯೂಸುಫ್, ಇರ್ಫಾನ್ ಪಠಾಣ್‌ರಿಗೆ ಹೋಲಿಸಿದರೆ ಧೋನಿ ಹುಟ್ಟಿನಲ್ಲೇ ಸ್ವಲ್ಪ ಸುಧಾರಿತ ಆರ್ಥಿಕ ಪರಿಸ್ಥಿತಿ ಹೊಂದಿದ್ದರು.
ಮಹಿಳಾ ಕ್ರಿಕೆಟ್ ಕೂಡ ಸ್ತ್ರೀಯರ ಬದಲಾಗುತ್ತಿರುವ ಸ್ಥಾನಮಾನಕ್ಕೆ ಕನ್ನಡಿ ಹಿಡಿಯುತ್ತಿದೆ. ಒಂದೊಮ್ಮೆ ಮಹಿಳೆಯರನ್ನು ದುರ್ಬಲರು ಎನ್ನಲಾಗುತ್ತಿತ್ತು. ಗಂಡಸು ಸೃಷ್ಟಿಸುತ್ತಿರುವ ವಿಧ್ವಂಸಗಳಿಗೆ- ಹಿಂಸೆಗಳಿಗೆ ಅವರು ಸರಿಸಾಟಿಯಾಗಲಾರರು ಎಂಬುದಷ್ಟೇ ಈ ಗೇಲಿಗೆ ಕಾರಣವಾಗಬಲ್ಲುದೇನೋ. ಆದರೆ ವಾಸ್ತವದ ನೆಲೆಯಲ್ಲಿ ನೋಡುವುದಾದರೆ ಮಗುವೊಂದಕ್ಕೆ ಜನ್ಮ ನೀಡುವುದಕ್ಕೆ ತುಂಬ ಅತಿಯಾದ ತಾಕತ್ತೇ ಬೇಕಾಗಿರುತ್ತದೆ. ನೋವನ್ನು ತಾಳಿಕೊಳ್ಳುವ ಹೆಣ್ಣಿನ ಆ ಶಕ್ತಿಗೆ ಹೋಲಿಸಿದರೆ ಪುರುಷರು ಏನೇನೂ ಅಲ್ಲ. ದೇಹ ಪ್ರಕೃತಿಯಲ್ಲಿ ಮಾತ್ರವಲ್ಲದೇ ಮಾನಸಿಕವಾಗಿಯೂ ಹೆಚ್ಚಿನ ಸದೃಢರಾಗಿದ್ದಾರೆ.
ಇದು ಒಂದು ಆಯಾಮ ಮಾತ್ರ. ಪುರುಷರು ಬಹುಕಾಲದವರೆಗೆ ಮಹಿಳೆಯನ್ನು ದಂಡಿಸಿಕೊಂಡು ಬಂದರು. ಅವಳನ್ನು ಪ್ರತ್ಯೇಕತೆಯಲ್ಲಿ ಇಟ್ಟರು. ಈ ಪ್ರತ್ಯೇಕತೆಯಿಂದ ಸ್ವಾತಂತ್ರ್ಯ ಪಡೆದುಕೊಳ್ಳುತ್ತಿರುವುದನ್ನು ಕ್ರೀಡೆ ಬಿಂಬಿಸುತ್ತದೆ. ಭಾರತದಲ್ಲೇನೋ ಪೈಜಾಮ, ಜೀನ್ಸ್‌ಗಳು ಮಹಿಳೆಯರ ಉಡುಗೆಯ ಸಾಮಾನ್ಯ ಅಂಶಗಳಾಗಿವೆ. ಆದರೆ ಪಾಕಿಸ್ತಾನಿ ಮಹಿಳೆಯರು ಪ್ಯಾಂಟ್-ಶರ್ಟ್ ಧರಿಸಿ ಬ್ಯಾಟಿಂಗ್-ಫೀಲ್ಡಿಂಗ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ದೃಶ್ಯವಿದೆಯಲ್ಲ, ಅದು ಭಾರೀ ಮಹತ್ವದ ಅಂಶವೇ ಆಗಿದೆ. ಏಕೆಂದರೆ ಆ ನೆಲವನ್ನು ಹೆಚ್ಚಿನ ಸಂದರ್ಭಗಳಲ್ಲಿ ಆಳುತ್ತ ಬಂದಿರುವವರೆಲ್ಲ 19ನೇ ಶತಮಾನದ ಮನಸ್ಥಿತಿಯನ್ನೇ ರೂಢಿಸಿಕೊಂಡಿರುವ ಪುರುಷರು.
ಜನರಲ್ ಜಿಯಾ ಉಲ್ ಹಕ್‌ನ ಕಾಲದಲ್ಲಂತೂ ಪಾಕಿಸ್ತಾನದ ಕೆಲ ಮೂಲಭೂತವಾದಿಗಳು ಕ್ರಿಕೆಟ್ ಅನ್ನು ಟಿವಿಯಲ್ಲಿ ಪ್ರಸಾರ ಮಾಡುವುದಕ್ಕೆ ನಿರ್ಭಂದ ಹೇರಬೇಕೆಂದು ಒತ್ತಾಯಿಸಿದರು. ಏಕೆಂದರೆ ಮನೆಯಲ್ಲಿ ಕುಳಿತು ಅದನ್ನು ವೀಕ್ಷಿಸುವ ಮಹಿಳೆಯರು ಇಮ್ರಾನ್ ಖಾನ್ ತನ್ನ ಪೈಜಾಮಕ್ಕೆ ಚೆಂಡು ತಿಕ್ಕುವ ದೃಶ್ಯಗಳನ್ನು ನೋಡುತ್ತ ಮೋಹಿತರಾಗಿಬಿಡುತ್ತಾರೆ ಎಂಬುದು ಅವರ ಪ್ರತಿಪಾದನೆಯಾಗಿತ್ತು! ಅಲ್ಲಿಂದೀಚೆಗೆ ಬಹಳಷ್ಟು ಪ್ರಗತಿಯಾಗಿದೆ. ನಾವದನ್ನು ಸಂಭ್ರಮಿಸಬೇಕು. ಲಿಂಗ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ಉದಾರವಾದಿಗಳು ಸಾವಿರ ಭಾಷಣಗಳನ್ನು ನೀಡುವುದಕ್ಕಿಂತಲೂ ಹೆಚ್ಚಿನ ಸುಧಾರಣೆ ಪಾಕಿಸ್ತಾನದಲ್ಲಿ ಕ್ರಿಕೆಟ್‌ನಿಂದ ಆಗುತ್ತದೆ.
ಕೆಲ ರಾಷ್ಟ್ರಗಳು ಇನ್ನೂ ತಮ್ಮ ಮಹಿಳೆಯರನ್ನು ಓಲಿಂಪಿಕ್ಸ್‌ಗೆ ಕಳುಹಿಸುವುದಿಲ್ಲ. ಅದಕ್ಕವರು ನೀಡುವ ಕಾರಣವೆಂದರೆ ಮಹಿಳೆಯ ದೃಶ್ಯ ಅನೈತಿಕತೆಯನ್ನು ಬಿತ್ತುತ್ತದೆ ಎಂಬುದು. ಇದಕ್ಕಿಂತ ಮೂರ್ಖತನ ಇನ್ನೇನಿರಲು ಸಾಧ್ಯ? ಹೆಣ್ಣಾಗಲಿ, ಗಂಡಾಗಲಿ ತನ್ನ ಮುಖವನ್ನು ಹಾಗೂ ಪ್ರತಿಭೆಯನ್ನು ಪ್ರದರ್ಶಿಸುವುದು ನಗ್ನತೆ ಎನಿಸಿಕೊಳ್ಳುವುದಿಲ್ಲ. ಮಹಿಳೆಯನ್ನು ಗಂಡಸಿನಂತೆ ವರ್ತಿಸುವುದಕ್ಕೆ ನಾವೇಕೆ ಬಿಡುತ್ತಿಲ್ಲ?

-  ಎಂ. ಜೆ. ಅಕ್ಬರ್
ಸಂಪಾದಕ, ಸಂಡೇ ಗಾರ್ಡಿಯನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.